Skip to content
Home » ಕನ್ನಡ » ಸುದ್ದಿ-ಸಮಾಚಾರ » ಕಸಮಳಗಿ ಜೈನ ಬಸದಿ ಪಂಚಕಲ್ಯಾಣ ಮಹೋತ್ಸವ

ಕಸಮಳಗಿ ಜೈನ ಬಸದಿ ಪಂಚಕಲ್ಯಾಣ ಮಹೋತ್ಸವ

  ‘ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಸಮಳಗಿ ಗ್ರಾಮದಲ್ಲಿ ಪಾರ್ಶ್ವನಾಥ ತೀರ್ಥಂಕರರ ಜಿನ ಮಂದಿರ, ನೂತನ ಮಾನಸ್ತಂಭೋಪರಿ ಜಿನಬಿಂಬಗಳ ಹಾಗೂ 24 ತೀರ್ಥಂಕರರ ವಿಶ್ವಮಟ್ಟದ ಬೃಹತ್ ಪಂಚಕಲ್ಯಾಣ ಮಹಾಮಹೋತ್ಸವ ಏ. 28ರಿಂದ ಮೇ 2ರವರೆಗೆ ನಡೆಯಲಿದ್ದು, ಇದರ ಅಂಗವಾಗಿ ‘ಯಜಮಾನ ಸವಾಲು’ ಕಾರ್ಯಕ್ರಮವನ್ನು ಜ. 22ರ ಮಧ್ಯಾಹ್ನ 12ಕ್ಕೆ ನೂತನ ಜಿನಮಂದಿರದಲ್ಲಿ ಆಯೋಜಿಸಲಾಗಿದೆ’ ಎಂದು ಜಿನಮಂದಿರ ಟ್ರಸ್ಟ ಅಧ್ಯಕ್ಷ ಜಯಪಾಲ ಸಾವಂತ ಇಲ್ಲಿ ಗುರುವಾರ ತಿಳಿಸಿದರು.

  ನೂತನವಾಗಿ ನಿರ್ಮಿಸಲಾಗಿರುವ ಕಸಮಳಗಿಯ ಬಸದಿ. ಒಳಚಿತ್ರದಲ್ಲಿ ದಿನಕ್ಕೆ ಮೂರು ವಿಧದ ಬಣ್ಣಗಳಲ್ಲಿ ಬದಲಾಗುವ ಭಗವಾನ್ ಪಾರ್ಶ್ವನಾಥ ಸ್ವಾಮಿಯ ವಿಗ್ರಹ.

  ನೂತನವಾಗಿ ನಿರ್ಮಿಸಲಾಗಿರುವ ಕಸಮಳಗಿಯ ಬಸದಿ. ಒಳಚಿತ್ರದಲ್ಲಿ ದಿನಕ್ಕೆ ಮೂರು ವಿಧದ ಬಣ್ಣಗಳಲ್ಲಿ ಬದಲಾಗುವ ಭಗವಾನ್ ಪಾರ್ಶ್ವನಾಥ ಸ್ವಾಮಿಯ ವಿಗ್ರಹ.

  ಬೆಳಗಾವಿ, ಜನವರಿ ೧೯, ೨೦೧೭: ‘ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಸಮಳಗಿ ಗ್ರಾಮದಲ್ಲಿ ಪಾರ್ಶ್ವನಾಥ ತೀರ್ಥಂಕರರ ಜಿನ ಮಂದಿರ, ನೂತನ ಮಾನಸ್ತಂಭೋಪರಿ ಜಿನಬಿಂಬಗಳ ಹಾಗೂ 24 ತೀರ್ಥಂಕರರ ವಿಶ್ವಮಟ್ಟದ ಬೃಹತ್ ಪಂಚಕಲ್ಯಾಣ ಮಹಾಮಹೋತ್ಸವ ಏ. 28ರಿಂದ ಮೇ 2ರವರೆಗೆ ನಡೆಯಲಿದ್ದು, ಇದರ ಅಂಗವಾಗಿ ‘ಯಜಮಾನ ಸವಾಲು’ ಕಾರ್ಯಕ್ರಮವನ್ನು ಜ. 22ರ ಮಧ್ಯಾಹ್ನ 12ಕ್ಕೆ ನೂತನ ಜಿನಮಂದಿರದಲ್ಲಿ ಆಯೋಜಿಸಲಾಗಿದೆ’ ಎಂದು ಜಿನಮಂದಿರ ಟ್ರಸ್ಟ ಅಧ್ಯಕ್ಷ ಜಯಪಾಲ ಸಾವಂತ ಇಲ್ಲಿ ಗುರುವಾರ ತಿಳಿಸಿದರು.

  ‘12 ವರ್ಷಗಳ ಹಿಂದೆ ಕಸಮಳಗಿಯಲ್ಲಿ ಶಾಲಾ ಕಟ್ಟಡ ನಿರ್ಮಾಣ ಸಂದರ್ಭ ಭೂಗರ್ಭದಲ್ಲಿ ಪುರಾತನವಾದ ಕ್ರಿ.ಶ. 11ನೇ ಶತಮಾನದ ಪಾರ್ಶ್ವನಾಥ ತೀರ್ಥಂಕರರ ಪ್ರತಿಮೆ ದೊರೆತಿತ್ತು. ಅಂದಿನಿಂದ ಈ ಪ್ರತಿಮೆ ಪೂಜಿಸಲಾಗುತ್ತಿದೆ. ಇದು ಪ್ರತಿ ದಿನ 3 ಬಣ್ಣಗಳಲ್ಲಿ ರೂಪಾಂತರಗೊಳ್ಳುತ್ತದೆ. ಇದನ್ನು ವಿಶೇಷ ರೀತಿಯ ಕಪ್ಪುಮಿಶ್ರಿತ ನೀಲಿ ಛಾಯೆಯ ಬಳಪದ ಶಿಲೆಯಲ್ಲಿ ಕೆತ್ತಲಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

  ‘12 ವರ್ಷ ನಿರಂತರ ಪ್ರಯತ್ನದಿಂದ ಈ ತೀರ್ಥಂಕರರ ಪ್ರತಿಮೆ ಪ್ರತಿಷ್ಠಾಪಿಸುವುದಕ್ಕಾಗಿ ಕಸಮಳಗಿಯಲ್ಲಿ ಜಿನಮಂದಿರ ನಿರ್ಮಿಸಲಾಗಿದೆ. ಶ್ರವಣಬೆಳಗೊಳದ ಭಟ್ಟಾರಕ ಶ್ರೀಗಳ ಪ್ರೇರಣೆ ಮತ್ತು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಜಿನಮಂದಿರ ನಿರ್ಮಿಸಲಾಗಿದೆ’ ಎಂದು ತಿಳಿಸಿದರು.

  ಉತ್ಸವಕ್ಕೆ ಮುನ್ನ:
  ‘ಪಂಚಕಲ್ಯಾಣ ಮಹಾಮಹೋತ್ಸವಕ್ಕೆ ವೀರೇಂದ್ರ ಹೆಗ್ಗಡೆ ಅವರು ‘ಸೌಧರ್ಮ ಇಂದ್ರ ಇಂದ್ರಾಯಣಿ ಯಜಮಾನ’ ಪದವನ್ನು ಸ್ವೀಕರಿಸಿದ್ದು, ಇನ್ನುಳಿದ ಯಜಮಾನ ಪದಗಳ ಸವಾಲು ಕಾರ್ಯಕ್ರಮ ಜ. 22ರಂದು ನಡೆಯಲಿದೆ. ಸಿದ್ದಸೇನ ಮುನಿ ಹಾಗೂ ಜಿನವಾಣಿ ಮಾತಾಜಿ ಸಾನ್ನಿಧ್ಯ ವಹಿಸುವರು’ ಎಂದು ಹೇಳಿದರು.

  ‘ಹುಕ್ಕೇರಿ ತಾಲ್ಲೂಕು ಬೆಣಿವಾಡದಲ್ಲಿ 9ನೇ ಶತಮಾನದ ಪಾರ್ಶ್ವನಾಥ ಜೈನ ಮಂದಿರದ ಪಂಚಕಲ್ಯಾಣ ಮಹೋತ್ಸವ ಫೆ. 3ರಿಂದ 7ರವರೆಗೆ ನಡೆಯಲಿದೆ’ ಎಂದು ಮಹೋತ್ಸವ ಸಮಿತಿ ಸದಸ್ಯ ಬಿ.ಬಿ. ಕಂಠಿ ತಿಳಿಸಿದರು.

  ‘9ನೇ ಶತಮಾನದ ಈ ಜಿನ ಮಂದಿರವು ಅತ್ಯಂತ ಶಿಥಿಲಾವಸ್ಥೆಯಲ್ಲಿತ್ತು. ಜೈನ ಸಮಾಜದ ಸಹಕಾರ, ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್‌ ಸಹಯೋಗ ಹಾಗೂ ರಾಜ್ಯ ಸರ್ಕಾರದ ಸಹಕಾರದಿಂದ ಈ ಬಸದಿ ಜೀರ್ಣೋದ್ಧಾರ ಮಾಡಲಾಗಿದೆ. ಕುಲರತ್ನಭೂಷಣ ಮುನಿ ಸಾನ್ನಿಧ್ಯದಲ್ಲಿ ಪಂಚಕಲ್ಯಾಣ ಮಹಾಮಹೋತ್ಸವ ನೆರವೇರಲಿದೆ’ ಎಂದು ಮಾಹಿತಿ ನೀಡಿದರು.

  ಶಾಸಕ ಸಂಜಯ ಪಾಟೀಲ, ಭರತೇಶ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಾಜೀವ ದೊಡ್ಡಣ್ಣವರ, ಮುಖಂಡರಾದ ದೇವೇಂದ್ರಗೌಡ, ಪ್ರಮೋದ ಕೋಚೆರಿ, ಮಹಾವೀರ ನಿಲಜಗಿ, ಅಶೋಕ ರಂಗೊಳ್ಳಿ, ಬಾಹುಬಲಿ ನಾಗನೂರಿ, ಜನಗೌಡ ಪಾಟೀಲ, ವಿನೋದ ದೊಡ್ಡಣ್ಣವರ, ಅಭಯ ಅವಲಕ್ಕಿ, ಹೀರಾಚಂದ ಕಲಮನಿ, ಕುಂತಿನಾಥ ಕಲಮನಿ, ಅಭಿನಂದನ ಕೋಚೆರಿ, ರಾಜು ಜಕ್ಕನ್ನವರ, ವಿಶ್ವಜೀತ ಉಪಾಧ್ಯೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. – ಸುದ್ದಿ ಹಾಗೂ ಚಿತ್ರ ಕೃಪೆ ಪ್ರಜಾವಾಣಿ

  error: Jain Heritage Centres - Celebrating Jain Heritage.....Globally!