Skip to content
Home » ಕನ್ನಡ » ಜೈನ ಹಬ್ಬಗಳು » ದಶಲಕ್ಷಣ ಪರ್ವ » ಉತ್ತಮ ಸಂಯಮ ಧರ್ಮ

ಉತ್ತಮ ಸಂಯಮ ಧರ್ಮ

    ಉತ್ತಮ ಸಂಯಮ ಧರ್ಮ – ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಆರ‍ನೇ ಧರ್ಮ.

    “ಯಮ” ಶಬ್ದವು “ಯಮ+ಉಪರಮೇ’ ಎಂಬ ಧಾತುವಿನಿಂದ ಹುಟ್ಟಿದೆ. ಇದಕ್ಕೆ ಸಮ್” ಎಂಬ ಉಪಸರ್ಗವು ಸೇರಿದರೆ “ಸಂಯಮ ಎಂದಾಗುವುದು. ಈ “ಸಂಯಮ” ಶಬ್ದಕ್ಕೆ ಚೆನ್ನಾಗಿ ಪರಿಹರಿಸುವಿಕೆ ಎಂದು ಅರ್ಥ. ಈ ಸಂಯಮವು ಪ್ರಾಣಿಸಂಯಮವೆಂದೂ ಇಂದ್ರಿಯ ಸಂಯಮ ಎ೦ದೂ ಎರಡು ಪ್ರಕಾರವಾಗಿರುತ್ತದೆ.

    ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಆರನೇ ಧರ್ಮ - ಉತ್ತಮ ಸಂಯಮ ಧರ್ಮ
    ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಆರನೇ ಧರ್ಮ – ಉತ್ತಮ ಸಂಯಮ ಧರ್ಮ

    ರಾಜವಾರ್ತಿಕದಲ್ಲಿ “ಏಕೇಂದ್ರಿಯಾದಿಪ್ರಾಣಿಪೀಡಾಪರಿಹಾರಃ ಪ್ರಾಣಿ ಸಂಯಮ” ಎಂದು ಹೇಳಿರುವಂತೆ ಏಕೇಂದ್ರಿಯಾದಿ ಪ್ರಾಣಿಗಳಿಗೆ ಪೀಡೆಯನ್ನು ಮಾಡದಿರುವುದು ಪ್ರಾಣಿಸಂಯಮವಾಗಿರುವುದು. ಪ್ರಾಣಿಗಳಲ್ಲಿ ಸ್ಥಾವರಪ್ರಾಣಿಗಳೆ೦ದೂ ತ್ರಸಪ್ರಾಣಿಗಳೆಂದೂ ಎರಡು ಮೂಲಭೇದಗಳಿರುತ್ತವೆ. ಸ್ಥಾವರಪ್ರಾಣಿಗಳಲ್ಲಿ ಪೃಥಿವೀಕಾಯಕ, ಜಲಕಾಯಿಕ, ಅಗ್ನಿಕಾಯಿಕ, ವಾಯುಕಾಯಿಕ, ವನಸ್ಪತಿಕಾಯಿಕಗಳೆಂದು ಐದು ಅಂತರ್ಭೇದಗಳಿರುತ್ತವೆ. ಈ ಪೃಥಿವೀ ಜಲ ಅಗ್ನಿ ವಾಯು ವನಸ್ಪತಿರೂಪವಾದ ಪ್ರಾಣಿಗಳಿಗೆಲ್ಲ ಏಕೇಂದ್ರಿಯ ಪ್ರಾಣಿಗಳೆಂದು ಹೆಸರು. ಇವುಗಳಿಗೆ ಸ್ಪರ್ಶನೇಂದ್ರಿಯ ಮಾತ್ರವಿರುವುದು ಜಿಹ್ವಾ ನಾಸಿಕಾನೇತ್ರಶ್ರ‍ೋತೇಂದ್ರಿಯಗಳಿಲ್ಲ.
    ತ್ರಸಪ್ರಾಣಿಗಳಲ್ಲಿ ದ್ವೀಂದ್ರಿಯ, ತೀಂದ್ರಿಯ, ಚತುರಿಂದ್ರಿಯ, ಪಂಚೇಂದ್ರಿಯಗಳೆಂದು ನಾಲ್ಕು ಅಂತರ್ಭೇದಗಳಿರುತ್ತವೆ. ಸ್ಪರ್ಶನ ಜಿಹೇಂದ್ರಿಯ ಗಳೆರಡೇ ಇರುವ ಕ್ರಿಮಿಜಾತಿಯ ಪ್ರಾಣಿಗಳಿಗೆಲ್ಲ ದೀಂದ್ರಿಯ ಪ್ರಾಣಿಗಳೆಂದೂ, ಸ್ಪರ್ಶನ ಜಿಹ್ವಾ ನಾಸಿಕೇಂದ್ರಿಯಗಳು ಮೂರೇ ಇರುವ ಇರುವೆಯ ಜಾತಿಯಪ್ರಾಣಿಗಳಿಗೆಲ್ಲ ತೀಂದ್ರಿಯಪ್ರಾಣಿಗಳೆಂದೂ, ಸ್ಪರ್ಶನ ಜಿಹ್ವಾ ನಾಸಿಕ, ನೇತೇಂದ್ರಿಯಗಳು ನಾಲ್ವೇ ಇರುವ ನೊಣ ಮತ್ತು ದುಂಬಿಯ ಜಾತಿಯ ಪ್ರಾಣಿಗಳಿಗೆಲ್ಲ ಚತುರಿಂದ್ರಿಯಪ್ರಾಣಿಗಳೆಂದೂ, ಸ್ಪರ್ಶನ ಜಿಹ್ವಾ ನಾಸಿಕ ನೇತ್ರ ಸ್ತೋತ್ರಗಳು ಐದು ಇಂದ್ರಿಯಗಳೂ ಉಳ್ಳ ನಾನಾ ವಿಧವಾದ ಪಶು ಪಕ್ಷಿ ಮನುಷ್ಯ ದೇವ ನಾರಕಿ ಪ್ರಾಣಿಗಳಿಗೆಲ್ಲ ಪಂಚೇಂದ್ರಿಯ ಪ್ರಾಣಿಗಳೆಂದೂ ಹೆಸರು.
    ಪ್ರಾಣಿಗಳಲ್ಲಿ ಒಂದೊಂದು ಇಂದ್ರಿವು ವೃದ್ಧಿಯಾದ ಹಾಗೆಲ್ಲ ಅಸಂಖ್ಯಾತಗುಣಿತವಾಗಿ ಆತ್ಮಶಕ್ತಿಯು ಅಭಿವ್ಯಕ್ತವಾಗುವುದು. ಪ್ರಾಣಿಗಳಲ್ಲಿ ಪಾಪಕರ್ಮದ ಆಧಿಕ್ಯದಿಂದ ಇಂದ್ರಿಯಗಳ ನ್ಯೂನತೆಯೂ, ಪಾಪಕರ್ಮದ ನ್ಯೂನತೆಯಿಂದ ಇಂದ್ರಿಯಗಳ ಆಧಿಕ್ಯವೂ ಉಂಟಾಗುವುವು. ಅಂದರೆ ಪಂಚೇಂದ್ರಿಯ ಪ್ರಾಣಿ ಮೊದಲುಗೊಂಡು ವಿಕೇಂದ್ರಿಯ ಪ್ರಾಣಿವರೆಗೆ ಪಾಪ ಕರ್ಮವು ಅಸಂಖ್ಯಾತ ಗುಣಿತವಾಗಿ ಹೆಚ್ಚಾಗಿರುವುದು – ಏಕೇಂದ್ರಿಯ ಪ್ರಾಣಿ ಮೊದಲುಗೊಂಡು ಪಂಚೇಂದ್ರಿಯ ಪ್ರಾಣಿವರೆಗೆ ಪಾಪಕರ್ಮವು ಅಸಂಖ್ಯಾತ `ಗುಣಿತವಾಗಿ ಕಡಮೆಯಾಗಿರುವುದು. ಆದುದರಿಂದ ಆ ಪ್ರಾಣಿಗಳ ಹಿಂಸಾ ದೋಷದಲ್ಲಿಯೂ ಹೆಚ್ಚು ಕಡಮೆಯಿದೆ. ಅಂದರೆ ಏಕೇಂದ್ರಿಯ ಪ್ರಾಣಿಯ ಹಿಂಸಾದೋಷವು ಕಡಿಮೆಯಾಗಿರುವುದು, ಅದಕ್ಕಿಂತ ದ್ವೀಂದ್ರಿಯ ಪ್ರಾಣಿ ಹಿಂಸಾದೋಷವೂ, ಆದಕ್ಕಿಂತ ತೀಂದ್ರಿಯ ಪ್ರಾಣಿಹಿಂಸಾದೋಷವೂ, ಅದಕ್ಕಿಂತ ಚತುರಿಂದ್ರಿಯ ಪ್ರಾಣಿಹಿಂಸಾದೋಷವೂ, ಅದಕ್ಕಿಂತ ಪಂಚೇಂದ್ರಿಯ ಪ್ರಾಣಿಹಿಂಸಾದೋಷವೂ ಹೆಚ್ಚು ಹೆಚ್ಚಾಗಿರುವುವು. ಈ ಹಿಂಸಾದೋಷದ ನ್ಯೂನಾಧಿಕ್ಯದಲ್ಲಿ ಹಿಂಸಕನ ಕ್ರೋಧಾಧಿಭಾವಗಳ ತಾರತಮ್ಯವೂ ಕಾರಣ ವಾಗಿರುವುದು. ಅಂದ ಮೇಲೆ ಎಲ್ಲಾ ಪ್ರಾಣಿಗಳ ಹಿಂಸಾದೋಷವೂ ಸಮಾನ ಎಂದು ಹೇಳಿದರೆ ಅದು ತಪ್ಪಾಗುವುದು.
    ಮೇಲ್ಕಂಡ ತ್ರಸಸ್ಥಾವರಪ್ರಾಣಿಗಳಲ್ಲಿ ತ್ರಸಪ್ರಾಣಿಗಳ ಸಂಕಲ್ಪ ಹಿಂಸೆಯನ್ನು ಗೃಹಸ್ಥನು ಬಿಡಬಲ್ಲನು. ಹಾಗೆ ಬಿಟ್ಟರೆ ಅದು ‘ಅಹಿಂಸಾಣುವ್ರತ’ ವೆನ್ನಿಸುವುದು. ಸರ್ವಸಂಗಪರಿತ್ಯಾಗಿಯಾದ ತಪಸ್ವಿ-ಮುನಿಯು’ ‘ಆತ್ಮವತ್ಸರ್ವ ಭೂತಾನಿ’ ಎಂಬ ಭಾವನೆಯಿಂದ ತ್ರಸಪ್ರಾಣಿಗಳ ಸಂಕಲ್ಪ ಹಿಂಸೆಯನ್ನೂ ಸ್ಥಾವರಪ್ರಾಣಿಗಳ ಸಂಕಲ್ಪ ಹಿಂಸೆಯನ್ನೂ ಸಂಪೂರ್ಣವಾಗಿ, ಅಂದರೆ ಮನೋವಾಕ್ಕಾಯಗಳಿಂದಲೂ ಕೃತಕಾರಿತಾನುಮೋದನಗಳಿಂದಲೂ ಮಾಡದೆ-ಬಿಡಬಲ್ಲನು. ಹಾಗೆ ಬಿಟ್ಟರೆ ಅದು ‘ಅಹಿಂಸಾಮಹಾವ್ರತ’ ವೆನ್ನಿಸುವುದು, ದಶಲಕ್ಷಣಧರ್ಮವನ್ನು ವರ್ಣಿಸುವ ಸಂದರ್ಭ ಉತ್ತಮ ಸಂಯಮ ಧರ್ಮ’ ವೆಂದರೆ ಈ ಅಹಿಂಸಾ ಮಹಾವ್ರತರೂಪವಾದ ಪ್ರಾಣಿಸಂಯಮ ಧರ್ಮವೆಂದು ಅರ್ಥಮಾಡಬೇಕು.
    ಈ ಉತ್ತಮ ಸಂಯಮ ಧರ್ಮದ ಮತ್ತೊಂದು ಭೇದವಾದ ಇಂದ್ರಿಯ ಸ೦ಯಮ’ವೆಂದರೆ ‘ಶಬ್ದಾದಿಷ್ವಿಂದ್ರಯಾರ್ಥಷ್ ರಾಗಾನಭಿಷ್ಟಂಗ ಇಂದ್ರಿಯಸಂಯಮ’ ಎಂದು ರಾಜವಾರ್ತಿಕದಲ್ಲಿ ಹೇಳಿರುವಂತೆ ಸ್ಪರ್ಶನ ರಸನಾ ಪ್ರಾಣ ಚಕ್ಷುಃ ಶೂತ್ರಗಳೆಂಬ ಐದು ಇಂದ್ರಿಯಗಳ ವಿಷಯಗಳಾದ ಸ್ಪರ್ಶ, ರಸ, ಗಂಧ, ವರ್ಣ, ಶಬ್ದಗಳಲ್ಲಿ ಅನುರಾಗ-ಆಸಕ್ತಿಯನ್ನು ಬಿಡುವು ದಂದರ್ಥವು, ಆಮೆಯು ತನ್ನ ಮುಖವು ಅಪಾಯಕ್ಕೊಳಗಾಗದಂತೆ ಅದನ್ನು ಒಳಕ್ಕೆ ಉಪಸಂಹರಿಸಿಕೊಂಡಿದ್ದು, ಬೇಕಾದಾಗ ಈಚೆಗೆ ಬಿಡುವಂತೆ, ಯೋಗಿಯು ತನ್ನ ಇಂದ್ರಿಯಗಳು ದುರ್ವಿಷಯಗಳಲ್ಲಿ ಪ್ರವರ್ತಿಸಿ ಪಾಪ ಸಂಘಟನೆಯನ್ನು ಮಾಡಿಕೊಳ್ಳದಂತೆ ಅವುಗಳನ್ನು ತನ್ನ ಸ್ವಾಧೀನದಲ್ಲಿರಿಸಿ ಕೊಂಡಿದ್ದು, ಶಾಸ್ತ್ರಾಧ್ಯಯನ ಧರ್ಮೋಪದೇಶ ದೇವದರ್ಶನ ಮೊದಲಾದ ಸದ್ವಿಷಯಗಳಲ್ಲಿ ಅವುಗಳನ್ನು ಉಪಯೋಗಿಸಿಕೊಳ್ಳುವನು.
    ಗಾಡಿಗೆ ಹೂಡಿದ ಕುದುರೆಗಳ ಲಗಾಮನ್ನು ಬಿಗಿ ಹಿಡಿದು ಗಾಡಿಯನ್ನು ಹೊಡೆಯುವವನು ಅವುಗಳನ್ನು ನಡೆಸಿದರೆ ಅವನು ಅಭೀಷ್ಟ ಸ್ಥಾನವನ್ನು ಹೊಂದುವನು. ಹಾಗಲ್ಲದೆ ಆ ಕುದುರೆಗಳು ಸ್ವೇಚ್ಛೆಯಾಗಿ ಹೋಗುವಂತೆ ಲಗಾಮನ್ನು ಸಡಿಲಿಸಿದರೆ, ಅವುಗಳು ಹಳ್ಳ ದಿಣ್ಣೆಗಳಲ್ಲಿ ಗಾಡಿಯನ್ನು ಎಳೆದೊಯ್ದು ಕೆಡಹಿ ಅಪಾಯವನ್ನುಂಟುಮಾಡುವುವು, ಅದರಂತೆ ಶರೀರವೆಂಬ ಗಾಡಿಗೆ ಸಂಬಂಧಿಸಿರುವ ಇಂದ್ರಿಯಗಳೆಂಬ ಕುದುರೆಗಳನ್ನು ಜಿತಮನಸ್ಸೆಂಬಲಗಾಮಿನಿಂದ ಆತ್ಮನೆಂಬ ಗಾಡಿಗಾರನು ಬಿಗಿ ಹಿಡಿದು ನಡೆಸಿದರೆ ಅಭೀಷ್ಟ ವಿಷಯಗಳನ್ನು ಹೊಂದುವನು.
    ಈ ಎರಡು ಉದಾಹರಣೆಗಳಿಂದ ಸೂಚಿಸಲ್ಪಟ್ಟಿರುವಂತೆ ಸ್ಪರ್ಶನಾದಿ ಇಂದ್ರಿಯಗಳು ತಂತಮ್ಮ ವಿಷಯಗಳಲ್ಲಿ ಆಸಕ್ತಿಯಿಂದ ನಿರರ್ಗಳವಾಗಿ ಪ್ರವರ್ತಿಸದಂತೆ ಅವುಗಳನ್ನು ಸ್ವಾಧೀನದಲ್ಲಿರಿಸಿಕೊಳ್ಳುವುದೇ ಇಂದ್ರಿಯ ಸಂ ಯಮ’ವಾಗಿರುವುದು.
    ಮೇಲ್ಕಂಡ ಪ್ರಾಣಿಸಂಯಮ ಇಂದ್ರಿಯಸಂಯಮ ರೂಪವಾದ “ಉತ್ತಮಸಂಯಮ ಧರ್ಮ”ವು ಮುನಿಗಳ ದಶಲಕ್ಷಣ ಧರ್ಮಗಳಲ್ಲಿ ಆರನೆಯ ಧರ್ಮವಾಗಿದೆ. ಇಂತಹ ಪವಿತ್ರ ಧರ್ಮದ ಸಂಸ್ಕಾರವು ತಮ್ಮಲ್ಲಿ ಉಂಟಾಗಬೇಕೆಂಬ ಉದ್ದೇಶದಿಂದ, ಗೃಹಸ್ಥರೂ ಆ ಧರ್ಮವನ್ನು ಭಕ್ತಿಭಾವದಿಂದ ಪೂಜಿಸಬೇಕು. ಗೃಹಸ್ಥರ ದೇವಪೂಜಾದಿಷಟ್ಕರ್ಮಗಳಲ್ಲಿ ಈ ಸಂಯಮವೂ ಪ್ರತಿದಿನ ಅನುಷೇಯವಾದ ಒಂದು ನಿತ್ಯಕರ್ಮವಾಗಿದೆ.

    error: Jain Heritage Centres - Celebrating Jain Heritage.....Globally!