Skip to content
Home » ಕನ್ನಡ » ಸುದ್ದಿ-ಸಮಾಚಾರ » ಕುದ್ರಿಗಿಯಲ್ಲಿ ೧೩ನೇ ಶತಮಾನಕ್ಕೆ ಸೇರಿದ ಜೈನಧರ್ಮದ ಪಾದಪೀಠ ಶಾಸನ ಹಾಗೂ ೩ ನಿಶಧಿ ಶಾಸನಗಳು ಪತ್ತೆ

ಕುದ್ರಿಗಿಯಲ್ಲಿ ೧೩ನೇ ಶತಮಾನಕ್ಕೆ ಸೇರಿದ ಜೈನಧರ್ಮದ ಪಾದಪೀಠ ಶಾಸನ ಹಾಗೂ ೩ ನಿಶಧಿ ಶಾಸನಗಳು ಪತ್ತೆ

  ಕುದ್ರಿಗಿಯಲ್ಲಿ ೧೩ನೇ ಶತಮಾನಕ್ಕೆ ಸೇರಿದ ಜೈನಧರ್ಮದ ಪಾದಪೀಠ ಶಾಸನ ಹಾಗೂ ೩ ನಿಶಧಿ ಶಾಸನಗಳು ಪತ್ತೆ
  ಕುದ್ರಿಗಿಯಲ್ಲಿ ೧೩ನೇ ಶತಮಾನಕ್ಕೆ ಸೇರಿದ ಜೈನಧರ್ಮದ ಪಾದಪೀಠ ಶಾಸನ ಹಾಗೂ ೩ ನಿಶಧಿ ಶಾಸನಗಳು ಪತ್ತೆ

  ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ , ಕರ್ನಾಟಕ), ೧೨ ಜನವರಿ ೨೦೨೨: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ೨೭ ಕಿ.ಮಿ. ದೂರದಲ್ಲಿರುವ, ಐತಿಹಾಸಿಕ ಜೈನ ಕೇಂದ್ರ ಸಾಳುವ ರಾಜಮನೆತನದ ನಗಿರೆ ರಾಜ್ಯದ ರಾಜಧಾನಿಯಾಗಿದ್ದ ಗೇರುಸೊಪ್ಪೆ/ಗೇರುಸೊಪ್ಪದಿಂದ ಸುಮಾರು ೭ ಕಿ.ಮಿ. ದೂರದಲ್ಲಿರುವ ಕುದ್ರಿಗಿ ಗ್ರಾಮದಲ್ಲಿ ೧೩ ನೇ ಶತಮಾನಕ್ಕೆ ಸೇರಿದ ಜೈನಧರ್ಮದ ಒಂದು ಪಾದಪೀಠ ಶಾಸನ ಹಾಗೂ ೩ ನಿಶಧಿ ಶಾಸನಗಳು ದಿಗಂಬರ ಜಿನಮಂದಿರದ ಅವಶೇಷಗಳ ನಡುವೆ ಪತ್ತೆಯಾಗಿವೆ.

  ಇದನ್ನು ಬೆಂಗಳೂರಿನ ವಿಪ್ರೋ ಕಂಪನಿಯಲ್ಲಿ ಮಾರ್ಕೆಟಿಂಗ್ ಟೆಕ್ನಾಲಜಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಹೆಚ್.ಪಿ.ನಿತಿನ್ ಅವರು ಇತ್ತೀಚೆಗೆ ಕೈಗೊಂಡ  ಕ್ಷೇತ್ರಕಾರ್ಯದ ಸಮಯದಲ್ಲಿ ಪತ್ತೆ ಮಾಡಿದ್ದಾರೆ.

  ಕುದ್ರಿಗಿಗ್ರಾಮದ ಹೊಲದ ಮಧ್ಯೆ ಇರುವ ಜೈನ ಬಸದಿಯೊಂದರ ಅವಶೇಷಗಳ ನಡುವೆ ಈ ಶಾಸನಗಳು ಪತ್ತೆಯಾಗಿವೆ. ಸುಮಾರು ೨.೫ ಅಡಿ ಎತ್ತರವಿರುವ ಪರ್ಯಂಕಾಸನ ಭಂಗಿಯಲ್ಲಿರುವ ತೀರ್ಥಂಕರರ ಪಾದಪೀಠದಲ್ಲಿ ಒಂದು ಶಾಸನವನ್ನು ಕಾಣಬಹುದು. ಪ್ರಸ್ತುತ ಬಿನ್ನವಾಗಿರುವ ತೀರ್ಥಂಕರ ವಿಗ್ರಹದ ಶಿರಭಾಗವಿಲ್ಲ, ತೀರ್ಥಂಕರರ ತಲೆಯಮೇಲಿದ್ದ ಮುಕ್ಕೊಡೆ, ಇಕ್ಕೆಲಗಳಲ್ಲಿರುವ ಆಕರ್ಷಕವಾದ ಚಾಮರಧಾರಿಗಳು ಧ್ವಂಸಗೊಂಡಿವೆ. ತೀರ್ಥಂಕರರ ಹಾಗೂ ಚಾಮರಧಾರಿಗಳ ಸುತ್ತ ಆಕರ್ಷಕವಾದ ಬಳ್ಳಿಗಳನ್ನು ಕಾಣಬಹುದು. ತೀರ್ಥಂಕರರ ಭುಜಗಳಲ್ಲಿ ತಲೆಯಿಂದ ಇಳೆಬಿಟ್ಟ ಗುಂಗರು ಕೂದಲನ್ನು ಕಾಣಬಹುದು. ಈ ಹಿನ್ನೆಲೆಯಲ್ಲಿ ಈ ವಿಗ್ರಹವು ಆದಿನಾಥ ತೀರ್ಥಂಕರರ ವಿಗ್ರಹದಂತೆ ತೋರುತ್ತದೆ.

  ಪಾದಪೀಠ ಶಾಸನ – ಮೂರು ಸಾಲುಗಳಿರುವ ಈ ಶಾಸನವು ”ಶ್ರೀ ಮೂಲಸಂಘ ದೇಶಿಯ ಗಣ ಸಮಯಾಚರಣರ ಶಿಷ್ಯರ ತಂಗಿಯು ಬರೆಸಿಮಾಡಿಸಿದ ನಾರಣ ಜಿನ ಚೈತ್ಯಾಲಯ’ ಎಂದು ತಿಳಿಸುತ್ತದೆ.

  ಶಾಸನದ ವಿಶ್ಲೇಷಣೆ

  • ಮೂಲಸಂಘ ದೇಶಿಯ ಗಣ – ಶಾಸನದಲ್ಲಿ ”ಮೂಲಸಂಘ ದೇಶಿಯ ಗಣ” ಎಂದಿದ್ದು ಈ ಪ್ರದೇಶದಲ್ಲಿ ಮೂಲಸಂಘದ ಪ್ರಭಾವವಿದ್ದುದು ತೋರುತ್ತದೆ.
  • ಸಮಾಯಾಚರಣ – ಶಾಸನದಲಿ “ಸಮಾಯಾಚರಣರ” ಉಲ್ಲೇಖವಿದ್ದು ನಾವು ಸಮಯಾಚರಣರ ಉಲ್ಲೇಖವನ್ನು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ನಿಸಿಧಿ ಶಾಸನವೊಂದರಲ್ಲಿ ಕಾಣಬಹುದು. ಬಹುಶಃ ಅವರು ವಿಹಾರ ನಿಮಿತ್ತ ಈ ಪ್ರದೇಶಕ್ಕೆ ಆಗಮಿಸಿದ್ದು ಇಲ್ಲಿನ ಶ್ರಾವಕರ ಮೇಲೆ ಅವರ ಪ್ರಭಾವವನ್ನು ಇದು ತೋರುತ್ತದೆ.
  • ನಾರಣ ಜಿನ ಚೈತ್ಯಾಲಯ – ಶಾಸನದಲ್ಲಿ ”ನಾರಣ ಜಿನ ಚೈತ್ಯಾಲಯ”ವೆಂದಿದ್ದು, ಇದು ಈ ವಿಗ್ರಹವು ನಾರಣ ಜಿನಾಲಯಕ್ಕೆ ಮಾಡಿಸಿ ಕೊಟ್ಟ ವಿಗ್ರಹವೆಂಬುದು ಸ್ಪಷ್ಟವಾಗುತ್ತದೆ.
  • ನಾರಣ ಪದದ ಬಳಕೆ – “ನಗಿರೆ ರಾಜ್ಯ”ಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆಯಲ್ಲಿ ಎರಡು ಶಾಸನಗಳಿದ್ದು ಅದರಲ್ಲಿನ ಒಂದು ಶಾಸನವು ಈ ರಾಜ್ಯದ ಅರಸು ಮನೆತನದ ವಿವರಗಳನ್ನು ಒದಗಿಸುತ್ತದೆ. ಅದರಲ್ಲಿ ನಗಿರೆಯ ಅರಸನಾದ ”ನಾರಣಾಂಕ”ನ ವಿವರವನ್ನು ನೀಡುತ್ತದೆ. ಮೂಡುಬಿದಿರೆಯ ಈ ಎರಡು ಶಾಸನಗಳು ನಗಿರೆ ಅರಸು ಮನೆತನದ ಇತಿಹಾಸವನ್ನು ಕ್ರಿ.ಶ. ೧೨-೧೩ನೇ ಶತಮಾನಕ್ಕೆ ಒಯ್ಯುತ್ತದೆ. ಈ ಹಿನ್ನೆಲೆಯಲ್ಲಿ ಈ ಶಾಸನದಲ್ಲಿ ಬಳಸಿರುವ ”ನಾರಣ” ಎಂಬ ಪದವು ನಗಿರೆಯ ಅರಸನಾದ ನಾರಣಾಂಕನ ಹೆಸರಿನಲ್ಲಿ ನಿರ್ಮಿಸಿಲಾಗಿದೆ ಎಂದು ನಿರ್ಧರಿಸಬಹುದು.

  ಶಾಸನದ ಕಾಲ – “ಶಾಸನದಲ್ಲಿ ಯಾವುದೇ ಕಾಲದ ಉಲ್ಲೇಖವಿಲ್ಲ. ಈಗಾಗಲೇ ಚರ್ಚಿಸಿದಂತೆ ಶಾಸನದಲ್ಲಿ ‘ಸಮಯಾಚರಣರು’ ಹಾಗೂ ‘ನಾರಣ’ನ ಉಲ್ಲೇಖವಿದೆ. ಹಿರೇಕೆರೂರಿನ ಶಾಸನದಲ್ಲಿ ಸಮಯಾಚರಣರ ಕಾಲ ಕ್ರಿ.ಶ. ೧೨೭೫, ಹಾಗೂ ನಾರಣನ ಕಾಲ ಅಂದಾಜು ೧೩ನೇ ಶತಮಾನ. ಈ ಹಿನ್ನೆಲ್ಲೆಯಲ್ಲಿ ಶಾಸನವು ೧೩ನೇ ಶತಮಾನಕ್ಕೆ ಸೇರಿದ್ದೆಂದು” ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ ಅಂತರ್ಜಾಲ ತಾಣದ ಸಂಸ್ಥಾಪಕರಾದ ಶ್ರೀ ನಿತಿನ್ ರವರು ತಿಳಿಸಿದ್ದಾರೆ.

  ಶಾಸನದ ಕಾಲ – “ಶಾಸನದಲ್ಲಿ ಯಾವುದೇ ಕಾಲದ ಉಲ್ಲೇಖವಿಲ್ಲ. ಈಗಾಗಲೇ ಚರ್ಚಿಸಿದಂತೆ ಶಾಸನದಲ್ಲಿ ‘ಸಮಯಾಚರಣರು’ ಹಾಗೂ ‘ನಾರಣ’ನ ಉಲ್ಲೇಖವಿದೆ. ಹಿರೇಕೆರೂರಿನ ಶಾಸನದಲ್ಲಿ ಸಮಯಾಚರಣರ ಕಾಲ ಕ್ರಿ.ಶ. ೧೨೭೫, ಹಾಗೂ ನಾರಣನ ಕಾಲ ಅಂದಾಜು ೧೩ನೇ ಶತಮಾನ. ಈ ಹಿನ್ನೆಲ್ಲೆಯಲ್ಲಿ ಶಾಸನವು ೧೩ನೇ ಶತಮಾನಕ್ಕೆ ಸೇರಿದ್ದೆಂದು” ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ ಅಂತರ್ಜಾಲ ತಾಣದ ಸಂಸ್ಥಾಪಕರಾದ ಶ್ರೀ ನಿತಿನ್ ರವರು ತಿಳಿಸಿದ್ದಾರೆ.

  ನಿಶಧಿ ಶಾಸನಗಳು – ಇದಲ್ಲದೆ ಇದೇ ಬಸದಿಯ ಪರಿಸರದಲ್ಲಿ ಮೂರು ನಿಶಧಿ ಶಾಸನಗಳು ಕೂಡ ಪತ್ತೆಯಾಗಿವೆ.

  ಜೈನಧರ್ಮದಲ್ಲಿ ಆಚರಿಸುವ ಹಲವು ಆಚರಣೆಗಳಲ್ಲಿ ಸಲ್ಲೇಖನ ವಿಧಿಯೂ ಸಹ ಒಂದು. ವ್ಯಕ್ತಿಯೊಬ್ಬರು ತಮ್ಮ ಜೀವನದ ಜವಾಬ್ದಾರಿಗಳನ್ನೆಲ್ಲ ಮುಗಿಸಿ ತಮಗೆ ಸಾವು ಅನಿವಾರ್ಯವೆಂದಾಗ ತೆಗೆದುಕೊಳ್ಳುವ ವ್ರತವನ್ನು ‘ಸಲ್ಲೇಖನ ವ್ರತ’ವೆನ್ನುತ್ತಾರೆ. ಸಲ್ಲೇಖನ ವ್ರತವನ್ನು ಕೈಗೊಂಡ ವ್ಯಕ್ತಿಯು ಹಂತಹಂತವಾಗಿ ಆಹಾರ ಸೇವನೆಯನ್ನು ನಿಲ್ಲಿಸಿ ದೇವರ ಆರಾಧನೆಯಲ್ಲಿ ತಲ್ಲೀನರಾಗಿ ಕ್ರಮೇಣ ದೇಹತ್ಯಾಗ ಮಾಡಿ ಸಮಾಧಿ ಹೊಂದುತ್ತಾರೆ. ಈ ರೀತಿ ಸಮಾಧಿ ಹೊಂದಿದ ಪುಣ್ಯ ಜೀವಿಗಳ ಸ್ಮರಣಾರ್ಥವಾಗಿ ಸ್ಥಾಪಿಸುವ ಶಾಸನವನ್ನು ‘ನಿಶದಿ’ ಅಥವಾ ‘ನಿಶಧಿ’ ಎನ್ನುತ್ತಾರೆ. ಈ ಬಸದಿಯ ಆವರಣದಲ್ಲಿ ಮೂರು ನಿಶಧಿಗಳು ದೊರೆತಿರುವುದು ಈ ಪ್ರದೇಶದಲ್ಲಿ ಜೈನಧರ್ಮಾಚರಣೆಗಳು ಹಾಗೂ ಜೈನಧರ್ಮವು ಉಚ್ರಾಯ ಸ್ಥಿತಿಯಲ್ಲಿದ್ದಿತೆಂದು ನಿರ್ಧರಿಸಲು ಈ ನಿಶಧಿಗಳು ಸಹಾಯಕವಾಗುತ್ತವೆ” ಎಂದು ಶ್ರೀ ನಿತಿನ್ ರವರು ತಿಳಿಸಿದ್ದಾರೆ.

  • ಮೊದಲ ನಿಶಧಿ ಶಾಸನ – ಈ ನಿಶಧಿಯಲ್ಲಿ ಒಟ್ಟು ಮೂರು ಭಾಗಗಳಿವೆ:
   • ಮೇಲ್ಭಾಗ – ಈ ಭಾಗದಲ್ಲಿ ಪರ್ಯಂಕಾಸನಯುಕ್ತ ತೀರ್ಥಂಕರರ ವಿಗ್ರಹ, ಇಕ್ಕೆಲಗಳಲ್ಲಿ ಚಾಮರಧಾರಿಗಳು, ತಲೆಯ ಮೇಲೆ ಮುಕ್ಕೊಡೆ, ಸೂರ್ಯ ಚಂದ್ರರು ಹಾಗೂ ತೀರ್ಥಂಕರರ ಬಲಭಾಗದಲ್ಲಿ ಮಹಿಳೆಯೊಬ್ಬಳು ಎರಡೂ ಕೈಗಳನ್ನು ಮುಗಿಯುತ್ತಿರುವ ಕೆತ್ತನೆ ಇದೆ.
   • ಮದ್ಯಭಾಗ – ಈ ಭಾಗದ ಎಡದಲ್ಲಿ ಸಲ್ಲೇಖನ ವ್ರತವನ್ನು ಬೊಧಿಸುತ್ತಿರುವ ಜೈನಮುನಿಗಳು, ಮದ್ಯದಲ್ಲಿ ಶಾಸ್ತçಗ್ರಂಥವನ್ನಿಟ್ಟಿರುವ ಶ್ರುತಪೀಠ ಹಾಗೂ ಬಲಭಾಗದಲ್ಲಿ ಮಹಿಳೆಯೊಬ್ಬಳು ಎರಡೂ ಕೈಗಳನ್ನು ಮುಗಿಯುತ್ತ ಮುನಿಗಳೆಡೆಗೆ ನೊಡುತ್ತಿರುವ ಕೆತ್ತನೆ ಇದೆ.
   • ಕೆಳಭಾಗ – ಈ ಭಾಗದಲ್ಲಿ ಎಂಟು ಸಾಲುಗಳಿರುವ ಶಾಸನದ ಕೆತ್ತನೆ ಇದೆ.
   • ಶಾಸನದ ವಿವರ – ಶಾಸನವು ಸವೆದಿದ್ದು ಶಾಸನದ ಕಾಲದ ಉಲ್ಲೇಖವಿರುವ ಅಕ್ಷರಗಳು ತೃಟಿತವಾಗಿದೆ. ಸಮಯಾಚರಣ ಮುನಿಗಳ ಶಿಷ್ಯ (ಶಿಷ್ಯನ ಹೆಸರು ತೃಟಿತವಾಗಿದೆ) ಮಕ್ಕಿರಸೊಪ್ಪೆಯ ಬಸದಿಗೆ ಎರಡು ಬರ ಅಕ್ಕಿಗೆ ದಾನ ಬಿಟ್ಟ ವಿವರವನ್ನು ನೀಡುತ್ತದೆ.
  • ಎರಡನೇ ನಿಶಧಿ ಶಾಸನ – ಈ ನಿಶಧಿಯಲ್ಲಿ ಒಟ್ಟು ಮೂರು ಭಾಗಗಳಿವೆ:
   • ಮೇಲ್ಭಾಗ – ಈ ಭಾಗದಲ್ಲಿ ಪರ್ಯಂಕಾಸನಯುಕ್ತ ತೀರ್ಥಂಕರರ ವಿಗ್ರಹ, ತಲೆಯ ಇಕ್ಕೆಲಗಳಲ್ಲಿ ಚಾಮರಗಳು, ತಲೆಯ ಮೇಲೆ ಮುಕ್ಕೊಡೆ, ಸೂರ್ಯ ಚಂದ್ರರ ಕೆತ್ತನೆ ಇದೆ.
   • ಮದ್ಯಭಾಗ – ಈ ಭಾಗದಲ್ಲಿ ಐದು ಸಾಲುಗಳಿರುವ ಶಾಸನದ ಕೆತ್ತನೆ ಇದೆ.
   • ಕೆಳಭಾಗ – ಈ ಭಾಗದ ಎಡದಲ್ಲಿ ಸಲ್ಲೇಖನ ವ್ರತವನ್ನು ಬೊಧಿಸುತ್ತಿರುವ ಜೈನಮುನಿಗಳು, ಅವರ ಮುಂಭಾಗದಲ್ಲಿ ಕಮಂಡಲ, ಮದ್ಯದಲ್ಲಿ ಶಾಸ್ತçಗ್ರಂಥವನ್ನಿಟ್ಟಿರುವ ಶ್ರುತಪೀಠ ಹಾಗೂ ಬಲಭಾಗದಲ್ಲಿ ಮಹಿಳೆಯೊಬ್ಬಳು ಎರಡೂ ಕೈಗಳನ್ನು ಮುಗಿಯುತ್ತ ಮುನಿಗಳೆಡೆಗೆ ನೊಡುತ್ತಿರುವ ಕೆತ್ತನೆ ಇದೆ.
   • ಶಾಸನದ ವಿವರ – ಐದು ಸಾಲುಗಳಿರುವ ಈ ಭಾಗದಲ್ಲಿ ಶಾಸನವು ಅಲ್ಲಲ್ಲಿ ಸವೆದಿದೆ. ೬೨ನೆಯ ಸಂವತ್ಸರದ ಚೈತ್ರ ಬಹುಳ ಪಾಡಿವ ಬೃಹಸ್ಪತಿವಾರದಂದು ಸಮಯಾಚರಣ ಮುನಿಗಳ ಶಿಷ್ಯ ಎಂದಿದೆ. ಉಳಿದ ಭಾಗವು ತೃಟಿತವಾಗಿದೆ.

  ಶಾಸನಗಳನ್ನು ಓದಿ ಮಾರ್ಗದರ್ಶನ ನೀಡಿದ ಹರಿಹರದ ಡಾ. ರವಿಕುಮಾರ್ ಕೆ. ನವಲಗುಂದ ಹಾಗೂ ಶಾಸನದ ಅಧ್ಯಯನಕ್ಕೆ ಸಹಕರಿಸಿದ ಸಿದ್ಧಾಪುರ ಬೋಜರಾಜ ಜೈನರಿಗೆ ನಿತಿನ್ ರವರು ತಮ್ಮ ಕೃತಜ್ಞತೆಯನ್ನು ತಿಳಿಸಿದ್ದಾರೆ.

  • ೩ನೇ ನಿಶಧಿ ಶಾಸನ – ಈ ನಿಶಧಿಯಲ್ಲಿ ಒಟ್ಟು  ನಾಲ್ಕು ಭಾಗಗಳಿವೆ:
   • ಮೇಲ್ಭಾಗ – ಈ ಭಾಗದಲ್ಲಿ ಪರ್ಯಂಕಾಸನಯುಕ್ತ ತೀರ್ಥಂಕರರ ವಿಗ್ರಹ, ಇಕ್ಕೆಲಗಳಲ್ಲಿ ಚಾಮರಧಾರಿಗಳು, ತಲೆಯ ಮೇಲೆ ಮುಕ್ಕೊಡೆಯ ಕೆತ್ತನೆ ಇದೆ.
   • ಎರಡನೇ ಹಾಗೂ ನಾಲ್ಕನೇ ಭಾಗದಲ್ಲಿ ಶಾಸನದ ಕೆತ್ತನೆ ಇತ್ತೆಂದು ತೋರುತ್ತದೆ. ಈಗ ಅಕ್ಷರಗಳೆಲ್ಲವೂ ತೃಟಿತವಾಗಿವೆ.
   • ಮೂರನೇ ಭಾಗ – ಈ ಭಾಗದ ಬಲದಲ್ಲಿ ಸಲ್ಲೇಖನ ವ್ರತವನ್ನು ಬೊಧಿಸುತ್ತಿರುವ ಜೈನಮುನಿಗಳು, ಮದ್ಯದಲ್ಲಿ ಶಾಸ್ತçಗ್ರಂಥವನ್ನಿಟ್ಟಿರುವ ಶ್ರುತಪೀಠ ಹಾಗೂ ಎಡಭಾಗದಲ್ಲಿ ಮಹಿಳೆಯೊಬ್ಬಳು ಎರಡೂ ಕೈಗಳನ್ನು ಮುಗಿಯುತ್ತ ಮುನಿಗಳೆಡೆಗೆ ನೊಡುತ್ತಿರುವ ಕೆತ್ತನೆ ಇದೆ.
  • ನಿಶಧಿ ಶಾಸನಗಳ ಕಾಲ – ಅಕ್ಷರಗಳು ಸ್ವಲ್ಪ ಮಟ್ಟಿಗೆ ಇರುವ ಎರಡು ನಿಶದಿ ಶಾಸನಗಳಲ್ಲಿ ಕಾಲದ ಉಲ್ಲೇಖವಿರುವ ಅಕ್ಷರಗಳು ತೃಟಿತವಾಗಿದ್ದರೂ ಕೂಡ ಶಾಸನದ ಲಿಪಿ ಹಾಗೂ ಸಮಯಾಚರಣ ಮುನಿಗಳ ಉಲ್ಲೇಖವಿದ್ದು, ಸಮಾಯಾಚರಣರು ಕಾಲ ೧೩ನೇ ಶತಮಾನ. ಈ ಹಿನ್ನೆಲೆಯಲ್ಲಿ ಎರಡೂ ನಿಶಧಿ ಶಾಸನಗಳ ಕಾಲವನ್ನು ೧೩ನೇ ಶತಮಾನವೆಂದು ನಿರ್ಧರಿಸಬಹುದು.

  ನಿತಿನ್‌ರವರ ಬಗ್ಗೆ – ನಿತಿನ್ ರವರು ಮೈಸೂರು ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ೧೫ ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ವಿಪ್ರೋ ಕಂಪನಿಯಲ್ಲಿ ಮಾರ್ಕೆಟಿಂಗ್ ಟೆಕ್ನಾಲಜಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಜೈನ್‌ಹೆರಿಟೇಜ್‌ಸೆಂಟರ್ಸ್.ಕಾಂ ವೆಬ್ಸೈಟ್ ಅನ್ನು ೨೦೦೨ರಲ್ಲಿ ಸ್ಥಾಪಿಸಿ ಅದರ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಅವರು ಕರ್ನಾಟಕದ ಜೈನ ಪರಂಪರೆಗೆ ಸಂಬಂಧಿಸಿದಂತೆ ”ಜಿನಯಾತ್ರಾ” ಎಂಬ ಪ್ರಶಸ್ತಿ ವಿಜೇತ ಕೃತಿಯನ್ನು ರಚಿಸಿದ್ದಾರೆ.

  error: Jain Heritage Centres - Celebrating Jain Heritage.....Globally!