Skip to content
Home » ಕನ್ನಡ » ಸುದ್ದಿ-ಸಮಾಚಾರ » ಹಾಸನದ ದೊಡ್ಡ ಬಸದಿಯಲ್ಲಿ 12 ರಿಂದ 15ನೇ ಶತಮಾನಕ್ಕೆ ಸೇರಿದ ನಾಲ್ಕು ಜೈನ ಶಾಸನಗಳು ಪತ್ತೆ

ಹಾಸನದ ದೊಡ್ಡ ಬಸದಿಯಲ್ಲಿ 12 ರಿಂದ 15ನೇ ಶತಮಾನಕ್ಕೆ ಸೇರಿದ ನಾಲ್ಕು ಜೈನ ಶಾಸನಗಳು ಪತ್ತೆ

    ಹಾಸನ, 20 ಜನವರಿ 2020: ಹಾಸನದ ದೊಡ್ಡ ಬಸದಿಯಲ್ಲಿ 12 ರಿಂದ 15ನೇ ಶತಮಾನಕ್ಕೆ ಸೇರಿದ ಅಪರೂಪದ ನಾಲ್ಕು ಜೈನ ಶಿಲಾ ಶಾಸನಗಳು ಪತ್ತೆಯಾಗಿವೆ. ಇವುಗಳನ್ನು ಬೆಂಗಳೂರಿನ ವಿಪ್ರೋ ಕಂಪನಿಯಲ್ಲಿ ಮಾರ್ಕೆಟಿಂಗ್ ಟೆಕ್ನಾಲಜಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಎಚ್ ಪಿ ನಿತಿನ್ ಅವರು ತಮ್ಮ ಕ್ಷೇತ್ರ ಕಾರ್ಯದ ಸಮಯದಲ್ಲಿ ಇತ್ತೀಚೆಗೆ ಪತ್ತೆ ಮಾಡಿದ್ದಾರೆ.
    ಹಾಸನ ನಗರದ ದೇವಿಗೆರೆ ಸಮೀಪದಲ್ಲೇ ಇರುವ ದೊಡ್ಡ ಬಸದಿಯ ಮೂಲ ಸ್ವಾಮಿಯಾದ ಪಾರ್ಶ್ವನಾಥ ತೀರ್ಥಂಕರರು, ಮೊದಲ ಅಂತಸ್ತಿನಲ್ಲಿದ್ದ ನೇಮಿನಾಥ ತೀರ್ಥಂಕರರು, ಬಸದಿಯ ನವರಂಗದಲ್ಲಿರುವ ಕಂಬದ ಮೇಲೆ ಹಾಗೂ ಬಸದಿಯ ಆವರಣದಲ್ಲಿರುವ ಜೆಟ್ಟಿಗೆರಾಯನ ಗುಡಿಯ ಹೊರಭಾಗದ ಪೀಠದ ಮೇಲೆ ಈ ನಾಲ್ಕು ಶಾಸನಗಳು ಪತ್ತೆಯಾಗಿವೆ.

    ಹಾಸನದ ದೊಡ್ಡ ಬಸದಿಯಲ್ಲಿ 12 ರಿಂದ 15ನೇ  ಶತಮಾನಕ್ಕೆ ಸೇರಿದ ನಾಲ್ಕು ಜೈನ ಶಾಸನಗಳು ಪತ್ತೆ.

    ”ಹಾಸನ ಜಿಲ್ಲೆಯು ಶಾಸನಗಳ ನೆಲೆವೀಡಾಗಿದ್ದು ಅದರಲ್ಲೂ ವಿಶೇಷವಾಗಿ ಶ್ರವಣಬೆಳಗೊಳದಲ್ಲಿರುವ ಸುಮಾರು ಆರುನೂರು ಜೈನ ಶಾಸನಗಳು ಹಾಗೂ ಜಿಲ್ಲೆಯಾದ್ಯಂತ ಹಲವಾರು ಜೈನ ಶಾಸನಗಳು ದೊರಕಿದ್ದರೂ ಕೂಡ ಹಾಸನ ನಗರದಲ್ಲಿ ಯಾವುದೇ ಜೈನ ಶಾಸನಗಳು ಇದುವರೆಗೆ ಪತ್ತೆಯಾಗಿರಲಿಲ್ಲ. ಪ್ರಸ್ತುತ ಸಿಕ್ಕಿರುವ ನಾಲ್ಕು ಜೈನ ಶಾಸನಗಳು ಹಾಸನ ನಗರದಲ್ಲಿನ ಜೈನ ಪರಂಪರೆಯ ಪುರಾತನ ಸಂಸ್ಕೃತಿಯನ್ನು ತಿಳಿಸುತ್ತದೆ” ಎಂದು ನಿತಿನ್ ರವರು ಅಭಿಪ್ರಾಯಪಟ್ಟಿದ್ದಾರೆ.

    ಮೊದಲ ಶಾಸನ – ಶ್ರೀ ನೇಮಿನಾಥ ತೀರ್ಥಂಕರರ ಪಾದಪೀಠ ಶಾಸನ
    ಬಸದಿಯ ಮೊದಲ ಅಂತಸ್ತಿನಲ್ಲಿ ನೇಮಿನಾಥ ತೀರ್ಥಂಕರರ ವಿಗ್ರಹವನ್ನು ಒಂದು ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿತ್ತು. ಬಸದಿಯ ಜೀರ್ಣೋದ್ಧಾರದ ಸಮಯದಲ್ಲಿ ಈ ನೇಮಿನಾಥ ವಿಗ್ರಹವನ್ನು ಇಟ್ಟಿದ್ದ ಕೋಣೆಯನ್ನು ತೆರವುಗೊಳಿಸಬೇಕಾಗಿದ್ದರಿಂದ ವಿಗ್ರಹವನ್ನು ತೆಗೆದು ಮತ್ತೊಂದು ಜಾಗದಲ್ಲಿ ಇರಿಸಲಾಗಿದೆ. ಹಿಂದೆ ಕಾಂಕ್ರೀಟಿನಲ್ಲಿ ಮುಚ್ಚಿ ಹೋಗಿದ್ದ ಭಾಗದಲ್ಲಿ ಈ ಶಾಸನವು ಬೆಳಕಿಗೆ ಬಂದಿದೆ.

    1. ಶಾಸನದ ಪಾಠ:
      1 ಶ್ರೀ ಮೂಲ ಸಂಘ ದೇಸಿಯಗಣ ಪೊಸ್ತಕ ಗಚ್ಛ
      2 ಕೊಂಡ ಕುಂದಾನ್ವಯದ ಇಂಗಳೇಶ್ವರದ ಬ
      3 ಳಿಯ ಶ್ರೀ ಶ್ರುತಕೀರ್ತ್ತಿ ದೇವರ ಗುಡ್ಡಗಳು
      4 ಕೊಂಗನಾಡ ಶ್ರೀಕರಣದ ಕಾವಣ್ಣಂಗಳ ಮಕ್ಕ
      5 ಳು ನಾಕಣ್ನ ಹೊನ್ನಣ್ನಂಗಳು ಮಾಡಿಸಿದ ಶ್ರೀ
      6 ನೇಮಿನಾಥ ಸ್ವಾಮಿಗಳ ಪ್ರತಿಮೆ ಮಂಗ
      7 ಳ ಮಹಾ ಶ್ರೀ ಶ್ರೀ ಶ್ರೀ @@@ ||
    2. ಶಾಸನದ ಸಾರಾಂಶ: ಮೂಲ ಸಂಘ ದೇಸಿಯ ಗಣ ಪುಸ್ತಕ ಗಚ್ಛ ಕುಂದಕುAದಾನ್ವಯ ಇಂಗಳೇಶ್ವರ ಬಳಿಯ ಮುನಿಗಳಾದ ಶ್ರೀ ಶೃತಕೀರ್ತಿ ದೇವರ ಶಿಷ್ಯರು ಕೊಂಗನಾಡಿನ ಶ್ರೀ ಕಾವಣ್ಣನ ಮಕ್ಕಳಾದ ನಾಕಣ್ಣ ಹಾಗೂ ಹೊನ್ನಣ್ಣರು ಶ್ರೀ ನೇಮಿನಾಥ ಸ್ವಾಮಿಗಳ ಪ್ರತಿಮೆಯನ್ನು ಮಾಡಿಸಿದರು ಎಂದು ತಿಳಿಸುತ್ತದೆ.
    3. ಶಾಸನದ ವಿಶೇಷತೆ: ಈ ಶಾಸನವು ಹಲವಾರು ವಿಷಯಗಳಿಂದ ವಿಶೇಷವಾಗಿದೆ:
      1. ಮುನಿ ಪರಂಪರೆಯ ಸಂಪೂರ್ಣ ವಿವರ: ಒಂದೇ  ಶಾಸನದಲ್ಲಿ ಮುನಿ ಪರಂಪರೆಯ ವರ್ಗೀಕರಣ ಅಂದರೆ ಸಂಘ, ಗಣ, ಗಚ್ಛ, ಅನ್ವಯ, ಬಳಿ ಎಲ್ಲವುಗಳು ಕಂಡು ಬರುವುದು ಅಪರೂಪ. ಈ ರೀತಿಯ ಉಲ್ಲೇಖಗಳನ್ನು ಶ್ರವಣಬೆಳಗೊಳದ ಒಂದೆರಡು ಶಾಸನಗಳು ಹಾಗೂ ಕರ್ನಾಟಕದ ಕೆಲವೇ ಕೆಲವು ಶಾಸನಗಳಲ್ಲಿ ಕಾಣಬಹುದು. ಈ ಶಾಸನದಲ್ಲಿ ಹೆಸರಿಸಲಾದ ಶ್ರುತಮುನಿಯ ಸಂಪೂರ್ಣ ಗುರುಪರಂಪರೆಯನ್ನು ನಾವು ಕಾಣಬಹುದು.
      2. ಮೂಲ ಸಂಘ: ಮೂಲ ಸಂಘವೆAದರೆ ಜೈನ ಮುನಿ ಪರಂಪರೆಯ ಸಂಘದ ಹೆಸರು ಹಾಗೂ ಈ ಮುನಿ ಪರಂಪರೆಗೆ ದೊಡ್ಡ ಹೆಸರಿದೆ.
      3. ಇಂಗುಳೇಶ್ವರ ಬಳಿ: ಇಂಗುಳೇಶ್ವರ ಎಂಬುದು ಒಂದು ಊರಿನ ಹೆಸರು. ’ಇಂಗುಳೇಶ್ವರ ಬಳಿ’ ಎಂದರೆ ಇಂಗುಳೇಶ್ವರ ಎಂಬ ಊರಿನಲ್ಲಿ ಜನ್ಮತಾಳಿದ ಮುನಿಸಂಘದ ವರ್ಗ.
      4. ಕೊಂಗನಾಡು: ಈ ಶಾಸನದಲ್ಲಿ ”ಕೊಂಗನಾಡ” ಎಂಬ ಪದದ ಪ್ರಯೋಗವಿದೆ. ಕೊಂಗನಾಡು ಎಂದರೆ ಇಂದಿನ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಪ್ರದೇಶದಿಂದ ಉತ್ತರ ಕೊಡಗಿನ ಏಳು ಸಾವಿರ ಪ್ರದೇಶ ಅಂದರೆ ಕಾವೇರಿ ಹಾಗೂ ಹೇಮಾವತಿ ನದಿಗಳ ನಡುವಿನ ಸ್ಥಳದಲ್ಲಿ ಆಳ್ವಿಕೆ ಮಾಡುತ್ತಿದ್ದ ಪ್ರದೇಶವೇ ಕೊಂಗನಾಡು ಅಥವಾ ಕೊಂಗಾಳ್ವರನಾಡು ಹಾಗೂ ಆ ಪ್ರದೇಶದಲ್ಲಿ ಆಳ್ವಿಕೆ ಮಾಡುತ್ತಿದ್ದವರೇ ಕೊಂಗಾಳ್ವರು ಹಾಗೂ ಅವರು ಜೈನ ಅರಸರು.
      5. ಶ್ರ‍ೀಕರಣ: ಈ ಶಾಸನದಲ್ಲಿ ‘ಶ್ರೀಕರಣ’ ಎಂಬ ಪದದ ಉಲ್ಲೇಖವಿದೆ, ಅಂದರೆ ಲೆಕ್ಕ ಪತ್ರವನ್ನು ಬರೆಯುವವರು.
    4. ಶಾಸನದ ಕಾಲ: ಈ ಶಾಸನದಲ್ಲಿ ”ಕೊಂಗನಾಡು” ಎಂಬ ಪದದ ಉಲ್ಲೇಖವಿದೆ. ಕೊಂಗಳ್ವರು ಆಳಿದ ಸಮಯ ಸುಮಾರು 11-12ನೇ ಶತಮಾನ ಹಾಗೂ ಇದರ ಲಿಪಿಯ ಆಧಾರದಲ್ಲಿ ಈ ಶಾಸನವು 12ನೇ ಶತಮಾನಕ್ಕೆ ಸೇರಿದ್ದೆಂದು ನಿಶ್ಚಯಿಸಿಬಹುದು.

    ಎರಡನೇ ಶಾಸನ – ಶ್ರೀ ಪಾರ್ಶ್ವನಾಥ ತೀರ್ಥಂಕರರ ಪಾದಪೀಠ ಶಾಸನ
    ಬಸದಿಯ ಮೂಲ ಸ್ವಾಮಿಯಾದ ಶ್ರೀ ಪಾರ್ಶ್ವನಾಥ ತೀರ್ಥಂಕರರನ್ನು ಪೀಠವೊಂದರ ಮೇಲೆ ಪ್ರತಿಷ್ಠಾಪಿಸಲಾಗಿತ್ತು. ಜೀರ್ಣೋದ್ಧಾರದ ಕಾರಣದಿಂದಾಗಿ ವಿಗ್ರಹವನ್ನು ತೆಗೆದಿದ್ದರಿಂದ ಹಿಂದೆ ಕಾಂಕ್ರೀಟಿನಲ್ಲಿ ಮುಚ್ಚಿಹೋಗಿದ್ದ ಪೀಠದ ಭಾಗದಲ್ಲಿ ಈ ಶಾಸನವು ಬೆಳಕಿಗೆ ಬಂದಿದೆ.

    1. ಶಾಸನದ ಪಾಠ:
      1 ಶ್ರ‍ೀ ಮೂಲ ಸಂಘ ದೇಸಿಯಗಣ ಪುಸ್ತಕಗಚ್ಛ ಕೊಂಡ ಕುಂ
      2 ದಾನ್ವಯ @@@
    2. ಶಾಸನದ ಸಾರಾಂಶ: ಮೂಲ ಸಂಘ ದೇಸಿಯ ಗಣ ಪುಸ್ತಕ ಗಚ್ಛ ಕುಂದಕುAದಾನ್ವಯ ಎಂಬ ಸಾಲನ್ನು ನಾವು ಕಾಣಬಹುದು. ಈ ಮುನಿ ಪರಂಪರೆಗೆ ಸೇರಿದ ಮುನಿಗಳ ಶಿಷ್ಯರು ಈ ವಿಗ್ರಹವನ್ನು ಮಾಡಿಸಿದರೆಂದು ನಿಶ್ಚಯಿಸಿಬಹುದು.
    3. ಶಾಸನದ ಕಾಲ: ಲಿಪಿಯ ಆಧಾರದಲ್ಲಿ ಈ ಶಾಸನವು 12ನೇ ಶತಮಾನಕ್ಕೆ ಸೇರಿದ್ದೆಂದು ನಿಶ್ಚಯಿಸಿಬಹುದು.

    ಮೂರನೇ ಶಾಸನ – ನವರಂಗದಲ್ಲಿನ ಕಂಬದ ಮೇಲಿನ ಶಾಸನ

    ದೊಡ್ಡ ಬಸದಿಯ ನವರಂಗ(ಸಭಾಮAಟಪ)ದಲ್ಲಿರುವ ಕಂಬವೊAದರ. ಮೇಲ್ಭಾಗದಲ್ಲಿ ಎರಡು ಸಾಲಿನ ಶಾಸನವು ಹಾಗೂ ಕೆಳಭಾಗದಲ್ಲಿ ಕಾಯೋತ್ಸರ್ಗ ಭಂಗಿಯಲ್ಲಿ ನಿಂತಿರುವ ಜೈನ ಮುನಿ ಯೊಬ್ಬರ ಕೆತ್ತನೆಯಿದೆ. ಮುನಿಗಳ ಕೆತ್ತನೆ ಇರುವ ಕೆಳಭಾಗವು ಕಾಂಕ್ರೀಟ್ ಹಾಗೂ ಮಾರ್ಬಲ್ ನಿಂದ ಮುಚ್ಚಲಾಗಿದೆ ಬಹುಶಃ ಈ ಭಾಗದಲ್ಲಿ ಶಾಸನವೊಂದು ಇದ್ದಿರಬಹುದು.

    1. ಶಾಸನದ ಪಾಠ:
      1 ಶ್ರ‍ೀ ಸಾಂತನ ಹ
      2 ಳ್ಳಿಯ
    2. ಶಾಸನದ ಸಾರಾಂಶ: ”ಶ್ರ‍ೀ ಸಾಂತನ ಹಳ್ಳಿಯ” ಎಂಬ ಪಾಠವಿರುವುದರಿಂದ ಬಹುಶಃ ಸಾಂತನಹಳ್ಳಿ ಎಂಬ ಊರಿಗೆ ಸೇರಿದ ಶ್ರಾವಕರೊಬ್ಬರು ಮುನಿಗಳ ಸೇವೆಯನ್ನು ಮಾಡಿದ್ದರ ವಿವರವನ್ನು ಕೆತ್ತಿಸಲು ಪ್ರಯತ್ನಪಟ್ಟ ಅಪೂರ್ಣ ಶಾಸನವೆಂದು ತೋರುತ್ತದೆ.
    3. ಶಾಸನದ ಕಾಲ: ಲಿಪಿಯ ಆಧಾರದಲ್ಲಿ ಈ ಶಾಸನವು 14-15ನೇ ಶತಮಾನಕ್ಕೆ ಸೇರಿದ್ದೆಂದು ನಿಶ್ಚಯಿಸಿಬಹುದು.

    ನಾಲ್ಕನೇ ಶಾಸನ – ಜೆಟ್ಟಿಗೆರಾಯನ ಗುಡಿಯ ಹೊರಭಾಗದ ಪೀಠದ ಮೇಲಿನ ಶಾಸನ
    ಬಸದಿಯ ಆವರಣದಲ್ಲಿರುವ ಜೆಟ್ಟಿಗೆರಾಯನ ಗುಡಿಯು ಮಂಟಪದ ರೂಪದಲ್ಲಿದ್ದು ಈ ಕಲ್ಲಿನ ಮಂಟಪದ ಹೊರ ಪೀಠದ ಮೇಲೆ ಎರಡು ಸಾಲಿನ ಶಾಸನವು ಪತ್ತೆಯಾಗಿದೆ.

    1. ಶಾಸನದ ಪಾಠ:
      1 ಶ್ರ‍ೀ ದೊಡಹಳಿಯ ಪದುಮಪ ಸೆಟಿಯರ ಮಕಳು ಬೊಂ
      2 ಮಣ ಸೆಟಿಯರು ಮಾಡಿದ ಧರ್ಮ ಮಂಗಲ ಮಹಾ ಶ್ರ‍ೀ
    2. ಶಾಸನದ ಸಾರಾಂಶ ಹಾಗೂ ವಿಶ್ಲೇಷಣೆ: ಶ್ರ‍ೀ ದೊಡ್ಡಹಳಿಯ ಪದ್ಮಪ್ಪ ಶೆಟ್ಟಿಯ ಮಕ್ಕಳಾದ ಬೊಮ್ಮಣ್ಣ ಶೆಟ್ಟಿಯು ಮಾಡಿಸಿದ ಧರ್ಮ ಮಂಗಲಕಾರ್ಯ ಎಂದು ತಿಳಿಸುತ್ತದೆ. ಅಂದರೆ ಈ ಶಾಸನ ಜೆಟ್ಟಿಗರಾಯನ ಗುಡಿಯನ್ನು ಕಟ್ಟಿಸಿದವರ ವಿವರವನ್ನು ತಿಳಿಸುತ್ತದೆ.
    3. ಶಾಸನದ ಕಾಲ: ಲಿಪಿಯ ಆಧಾರದಲ್ಲಿ ಈ ಶಾಸನವು 14-15ನೇ ಶತಮಾನಕ್ಕೆ ಸೇರಿದ್ದೆಂದು ನಿಶ್ಚಯಿಸಿಬಹುದು.

    ವಂದನೆಗಳು – ಶಾಸನಗಳನ್ನು  ಓದಿ ಕೊಟ್ಟು ಸಂಶೋಧನೆಯಲ್ಲಿ ಮಾರ್ಗದರ್ಶನ ನೀಡಿದ ಹರಿಹರದ ಡಾ. ರವಿಕುಮಾರ್ ಕೆ ನವಲಗುಂದ, ಸಂಶೋಧನೆಯಲ್ಲಿ ನೆರವಾದ ಹಾಸನ ಜೈನ ಸಂಘದ ಶ್ರೀ ರವೀಂದ್ರ ಕುಮಾರ್, ಶ್ರೀ ಕಾಂತರಾಜ್, ದೊಡ್ಡ ಬಸದಿಯ ಪುರೋಹಿತರಾದ ಶ್ರೀ ಅನಂತರಾಜಯ್ಯನವರು, ತಮ್ಮ ತಂದೆ ಡಾ. ಹೆಚ್.ಎ. ಪಾರ್ಶ್ವನಾಥ್‌ರವರು ಹಾಗೂ ತಮ್ಮ ಪತ್ನಿ ಶ್ರ‍ೀಮತಿ ಅಶ್ವಿನಿಯವರಿಗೆ ನಿತಿನ್‌ರವರು ತಮ್ಮ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.
    ನಿತಿನ್‍ರವರ ಪರಿಚಯ – ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಇ. ಮೆಕಾನಿಕಲ್ ಪದವಿ ಪಡೆದಿರುವ ನಿತಿನ್ ರವರು ವೃತ್ತಿಯಲ್ಲಿ ಐಟಿ ತಂತ್ರಜ್ಞ. ಪ್ರಸ್ತುತ ಬೆಂಗಳೂರಿನ ವಿಪ್ರೋ ಲಿಮಿಟೆಡ್‌ನಲ್ಲಿ ಮಾರ್ಕೆಟಿಂಗ್ ಟೆಕ್ನಾಲಜಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಖ್ಯಾತ ಜೈನ ಅಂತರ್ಜಾಲತಾಣವಾದ www.jainheritagecentres.com ಅನ್ನು 2002 ರಲ್ಲಿ ಸ್ಥಾಪಿಸಿ ಅದರ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕದ ಜೈನ ಪರಂಪರೆಗೆ ಸಂಬAಧಿಸಿದ ಅವರ ಮೊದ ಕೃತಿ ‘ಜಿನಯಾತ್ರಾ’ (ಇಂಗ್ಲಿಷ್ ) ಫೆಬ್ರವರಿ 2018ರಲ್ಲಿ ಪ್ರಕಟಿಸಲಾಗಿದೆ.

    error: Jain Heritage Centres - Celebrating Jain Heritage.....Globally!