Skip to content
Home » ಕನ್ನಡ » ಸುದ್ದಿ-ಸಮಾಚಾರ » ಮೈಸೂರು ಜಿಲ್ಲೆ ಮಾಕೋಡು ಗ್ರಾಮದಲ್ಲಿ 12-13ನೇ ಶತಮಾನದ 2 ಜೈನ ಶಾಸನಗಳು ಪತ್ತೆ

ಮೈಸೂರು ಜಿಲ್ಲೆ ಮಾಕೋಡು ಗ್ರಾಮದಲ್ಲಿ 12-13ನೇ ಶತಮಾನದ 2 ಜೈನ ಶಾಸನಗಳು ಪತ್ತೆ

  Two Ancient Jain Inscriptions of 12th-13th Century Found at Makodu Village, Mysuru District

  Two Ancient Jain Inscriptions of 12th-13th Century Found at Makodu Village, Mysuru District

  ಮೈಸೂರು, 6 ಅಕ್ಟೋಬರ್ 2018: ಮೈಸೂರು ಜಿಲ್ಲೆ ಹುಣಸೂರು ತಾಲೂಕಿನಲ್ಲಿರುವ ಮಾಕೋಡು ಗ್ರಾಮದಲ್ಲಿನ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ಪುರಾತನವಾದ ಎರಡು ಜೈನ ಶಾಸನಗಳು ಪತ್ತೆಯಾಗಿವೆ. ”ಬಸದಿಯ ಜೀರ್ಣೋದ್ಧಾರ ಕಾರ್ಯದ  ಸಮಯದಲ್ಲಿ ಈ ಶಾಸನಗಳು ಪತ್ತೆಯಾಗಿದ್ದು, ಒಂದು ಶಾಸನವು ಬಸದಿಯ ಮೂಲನಾಯಕನಾದ ಪಾರ್ಶ್ವನಾಥ ತೀರ್ಥಂಕರ ವಿಗ್ರಹದ ಪಾದಪೀಠದಲ್ಲಿ ಪತ್ತೆಯಾಗಿದ್ದರೆ ಇನ್ನೊಂದು ಶಾಸನವು ಈ ಬಸದಿಯ ಸುಖನಾಸಿಯಿಂದ ಗರ್ಭಗುಡಿಗೆ ತೆರಳುವ ಬಾಗಿಲಿನ ಲಲಾಟದ ಮೇಲ್ಭಾದಲ್ಲಿದೆ” ಎಂದು www.jainheritagecentres.com  ಅಂತರ್ಜಾಲ ತಾಣದ ಸಂಸ್ಥಾಪಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಹೆಚ್.ಪಿ. ನಿತಿನ್ ರವರು ತಿಳಿಸಿದ್ದಾರೆ.

  ಜೀರ್ಣೋದ್ಧಾರಕ್ಕೆ ಮೊದಲು ಕ್ಷೇತ್ರ ಕಾರ್ಯಕೈಗೊಂಡಿದ್ದಾಗ ”ತೀರ್ಥಂಕರ ವಿಗ್ರಹದ ಪಾದಪೀಠದಲ್ಲಿನ ಶಾಸನವನ್ನು ಗಮನಿಸಿ ಅದರಲ್ಲಿ ಸಾಕಷ್ಟು ಮಣ್ಣು ಶೇಖರಿಸಿಕೊಂಡು ಶಾಸನದ ಅಕ್ಷರಗಳು ತೀರ ಅಸ್ಪಷ್ಟವಾಗಿದ್ದವು” ಎನ್ನುವ ನಿತಿನ್, ”ಅನಂತರ ಜೀರ್ಣೋದ್ಧಾರದ ಸಂದರ್ಭದಲ್ಲಿ ವಿಗ್ರಹವನ್ನು ಸ್ವಚ್ಛಗೊಳಿಸಿದಾಗ ಅಕ್ಷರಗಳು ಓದಲು ಅನುವಾಯಿತು” ಎನ್ನುತ್ತಾರೆ. ಮುಂದುವರೆದ ಅವರು ಸುಖನಾಸಿಯ ಶಾಸನವು ಬಸದಿಯನ್ನು ಜೀರ್ಣೋದ್ಧಾರ ಕಾರ್ಯದ ನಿಮಿತ್ತ ಪುನರ್ ನಿರ್ಮಿಸುತ್ತಿರುವಾಗ ಪತ್ತೆ ಯಾಯಿತೆಂದು ತಿಳಿಸಿದ್ದಾರೆ.

  ”ಬಸದಿಯ ಜೀರ್ಣೋದ್ಧಾರಕಾರ್ಯವು ಮಾಕೋಡು ಭಗವಾನ್ ಶ್ರೀ ಪಾರ್ಶ್ವನಾಥ ದಿಗಂಬರ ಜೈನ ಸೇವಾ ಟ್ರಸ್ಟ್‌ನ ಅಡಿಯಲ್ಲಿ ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ಜೀರ್ಣೋದ್ಧಾರ ಕಾರ್ಯವನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್‌ನವರು ಕೈಗೆತ್ತಿಕೊಂಡಿದ್ದಾರೆ” ಎಂದು ಬಸದಿಯ ಟ್ರಸ್ಟಿನ ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ನಿತಿನ್ ತಿಳಿಸಿದ್ದಾರೆ.

  ಶಾಸನಗಳ ವಿಶ್ಲೇಷಣೆ ನಿತಿನ್ ರವರು ಈ ಶಾಸನಗಳನ್ನು ಈ ಕೆಳಗಿನಂತೆ ವಿಶ್ಲೇಷಿಸಿದ್ದಾರೆ.

  ಪಾರ್ಶ್ವನಾಥ ತೀರ್ಥಂಕರ ವಿಗ್ರಹದ ಪಾದಪೀಠದಲ್ಲಿನ ಶಾಸನ – ಮಧ್ಯದ ಭಾಗವೂ ಸೇರಿದಂತೆ ಒಟ್ಟು ಏಳು ಹಂತಗಳಾಗಿ ಇದನ್ನು ವಿಂಗಡಿಸಬಹುದು.

  ಈ ಶಾಸನವು ಪಾದಪೀಠ ಶಾಸನವಾಗಿದ್ದು ಹೊಯ್ಸಳ ಎರಡನೆಯ ವೀರಬಲ್ಲಾಳನ ಕಾಲದ್ದೆಂದು (ಕ್ರಿ.ಶ. 1173-1220) ತಿಳಿದುಬರುತ್ತದೆ. ಇಲ್ಲಿ ”ಮಾಕೋಡಿ” ಎಂಬ ಪದದ ಉಲ್ಲೇಖದಿಂದ ಅದು ಮಹಾಕೋಡಿ” ಎಂಬ ಪದದಿಂದ ”ಮಾಕೋಡಿ” ಎಂದು ಮಾರ್ಪಟ್ಟು ಇಂದಿನ ” ಮಾಕೋಡು” ಹೆಸರನ್ನು ಪಡೆದಿದೆ ಎಂದು ಊಹಿಸಬಹುದು. ಅದಲ್ಲದೆ ಬಹುಶಃ ಈ ಗ್ರಾಮದ ಅಕ್ಕಪಕ್ಕದಲ್ಲಿ ”ಕೋಡಿ” ಒಡೆದಿರುವ ಕೆರೆ ಇದ್ದಿರಬಹುದಾದ ಕಾರಣ ಈ ಗ್ರಾಮವನ್ನು ” ಮಹಾಕೋಡಿ” ಎಂದು ಕರೆದಿರಬಹುದು.

  ಶಾಸನವು ತ್ರುಟಿತವಾದ್ದರಿಂದ ಪಾಠ ಅಸ್ಪಷ್ಟವಾಗಿದೆ, ಆದಾಗ್ಯೂ ಇದರಲ್ಲಿ ಕಾಣಬರುವ ಹೆಸರುಗಳಾದ ಸೇನಭೋವ ಏಚಣ್ನ, ಎಡನನ ಮಾಚಿಯಣ್ನ, ಸೋವಂತ ಏಚನ ಮಗ, ಬಬ್ಬಿಗೌಡನ ಮಗ ದೇವ್ವಯ್ಯ ಮುಂತಾದ ಪ್ರಮುಖರು ‘ವಿಮುಕ್ತ’ ಎಂಬ ಹೆಸರಿನಿಂದ ಕೊನೆಗೊಳ್ಳುವ ಜಿನಮುನಿಯ ಶಿಷ್ಯರಾಗಿದ್ದು ಈ ಬಸದಿಯನ್ನು ಕಟ್ಟಿಸಿರಬಹುದೆಂದು ತೋರುತ್ತದೆ. ಅದಲ್ಲದೆ ಅದೇ ಮುನಿಗಳ ಶಿಷ್ಯೆಯಾದ ಗೋವಿಂದಬ್ಬೆ ಎನ್ನುವವಳು ಈ ಬಸದಿಗೆ ದತ್ತಿಯನ್ನು ನೀಡಿದ ಉಲ್ಲೇಖವನ್ನು ಕಾಣಬಹುದು. ಅಂದರೆ ಈ ಬಸದಿಯ ನಿರ್ಮಾಣಕ್ಕೆ  ಬೇರೆ ಬೇರೆ ವೃತ್ತಿಯ ಜನರು ಕೊಡುಗೆ ನೀಡಿದರು ಎಂದು ಹೇಳಬಹುದು.

  ಕಾಲ – ಹೊಯ್ಸಳ ಎರಡನೆಯ ವೀರಬಲ್ಲಾಳನ ಉಲ್ಲೇಖವಿರುವುದರಿಂದ ಇದು 12-13ನೇ ಶತಮಾನದ ಶಾಸನವಾಗಿದ್ದು, ಬಸದಿಯೂ ಅದೇ ಕಾಲದಲ್ಲಿ ನಿರ್ಮಿಸಿರಬಹುದು.

  ಶಾಸನದ ಪಾಠ
  1 *ಸ್ವಸ್ತಿ…………………………………………………………………………………………..ಳ ವಿಮುಕ್ತ
  2 …. ದೇವರ ಗುಡ್ಡಗಳು || * ಸ್ವಸ್ತಿ ಶ್ರೀಮನ್ಮಹಾಮಂಡಳೇಶ್ವರ ಶ್ರೀ ವೀರ­­­­ಬ… ಮಹಾದೇವರ…ಪ್ರಿಥ್ವಿ ರಾಜ್ಯಂಗೆ
  3 ಯೂತ್ತಿರೆ ಮಾಕೋಡಿ….ಯ ಕೊ…ಸಾವನ್ತಗಾಳರ ಗೋವ(ವಿ)ಂದಬ್ಬೆಯ ಸಾವನ್ತನವರು ಬಿಟ್ಟ ಧಮರ್ಮ್‌ ವಂ
  4 ….ಸಾವಂತ ಪ್ರೀ….ಯ……ಸೆಟ್ಟಿ ಸೇನಬೋವ ಏಚಣ್ನ ಎಡನನ ಮಾಚಿಯಣ್ನ. ತವ
  5 ..ಳಗಾ…………ಸೋಮಂತ ಏಚ..ಮಗ ಬಬ್ಬಿಗೌಉಡನ ಮಗ ದೇಯು(ವ)ಯನು ಮಾ
  6 ..ರ ಸಮಸ್ತ……ಬಸದಿ||

  ಸುಖನಾಸಿಯ ಶಾಸನ: ಪಾರ್ಶ್ವನಾಥ ತೀರ್ಥಂಕರ ಜಿನಾಲಯವು ”ಎಕ್ಕೋಟಿ” ಜಿನಾಲಯವಾಗಿದ್ದು ಇದು ”ಜಾವಳಿಗೆ”ಯ ಬಸದಿ ಎಂದು ಇದು ತಿಳಿಸುತ್ತ್ತದೆ. ಇಲ್ಲಿ ಬಳಸಿರುವ ”ಎಕ್ಕೋಟಿ” ಹಾಗೂ ”ಜಾವಳಿ”ಪದಗಳು ಹಲವಾರು ಕುತೂಹಲಕರ ಅಂಶಗಳನ್ನು ತಿಳಿಸುತ್ತದೆ.

  ”ಎಕ್ಕೋಟಿ ಜಿನಾಲಯ” ಎಂಬ ಪದಗಳು ಈ ಬಸದಿಯು ಕೆಲವು ಕಾಲ ಶೈವಯತಿಗಳ ಪ್ರಭಾವಕ್ಕೊಳಪಟ್ಟ ಜಿನಾಲಯವೆಂಬುದು ಸ್ಪಷ್ಟವಾಗುತ್ತದೆ. ಕರ್ನಾಟಕದಾದ್ಯಂತ ಹಲವಾರು ಎಕ್ಕೋಟಿ ಜಿನಾಲಯಗಳನ್ನು ನಾವು ಕಾಣಬಹುದು. ಅವುಗಳಲ್ಲಿ ಬಾಗಲಕೋಟೆ ಜಿಲ್ಲೆ ”ತೇರದಾಳದ ಗೊಂಖ ಜಿನಾಲಯ” ಮತ್ತು ಹಾಸನ ಜಿಲ್ಲೆ ”ಅರಸೀಕೆರೆಯ ಸಹಸ್ರಕೂಟ ಜಿನಾಲಯವನ್ನು ಹೆಸರಿಸಬಹುದು.

  ಶಾಸನದಲ್ಲಿ ಬರುವ ”ಜಾವಳಿಗೆ” ಎಂಬ ಪದ ”ಯಾಪನೀಯ” ಪದದ ಜ್ಞಾತಿರೂಪ. ಯಾಪನೀಯ ಎಂಬುದೊಂದು ಜಿನಮುನಿ ಸಂಘ. ಕರ್ನಾಟಕದಲ್ಲಿ ಒಟ್ಟು ಮೂರು ಜಿನಮುನಿ ಸಂಘಗಳು ಕಂಡುಬರುತ್ತವೆ – 1.ನಿರ್ಗ್ರಂಥ ಮುನಿಸಂಘ (ಮೂಲಸಂಘ) 2. ಶ್ವೇತಪಟ ಮುನಿಸಂಘ ಹಾಗೂ 3. ಯಾಪನೀಯ ಸಂಘ. ಇದರಲ್ಲಿ ಬರುವ ಸಂಘಗಳಲ್ಲಿ ಆರಂಭದ್ದು ದಿಗಂಬರ ಪಂಥಕ್ಕೆ, ಎರಡನೆಯದು ಶ್ವೇತಾಂಬರ ಪಂಥಕ್ಕೆ ಸೇರಿದವು. ಈ ಎರಡೂ ಸಂಪ್ರದಾಯಗಳ ಸೇತುಕೊಂಡಿ ಯಾಪನೀಯರು. ಇವರು ದಿಗಂಬರರ ನಗ್ನತ್ವ, ಶ್ವೇತಾಂಬರರ ತತ್ತ್ವವನ್ನು ಸಮ್ಮಿಳಿಸಿಕೊಂಡವರು. ಉತ್ತರ ಕರ್ನಾಟಕದಲ್ಲಿ ಈ ಪಂಥದ ಜಿನಾಲಯಗಳು ಸಾಕಷ್ಟು ದೊರೆತಿದ್ದರೂ ಮೈಸೂರು ಪ್ರದೇಶದ ಜಿನಾಲಯಗಳಲ್ಲಿ ಈ ಪಂಥದ ಉಲ್ಲೇಖ ವಿರಳ.

   ಶಾಸನದ ಪಾಠ 
  (ಸುಖನಾಸಿಯ ಬಾಗಿಲಿನ ಲಲಾಟ ಬಿಂಬದ ಮೇಲ್ಭಾಗದ ಎಡಗಡೆ)
  1 *ಸ್ವಸ್ತಿ ಶ್ರೀಮತು ಸಮಸ್ತ ಎಕ್ಕೋಟಿ ಜಿನಾಲಯ ಜಾ
  (ಸುಖನಾಸಿಯ ಬಾಗಿಲಿನ ಲಲಾಟ ಬಿಂಬದ ಮೇಲ್ಭಾಗದ ಬಲಗಡೆ)
  [ವಳಿಗೆ]ಯ ಬಸದಿ ಮಂಗಳ ಮಹಾ ಶ್ರೀ*

  ಎರಡೂ ಶಾಸನಗಳ ಒಟ್ಟು ಸಾರಾಂಶ

  ಮಾಕೋಡು ಗ್ರಾಮದಲ್ಲಿನ ಪಾರ್ಶ್ವನಾಥ ಜಿನಾಲಯವು ಯಾಪನೀಯ ಸಂಘಕ್ಕೆ ¸ ಸೇರಿದ ಕೆಲವುಕಾಲ ಶೈವಯತಿಗಳ ಪ್ರಭಾವವಿದ್ದ ಜಿನಾಲಯವಾಗಿದ್ದು ಹೊಯ್ಸಳ ಎರಡನೆಯ ವೀರಬಲ್ಲಾಳನ ಕಾಲದ್ದೆಂದು (12-13ನೇ ಶತಮಾನ) ತಿಳಿಯುತ್ತದೆ. ಸೇನಭೋವ ಏಚಣ್ನ, ಎಡನನ ಏಚಿಯಣ್ನ, ಸೋವಂತ ಏಚನ ಮಗ, ಬಬ್ಬಿಗೌಡನ ಮಗ ದೇವ್ವಯ್ಯ ಮುಂತಾದ ಪ್ರಮುಖರು ‘ವಿಮುಕ್ತ’ ಎಂಬ ಹೆಸರಿನಿಂದ ಕೊನೆಗೊಳ್ಳುವ ಜಿನಮುನಿಯ ಶಿಷ್ಯರಾಗಿದ್ದು ಈ ಬಸದಿಯನ್ನು ಕಟ್ಟಿಸಿರಬºÀÄದು. ಅದೇ ಮುನಿಗಳ ಶಿಷ್ಯೆಯಾದ ಗೋವಿಂದಬ್ಬೆ ಎನ್ನುವವಳು ಈ ಬಸದಿಗೆ ದತ್ತಿಯನ್ನು ನೀಡಿದ್ದಳು.

  ವಂದನೆಗಳು –  ಈ ಶಾಸನವನ್ನು ಓದಲು ಸಹಾಯಮಾಡಿ ಅದಕ್ಕೆ ಸಂಬಂಧಿಸಿದ ಸಂಶೋಧನೆಗೆ ಮಾರ್ಗದರ್ಶನ ನೀಡಿದ ಹರಿಹರದ ಶ್ರೀ ರವಿಕುಮಾರ್ ಕೆ. ನವಲಗುಂದ, ಬಸದಿಯ ಜೀರ್ಣೋದ್ಧಾರದಲ್ಲಿ ಪ್ರಮುಖ ಪಾತ್ರವಹಿಸಿರುವ ಮೈಸೂರಿನ ಶ್ರೀ ಎನ್. ಪ್ರಸನ್ನಕುಮಾರ್, ಜೀರ್ಣೋದ್ಧಾರ ಕಾರ್ಯದ ಉಸ್ತುವಾರಿಯನ್ನು ನಿರ್ವಹಿಸುತ್ತಿರುವ ಹೊರನಾಡಿನ ಶ್ರೀ ಜಯಕೀರ್ತಿ, ಟ್ರಸ್ಟಿನ ಎಲ್ಲ ಪದಾಧಿಕಾರಿಗಳನ್ನು ಹಾಗೂ ಜೀರ್ಣೋದ್ಧಾರ ಕಾರ್ಯಕ್ಕೆ  ಸಹಕರಿಸುತ್ತಿರುವ ಮಾಕೋಡು ಗ್ರಾಮದ ಶ್ರೀ ಶ್ರೀನಿವಾಸ್, ಸಮಸ್ತ ಗ್ರಾಮಸ್ಥರಿಗೆ ಹಾಗೂ ಅಂತರ್ಜಾಲತಾಣದ ತಮ್ಮ ತಂಡಕ್ಕೆ ಧನ್ಯವಾದಗಳನ್ನು ನಿತಿನ್ ರವರು ಸಲ್ಲಿಸಿದ್ದಾರೆ.

  ಮಾಕೋಡು ಗ್ರಾಮವು ಮೈಸೂರಿನಿಂದ 61 ಕಿ.ಮಿ., ಹುಣಸೂರಿನಿಂದ 17 ಕಿ.ಮಿ., ಪಿರಿಯಾಪಟ್ಟಣದಿಂದ 20 ಕಿ.ಮಿ. ಹಾಗೂ ಕೃಷ್ಣರಾಜನಗರದಿಂದ 25 ಕಿ.ಮಿ. ದೂರದಲ್ಲಿದೆ.

  ¸Àಂಪರ್ಕ ವಿವರಗಳಿಗೆ: ದೂರವಾಣಿ: 9880818869, ಇಮೇಲ್ ವಿಳಾಸ: nitin@jainheritagecentres.com

  ನಿತಿನ್ ರವರ ಪರಿಚಯ – ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಇ. ಮೆಕಾನಿಕಲ್ ಪದವಿ ಪಡೆದಿರುವ ನಿತಿನ್ ರವರು ವೃತ್ತಿಯಲ್ಲಿ ಐಟಿ ತಂತ್ರಜ್ಞ. ಪ್ರಸ್ತುತ ಬೆಂಗಳೂರಿನ ಲಂಗೂರ್ ಡಿಜಿಟಲ್ ಪ್ರೈ.ಲಿ. ಯಲ್ಲಿ ಡೈರೆಕ್ಟರ್ ಟೆಕ್ನಾಲಜಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಖ್ಯಾತ ಜೈನ ಅಂತರ್ಜಾಲತಾಣವಾದ www.jainheritagecentres.com ಅನ್ನು 2002 ರಲ್ಲಿ ಸ್ಥಾಪಿಸಿ ಅದರ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕದ ಜೈನ ಪರಂಪರೆಗೆ ಸಂಬಂಧಿಸಿದ ಅವರ ಮೊದಲ ಕೃತಿ ‘ಜಿನಯಾತ್ರಾ’ ಫೆಬ್ರವರಿ 2018ರಲ್ಲಿ ಪ್ರಕಟಿಸಲಾಗಿದೆ.

  error: Jain Heritage Centres - Celebrating Jain Heritage.....Globally!