Skip to content
Home » ಕನ್ನಡ » ವಿಚಾರ » ಲಾತೂರ್ ಜಿಲ್ಲೆಯಲ್ಲಿ 11ನೇ ಶತಮಾನದ ಜೈನ ಕನ್ನಡ ಶಾಸನ ಪತ್ತೆ

ಲಾತೂರ್ ಜಿಲ್ಲೆಯಲ್ಲಿ 11ನೇ ಶತಮಾನದ ಜೈನ ಕನ್ನಡ ಶಾಸನ ಪತ್ತೆ

  ಲಾತೂರ್ ಜಿಲ್ಲೆಯಲ್ಲಿ 11ನೇ ಶತಮಾನದ ಜೈನ ಕನ್ನಡ ಶಾಸನ ಪತ್ತೆ
  • ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಅಸುಆ ತಾಲೂಕಿನ ಕಿಲಾರಿ ಸಮೀಪದ ಕಾರ್ಲಾಗ್ರಾಮದಲ್ಲಿ ಪತ್ತೆ
  • ಗರ್ಭಗುಡಿಯಲ್ಲಿ ಮೂರು ತೀರ್ಥ್ಂಕರರ ವಿಗ್ರಹಗಳು ಒಂದೇ ಪಾದಪೀಠದಲ್ಲಿರುವ ವಿಶಿಷ್ಟವಾದ ಬಸದಿ
  • ತೀರ್ಥ್ಂಕರರ ವಿಗ್ರಹಗಳು ಸ್ಥಾಪಿತವಾಗಿರುವ ಪಾದಪೀಠದಲ್ಲಿನ ಶಾಸನ
  • ದಿಗಂಬರ ಜೈನ ಮುನಿ ಪಾರ್ಶ್ವಣೇಂದು ಹಾಗೂ ಆವರ ಗುಣದ ವಿವರವಿರುವ ಶಾಸನ
  • ಮುನಿಗಳ ಗುರು ಪರಂಪರೆ ಹಾಗೂ “ಯಾಪನೀಯ ಸಂಘ”ದ ವಿವರ ನೀಡುತ್ತದೆ
  • ಬಸದಿಯನ್ನು “ರತ್ನತ್ರಯ ಜಿನಾಲಯ”ವೆನ್ನುತ್ತಿದ್ದರು ಎಂದು ತಿಳಿಸುತ್ತದೆ.
  • ಸೋಲಾಪುರದ ಸುಜಾತಾ ಸುಭಾಷ್ ಶಾಸ್ತ್ರಿಯವರಿಂದ ಸಂಶೋಧಿಸಲಾದ ಶಾಸನ

  ಲಾತೂರ‍್ (ಮಹಾರಾಷ್ಟ್ರ), 18 ಜೂನ್ 2019: 11ನೇ ಶತಮಾನಕ್ಕೆ ಸೇರಿದ ಪುರಾತನವಾದ ಜೈನ ಶಾಸನ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಕಾರ್ಲಾಗ್ರಾಮದಲ್ಲಿ ಪತ್ತೆಯಾಗಿದೆ. ಅಸುಆ ತಾಲೂಕಿನ ಕಿಲಾರಿ ಸಮೀಪದ ಕಾರ್ಲಾಗ್ರಾಮದ ದಿಗಂಬರ ಜೈನ ಬಸದಿಯ ತೀರ್ಥಂಕರರ ಪಾದಪೀಠದಲ್ಲಿ ಶಾಸನವು ಪತ್ತೆಯಾಗಿದೆ. ಶಾಸನವನ್ನು ಸೋಲಾಪುರದ ಸಂಶೋಧಕಿ ಡಾ.ಸುಜಾತ ಸುಭಾಷ್ ಶಾಸ್ತ್ರಿಯವರು ಪತ್ತೆಮಾಡಿ ಪ್ರಕಟಿಸಿದ್ದಾರೆ.

  30ನೇ ಸೆಪ್ಟೆಂಬರ್ 1993ರಲ್ಲಿ ನಡೆದ ಭೀಕರ ಭೂಕಂಪಕ್ಕೆ ಕಾರ್ಲಾಗ್ರಾಮವೂ ಸೇರಿದಂತೆ ಈ ಪ್ರದೇಶದ ಹಲವಾರು ಗ್ರಾಮ ಹಾಗೂ ನಗರಗಳು ತುತ್ತಾಗಿದ್ದು ಹಲವಾರು ಕಟ್ಟಡಗಳು ನೆಲಸಮವಾಗಿದ್ದವು. ಇಷ್ಟಾದರೂ ಈ ಪ್ರಾಚೀನ ಜಿನಮಂದಿರ ಹಾಗೂ ಅಲ್ಲಿನ ವಿಗ್ರಹಗಳು ಹಾಗೆಯೇ ಸುರಕ್ಷಿತವಾಗಿವೆ. ಇದಕ್ಕೆ ಮುಖ್ಯ ಕಾರಣ ಎಲ್ಲಾ ಪ್ರಕಾರದ ಪ್ರಾಕೃತಿಕ ವಿಕೋಪಗಳನ್ನು ತಡೆಯುವಂತೆ ರಚಿಸಲ್ಪಟ್ಟಿರುವ ಅಂದಿನ ಪ್ರಾಚೀನ ವಾಸ್ತು ರಚನಾಶೈಲಿ. ಈ ಗ್ರಾಮದಲ್ಲಿ ಒಂದೂ ಜೈನರ ಮನೆ ಇಲ್ಲವಾದ್ದರಿಂದ ಇಲ್ಲಿನ ಗ್ರಾಮಸ್ಥರಿಗೆ ಈ ಬಸದಿ ಹಾಗೂ ಇಲ್ಲಿನ ತೀರ್ಥಂಕರ ವಿಗ್ರಹಗಳ ಐತಿಹಾಸಿಕ ಮಹತ್ವ ಕುರಿತು ಅರಿವಿಲ್ಲ. ಇಲ್ಲಿಗೆ ಸಮೀಪದ ಕಾಸಾರ್ ಶಿರಸಿಯ 84 ವರ್ಷದ ವಯೋವೃದ್ಧರಾದ ಶ್ರೀ ಮತಿಸಾಗರ್ ಪಾಟೀಲ್‌ರವರು ಈ ಐತಿಹಾಸಿಕ ಮಂದಿರವನ್ನು ಸಂರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರಾಚೀನ ವಿಗ್ರಹಗಳ ಪಾದಪೀಠದ ಮೇಲೆ ಶಿಲಾಶಾಸನವಿರುವುದನ್ನು ಅಣದೂರಿನ ಇತಿಹಾಸ ಪ್ರೇಮಿ ಶ್ರೀ ದಿಲೀಪ್ ಖೋಬರೆಯವರು ಡಾ.ಸುಜಾತಾರವರಿಗೆ ತಿಳಿಸಿದರು.

  ವಿಶಿಷ್ಟ ತೀರ್ಥಂಕರ ವಿಗ್ರಹಗಳು – ಮೂರೂ ತೀರ್ಥಂಕರ ವಿಗ್ರಹಗಳು ಒಂದೇ ಪೀಠದ ಮೇಲೆ ಸ್ಥಾಪಿತವಾಗಿರುವುದು ಇದರ ವಿಶಿಷ್ಟತೆ. ಮಧ್ಯದಲ್ಲಿರುವ ವಿಗ್ರಹ ಪಾರ್ಶ್ವನಾಥ ತೀರ್ಥಂಕರರದ್ದಾಗಿದ್ದು ಅಕ್ಕಪಕ್ಕದಲ್ಲಿರುವ ವಿಗ್ರಹಗಳ ಲಾಂಛನಗಳು ಅಳಿಸಿ ಹೋಗಿರುವುದರಿಂದ ಅವು ಯಾವುದೆಂದು ಪತ್ತೆಯಾಗಿಲ್ಲ. ಈ ರೀತಿ ಒಂದೇ ಪೀಠದ ಮೇಲೆ ಮೂರು ತೀರ್ಥಂಕರ ಪ್ರತಿಮೆಗಳು ಗರ್ಭಗುಡಿಯಲ್ಲಿ ಸ್ಥಾಪಿತವಾಗಿರುವ ವಿಗ್ರಹಗಳು ಮಹಾರಾಷ್ಟ್ರ ಹಾಗೂ ಕರ್ನಾಟಕ ಪ್ರದೇಶದಲ್ಲೆಲ್ಲೂ ಕಾಣಸಿಗುವುದಿಲ್ಲ.

  ಅಳತೆ

  • ಪಾದಪೀಠದ ಉದ್ದ – 76 ಇಂಚುಗಳು
  • ಇಡಿ ವಿಗ್ರಹದ ಒಟ್ಟು ಎತ್ತರ (ಪಾದಪೀಠ, ವಿಗ್ರಹ ಹಾಗೂ ಪ್ರಭಾವಳಿ ಸೇರಿದಂತೆ)– 77 ಇಂಚುಗಳು
  • ಪಾರ್ಶ್ವನಾಥ ತೀರ್ಥಂಕರರ ಎತ್ತರ – 39 ಇಂಚುಗಳು
  • ಪಾರ್ಶ್ವನಾಥ ತೀರ್ಥಂಕರರ ಇಕ್ಕೆಲಗಳಲ್ಲಿರುವ ತೀರ್ಥಂಕರರ ಎತ್ತರ – 37 ಇಂಚುಗಳು

  ಶಾಸನದ ಸಾರಾಂಶ – ”ವಿಗ್ರಹದ ಪಾದಪೀಠದಲಿರುವ ಈ ಶಾಸನವು ಪಾದಪೀಠದ ಉದ್ದಗಲಕ್ಕೂ ಹನ್ನೊಂದು ಹಂತಗಳಲ್ಲಿ ಒಂದೇ ಸಾಲಿನಲ್ಲಿ ಕೆತ್ತಲಾಗಿದೆ. ಈ ಶಾಸನವು ಚಿತ್ರಕೂಟಾನ್ವಯ, ಕ್ರಾಣೂರುಗಣದ ಹಾಗೂ ಮೇಷಪಾಷಾಣಗಚ್ಛಕ್ಕೆ ಸೇರಿದ ಪಾರ್ಶ್ವಣೇಂದು ಎಂಬ ದಿಗಂಬರ ಮುನಿಗಳ ಗುಣಲಕ್ಷಣವನ್ನು ವಿವರಿಸುತ್ತ ಅವರು ಶುದ್ಧ ನಿರ್ಮಲ ಅಂತಃಕರಣದವರಾಗಿದ್ದು, ಆಧ್ಯಾತ್ಮಿಕತೆಯಿಂದ ರಾಜಹಂಸನಂತೆ ಶೋಭಿಸುತ್ತಿದ್ದರೆಂದು ತಿಳಿಸುತ್ತದೆ. ಈ ಮುನಿ ಪರಂಪರೆಯ ಅನುಯಾಯಿಯಾದ ಗಾಂಗಪತಿ ಎಂಬ ಪ್ರತಿಷ್ಠಿತ ವ್ಯಕ್ತಿ ರತ್ನತ್ರಯ ಜಿನಾಲಯವನ್ನು ನಿರ್ಮಿಸಿ, ಅದರಲ್ಲಿ ಅವಿನಾಶಿ ಗುಣಸಂಪನ್ನರಾದ ಗುರುವಿನ ಪ್ರತಿಷ್ಠೆ, ಅಂದರೆ ತೀರ್ಥಂಕರರ ಪ್ರತಿಷ್ಠೆಯನ್ನು ಮಾಡಿಸಿ, ಪಂಡಿತರ ಸಮುದಾಯದೊಂದಿಗೆ ಜಿನಾರ್ಚನೆಯನ್ನು ಮಾಡಿಸಿದನೆಂದು ತಿಳಿದು ಬರುತ್ತದೆ” ಎಂಬುದಾಗಿ ಡಾ.ಸುಜಾತಾ ಶಾಸ್ತ್ರಿಯವರು ತಿಳಿಸಿದ್ದಾರೆ. ”ಈ ಪರಂಪರೆಯ ಜೈನಮುನಿಗಳು ಪಾರ್ಶ್ವನಾಥ ತೀರ್ಥಂಕರರ ವಿಶೇಷ ಆರಾಧಕರಾಗಿದ್ದು ಅವರು ತಮ್ಮ ಅನುಯಾಯಿಗಳಿಗೆ ಪಾರ್ಶ್ವನಾಥ ಮಂದಿರಗಳನ್ನು ನಿರ್ಮಿಸಲು ಪ್ರೇರಣೆ ನೀಡುತ್ತಿದ್ದುದು ಕಂಡುಬರುತ್ತದೆ. ಅವರು ಯಕ್ಷ-ಯಕ್ಷಿಯರ ವಿಶೇಷ ಆರಾಧಕರಾಗಿದ್ದರು,” ಎಂದು  ಡಾ. ಸುಜಾತಾ ಅವರು  ಅಭಿಪ್ರಾಯಪಟ್ಟಿದ್ದಾರೆ.

  ಯಾಪನೀಯ ಸಂಘದ ಪ್ರಭಾವ – ”ಈ ಶಾಸನದಲ್ಲಿ ಉಲ್ಲೇಖಿತವಾಗಿರುವ ಕ್ರಾಣೂರುಗಣ ಹಾಗೂ  ಮೇಷಪಾಶಾಣಗಚ್ಛವು ಯಾಪನೀಯ ಸಂಘಕ್ಕೆ ಸೇರಿದ್ದಾಗಿದ್ದರಿಂದ ಈ ಬಸದಿ ಹಾಗೂ ಪ್ರದೇಶದ ಮೇಲೆ ಯಾಪನೀಯ ಸಂಘದ ಮುನಿಗಳ ಪ್ರಭಾವವಿತ್ತೆಂದು ಹೇಳಬಹುದು. ಇದಲ್ಲದೆ ಪಕ್ಕದ ಓಸ್ಮಾನಾಬಾದ್ ಜಿಲ್ಲೆಯಲ್ಲಿನ ಶಾಸನಗಳು ಈ ಪ್ರದೇಶದ ಮೇಲೆ ಯಾಪನೀಯ ಸಂಘದ ಪ್ರಭಾವವನ್ನು ತಿಳಿಸುತ್ತವೆ” ಎಂದು ಡಾ. ಸುಜಾತಾರವರು ತಿಳಿಸಿದ್ದಾರೆ.

  11ನೇ ಶತಮಾನದ ಶಾಸನ – ಶಾಸನದ ಭಾಷೆಯು ಕನ್ನಡಲಿಪಿಯಲ್ಲಿರುವ ಸಂಸ್ಕೃತದಲ್ಲಿದ್ದು ಅದರ ಕಾಲದ ಉಲ್ಲೇಖವಿಲ್ಲ. ಆದರೆ ಲಿಪಿಯ ಆಧಾರದ ಮೇಲೆ ಇದು 11ನೇ ಶತಮಾನದ ಪ್ರಾರಂಭದ ಕಾಲಕ್ಕೆ ಸೇರಿದೆ ಎಂದು ಡಾ. ಸುಜಾತಾರವರು ತಿಳಿಸಿದ್ದಾರೆ.

  ಸಾಧಾರಣವಾದ ಸ್ಥಳೀಯ ವಾಸ್ತುಶೈಲಿಯಲ್ಲಿ ಕಟ್ಟಲ್ಪಟ್ಟಿರುವ ಈ ಜಿನಾಲಯವು ದಕ್ಷಿಣಾಭಿಮುಖವಾಗಿದೆ. ಗ್ರಾಮಸ್ಥರು ಇದನ್ನು ಅಶುಭವೆಂದು ಭಾವಿಸಿ ಕೆಲವು ದಿನಗಳ ಹಿಂದೆ ಇಡೀ ವಿಗ್ರಹವನ್ನು ಪಾದಪೀಠದಸಹಿತ ಒಂದು ಪುಟ್ಟಕೋಣೆಗೆ ಸಾಗಿಸಿ ಪೂರ್ವಾಭಿಮುಖವಾಗಿ ಇಟ್ಟಿದ್ದಾರೆ.

  ಕರ್ನಾಟಕದ ಮಧ್ಯಕಾಲೀನ ಇತಿಹಾಸದ ಸಮಯದಲ್ಲಿ ಹಲವು ಪ್ರಸಿದ್ಧ ಜೈನ ಕೇಂದ್ರಗಳಲ್ಲಿ ಲತ್ತನೂರು ಅಂದರೆ ಇಂದಿನ ಲಾತೂರ್ ಕೂಡ ಒಂದಾಗಿದೆ. ಈ ಶಾಸನ ಹಾಗೂ ಬಸದಿಯು ಲಾತೂರ್ ಪ್ರದೇಶದ ಜೈನಧರ್ಮದ ಸಾಂಸ್ಕೃತಿಕ ಅಧ್ಯಯನಕ್ಕೆ ಆಕರಗಳನ್ನು ಒದಗಿಸುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

  ಶಾಸನವನ್ನು ಓದಿ ಕೊಟ್ಟ ಹರಿಹರದ ಸಂಶೋಧಕ ಡಾ.ರವಿಕುಮಾರ್ ಕೆ ನವಲಗುಂದ, ಮೈಸೂರಿನವರಾದ ಶಾಸನತಜ್ಞ ಡಾ.ನಾಗರಾಜರಾವ್ ರವರಿಗೆ ಹಾಗೂ ಸಂಶೋಧನೆಗೆ ಸಹಕಾರ ನೀಡಿದ ಮೈಸೂರಿನ ಶ್ರೀ ಎಂ.ಎನ್.ಪ್ರಭಾಕರ್ ರವರಿಗೆ ಡಾ. ಸುಜಾತಾರವರು ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. – ಜೈನ್ ಹೆರಿಟೇಜ್ ಸೆಂಟರ್ಸ್ ನ್ಯೂಸ್ ಸರ್ವೀಸ್ (www.jainheritagecentres.com)

  error: Jain Heritage Centres - Celebrating Jain Heritage.....Globally!