Skip to content
Home » ಕನ್ನಡ » ಸುದ್ದಿ-ಸಮಾಚಾರ » ಸಲ್ಲೇಖನ : ಶ್ರವಣಬೆಳಗೊಳದಲ್ಲಿ ಜೈನ ಸ್ವಾಮಿಗಳ ಸಮಾವೇಶ

ಸಲ್ಲೇಖನ : ಶ್ರವಣಬೆಳಗೊಳದಲ್ಲಿ ಜೈನ ಸ್ವಾಮಿಗಳ ಸಮಾವೇಶ

    ಶ್ರವಣಬೆಳಗೊಳ, ಸೆಪ್ಟೆಂಬರ್ 02, 2015: ಸಲ್ಲೇಖನಾ ವ್ರತ ಆತ್ಮಹತ್ಯೆಗೆ ಸಮಾನವಾದ ಶಿಕ್ಷಾರ್ಹ ಅಪರಾಧವೆಂದು ರಾಜಸ್ಥಾನ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಇನ್ನು ಮುಂದೆ ಜೈನ ಸಮಾಜ ಪ್ರತಿಭಟನೆ ಅಥವಾ ಮೌನ ಮೆರವಣಿಗೆ ನಡೆಸಬಾರದೆಂದು ಸಮಸ್ತ ಜೈನ ಮಠಗಳ ಪಟ್ಟಾಚಾರ್ಯ ಸ್ವಾಮೀಜಿಗಳ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

    ಸಮಾವೇಶದ ನಂತರ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು, ಕಾಲಕ್ಕೆ ತಕ್ಕ ಹಾಗೆ ಧರ್ಮದ ಬದಲಾವಣೆ ಸಾಧ್ಯವಿಲ್ಲ. ಧರ್ಮದಿಂದ ಸಮಾಜ ಕಲ್ಯಾಣ, ಆತ್ಮ ಕಲ್ಯಾಣ ಕೊನೆಗೆ ಮುಕ್ತಿ ಪಡೆಯಬೇಕು ಎಂದು ಹೇಳಿದರು.

    ಸುಪ್ರೀಂ ಕೋರ್ಟ್‌ನ ತೀರ್ಪಿನಿಂದಾಗಿ ಸದ್ಯಕ್ಕೆ ಜೈನ ಧರ್ಮದ ಮೇಲೆ ಕವಿದಿದ್ದ ದೊಡ್ಡ ಕಾರ್ಮೋಡ ಸರಿದಂತಾಗಿದೆ. ಇನ್ನು ಮುಂದೆ ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುವುದರಿಂದ ಸಲ್ಲೇಖನಾ ಮರಣ ಕುರಿತಾದ ಸಾಹಿತ್ಯ ಗ್ರಂಥಗಳು, ಐತಿಹಾಸಿಕ ದಾಖಲೆಗಳು ಮತ್ತು ಶಿಲಾ ಶಾಸನಗಳ ಸಮಗ್ರ ದಾಖಲೆಗಳನ್ನು ಸಂಗ್ರಹಿಸಿ ಸುಪ್ರೀಂಕೋರ್ಟ್ ಮುಂದೆ ಮಂಡಿಸಲಾಗುವುದು ಎಂದರು.

    ಸಲ್ಲೇಖನಾ ವ್ರತವು ಆತ್ಮಹತ್ಯೆ ಅಲ್ಲ, ಅದೊಂದು ತಪಸ್ಸು ಎಂಬುದನ್ನು ಸ್ಪಷ್ಟಪಡಿಸುವ ಕಾರ್ಯವನ್ನು ಒಗ್ಗಟ್ಟಿನಿಂದ ಮಾಡಲು ಪಟ್ಟಾಚಾರ್ಯರ ಸಮಾವೇಶದಲ್ಲಿ ಚರ್ಚಿಸಿ ಒಮ್ಮತದಿಂದ ಕೈಗೊಳ್ಳಲಾಗಿದೆ. ಅಲ್ಲದೆ ನಿವೃತ್ತ ನ್ಯಾಯಮೂರ್ತಿ ಅಜಿತ್ ಗುಂಜಾಳ್ ಅವರ ಸಲಹೆ ಪಡೆಯಲಾಗಿದೆ ಎಂದು ಅವರು ವಿವರ ನೀಡಿದರು.

    ಸಲ್ಲೇಖನಾ ಜೀವನ ಧರ್ಮ ಸಾಧನೆಯ ವ್ರತಾಚರಣೆಯ ಅಂತಿಮ ಪರೀಕ್ಷೆ. ಹಿಂದಿನ ಜನ್ಮಗಳ ಕರ್ಮಗಳನ್ನು ತೊಡೆದುಕೊಂಡು ಮತ್ತೆ ಮುಂದೆ ಉತ್ತಮ ಜನ್ಮ ಪಡೆಯಲು ಅಥವಾ ಸ್ವರ್ಗದಲ್ಲಿ ತೀರ್ಥಂಕರರನ್ನು ಸೇರಲು ಮೋಕ್ಷಕ್ಕಾಗಿ ತ್ಯಾಗಿಗಳು ಮತ್ತು ಆಚಾರ್ಯರ ಸಮ್ಮುಖದಲ್ಲಿ ಈ ವ್ರತ ಕೈಗೊಳ್ಳಲಾಗುತ್ತದೆ. ಚಂದ್ರಗುಪ್ತ ಮೌರ್ಯ, ಶಾಂತಲೆ ಮತ್ತಿತರ ಐತಿಹಾಸಿಕ ವ್ಯಕ್ತಿಗಳು ಸಲ್ಲೇಖನಾ ವ್ರತ ಆಚರಿಸುವ ದಾಖಲೆಗಳಿವೆ ಎಂದರು.

    ಕರ್ನಾಟಕ ರಾಜ್ಯ ಮಠಗಳ ನೆಲೆವೀಡು. ಇತರ ರಾಜ್ಯಗಳಲ್ಲಿರುವುದಕ್ಕಿಂತ ಹೆಚ್ಚಿನ ಜೈನ ಮಠಗಳು ಸೇರಿದಂತೆ ಎಲ್ಲಾ ಜಾತಿ, ಧರ್ಮಗಳ ಮಠಗಳು ಇಲ್ಲಿ ಸಮಾಜ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ. ಮಠಗಳ ಮೂಲ ಉದ್ದೇಶ ಶಿಕ್ಷಣ ಮತ್ತು ಧರ್ಮ ಸಂಸ್ಕಾರ ನೀಡುವುದಾಗಿದೆ. ಹಿಂದೆ ರಾಜ ಮನೆತನಗಳೂ ಮಠಗಳಿಗೆ ಗೌರವ ನೀಡುತ್ತಾ ಬಂದಿವೆ. ಆದ್ದರಿಂದ ಮಠಾಧೀಶರು ಒಂದಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

    ಕರ್ನಾಟಕದಲ್ಲಿ ಹತ್ತು, ತಮಿಳುನಾಡಿನಲ್ಲಿ ಎರಡು ಮತ್ತು ಮಹಾರಾಷ್ಟ್ರದಲ್ಲಿ ಎರಡು ಜೈನ ಮಠಗಳಿವೆ. ಈ ಮಠಗಳ ಒಟ್ಟು 14 ಪಟ್ಟಾಚಾರ್ಯರಲ್ಲಿ 11 ಮಂದಿ ಇಂದು ನಡೆದ ಪಟ್ಟಾಚಾರ್ಯರ ಎರಡನೇ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಮೊದಲನೆ ಸಮಾವೇಶ ಬೆಂಗಳೂರಿನಲ್ಲಿ ನಡೆದಿತ್ತು. ಮುಂದಿನ ಸಮಾವೇಶ ಮೂರು ತಿಂಗಳ ನಂತರ ನಡೆಯಲಿದೆ ಎಂದು ಸ್ವಾಮೀಜಿ ಮಾಹಿತಿ ನೀಡಿದರು.

    ಜೈನರ ಜನಸಂಖ್ಯೆ ಇಳಿಮುಖ : ದೇಶದಲ್ಲಿ ಜೈನ ಧರ್ಮೀಯರ ಜನಸಂಖ್ಯೆ ಇಳಿಮುಖವಾಗುತ್ತಿರುವುದರಿಂದ ಈ ಕುರಿತು ಜೈನ ಸಮಾಜದಲ್ಲಿ ಜಾಗೃತಿ ಮೂಡಿಸಲು ಶ್ರವಣಬೆಳಗೊಳದಲ್ಲಿ ಮಂಗಳವಾರ ನಡೆದ ಸಮಸ್ತ ಜೈನ ಮಠಗಳ ಪಟ್ಟಾಚಾರ್ಯ ಸ್ವಾಮೀಜಿಗಳ ಸಮಾವೇಶದಲ್ಲಿ ನಿರ್ಧರಿಸಲಾಯಿತು.

    2011ರಲ್ಲಿ ನಡೆದ ರಾಷ್ಟ್ರೀಯ ಜನಗಣತಿ ವರದಿಯಿಂದ ಇಡೀ ರಾಷ್ಟ್ರದಲ್ಲಿ 45 ಲಕ್ಷ ಮತ್ತು ಕರ್ನಾಟಕದಲ್ಲಿ 4,40,280 ಜೈನ ಧರ್ಮೀಯರು ಇದ್ದಾರೆ ಎಂಬ ಅಂಶ ತಿಳಿದುಬರುತ್ತದೆ. 2001ರ ಜನಗಣತಿಯ ಅಂಕಿಅಂಶದೊಂದಿಗೆ ಇದನ್ನು ಹೋಲಿಸಿದಾಗ ಜೈನ ಸಂಖ್ಯೆ ಇಳಿಮುಖವಾಗಿರುವುದು ಕಂಡು ಬರುತ್ತದೆ. ಆದ್ದರಿಂದ ಈ ಕುರಿತು ಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ ಎಂದು ಸ್ವಸ್ತ್ರಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು. – ಕೃಪೆ: oneindia.com

    error: Jain Heritage Centres - Celebrating Jain Heritage.....Globally!