Skip to content
Home » Blogs » Jinayatra-Kannada » ಹೊಂಬುಜದ ಜೈನ ರಾಣಿಯೊಬ್ಬಳ ಅತ್ಯಾಕರ್ಷಕವಾದ ಸಲ್ಲೇಖನ ಸ್ಮಾರಕ

ಹೊಂಬುಜದ ಜೈನ ರಾಣಿಯೊಬ್ಬಳ ಅತ್ಯಾಕರ್ಷಕವಾದ ಸಲ್ಲೇಖನ ಸ್ಮಾರಕ

    – ಲೇಖನ, ಚಿತ್ರಗಳು, ವಿನ್ಯಾಸ ಮತ್ತು ಪರಿಕಲ್ಪನೆ: ನಿತಿನ್ ಹೆಚ್.ಪಿ., ಬೆಂಗಳೂರು, HPN@JHC

    ಪುರಾತನ ಜೈನ ಕೇಂದ್ರ ಸಾಂತರರ ನಾಡು ಹೊಂಬುಜವನ್ನು ಸಂದರ್ಶಿಸುವ ಹಲವು ಜನರು ಅಲ್ಲಿನ ಬೋಗಾರ ಬಸದಿಯನ್ನು ಸಂದರ್ಶಿಸುವುದು ವಿರಳ, ಬೋಗಾರ ಬಸದಿಯನ್ನು ವೀಕ್ಷಿಸಿದರೂ ಕೂಡ ಅದರ ಮುಂಭಾಗದಲ್ಲಿರುವ ಅತ್ಯಾಕರ್ಷಕವಾದ ಸಲ್ಲೇಖನ ಸ್ಮಾರಕವನ್ನು ವೀಕ್ಷಿಸುವುದು ಅತಿ ವಿರಳ. ಈ ಸಲ್ಲೇಖನ ಸ್ಮಾರಕವು/ನಿಶಧಿ ಹಲವಾರು ದೃಷ್ಟಿಗಳಿಂದ ವಿಶಿಷ್ಟವಾದುದು. ಈ ನಿಶಧಿಯಲ್ಲಿ ಎರಡು ಭಾಗಗಳಿವೆ – ಮೇಲ್ಭಾಗದಲ್ಲಿ ಶಿಲ್ಪವು, ಕೆಳಭಾಗದಲ್ಲಿ ಶಾಸನದ ಸ್ಥಳವಿದೆ, ಆಲ್ಲಿ ಯಾವುದೇ ಅಕ್ಷರಗಳನ್ನು ಕಾಣಲಾಗುವುದಿಲ್ಲ. ಅಕ್ಷರಗಳೆಲ್ಲವೂ ತೃಟಿತವಾಗಿವೆ.

    ಮೇಲ್ಭಾಗದಲ್ಲಿ ಇರುವ ಕೆತ್ತನೆಗಳಿಂದ ಇದು ರಾಣಿಯೊಬ್ಬಳ ನಿಶಧಿ ಸ್ಮಾರಕ ಎಂದು ಹೇಳಲು ಸಾಧ್ಯವಿದೆ. ಮೇಲ್ಭಾಗವನ್ನು ನಾವು ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಎಲ್ಲಕ್ಕಿಂತ ಕೆಳಭಾಗದಲ್ಲಿ ಮಧ್ಯದಲ್ಲಿ ಕುಳಿತಿರುವ ರಾಣಿ ಹಾಗೂ ಎರಡು ಬದಿಗಳಲ್ಲಿ ಪಿಂಛಿಯನ್ನು ಹಿಡಿದಿರುವ ನಾಲ್ವರು ಜೈನ ಮುನಿಗಳು ಆಕೆಗೆ ಸಲ್ಲೇಖನ ವಿಧಿಯನ್ನು ಬೋಧಿಸುತ್ತಿರುವುದನ್ನು, ಅಲ್ಲದೆ ಎರಡೂ ಬದಿಗಳಲ್ಲಿ ಮೂವರು ಚಾಮರಧಾರಿಗಳನ್ನು ಕಾಣಬಹುದು‌. ಮಧ್ಯ ಭಾಗದ ಕೆತ್ತನೆಯಲ್ಲಿ ಅಂಜಲೀ ಮುದ್ರೆಯಲ್ಲಿ ಮಂಟಪದೊಳಗೆ ಕುಳಿತಿರುವ ರಾಣಿ, ಆಕೆಯ ಎರಡು ಬದಿಗಳಲ್ಲಿ ನಾಲ್ವರು ಚಾಮರಧಾರಿಗಳಿದ್ದು, ಬಲಭಾಗದಲ್ಲಿ ನಗಾರಿಯನ್ನು ಊದುತ್ತಿರುವ ವ್ಯಕ್ತಿ, ಮೃದಂಗವನ್ನು ಹಿಡಿದಿರುವ ಇನ್ನೊಬ್ಬ ವ್ಯಕ್ತಿ ಹಾಗೂ ಎಡಭಾಗದಲ್ಲಿ ತಮಟೆಯನ್ನು ಹಿಡಿದಿರುವ ಮತ್ತೊಬ್ಬ ವ್ಯಕ್ತಿಯನ್ನು ನಾವು ಕಾಣಬಹುದು. ಮೇಲ್ಭಾಗದ ಕೆತ್ತನೆಯಲ್ಲಿ ಮಂಟಪದೊಳಗೆ ಸುಖಾಸನ ಮುದ್ರೆಯಲ್ಲಿ ಕುಳಿತಿರುವ ತೀರ್ಥಂಕರರ ವಿಗ್ರಹ, ಅವರ ತಲೆ ಮೇಲೆ ಮುಕ್ಕೊಡೆ, ಬಲಭಾಗದಲ್ಲಿ ಅಂಜಲಿ ಮುದ್ರೆಯಲ್ಲಿ ಕುಳಿತಿರುವ ರಾಣಿ, ಎಡಭಾಗದಲ್ಲಿ ಪಿಂಛಿಯನ್ನು ಹಿಡಿದು ನಿಂತಿರುವ ಜೈನ ಮುನಿಯನ್ನು ಕಾಣಬಹುದು, ಮಂಟಪದ ಎರಡೂ ಬದಿಗಳಲ್ಲಿ ಚಾಮರಧಾರಿಗಳಿದ್ದಾರೆ.
    ಈ ರೀತಿ ಅತ್ಯಾಕರ್ಷಕವಾಗಿ ಒಡವೆಗಳನ್ನು ಧರಿಸಿರುವ ಮಹಿಳೆ, ಜೈನ ಮುನಿಗಳು, ಚಾಮರಧಾರಿಗಳು, ಮಂಟಪ ಹಾಗೂ ತೀರ್ಥಂಕರ ಕೆತ್ತನೆಗಳು ಇದೊಂದು ಜೈನ ರಾಣಿಯೊಬ್ಬಳ ಸಲ್ಲೇಖನ ಸ್ಮಾರಕವೆಂದು ಹೇಳಬಹುದು.
    ಬಹುಶಃ ಅಲ್ಲಿ ಶಾಸನವೇನಾದರೂ ಉಳಿದಿದ್ದಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ತಿಳಿಯಬಹುದಾಗಿತ್ತು.

    error: Jain Heritage Centres - Celebrating Jain Heritage.....Globally!