ಜೈನ ಮಹಾಕಾವ್ಯ ಡಿಸೆಂಬರ್‌ನಲ್ಲಿ ಬಿಡುಗಡೆ: ಮೊಯ್ಲಿ

ಹಾಸನ, ಜನವರಿ ೩೦, ೨೦೧೭: ಜೈನ ಕಾಶಿಯೆಂದೇ ಹೆಸರಾಗಿರುವ ಶ್ರವಣಬೆಳಗೊಳದ ಬಗ್ಗೆ ಈಗಾಗಲೇ ನಾನು ಮಹಾಕಾವ್ಯ ರಚಿಸಿದ್ದು, ಡಿಸೆಂಬರ್‌ ವೇಳೆಗೆ ಈ ಕಾವ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಎಂ. ವೀರಪ್ಪಮೊಯ್ಲಿ ಹೇಳಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಡೆದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

”ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆಯಲು ಹಾಸನ ಜಿಲ್ಲೆಯಲ್ಲಿ ದೊರೆತ ಹಲ್ಮಿಡಿ ಶಾಸನವೇ ಮುಖ್ಯವಾಗಿತ್ತು. ಶಾಸ್ತ್ರೀಯ ಸ್ಥಾನ ಮಾನ ದೊರೆತ ಬಳಿಕ ಇದುವರೆಗೂ ಭಾಷೆಯ ಅಭಿವೃದ್ಧಿಗೆ ನೀಲಿ ನಕ್ಷೆ ಸಿದ್ಧ್ದವಾಗಿಲ್ಲ. ನಮ್ಮ ನಾಡು ನುಡಿಯ ಬಗ್ಗೆ ರಾಜ್ಯದ ಪ್ರತಿಯೊಬ್ಬರಲ್ಲೂ ಅಭಿಮಾನವಿದ್ದು, ಅವರೆಲ್ಲರನ್ನೂ ಸಂಘಟಿಸುವ ಕೆಲಸ ಆಗಬೇಕು,”ಎಂದರು.

”ಹಾಸನವು ರಾಜ್ಯದಲ್ಲೇ ಭವ್ಯವಾದ ಸಾಂಸ್ಕೃತಿಕ ಹಿನ್ನೆಲೆಯ ಹೊಂದಿರುವ ಏಕೈಕ ಜಿಲ್ಲೆ. ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಅನೇಕ ಸಂಪತ್ತು ಈ ಜಿಲ್ಲೆಯಲ್ಲಿ ದೊರೆತಿದೆ. ಕನ್ನಡದ ಪ್ರಥಮ ಶಿಲಾಶಾಸನ ಕೂಡ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮದಲ್ಲಿ ದೊರೆತಿದ್ದು, ಇನ್ನೂ ಅನೇಕ ಶಾಸನಗಳು ದೊರೆಯುವ ಸಂಭವವಿದೆ,” ಎಂದರು.

”ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ರುದ್ರಪಟ್ಟಣ ಸಂಗೀತ ಗ್ರಾಮ ಹೀಗೆ ಅನೇಕ ಪಾರಂಪರಿಕ ಸ್ಥಳಗಳನ್ನು ಜಿಲ್ಲೆಯು ಹೊಂದಿದ್ದು, ಅವುಗಳ ಬಗ್ಗೆ ಇಂದಿನ ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಪರಿಷತ್‌ ವತಿಯಿಂದ ಆಗಬೇಕಿದೆ. ಹಾಗೆಯೇ ಜಿಲ್ಲೆಯ ಸಾಧಕರ ಬಗ್ಗೆಯೂ ಮಕ್ಕಳಿಗೆ ತಿಳಿಸಿಕೊಡುವ ಯತ್ನ ಆಗಬೇಕು,” ಎಂದರು.

”ಶಾಲೆಗಳಲ್ಲಿ ಒಂದರಿಂದ ಹತ್ತನೆ ತರಗತಿವರೆಗೆ ಕಡ್ಡಾಯ ಕನ್ನಡ ಶಿಕ್ಷಣ ಜಾರಿಗೊಳಿಸಬೇಕಾದ ಅಗತ್ಯತೆ ಇದೆ,”ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷ ಎಚ್‌.ಬಿ. ಮದನಗೌಡ, ವಿಧಾನ ಪರಿಷತ್‌ ಸದಸ್ಯ ಗೋಪಾಲಸ್ವಾಮಿ, ಮಾಜಿ ಶಾಸಕ ಸಿ.ಎಸ್‌. ಪುಟ್ಟೇಗೌಡ, ಕಾಂಗ್ರೆಸ್‌ ಮುಖಂಡ ವಿಶ್ವನಾಥ್‌, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಹಾಗೂ ಇತರರು ಹಾಜರಿದ್ದರು. – ಕೃಪೆ: ವಿಜಯಕರ್ನಾಟಕ

Post Author: JHC