Skip to content
Home » ಕನ್ನಡ » ಸುದ್ದಿ-ಸಮಾಚಾರ » ‘ಕನ್ನಡ ಜೈನ ಸಾಹಿತ್ಯ ಪರಿಷತ್ ಸ್ಥಾಪನೆಯಾಗಲಿ’

‘ಕನ್ನಡ ಜೈನ ಸಾಹಿತ್ಯ ಪರಿಷತ್ ಸ್ಥಾಪನೆಯಾಗಲಿ’

    ‘ರಾಜ್ಯದಲ್ಲಿ ಕನ್ನಡ ಜೈನ ಸಾಹಿತ್ಯ ಪರಿಷತ್‌ ಸ್ಥಾಪಿಸಬೇಕಾದ ಅಗತ್ಯವಿದೆ’ ಎಂದು ಹಿರಿಯ ಕವಿ ಜಿನದತ್ತ ದೇಸಾಯಿ ಅಭಿಪ್ರಾಯಪಟ್ಟರು.

    ಬೆಳಗಾವಿಯ ಧರ್ಮನಾಥ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ಜೈನ ಸಾಹಿತ್ಯ ಸಮ್ಮೇಳನವನ್ನು ದಕ್ಷಿಣ ಭಾರತ ಜೈನ ಸಭೆ ಅಧ್ಯಕ್ಷ ರಾವಸಾಹೇಬ ಪಾಟೀಲ ಉದ್ಘಾಟಿಸಿದರು. ಕವಿ ಜಿನದತ್ತ ದೇಸಾಯಿ, ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತಿತರರು ಚಿತ್ರದಲ್ಲಿದ್ದಾರೆ.

    ಬೆಳಗಾವಿಯ ಧರ್ಮನಾಥ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ಜೈನ ಸಾಹಿತ್ಯ ಸಮ್ಮೇಳನವನ್ನು ದಕ್ಷಿಣ ಭಾರತ ಜೈನ ಸಭೆ ಅಧ್ಯಕ್ಷ ರಾವಸಾಹೇಬ ಪಾಟೀಲ ಉದ್ಘಾಟಿಸಿದರು. ಕವಿ ಜಿನದತ್ತ ದೇಸಾಯಿ, ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತಿತರರು ಚಿತ್ರದಲ್ಲಿದ್ದಾರೆ.

    ಬೆಳಗಾವಿ, ಜನವರಿ ೯, ೨೦೧೭: ‘ರಾಜ್ಯದಲ್ಲಿ ಕನ್ನಡ ಜೈನ ಸಾಹಿತ್ಯ ಪರಿಷತ್‌ ಸ್ಥಾಪಿಸಬೇಕಾದ ಅಗತ್ಯವಿದೆ’ ಎಂದು ಹಿರಿಯ ಕವಿ ಜಿನದತ್ತ ದೇಸಾಯಿ ಅಭಿಪ್ರಾಯಪಟ್ಟರು.
    ದಕ್ಷಿಣ ಭಾರತ ಜೈನ ಸಭೆಯ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್‌ ಶತಮಾನೋತ್ಸವ ಆಚರಣೆ ಅಂಗವಾಗಿ ಇಲ್ಲಿ ಭಾನುವಾರ ಆಯೋಜಿಸಿದ್ದ ‘ಕನ್ನಡ ಜೈನ ಸಾಹಿತ್ಯ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.
    ‘ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿರುವ ಜೈನ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಸ್ವತಂತ್ರ ಸಾಹಿತ್ಯ ಪರಿಷತ್‌ ಇಲ್ಲದಿರುವುದು ವಿಷಾದದ ಸಂಗತಿ. ಮುಂಬರುವ ದಿನಗಳಲ್ಲಿ ಪರಿಷತ್‌ ಸ್ಥಾಪನೆಯಾಗಬೇಕು. ಜೈನ ಸಾಹಿತ್ಯ ಅತಿ ಪ್ರಾಚೀನವಾದುದು. ಈ ಹಿಂದಿನ ಸಾಹಿತ್ಯ ಲೋಕದ ಇತಿಹಾಸ ಗಮನಿಸಿದರೆ ಜೈನ ಸಾಹಿತ್ಯದ ವೈಭವವನ್ನು ಕಾಣಬಹುದು. ಆದರೆ, ಇಂದು ನಾವು ಅದೇ ವೈಭವ ಹೇಳಿಕೊಂಡು ಸಾಹಿತ್ಯದ ಕಡೆಗೆ ಗಮನ ನೀಡದೆ ಕಾಲಹರಣ ಮಾಡುತ್ತಿದ್ದೇವೆ. ವಾಸ್ತವ ಅಂಶಗಳನ್ನು ಬದಿಗಿಟ್ಟು ಹಳೆ ವೈಭವದ ಮೇಲೆ ನಡೆಯುವುದು ಸಮಾಜಕ್ಕೆ ಶೋಭೆ ತರುವುದಿಲ್ಲ. ಇನ್ನಾದರೂ ಪರಿಷತ್ ಸ್ಥಾಪಿಸುವ ಮೂಲಕ ಜೈನ ಸಾಹಿತ್ಯ ಉಳಿಸಿ– ಬೆಳೆಸಬೇಕು’ ಎಂದರು.
    ‘ಈ ಸಮ್ಮೇಳನ ರಾಜ್ಯ ಮಟ್ಟದ ಸಮ್ಮೇಳನವಾಗಿದ್ದರೆ ಇನ್ನೂ ಹೆಚ್ಚಿನ ಮಹತ್ವ ಪಡೆಯುತ್ತಿತ್ತು.  ಈ ಮೊದಲು ರಾಜ್ಯದಲ್ಲಿ ಕೇವಲ 5 ಬಾರಿ ಮಾತ್ರ ಕನ್ನಡ ಜೈನ ಸಾಹಿತ್ಯ ಸಮ್ಮೇಳನಗಳು ನಡೆದಿವೆ. 1979ರಲ್ಲಿ ಹೊಂಬುಜದಲ್ಲಿ, 1984ರಲ್ಲಿ 2ನೇ ಸಮ್ಮೇಳನ ತುಮಕೂರಿನಲ್ಲಿ, 1984ರಲ್ಲಿ ಮೈಸೂರಿ ನಲ್ಲಿ, 1999ರಲ್ಲಿ ಹುಬ್ಬಳ್ಳಿಯಲ್ಲಿ ಹಾಗೂ 2009ರಲ್ಲಿ ಶ್ರವಣಬೆಳಗೊಳದಲ್ಲಿ ಈ ಸಮ್ಮೇಳನಗಳು ನಡೆದಿವೆ’ ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಶಾಂತಿನಾಥ ದಿಬ್ಬದ, ‘ಕರ್ನಾಟಕ ವಿಶ್ವವಿದ್ಯಾಲಯದ ವತಿಯಿಂದ ಆದಿಕವಿ ಪಂಪ ಅಧ್ಯಯನ ಪೀಠವನ್ನು ಪ್ರಾರಂಭಿಸಲಾಗಿದೆ. ಇದಕ್ಕಾಗಿ ಸರ್ಕಾರ ₹ 1 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅದಲ್ಲದೇ ‘ತಿರುಳಗನ್ನಡ’ ಪತ್ರಿಕೆಯನ್ನು ಪ್ರಾರಂಭಿಸುವ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ. ಇದರಲ್ಲಿ ಶಾಸ್ತ್ರೀಯ ವಿಷಯಗಳ ಕುರಿತು ಲೇಖನ ಗಳನ್ನು ಪ್ರಕಟಿಸಲಾಗುವುದು’ ಎಂದು ತಿಳಿಸಿದರು.
    ಸಮ್ಮೇಳನ ಉದ್ಘಾಟಿಸಿದ ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ, ‘ಕನ್ನಡ ಜೈನ ಸಾಹಿತ್ಯ ಪರಿಷತ್ ಸ್ಥಾಪನೆಗಾಗಿ ಜೈನ ಸಾಹಿತಿಗಳು ಸಹಕರಿಸಬೇಕು. ಜೈನಸಭೆ ವತಿಯಿಂದ ಪರಿಷತ್ ಸ್ಥಾಪನೆ ಮಾಡಲು ಬದ್ಧವಾಗಿದ್ದೇವೆ’ ಎಂದು ಹೇಳಿದರು.
    ‘ಕಾಡಾ’ ಅಧ್ಯಕ್ಷ ಈರಗೌಡ ಪಾಟೀಲ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿ ಸದಸ್ಯ ವಿಜಯಕುಮಾರ ಕುಚನೂರೆ ಹಾಗೂ ಕಮಲ-ಪುಷ್ಪ ಮಂಗಲ ಕಾರ್ಯಾಲಯಕ್ಕೆ ದೇಣಿಗೆ ನೀಡಿದ ಪಿ.ಪಿ. ದೊಡ್ಡಣ್ಣವರ ದಂಪತಿಯನ್ನು ಸನ್ಮಾನಿಸಲಾಯಿತು.
    ಶಿವಮೊಗ್ಗ ಜಿಲ್ಲೆಯ ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದಕ್ಷಿಣ ಭಾರತ ಜೈನ ಸಭೆಯ ಹಿರಿಯ ಉಪಾಧ್ಯಕ್ಷ ಡಿ.ಎ. ಪಾಟೀಲ, ಅಧ್ಯಕ್ಷ ಸಾಗರ ಚೌಗುಲೆ, ಸಹ ಖಜಾಂಚಿ ಎ.ಎ. ನೇಮಣ್ಣವರ, ಟ್ರಸ್ಟಿ ಅಶೋಕ ಜೈನ, ಸಮಾಜದ ಮುಖಂಡರಾದ ಕಿರಣ ಪಾಟೀಲ, ಅರುಣಕುಮಾರ ಯಲಗುದ್ರಿ, ತಾತ್ಯಾಸಾಹೇಬ ಪಾಟೀಲ, ಸಂದೀಪ ಬೆಳಗಲಿ ಉಪಸ್ಥಿತರಿದ್ದರು.
    ಸಂಜಯ ಕುಚನೂರೆ ಸ್ವಾಗತಿಸಿದರು. ಅಶೋಕ ಕುಸನಾಳೆ ಪ್ರಾಸ್ತಾವಿಕ ಮಾತನಾಡಿದರು. ಭಾರತಿ ಸವದತ್ತಿ ಮತ್ತು ಎ.ಆರ್. ರೊಟ್ಟಿ ಕಾರ್ಯಕ್ರಮ ನಿರೂಪಿಸಿದರು.
    ***
    ಪ್ರತಿಷ್ಠಾನ ಸ್ಥಾಪನೆಯಾಗಲಿ
    ‘ಜೈನ ಸಾಹಿತ್ಯದ ಅನು ವಾದ, ಪುಸ್ತಕ ಪ್ರಕಟಣೆಗಳ ಕಾರ್ಯ ಹೆಚ್ಚಾಗಿ ನಡೆಯ ಬೇಕಾಗಿದೆ. ಬೆಟಗೇರಿ ಕೃಷ್ಣಶರ್ಮ, ಬಸವರಾಜ ಕಟ್ಟಿಮನಿ ಅವರ ಹೆಸರಿನಲ್ಲಿ ಪ್ರತಿಷ್ಠಾನಗಳು ಸ್ಥಾಪನೆಯಾಗಿವೆ. ಇದೇ ಮಾದರಿಯಲ್ಲಿ ಜೈನ ಮತ್ತು ಕನ್ನಡ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಮಿರ್ಜಿ ಅಣ್ಣಾರಾಯ ಅವರ ಹೆಸರಿನಲ್ಲಿ ಪ್ರತಿಷ್ಠಾನ, ಅಧ್ಯಯನ ಕೇಂದ್ರ ಪ್ರಾರಂಭಿಸಬೇಕು. ಈ ನಿಟ್ಟಿನಲ್ಲೂ ಸಮಾಜದ ಮುಖಂಡರು ಮುಂದಾಗಬೇಕು’ ಎಂದು ಜಿನದತ್ತ ದೇಸಾಯಿ ಹೇಳಿದರು.
    ***
    ಕನ್ನಡ ಜೈನ ಸಾಹಿತ್ಯ ಸಮ್ಮೇಳನದ ಕೈಗೊಂಡ ನಿರ್ಣಯಗಳುಬೆಳಗಾವಿ: ಇಲ್ಲಿನ ಧರ್ಮನಾಥ ಭವನದಲ್ಲಿ ಭಾನುವಾರ ನಡೆದ ಕನ್ನಡ ಜೈನ ಸಾಹಿತ್ಯ ಸಮ್ಮೇಳನದಲ್ಲಿ ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
    ಮಿರ್ಜಿ ಅಣ್ಣಾರಾವ ಪ್ರತಿಷ್ಠಾನ ಸ್ಥಾಪನೆ ಕುರಿತು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುವುದು, ಕನ್ನಡ ಜೈನ ಸಾಹಿತ್ಯ ಪರಿಷತ್ ಸ್ಥಾಪಿಸುವ ಸಂಬಂಧ ಕಾರ್ಯಸೂಚಿ ಸಿದ್ಧಪಡಿಸಿ ಅನುಷ್ಠಾನಕ್ಕೆ ತರುವುದು ಹಾಗೂ ರಾಜ್ಯದ ವಿ.ವಿ.ಗಳು ಗೌರವ ಡಾಕ್ಟರೇಟ್‌ ನೀಡುವ ಸಂದರ್ಭದಲ್ಲಿ ಜೈನ ಸಮುದಾಯದ ವಿದ್ವಾಂಸರನ್ನು ಗಣನೆಗೆ ತೆಗೆದುಕೊಳ್ಳಬೇಕು ಎನ್ನುವ ನಿರ್ಣಯ ಅಂಗೀಕರಿಸಲಾಯಿತು.
    ***
     ಜೈನ ಸಮಾಜದಲ್ಲಿ ಅನೇಕ ಮಹನೀಯರು ಹಾಗೂ ಪುಣ್ಯಪುರುಷರ ಮಾಹಿತಿ, ಇತಿಹಾಸ ಸಾರುವ ನಿಟ್ಟಿನಲ್ಲಿ ಪುಸ್ತಕ ರಚಿಸಲು ಸಮಾಜ ಕಾರ್ಯಪ್ರವೃತ್ತರಾಗಬೇಕು
    -ಜಿನದತ್ತ ದೇಸಾಯಿ
    ಹಿರಿಯ ಕವಿ
    – ಸುದ್ದಿ ಹಾಗೂ ಚಿತ್ರ ಕೃಪೆ: ಪ್ರಜಾವಾಣಿ
    error: Jain Heritage Centres - Celebrating Jain Heritage.....Globally!