Skip to content
Home » ಕನ್ನಡ » ವಿಚಾರ » ಇಥಿಯೋಪಿಯಾದಲ್ಲಿ ಜೈನಧರ್ಮದ ಕುರುಹುಗಳು ಪತ್ತೆ

ಇಥಿಯೋಪಿಯಾದಲ್ಲಿ ಜೈನಧರ್ಮದ ಕುರುಹುಗಳು ಪತ್ತೆ

  ಇಥಿಯೋಪಿಯಾದಲ್ಲಿ ಜೈನಧರ್ಮದ ಕುರುಹುಗಳು ಪತ್ತೆ

  ಬೆಂಗಳೂರು, 28 ಜೂನ್ 2019: ಅನಾದಿಕಾಲದಿಂದಲೂ ಜೈನರು ಮೂಲತಃ ವ್ಯಾಪಾರ ಉದ್ದಿಮೆಯನ್ನು ಅವಲಂಭಿಸಿದವರು. ಅವರ ವ್ಯಾಪಾರ ವಹಿವಾಟುಗಳು ವಿದೇಶಗಳಲ್ಲಿಯೂ ವ್ಯಾಪಿಸಿತ್ತು. ಅಲ್ಲಲ್ಲಿ ನೆಲೆ ಕಂಡುಕೊಂಡ ಈ ವ್ಯಾಪಾರೀ ವರ್ಗ ತಾವು ನೆಲಸಿದ ಕಡೆಗಳಲ್ಲಿ ನಿತ್ಯಪೂಜೆಗಾಗಿ ಬಸದಿಗಳನ್ನೂ ನಿರ್ಮಿಸಿಕೊಂಡಿದ್ದರು. ಕೀನ್ಯಾದ ಕಿಸ್ಮೋ ಸಮೀಪದ ಗುಹೆಗಳಲ್ಲಿ ಹಾಗೂ ಕಾಂಬೋಡಿಯಾದಲ್ಲಿ ಕಂಡುಬರುವ ಜೈನ ಸಂಸ್ಕೃತಿಯ ಕುರುಹುಗಳು ಇದಕ್ಕೆ ಅತ್ತ್ಯುತ್ತಮ ಉದಾಹರಣೆ.

  ಮೂಡುಬಿದರೆಯ ಕನ್ನಡ ಪ್ರಾಧ್ಯಾಪಕರು ಹಾಗೂ ಜೈನ ವಿದ್ವಾಂಸರಾದ ಪ್ರೊ. ಎಸ್.ಪಿ. ಅಜಿತ್ ಪ್ರಸಾದ್ ರವರು ಇತ್ತೀಚೆಗೆ ಸುಮಾರು ಒಂದು ತಿಂಗಳಕಾಲ ಇಥಿಯೋಪಿಯಾ ದೇಶದಲ್ಲಿ ನಡೆಸಿದ ಸಂಶೋಧನೆಯಿಂದ ಈ ನಿಟ್ಟಿನಲ್ಲಿ ಬೆಳಕು ಚೆಲ್ಲಲು ಅನುವುಮಾಡಿಕೊಟ್ಟಿದೆ.

  ಇಥಿಯೋಪಿಯಾದ ರಾಜಧಾನಿ ಅಡ್ಡಿಸ್ ಅಬಾಬ್ ನಿಂದ ಸುಮಾರು ೯೪೦ ಕಿ.ಮೀ. ದೂರದಲ್ಲಿ ಉತ್ತರ ಇಥಿಯೋಫಿಯಾದಲ್ಲಿರುವ ಮೆಕ್ಕ್ಯಾಲ್ಲೇ ನಗರದಿಂದ ೪೦ ಕಿ.ಮೀ. ದೂರದಲ್ಲಿ ಉಕ್ರೋ ಎಂಬ ಸಣ್ಣ ಊರಿದೆ. ಅಲ್ಲಿರುವ ಒಂದು ಮ್ಯೂಸಿಯಂ ಮತ್ತು ಅಲ್ಲಿಂದ ಸುಮಾರು ೨೦ ಕಿ.ಮೀ. ದೂರದಲ್ಲಿ ಇರುವ ಒಂದು ಗುಡ್ಡ ಮತ್ತು ಅದರ ಸಮೀಪದಲ್ಲಿಯೇ ಇರುವ ಒಂದು ಚರ್ಚ್ ಜೈನಧರ್ಮದ ಇತಿಹಾಸದ ಪುನಾರಚನೆಯ ಸಂದರ್ಭದಲ್ಲಿ ಬಹಳ ಮುಖ್ಯವಾದ ದಾಖಲೆಯನ್ನು ಒದಗಿಸುತ್ತದೆ.

  ಬಸದಿಯ ಅವಶೇಷಗಳು – ”ಪ್ರಸ್ತುತ ಉಕ್ರೋ ಊರಿನಲ್ಲಿ ಒಂದು ಸ್ಥಳದಲ್ಲಿ ೧೯೭೦-೮೦ರ ದಶಕದಲ್ಲಿ ಜರ್ಮನಿ ಪುರಾತತ್ತ್ವ ಇಲಾಖೆಯವರು ನಡೆಸಿದ ಉತ್ಖನನ ಮುಖ್ಯವಾದದ್ದು. ಅಲ್ಲಿರುವ ಅವಶೇಷಗಳು ಸುಮಾರು ಮೂರು ಸಾವಿರ ವರ್ಷದ್ದು ಎಂದು ಜರ್ಮನಿಯ ಪುರಾತತ್ತ್ವ ತಜ್ಞರಿಂದ ಹೇಳಲಾಗಿರುವ ಒಂದು ಬಸದಿ ಪತ್ತೆ ಆಗಿರುವುದು ವಿಶೇಷ. ಅವು ಮೂರು ಸಾವಿರ ವರ್ಷಗಳಷ್ಟು ಹಳೆಯದೆಂದು ನಾವು ನಿರ್ದಿಷ್ಟವಾಗಿ ಹೇಳಲು ಸಾಕಷ್ಟು ಪುರಾವೆಗಳಿಲ್ಲದಿದ್ದರೂ ಕೂಡ ಅವು ಸುಮಾರು 2000 ವರ್ಷಗಳಷ್ಟಿರಬಹುದು. ಅಲ್ಲಿ ಈಗ ಉಳಿದಿರುವುದು ಬಸದಿಯ ಗರ್ಭಗುಡಿಯ ಮತ್ತು ಅದರ ಆವರಣ ಗೋಡೆಯ ತುಂಡುಗಳು ಮಾತ್ರ. ಅಲ್ಲಿ ದೊರೆಯಲಾದ ಬಿಂಬವನ್ನು ಇದೀಗ ಜರ್ಮನ್ ಮ್ಯೂಜ಼ಿಯಂ ಅಲ್ಲಿ ಇರಿಸಲಾಗಿದೆ ಅಂತ ಸ್ಥಳಿಕರು ಹೇಳಿದರು. ಆ ಬಿಂಬದ ಚಿತ್ರವನ್ನಾದರೂ ಅಲ್ಲಿ ಇಡದೇ ಹೋಗಿರುವುದು ನಿರಾಶೆಯನ್ನು ಉಂಟುಮಾಡಿತು. ಆದುದರಿಂದಲೇ ಇದರ ಬಗ್ಗೆ ಸಂಶಯಾತಿತವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಆದರೆ ಅದು ಭಾರತೀಯ ಸಂಸ್ಕೃತಿಯ ಪ್ರತೀಕವಾದ ಆರಾಧನಾ ಸ್ಥಳ ಆಗಿತ್ತು ಅನ್ನೋದರ ಬಗ್ಗೆ ಸಂಶಯವಿಲ್ಲ”, ಎಂದು ಪ್ರೊ.ಅಜಿತ್ ಪ್ರಸಾದ್ ತಿಳಿಸಿದ್ದಾರೆ. ”ಅಂದಿನ ಜರ್ಮನ್ ಪುರಾತತ್ವ ಸಂಶೋಧಕರು ಇದು ಜೈನ ಬಸದಿಯ ಕುರುಹುಗಳಾಗಿವೆ ಎಂದು ಹೇಳಿದ್ದರೆಂದು” ಅಲ್ಲಿನ ನಿವಾಸಿಗಳು ಹೇಳಿದ ಮಾತನ್ನು ಉಲ್ಲೇಖಿಸಲು ಪ್ರೊ.ಅಜಿತ್ ಪ್ರಸಾದರು ಮರೆಯುವುದಿಲ್ಲ.

  ಅಲ್ಮಾಖ್ಖದಲ್ಲಿನ ಕುರುಹುಗಳು – ”ಅಲ್ಲಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿ ಇರುವ ಅಲ್ಮಾಖ್ಖ ಗುಡ್ಡದ ಕುರುಹುಗಳು ಮತ್ತು ಸಮೀಪದಲ್ಲಿಯೆ ಇರುವ ಚರ್ಚ್ ಒಂದರ ಗೋಡೆಯೊಳಗೆ ಇರುವ ಕುರುಹುಗಳೂ ಇವು ಜೈನ ಶ್ರದ್ಧಾ ಕೇಂದ್ರಗಳು ಅಗಿದ್ದವು ಎಂಬುದರ ಬಗ್ಗೆ ಸಾಕಷ್ಟು ಆಧಾರಗಳನ್ನು ನೀಡುತ್ತಿವೆ. ಆ ಚರ್ಚ್ ಅಲ್ಲಿ ರಚಿಸುವುದಕ್ಕಿಂತಾ ಮೊದಲು ಅಲ್ಲಿದ್ದ ಬಸದಿಯನ್ನು ನಾಶ ಮಾಡಿ, ಅದರ ಗೋಡೆಗಳನ್ನೆ ಬಳಸಿಕೊಂಡು ನಿರ್ಮಿಸಲಾಗಿದೆ. ಅದು ಹೊರಗೆ ಕಾಣುವಂತೆ ಬಹುಶಃ ಅದು ಗರ್ಭಗುಡಿಯ ಪ್ರದೇಶ ಇದ್ದಿರಬೇಕು ಹಾಗೂ ಒಳಭಾಗದಲ್ಲಿ ಬಸದಿಗಳಲ್ಲಿ ಭಗವಂತನ ವಿಗ್ರಹವನ್ನು ಪ್ರತಿಷ್ಠಾಪಿಸಲು ಬಳಸುವ ಪೀಠ ಹಾಗೂ ಸೂತ್ರ/ಸೋಮ ಸೂತ್ರ/ಪ್ರನಾಳವನ್ನು(ಭಗವಂತನಿಗೆ ಮಾಡಿದ ಅಭಿಷೇಕ ದ್ರವ್ಯಗಳು ಹರಿದು ಹೋಗುವ ಕಲ್ಲಿನ ರಚನೆ) ಕಾಣಬಹುದು. ಅದರ ತುದಿಯ ಭಾಗ ನಾಶವಾಗಿದೆ. ಪ್ರಾನಾಳದ ಹೊರ ಮುಖ ಎರಡು ವಿಧಗಳಲ್ಲಿರುತ್ತವೆ – ಸಿಂಹಮುಖ (ಕ್ಷತ್ರಿಯರಿಂದ ನಿರ್ಮಿಸಲಾದ ದೇವಸ್ಥಾನಗಳಲ್ಲಿ ಇವುಗಳನ್ನು ಕಾಣಬಹುದು) ಹಾಗೂ ನಂದಿಮುಖ
  (ವೈಶ್ಯರಿಂದ ನಿರ್ಮಿಸಲಾದ ದೇವಸ್ಥಾನಗಳಲ್ಲಿ ಇವುಗಳನ್ನು ಕಾಣಬಹುದು). ಇಲ್ಲಿ ನಾವು ನಂದಿಮುಖದ ಪ್ರನಾಳವನ್ನು ಕಾಣಬಹುದು. ಇದರಿಂದಾಗಿ ಈ ದೇವಸ್ಥಾನವನ್ನು ವ್ಯಾಪಾರಿವರ್ಗದವರು ನಿರ್ಮಿಸಿದ್ದಾರೆಂದು ಹೇಳಬಹುದು,” ಎಂದು ಪ್ರೊ.ಅಜಿತ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. “ಭಾರತ ದೇಶದಿಂದ ಸಾವಿರಾರು ಕಿಲೋಮೀಟರ್ ದೂರದ ವಿದೇಶೀ ಮಣ್ಣಿನಲ್ಲಿ ಜೈನ ಕುರುಹುಗಳನ್ನು ಕಂಡಾಗ ಆಗುವ ರೋಮಾಂಚಕ ಅನುಭವ ಕೇವಲ ಅನುಭವ ಗಮ್ಯ” ಎಂದು ಅವರು ಉದ್ಘರಿಸುತ್ತಾರೆ.

  ಪ್ರೊ.ಅಜಿತ್ ಪ್ರಸಾದ್‌ರವರ ಈ ಸಂಶೋಧನೆಯಲ್ಲಿ ಕೈ ಜೋಡಿಸಿದವರು ಮೈಸೂರಿನ ಡಾ. ಅಭಿಜಿತ್ ಮತ್ತು ಬಂಗಾಳದ ಡಾ. ಸೌಮಿತ್ರೋ ಮಂಡಲ್. ಈ ಸಂಶೋಧನೆಯನ್ನು ಶ್ರೀ ಭಾರತವರ್ಷೀಯ ದಿಗಂಬರ ಜೈನ ತೀರ್ಥಕ್ಷೇತ್ರ ಕಮಿಟಿ ಹಾಗೂ ಅದರ ರಾಷ್ಟ್ರೀಯ ಅಧ್ಯಕ್ಷರಾದ ನಿರ್ಮಲ್‌ಕುಮಾರ್ ಸೇಠಿಯವರು ಪ್ರಾಯೋಜಿಸಿದ್ದರು. ನಿತಿನ್ ಹೆಚ್.ಪಿ., ಜೈನ್ ಹೆರಿಟೇಜ್ ಸೆಂಟರ್ಸ್ ನ್ಯೂಸ್ ಸರ್ವೀಸ್

  error: Jain Heritage Centres - Celebrating Jain Heritage.....Globally!