Skip to content
Home » ಕನ್ನಡ » ವಿಚಾರ » ಮೇಘಚಂದ್ರ ದೇವರ ನಿಶಧಿ ಏಚಗಹಳ್ಳಿ

ಮೇಘಚಂದ್ರ ದೇವರ ನಿಶಧಿ ಏಚಗಹಳ್ಳಿ

    ಮೇಘಚಂದ್ರ ದೇವರು ಎಂಬ ದಿಗಂಬರ ಮುನಿಯೊಬ್ಬರ ಸಲ್ಲೇಖನ ಸ್ಮಾರಕ (ನಿಶಧಿ), ಕ್ರಿ.ಶ. 1371, ಏಚಗಹಳ್ಳಿ, ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ, ಕರ್ನಾಟಕ.

    ಸ್ಥಳ – ಕುದುರೆ ಬ್ರಹ್ಮ ದೇವರ ಬಸದಿ, ಏಚಗಹಳ್ಳಿ, ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ, ಕರ್ನಾಟಕ.

    ಶಾಸನದ ಸ್ವರೂಪ – ನಿಶದಿ – ಸಲ್ಲೇಖನ ಸ್ಮಾರಕ

    ಶಾಸನದ ಕಾಲ – ಶಾಸನೋಕ್ತ ಕಾಲವು ಶಕವರ್ಷ ೧೨೯೩, ವಿರೋಧಿಕೃತ್ ಸಂವತ್ಸರ, ಮಾರ್ಗಶಿರ ಮಾಸ, ಶುದ್ಧ ೧೫, ಆದಿವಾರ ಎಂದಿದೆ. ಇದು ಕ್ರಿ.ಶ.ನವೆಂಬರ್ ೨೩, ೧೩೭೧ಕ್ಕೆ ಸರಿಹೊಂದುತ್ತದೆ.

    ಶಾಸನದ ಭಾಷೆ – ಹಳೆಗನ್ನಡ

    ಶಾಸನದಲ್ಲಿ ಉಲ್ಲೇಖಿಸಲಾಗಿರುವ ಸಮಾಧಿಹೊಂದಿದ ವ್ಯಕ್ತಿ – ಮುನಿ ಮೇಘಚಂದ್ರ ದೇವರು.

    ಶಾಸನದ ವಿಶೇಷತೆ –

    + ಮುನಿ ಮೇಘಚಂದ್ರ ದೇವರ ಸ್ಮರಣಾರ್ಥ ನಿಶಧಿ ಶಾಸನ.
    + ಶಾಸನದಲ್ಲಿ ಮೇಘಚಂದ್ರ ದೇವರ ಗುಣಗಾನವನ್ನು ಮಾಡಲಾಗಿದೆ.
    + ಶಿಲ್ಪದ ದೃಷ್ಟಿಯಿಂದ ಶಾಸನವು ವಿಶೇಷವಾಗಿದ್ದು ಮೇಲ್ಭಾಗದಲ್ಲಿ ಪರ್ಯಂಕಾಸನದಲ್ಲಿರುವ ತೀರ್ಥಂಕರರ ಶಿಲ್ಪ, ಎರಡನೇ ಪಟ್ಟಿಕೆಯಲ್ಲಿ ಸಲ್ಲೇಖನ ವ್ರತವನ್ನು ಬೋಧಿಸುತ್ತಿರುವ ಮೂರು ಮುನಿಗಳು, ಹಾಗೂ ಕೈಮುಗಿದಿರುವ ಮಹಿಳೆ ಹಾಗೂ ಮೂರನೇ ಪಟ್ಟಿಕೆಯ ಒಂದು ಭಾಗದಲ್ಲಿ ಸಲ್ಲೇಖನ ವ್ರತವನ್ನು ಬೋಧಿಸುತ್ತಿರುವ ಎರಡು ಮುನಿಗಳು, ಹಾಗೂ ಕೈಮುಗಿದಿರುವ ಮಹಿಳೆಯನ್ನು ಕಾಣಬಹುದು.

    ಶಾಸನದ ಸಾರಾಂಶ
    ಜಿನಸ್ತುತಿಯೊಂದಿಗೆ ಶಾಸನ ಆರಂಭವಾಗುತ್ತದೆ. ಮೇಘಚಂದ್ರದೇವರು ಮುಕ್ತಿಗೆ ಸಂದಾಗ, ಅವರ ಶಿಷ್ಯ ಮಾಣಿಕದೇವರು ನಿಶಿಧಿಯನ್ನು ನಿಲ್ಲಿಸಿದರು.
    ಶಾಸನದಲ್ಲಿ ಮೇಘಚಂದ್ರರನ್ನು ಬಹುವಾಗಿ ಕೀರ್ತಿಸಲಾಗಿದೆ. ಧೀರರೂ, ಬಹುಸದ್ಗುಣಗಳಿಂದ ಕೂಡಿದವರೂ, ಜಿನೇಶ್ವರ ಧರ್ಮರಾಶಿಗಳೂ, ಜೈನಮತಾಂಬುರಾಶಿ ಪರಿವರ್ಧನಚಂದ್ರರೂ, ಅನಸ್ತತಂದ್ರಂ, ಮಾನಿತಸಾರ ಸರ್ವಗುಣರುದ್ರಂ, ಉನ್ನತಕೀರ್ತಿವಂತರೂ ಆಗಿದ್ದರೆಂದು ಜನರು ವರ್ಣಿಸುತ್ತಿದ್ದರಂತೆ. ಅರಿಯದ ವಿದ್ಯೆಯಿಲ್ಲ ಓದದ ಕೇಳದ ಶಾಸ್ತ್ರವಿಲ್ಲ, ಸೋಲದ (ಇವನಿಂದ) ವಾದಿಗಳಿಲ್ಲ. ಇವನನ್ನು ಹೊಗಳ ಕವೀಶ್ವರರಿಲ್ಲ ಎಂದು ಪಾರ್ಶ್ವದೇವ ಮತ್ತು ಬಾಹುಬಲಿವ್ರತಿಯನ್ನು ವರ್ಣಿಸಿದೆ. ಈ ನಿಸಿದಿಯನ್ನು ಮೇಘಚಂದ್ರದೇವನ ಶಿಷ್ಯ ಮಾಣಿಕ್ಯದೇವನು ಮಾಡಿಸಿದಂತೆ ಹೇಳಿದೆ. ಇದಲ್ಲದೆ ಮೇಲಿನ ಶಿಲ್ಪಗಳ ಕೆಳಗೆ ಅವರ ಹೆಸರುಗಳನ್ನು ಕೆತ್ತಲಾಗಿದೆ.

    ಉಲ್ಲೇಖಗಳು

    1. Epigraphia Carnatica III(R) Nj.171
    2. Epigraphia Carnatica III(O) Nj.43
    3. Mysore Archaeological Department Report – 1936 No. 57
    4. ಕರ್ನಾಟಕ ಜೈನ ಶಾಸನಗಳು – ಸಂಪುಟ ೨, ಪುಟ ೪೫-೪೬
    error: Jain Heritage Centres - Celebrating Jain Heritage.....Globally!