Skip to content
Home » ಕನ್ನಡ » ವಿಚಾರ » ಆಷ್ಟಾಹ್ನಿಕ ಪರ್ವ, ಆರಾಧನೆ, ವ್ರತ, ನಂದೀಶ್ವರ ವಿಗ್ರಹಗಳು ಹಾಗೂ ಜಿನಾಲಯಗಳು

ಆಷ್ಟಾಹ್ನಿಕ ಪರ್ವ, ಆರಾಧನೆ, ವ್ರತ, ನಂದೀಶ್ವರ ವಿಗ್ರಹಗಳು ಹಾಗೂ ಜಿನಾಲಯಗಳು

    ಜೈನಧರ್ಮದಲ್ಲಿ ನಂದೀಶ್ವರ ದ್ವೀಪ ಹಾಗೂ ಅಷ್ಟಾಹ್ನಿಕ ಪರ್ವದ ಕಲ್ಪನೆ, ನಂದೀಶ್ವರ ಜಿನಾಲಯಗಳು, ವಿಗ್ರಹಗಳ ವಿವರ, ಸಂಬಂಧಿಸಿದ ಆರಾಧನೆ, ವ್ರತದ ವಿಧಗಳು ಹಾಗೂ ಸಂಬಂಧಿಸಿದ ಶ್ಲೋಕಗಳ ವಿವರಗಳನ್ನೊಳಗೊಂಡಿರುವ ಸಚಿತ್ರವಾದ ವಿಶೇಷ ಲೇಖನ.

    – ಲೇಖನ ಹಾಗೂ ಚಿತ್ರಗಳು: ನಿತಿನ್ ಹೆಚ್.ಪಿ., ಬೆಂಗಳೂರು.

    ಜೈನಧರ್ಮದಲ್ಲಿ ವಿಶ್ವದ ಆಕಾರ ಹಾಗೂ ಅದರ ವಿವಿಧ ಭಾಗಗಳಾದ ಜೀವಿಗಳು, ವಸ್ತುಗಳು, ಪರಮಾಣು ಹಾಗೂ ಇನ್ನಿತರವುಗಳ ಬಗ್ಗೆ ವಿಸ್ತೃತವಾಗಿ ವಿವರಿಸಲಾಗಿದೆ. ಜೈನಧರ್ಮದ ಪ್ರಕಾರ ವಿಶ್ವವು ಅನಾದಿ ಹಾಗೂ ನಿರಂತರವಾಗಿದೆ, ಇದಕ್ಕೆ ಯಾವುದೇ ಆರಂಭವೂ ಇಲ್ಲ ಹಾಗೂ ಅಂತ್ಯವೂ ಇಲ್ಲ. ಜೈನಧರ್ಮದ ಅನುಸಾರ ಲೋಕದ ಕಲ್ಪನೆ ಹಾಗೂ ಸಂಬಂಧಿಸಿದ ಆಚರಣೆಗಳು, ವೈಜ್ಞಾನಿಕ ಹಾಗೂ ವಿಶಿಷ್ಟವಾಗಿವೆ. ಅದರಲ್ಲಿ ಆಷ್ಟಾಹ್ನಿಕ ಪರ್ವ ಹಾಗೂ ಸಂಬಂಧಿಸಿದ ಆಚರಣೆಗಳು ಕೂಡ ಒಂದು. ಆಷ್ಟಾಹ್ನಿಕ ಪರ್ವದ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

    ಜೈನಧರ್ಮದ ಪ್ರಕಾರ ಲೋಕದ ವಿಭಜನೆ – ಜೈನಧರ್ಮದ ಪ್ರಕಾರ ಲೋಕವನ್ನು 3 ವಿಭಾಗಗಳಾಗಿ ವಿಂಗಡಿಸಲಾಗಿದೆ:
    + ಊರ್ಧ್ವಲೋಕ – ದೇವಾನುದೇವತೆಗಳು ಇರತಕ್ಕಂತಹ ಪ್ರದೇಶ.
    + ಮಧ್ಯಲೋಕ – ಮನುಷ್ಯರು, ಗಿಡಗಳು ಹಾಗೂ ಪ್ರಾಣಿಗಳು ಜೀವಿಸುವಂತಹ ಪ್ರದೇಶ.
    + ಅಧೋಲೋಕ – ನಾರಕಿಗಳು ವಾಸಿಸುವ ಪ್ರದೇಶ.

    ನಂದೀಶ್ವರ ದ್ವೀಪ
    ಮದ್ಯ ಲೋಕದಲ್ಲಿ ಸಮುದ್ರಗಳಿಂದ ಅವೃತವಾದ ಹಲವಾರು ದ್ವೀಪಗಳನ್ನು ಕಾಣುತ್ತೇವೆ. ಇವುಗಳಲ್ಲಿ ನಂದೀಶ್ವರಾರೂಢ ಸಮುದ್ರಗಳಿಂದ ಅವೃತವಾದ ಎಂಟನೆಯ ದ್ವೀಪವೇ ನಂದೀಶ್ವರ ದ್ವೀಪ. ಇದರಲ್ಲಿ 52 ಜಿನಾಲಯಗಳಿವೆ ಎಂದು ಹೇಳಲಾಗುತ್ತದೆ. ಪ್ರತಿ ವರ್ಷದ ಆಷಾಢ, ಕಾರ್ತಿಕ, ಫಾಲ್ಗುಣ ಮಾಸದ ಶುಕ್ಲಪಕ್ಷ ಅಷ್ಟಮಿಯಿಂದ ಪೌರ್ಣಿಮೆಯ ದಿನದವರೆಗೆ 3 ಲೋಕಗಳು, ಅಂದರೆ ಭವನವಾಸಿಗಳು, ವ್ಯಂತರರು, ಜ್ಯೋತಿಷ್ಕರು ಹಾಗೂ ಕಲ್ಪವಾಸಿಗಳಾದ ದೇವಾನುದೇವತೆಗಳು ಈ 8 ದಿನಗಳ ಕಾಲ ವಿಶೇಷ ಪೂಜೆ ಪುನಸ್ಕಾರಗಳನ್ನು ತಮ್ಮ ಕುಟುಂಬದೊಂದಿಗೆ ಆಚರಿಸುತ್ತಾರೆ. ಈ ಪೂಜೆ ಪುನಸ್ಕಾರಗಳನ್ನು ಮಾಡುವುದರಿಂದ ಅವರಲ್ಲಿ ವೈರಾಗ್ಯ ಭಾವನೆಯುಂಟಾಗುತ್ತದೆ ಎಂದು ಹೇಳಲಾಗಿದೆ. ಜನಸಾಮಾನ್ಯರು ನಂದೀಶ್ವರ ದ್ವೀಪವನ್ನು ತಲುಪಲಾಗುವುದಿಲ್ಲವಾದ ಕಾರಣ ಸಾಂಕೇತಿಕವಾಗಿ ನಂದೀಶ್ವರ ಜಿನಬಿಂಬಕ್ಕೆ ಈ ಮಾಸಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ.

    ನಂದೀಶ್ವರ ದ್ವೀಪದ ಜಿನಾಲಯಗಳು – ನಂದೀಶ್ವರ ದ್ವೀಪದಲ್ಲಿ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ದಿಕ್ಕುಗಳಲ್ಲಿ 13 ಜಿನಾಲಯಗಳಿವೆ ಎಂದು ಹೇಳಲಾಗಿದೆ. ಪ್ರತಿಯೊಂದು ದಿಕ್ಕಿನಲ್ಲಿ 1 ಅಂಜನಗಿರಿ, 4 ದಾದಿಮುಖ ಹಾಗೂ 8 ರತಿಕರ ಪರ್ವತಗಳಿವೆ ಎಂದು ಹೇಳಲಾಗುತ್ತದೆ. ಪ್ರತಿಯೊಂದು ಪರ್ವತದಲ್ಲಿಯೂ ಕೂಡ 1 ಅಕೃತ್ರಿಮ ಜಿನಾಲಯ ವಿರುತ್ತದೆ. ಈ ಅಕೃತ್ರಿಮ ಜಿನಾಲಯವು ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿದೆ, ಆದ್ದರಿಂದ ಇದನ್ನು ಅಕೃತಿಮ ಜಿನಾಲಯ ವೆನ್ನುತ್ತಾರೆ. 4 ದಿಕ್ಕುಗಳಲ್ಲಿರುವ 13 ಜಿನಾಲಯಗಳನ್ನು ಒಟ್ಟುಗೂಡಿಸಿದರೆ 52 ಅಕೃತ್ರಿಮ ಜಿನಾಲಯಗಳಾಗುತ್ತವೆ.

    ನಂದೀಶ್ವರ ಜಿನಾಲಯಗಳು –  ಭಾರತದಾದ್ಯಂತ ಹಲವಾರು ನಂದೀಶ್ವರ ಜಿನಾಲಯಗಳನ್ನು ಕಾಣಬಹುದು ಅವುಗಳಲ್ಲಿ  ಕೆಲವನ್ನು ಹೆಸರಿಸೋಣ:
    + ದೆಹಲಿ – ಹಳೆ ದೆಹಲಿಯ ಚಾಂದಿನಿ ಚೌಕ್ ಪ್ರದೇಶದಲ್ಲಿ ಶ್ರೀ ದಿಗಂಬರ ಜೈನ ಮೇರು ಮಂದಿರವನ್ನು ಕಾಣಬಹುದು ಇದನ್ನು ಕ್ರಿ.ಶ. 1845 ರಲ್ಲಿ ನಿರ್ಮಿಸಲಾಯಿತು.
    + ಹಸ್ತಿನಾಪುರ – ಹಸ್ತಿನಾಪುರದ ಬಡಾ ಮಂದಿರ್ ಬಸದಿಗಳ ಸಮೂಹದ ಆವರಣದಲ್ಲಿ ಶ್ರೀ ಪಂಚಮೇರು ನಂದೀಶ್ವರ ಜಿನಾಲಯವನ್ನು ಕಾಣಬಹುದು.
    + ಕನಿಯಾದಾನ – ಇಲ್ಲಿ ನಾವು ವಿಶ್ವದ ಅತಿ ದೊಡ್ಡ ಪಂಚಮೇರು ನಂದೀಶ್ವರ ಜಿನಾಲಯವನ್ನು ಕಾಣಬಹುದು. ಕನಿಯಾದಾನವು ಮಧ್ಯಪ್ರದೇಶದ ಶಿವಪುರಿ ಜಿಲ್ಲಾ ಕೇಂದ್ರದಿಂದ 97ಕಿಲೋ ಮೀಟರ್ ದೂರದಲ್ಲಿದೆ.
    + ಸಮ್ಮೇದ ಶಿಖರಜಿ – ಜಾರ್ಖಂಡ್ ನ ಗಿರಡಿ ಜಿಲ್ಲೆಯಲ್ಲಿರುವ ಸಮ್ಮೇದ ಶಿಖರಜಿ ತೇರಾಪಂಥಿ ಕೋಟಿಯ ಆವರಣದಲ್ಲಿ ನಂದೀಶ್ವರ ಜಿನಾಲಯ ವೊಂದನ್ನು ಕಾಣಬಹುದು.
    + ಸೋನಗಢ – ಗುಜರಾತ್ ನ ಸೋನಗಢದಲ್ಲಿ ಶ್ರೀ ಪಂಚಮೇರು ಜಿನಾಲಯವನ್ನು ಕಾಣಬಹುದು.

    ನಂದೀಶ್ವರ ವಿಗ್ರಹಗಳು – ನಂದೀಶ್ವರ ದ್ವೀಪದ 52 ವಿಗ್ರಹಗಳನ್ನು ಒಂದೇ ವಿಗ್ರಹದ 4 ಬದಿಗಳಲ್ಲಿ 13 ವಿಗ್ರಹಗಳಂತೆ ಕೆತ್ತಲಾದ ವಿಗ್ರಹವನ್ನು ನಾವು ನಂದೀಶ್ವರ ವಿಗ್ರಹವೆನ್ನುತ್ತೇವೆ. ಭಾರತದಾದ್ಯಂತ ಹರಡಿರುವ ವಿವಿಧ ಜಿನಾಲಯಗಳಲ್ಲಿ ಇಂತಹ ನಂದೀಶ್ವರ ವಿಗ್ರಹಗಳನ್ನು ನಾವು ಕಾಣಬಹುದು. ಅವುಗಳಲ್ಲಿನ ಕೆಲವು ನಂದೀಶ್ವರ ವಿಗ್ರಹಗಳ ವಿವರವನ್ನು ಇಲ್ಲಿ ನೀಡಲಾಗಿದೆ:
    + ಅಡಗೂರು – ಅಡಗೂರಿನ ಶ್ರೀಮಹಾವೀರ ಜಿನಾಲಯದಲ್ಲಿ ಸುಮಾರು 2 ಅಡಿ ಎತ್ತರವಿರುವ ನಂದೀಶ್ವರ ವಿಗ್ರಹವನ್ನು ಕಾಣಬಹುದು. ಅಡಗೂರು ಜಿಲ್ಲಾ ಕೇಂದ್ರ ಹಾಸನದಿಂದ ಸುಮಾರು 21 ಕಿಲೋ ಮೀಟರ್ ದೂರದಲ್ಲಿದೆ.
    + ಬೆಳ್ತಂಗಡಿ/ಗುರುವಾಯನಕೆರೆ – ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ/ಗುರುವಾಯನಕೆರೆಯ ರತ್ನತ್ರಯ ಕ್ಷೇತ್ರದ ಆವರಣದಲ್ಲಿರುವ ಶಾಂತಿನಾಥ ಬಸದಿಯ ಮೊದಲ ಮಹಡಿಯಲ್ಲಿ ನಾವು 4 ನಂದೀಶ್ವರ ವಿಗ್ರಹಗಳನ್ನು ಕಾಣಬಹುದು. ಅವುಗಳಲ್ಲಿ 3 ವಿಗ್ರಹಗಳು ಸುಮಾರು 2 ಅಡಿ ಎತ್ತರವಿದ್ದು ಮತ್ತೊಂದು ವಿಗ್ರಹವು ಸುಮಾರು ನಾಲ್ಕೂವರೆ ಅಡಿ ಎತ್ತರವಿದೆ.
    + ದಡಗ – ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದಡಗದಲ್ಲಿರುವ ಶ್ರೀ ಶಾಂತಿನಾಥ ಸ್ವಾಮಿ ದಿಗಂಬರ ಜಿನಾಲಯದಲ್ಲಿ ನಂದೀಶ್ವರ ವಿಗ್ರಹವೊಂದನ್ನು ಕಾಣಬಹುದು.
    + ಹಾಸನ – ಹಾಸನ ದ ದೊಡ್ಡ ಬಸದಿಯಲ್ಲಿ ನಂದೀಶ್ವರ ವಿಗ್ರಹವೊಂದನ್ನು ಕಾಣಬಹುದು.
    + ಹೊಂಬುಜ/ಹುಂಚ – ಶ್ರೀ ಕ್ಷೇತ್ರ ಹೊಂಬುಜದ ಪಾರ್ಶ್ವನಾಥ ಬಸದಿಯಲ್ಲಿ ಸುಮಾರು 2ಅಡಿ ಎತ್ತರವಿರುವ ನಂದೀಶ್ವರ ವಿಗ್ರಹವೊಂದನ್ನು ನಾವು ಕಾಣಬಹುದು ಇದು ಅಂದಾಜು ಹದಿ4ಹದಿನೈದನೇ ಶತಮಾನಕ್ಕೆ ಸೇರಿದೆ. ಶ್ರೀ ಕ್ಷೇತ್ರ ಹೊಂಬುಜವು ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ 55 ಕಿ.ಮೀ. ದೂರದಲ್ಲಿದೆ.
    + ಹೊರನಾಡು, ಶಾಂತಿಗಿರಿ ಕ್ಷೇತ್ರ
    + ಕಚನೇರ್ – ಕಚನೇರ್ ನ ಶ್ರೀ ಪಾರ್ಶ್ವನಾಥ ಜಿನಾಲಯ ದಲ್ಲಿ ಸುಮಾರು 3ವರೆ ಅಡಿ ಎತ್ತರವಿರುವ ಮಾರ್ಬಲ್ ನಿಂದ ಮಾಡಲಾದ ನಂದೀಶ್ವರ ವಿಗ್ರಹವನ್ನು ಕಾಣಬಹುದು. ಮಹಾರಾಷ್ಟ್ರದ ಔರಂಗಾಬಾದ್ ನಿಂದ ಮರ್ಮೋತ್ 4ಕಿಲೋಮೀಟರ್ ದೂರದಲ್ಲಿರುವ ಕಚನೇರ್ ಕ್ಷೇತ್ರವಿದೆ.
    + ಕಾರ್ಕಳ – ಕಾರ್ಕಳದ ಮಠದ ಬಸದಿಯಲ್ಲಿ ಸುಮಾರು 1ಅಡಿ ಎತ್ತರವಿರುವ ನಂದೀಶ್ವರ ವಿಗ್ರಹವನ್ನು ಕಾಣಬಹುದು. ಕಾರ್ಕಳವು ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿದೆ.
    + ಮೇಲ್ಸಿತಾಮೂರ್ – ತಮಿಳುನಾಡಿನ ಮೇಲ್ಸಿತಾಮೂರ್ ನ ಪಾರ್ಶ್ವನಾಥ ಜಿನಾಲಯದ ಕಂಬವೊಂದರ ಮೇಲೆ ನಂದೀಶ್ವರ ವಿಗ್ರಹದ 1 ಭಾಗವನ್ನು ಕೆತ್ತಲಾಗಿದೆ.
    + ನಿಟ್ಟೂರು – ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿರುವ ನಿಟ್ಟೂರಿನ ಶ್ರೀ ಶಾಂತಿನಾಥ ಬಸದಿಯಲ್ಲಿ ಸುಮಾರು 1ಅಡಿ ಎತ್ತರವಿರುವ ಪಂಚಲೋಹದ ನಂದೀಶ್ವರ ವಿಗ್ರಹವನ್ನು ಕಾಣಬಹುದು.
    + ಸಂಸೆ – ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಸಂಸೆಯ ಶ್ರೀ ಶಾಂತಿನಾಥ ಬಸದಿಯಲ್ಲಿ ಸುಮಾರು 1 ಅಡಿ ಎತ್ತರವಿರುವ ಪಂಚಲೋಹದ ನಂದೀಶ್ವರ ವಿಗ್ರಹವನ್ನು ಕಾಣಬಹುದು.
    + ಸಂಕೀಘಟ್ಟ – ಕರ್ನಾಟಕದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಸಂಕೀಘಟ್ಟ ಗ್ರಾಮದಲ್ಲಿನ ಶ್ರೀವರ್ಧಮಾನ ಸ್ವಾಮಿ ಬಸದಿಯಲ್ಲಿ ಸುಮಾರು 9 ಇಂಚು ಎತ್ತರವಿರುವ ಪಂಚಲೋಹದ ನಂದೀಶ್ವರ ವಿಗ್ರಹವನ್ನು ಕಾಣಬಹುದು.

    ಪೂಜೆ – ಆರಾಧನೆ ಅಥವಾ ವಿಧಾನಗಳು, ವೃತಗಳು ಹಾಗೂ ಪೂಜೆಯ ವಿವರ: ಈ ಕೆಳಗಿನ ಕ್ರಿಯೆಗಳನ್ನು ಅಷ್ಟಾಹ್ನಿಕ ಕ್ರಿಯೆ ಗಳೆಂದು ಹೆಸರಿಸಲಾಗಿದೆ ಇವುಗಳನ್ನು ಅಷ್ಟಾಹ್ನಿಕ ಪರ್ವದಲ್ಲಿ ಕೈಗೊಳ್ಳಬಹುದು –
    + ಸಿದ್ಧಭಕ್ತಿ
    + ನಂದೀಶ್ವರ ಚೈತ್ಯಭಕ್ತಿ
    + ಪಂಚಗುರುಭಕ್ತಿ ಮತ್ತು
    + ಶಾಂತಿ 

    ಆರಾಧನೆ ಅಥವಾ ವಿಧಾನಗಳು – ಅಷ್ಟಾಹ್ನಿಕ ಪರ್ವದ ಸಂದರ್ಭದಲ್ಲಿ ಜೈನರು ಸಿದ್ಧಚಕ್ರ ಮಹಾಮಂಡಲ ವಿಧಾನ, ಪಂಚಮೇರು ನಂದೀಶ್ವರ ಆರಾಧನೆಗಳನ್ನು ಮಾಡುತ್ತಾರೆ.
    ಸಿದ್ಧಚಕ್ರ ಮಹಾಮಂಡಲ ವಿಧಾನ – ಈ ವಿಧಾನವನ್ನು ಅಷ್ಟಾಹ್ನಿಕ ಪರ್ವದಲ್ಲಿ 8 ದಿನಗಳ ಕಾಲ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ 132 ಅಕೃತ್ರಿಮ ಚೈತ್ಯಾಲಯಗಳು, ಅವುಗಳಲ್ಲಿ 52 ನಂದೀಶ್ವರ ದ್ವೀಪಕ್ಕೆ ಸಂಬಂಧಿಸಿದಂತೆ ಹಾಗೂ 80 ಪಂಚಮೇರು ಪರ್ವತಗಳಂತೆ ರಚಿಸಲಾಗುತ್ತದೆ. ಈ ಸಂದರ್ಭದಲ್ಲಿ 2024 ಅರ್ಘ್ಯಗಳನ್ನು ಅರ್ಪಿಸಲಾಗುತ್ತದೆ.

    ಬೆಂಗಳೂರಿನಲ್ಲಿ ಶ್ರ‍ೀ ಜಿನೇಂದ್ರ ಬಂಗರವರ ನೇತೃತ್ವದಲ್ಲಿ ಜರುಗಿದ ಸಿದ್ಧಚಕ್ರ ಮಹಾಮಂಡಲ ವಿಧಾನದ ಚಿತ್ರಗಳು.

    ನಂದೀಶ್ವರ ಅಷ್ಟಾಹ್ನಿಕ ಪರ್ವದ ವ್ರತ ಹಾಗೂ ಶ್ಲೋಕಗಳು – ಈ ಆರಾಧನೆ ಅಥವಾ ವಿಧಾನಗಳನ್ನು ಆಚರಿಸಲು ಆಗದಂತಹ ಶ್ರಾವಕರಿಗಾಗಿ ಜೈನ ಆಗಮಗಳಲ್ಲಿ ನಂದೀಶ್ವರ ಅಷ್ಟಾಹ್ನಿಕ ಪರ್ವದ ಸಂದರ್ಭದಲ್ಲಿ ಆಚರಿಸಬಹುದಾದ ವ್ರತಗಳು ಹಾಗೂ ಶ್ಲೋಕಗಳನ್ನು ಕೂಡ ವಿವರಿಸಲಾಗಿದೆ. ಅವುಗಳ ವಿವರ ಈ ಕೆಳಗಿನಂತಿದೆ:
    + ಅಷ್ಟಾಹ್ನಿಕ ವ್ರತ 5 ವಿಧಗಳಲ್ಲಿದೆ – 17 ವರ್ಷ, 8 ವರ್ಷ, 5 ವರ್ಷ, 3 ವರ್ಷ ಹಾಗೂ 1 ವರ್ಷ.
    + ವ್ರತಗಳನ್ನು ಕೈಗೊಳ್ಳಬೇಕಾದ ಸಮಯ – ಆಷಾಢ, ಕಾರ್ತಿಕ, ಫಾಲ್ಗುಣ ಮಾಸದ 8 ದಿನಗಳ ಕಾಲ, ಅಂದರೆ ಶುಕ್ಲ ಪಕ್ಷ ಅಷ್ಟಮಿಯಿಂದ ಪೌರ್ಣಿಮೆಯ ದಿನದವರೆಗೆ ಆಚರಿಸಬೇಕು.
    + ವ್ರತದ ಕ್ರಮ – ಇವುಗಳನ್ನು 3 ರೀತಿಯಲ್ಲಿ ವಿಂಗಡಿಸಲಾಗಿದೆ:

    ಉತ್ಕೃಷ್ಟ
    + ಏಕಾಸನ ದಿನದಲ್ಲಿ ಕೇವಲ ಒಂದೇ ಬಾರಿ ಆಹಾರ ಸೇವಿಸುವುದು, ಇದನ್ನು ಸಪ್ತಮಿಯ ದಿನ ಮಾಡಬೇಕು.
    + 8 ದಿನಗಳ ಕಾಲ ಉಪವಾಸ ಕೈಗೊಳ್ಳುವುದು. ಇದನ್ನು ಅಷ್ಟಮಿಯಿಂದ ಪೌರ್ಣಿಮೆಯ ದಿನಗಳವರೆಗೆ ಪಾಲಿಸಿ ಪೂರ್ಣಿಮೆಯ ದಿನ ಮಧ್ಯಾಹ್ನ 3 ಗಂಟೆಯ ನಂತರ ಆಹಾರ ಸೇವಿಸುವುದು.

    ಮಧ್ಯಮ
    + ಸಪ್ತಮಿಯ ದಿನ ಏಕಾಸನ.
    + ಅಷ್ಟಮಿಯ ದಿನ ಉಪವಾಸ.
    + ನವಮಿಯ ದಿನ ಆಹಾರ ಸೇವನೆ.
    + ದಶಮಿಯ ದಿನ ಬಿಸಿ ನೀರು ಅಥವಾ ಆಹಾರ ಸೇವನೆ.
    + ಏಕಾದಶಿಯ ದಿನ ಮಿತವಾದ ಆಹಾರ ಸೇವನೆ.
    + ದ್ವಾದಶಿಯ ದಿನ ಪೂರ್ಣ ದಿನ ಸಾಮಾನ್ಯ ದಿನಗಳಂತೆ ಆಹಾರ ಸೇವಿಸುವುದು.
    + ತ್ರಯೋದಶಿಯ ದಿನ ರುಚಿ ಇಲ್ಲದ ಆಹಾರವನ್ನು ಸೇವಿಸುವುದು ಕೇವಲ ಅನ್ನ ಹಾಗೂ ನೀರಿನೊಂದಿಗೆ.
    + ಚತುರ್ದಶಿಯ ದಿನ ಕೇವಲ ಕುದಿಸಿದ ನೀರನ್ನು ಸೇವಿಸುವುದು ಅಥವಾ ಖಾರವಾದ ಆಹಾರ ವನ್ನು ನೀರಿನೊಂದಿಗೆ ಸೇವಿಸುವುದು.
    + ಪೌರ್ಣಿಮೆಯ ದಿನ ಪೂರ್ಣ ದಿನ ಉಪವಾಸ ಮಾಡಿ ದಿನದ ಅಂತ್ಯದಲ್ಲಿ ಆಹಾರ ಸೇವಿಸುವುದು.

    ಜಗನ್ಯ – ಸಪ್ತಮಿಯ ದಿನ ದಿಂದ ಪೌರ್ಣಿಮೆಯ ದಿನದವರೆಗೆ ಪ್ರತಿದಿನ ಶ್ಲೋಕಗಳನ್ನು ಕೊಳ್ಳುವುದು.

    ಅಷ್ಟಾಹ್ನಿಕ ಪರ್ವದ ಸಮಯದಲ್ಲಿ ಹೇಳಿಕೊಳ್ಳಬೇಕಾದ ಶ್ಲೋಕಗಳು – ಅಷ್ಟಾಹ್ನಿಕ ಪರ್ವದ ಸಮಯದಲ್ಲಿ ಪ್ರತಿದಿನವೂ ಆಯಾ ದಿನಗಳಿಗಾಗಿಯೇ ವಿಶೇಷವಾಗಿ ತಿಳಿಸಲಾದ ಶ್ಲೋಕಗಳನ್ನು ದಿನದಲ್ಲಿ 3 ಬಾರಿ 108 ಸಲ  ಹೇಳಿಕೊಳ್ಳಲು ಸೂಚಿಸಲಾಗಿದೆ. ಶ್ಲೋಕಗಳ ವಿವರ ಈ ಕೆಳಗಿನಂತಿದೆ:
    + ಮೊದಲ ದಿನ ಶುಕ್ಲಪಕ್ಷ ಅಷ್ಟಮಿಯ ದಿನ – ಓಂ ಹ್ರೀಂ ನಂದೀಶ್ವರ ಸಂಙ್ಞಾಯ ನಮಃ
    + ಎರಡನೆಯ ದಿನ ಶುಕ್ಲಪಕ್ಷದ ನವಮಿಯ ದಿನ – ಓಂ ಹ್ರೀಂ ಅಷ್ಟಮಹಾ ವಿಭೂತಿ ಸಂಙ್ಞಾಯ ನಮಃ
    + ಮೂರನೇ ದಿನ ಶುಕ್ಲಪಕ್ಷ ದಶಮಿಯ ದಿನ – ಓಂ ಹ್ರೀಂ ತ್ರಿಲೋಕ ಸಂಗರ ಸಂಙ್ಞಾಯ ನಮಃ
    + ನಾಲ್ಕನೇ ದಿನ ಶುಕ್ಲಪಕ್ಷದ ಏಕಾದಶಿಯ ದಿನ – ಓಂ ಹ್ರೀಂ ಚತುರ್ಮುಖ ಸಂಙ್ಞಾಯ ನಮಃ
    + ಐದನೇ ದಿನ ಶುಕ್ಲಪಕ್ಷ ದ್ವಾದಶಿ ದಿನ – ಓಂ ಹ್ರೀಂ ಮಹಾಲಕ್ಷಣ ಸಂಙ್ಞಾಯ ನಮಃ
    + ಆರನೆಯ ದಿನ ಶುಕ್ಲಪಕ್ಷ ತ್ರಯೋದಶಿ ದಿನ – ಓಂ ಹ್ರೀಂ ಸ್ವರ್ಗಸೋಪಾನ ಸಂಙ್ಞಾಯ ನಮಃ
    + ಏಳನೆಯ ದಿನ ಶುಕ್ಲಪಕ್ಷ ಚತುರ್ದಶಿಯ ದಿನ – ಓಂ ಹ್ರೀಂ ಸರ್ವಸಮಾಪ್ತಿ ಸಂಙ್ಞಾಯ ನಮಃ
    + ಎಂಟನೆಯ ದಿನ ಶುಕ್ಲಪಕ್ಷ ಪೌರ್ಣಿಮೆಯ ದಿನ – ಓಂ ಹ್ರೀಂ ಇಂದ್ರಧ್ವಜ ಸಂಙ್ಞಾಯ ನಮಃ.

    ಉಲ್ಲೇಖ/ಆಧಾರ/ಆಕರ ಗ್ರಂಥಗಳು:
    1. ಜೈನಧರ್ಮ (ಕನ್ನಡ) – ಹಿಂದಿ ಮೂಲ ಪಂಡಿತ್ ಕೈಲಾಶ್ ಚಂದ್ರ ಶಾಸ್ತ್ರಿ, ಕನ್ನಡದ ಅನುವಾದ ಕೆ ಭುಜಬಲಿಶಾಸ್ತ್ರಿಗಳು, ಬಿ ದೇವಕುಮಾರ್ ಜೈನ್, ಪುಟ ಸಂಖ್ಯ – 387. ಪ್ರಕಾಶಕರು : ಲಾಲ್ ಚಂದ್ ಹೀರಾಚಂದ್ ದೋಶಿ ಜೈನ ಸಂಸ್ಕೃತಿ ಸಂರಕ್ಷಕ ಸಂಘ ಸೊಲ್ಲಾಪುರ, ಮೊದಲ ಮುದ್ರಣ (1969).
    2. ಜೈನೇಂದ್ರ ಸಿದ್ದಾಂತಕೋಶ (ಹಿಂದಿ) – ಕ್ಷುಲ್ಲಕ ಜಿನೇಂದ್ರವರ್ಣಿಜಿ; ಭಾಗ – 1, ಪುಟ ಸಂಖ್ಯೆ – 205, ಪ್ರಕಾಶಕರು: ಭಾರತೀಯ ಜ್ಞಾನಪೀಠ, 18, ಇನ್ಸಟಿಟ್ಯೂಷನಲ್ ಏರಿಯಾ, ಲೋಧಿ ರಸ್ತೆ, ನವದೆಹಲಿ, 2012 (11ನೇ ಮುದ್ರಣ).
    3. ಜೈನೇಂದ್ರ ಸಿದ್ದಾಂತಕೋಶ (ಹಿಂದಿ) – ಕ್ಷುಲ್ಲಕ ಜಿನೇಂದ್ರವರ್ಣಿಜಿ; ಭಾಗ – 2, ಪುಟ ಸಂಖ್ಯೆ – 138, ಪ್ರಕಾಶಕರು: ಭಾರತೀಯ ಜ್ಞಾನಪೀಠ, 18, ಇನ್ಸಟಿಟ್ಯೂಷನಲ್ ಏರಿಯಾ, ಲೋಧಿ ರಸ್ತೆ, ನವದೆಹಲಿ, 2012 (11ನೇ ಮುದ್ರಣ).
    4. ಜೈನೇಂದ್ರ ಸಿದ್ದಾಂತಕೋಶ (ಹಿಂದಿ) – ಕ್ಷುಲ್ಲಕ ಜಿನೇಂದ್ರವರ್ಣಿಜಿ; ಭಾಗ – 1, ಪುಟ ಸಂಖ್ಯೆ – 515 & 516, ಪ್ರಕಾಶಕರು: ಭಾರತೀಯ ಜ್ಞಾನಪೀಠ, 18, ಇನ್ಸಟಿಟ್ಯೂಷನಲ್ ಏರಿಯಾ, ಲೋಧಿ ರಸ್ತೆ, ನವದೆಹಲಿ, 2012 (11ನೇ ಮುದ್ರಣ).

    ಓದುಗರ ಗಮನಕ್ಕೆ – ಲೇಖಕರು ಹಲವಾರು ವರ್ಷಗಳ ಕಾಲ ಪುರಾತನ ಜೈನ ಕೇಂದ್ರಗಳಿಗೆ ಕೈಗೊಂಡ ಕ್ಷೇತ್ರಕಾರ್ಯದ ಸಮಯದಲ್ಲಿ ತೆಗೆದ ಚಿತ್ರ ಪಟಗಳನ್ನು ಬಳಸಲಾಗಿದೆ. ಈ ಲೇಖನವನ್ನು ಹಲವಾರು ವರ್ಷಗಳ ಪರಿಶ್ರಮದಿಂದ ಸಿದ್ಧಪಡಿಸಲಾಗಿದೆ. ಆದ್ದರಿಂದ ಈ ಲೇಖನವನ್ನು ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ ಪ್ರಕಟಿಸುವವರು ಲೇಖಕರ ಪೂರ್ವಾನುಮತಿ ಇಲ್ಲದೆ ಅಥವಾ ಲೇಖನದ ಮೂಲವನ್ನು/ಲೇಖಕರ ಹೆಸರನ್ನು ಉಲ್ಲೇಖಿಸದೆ ಪ್ರಕಟಿಸಿದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು.

    error: Jain Heritage Centres - Celebrating Jain Heritage.....Globally!