Skip to content
Home » ಕನ್ನಡ » ವಿಚಾರ » ಹೊಂಬುಜದಲ್ಲಿ ನಿಶಧಿ ಶಾಸನ ಹಾಗೂ ಪಟ್ಟಿಕಾ ಶಾಸನಗಳು ಪತ್ತೆ

ಹೊಂಬುಜದಲ್ಲಿ ನಿಶಧಿ ಶಾಸನ ಹಾಗೂ ಪಟ್ಟಿಕಾ ಶಾಸನಗಳು ಪತ್ತೆ

    + ಹೊಂಬುಜದ ಕುಮದ್ವತಿ ನದಿ ಉಗಮ ಸ್ಥಾನದಲ್ಲಿ ದೊರೆತದ್ದು
    + 12ನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾದ ಮಹಿಳೆಯೊಬ್ಬಳಿಗೆ ಸೇರಿದ ನಿಶಧಿ ಸ್ಮಾರಕ
    + 17-18ನೇ ಶತಮಾನಕ್ಕೆ ಸೇರಿದ್ದೆಂದು ಹೇಳಲಾದ ನಾಲ್ಕು ಪಟ್ಟಿಕಾ ಶಾಸನಗಳು
    + ಶಿವಮೊಗ್ಗದ ಆರ್. ಶೇಜೇಶ್ವರ ರವರಿಂದ ಪತ್ತೆ

    ಹೊಂಬುಜ, ೩ ನವೆಂಬರ್ ೨೦೧೯: ಹೊಂಬುಜದ ಕುಮದ್ವತಿ ನದಿ ಉಗಮ ಸ್ಥಾನದ ತೀರ್ಥ ಕೋಳದ ಹತ್ತಿರ ಸಾಂತರಸರ ಕಾಲದ ಕ್ರಿ.ಶ. ೧೨ನೇ ಶತಮಾನದ ಮಹಿಳಾ ನಿಷಿಧಿ ಶಾಸನ ಹಾಗೂ ೧೭-೧೮ ನೇ ಶತಮಾನದಲ್ಲಿ ತೀರ್ಥಕೋಳ ಜೀರ್ಣೋದ್ಧಾರಕ್ಕೆ ಸಂಬಂಧಿಸಿದ ನಾಲ್ಕು ಪಟ್ಟಿಕೆ ಶಾಸನಗಳು ಪತ್ತೆಯಾಗಿವೆ.
    ಇವುಗಳನ್ನು ಆರ್. ಶೇಜೇಶ್ವರ. ಸಹಾಯಕ ನಿರ್ದೇಶಕರು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಶಿವಪ್ಪನಾಯಕ ಅರಮನೆ ಶಿವಮೊಗ್ಗ ಇವರು ಕ್ಷೇತ್ರಕಾರ್ಯ ಕೈಗೊಂಡಾಗ ಪತ್ತೆ ಮಾಡಿದ್ದಾರೆ.
    ನಿಶಧಿ ಶಾಸನದ ವಿವರ
    ನಿಶಧಿ ಶಾಸನದಲ್ಲಿ ಎರಡು ಭಾಗಗಳಿವೆ – ಶಿಲ್ಪದ ಕೆತ್ತನೆ ಇರುವÀ ಮೇಲ್ಭಾಗ ಹಾಗೂ ಶಾಸನವಿರುವ ಕೆಳಭಾಗ.     ಶಿಲ್ಪದ ಮೇಲ್ಭಾಗ ತುಂಡಾಗಿದ್ದು ಕೆಳ ಭಾಗದ ಶಿಲ್ಪದ ಬಲಭಾಗದಲ್ಲಿ ಜೈನ ಮುನಿಯು ಸಲ್ಲೇಖನ ವ್ರತ ತೆಗೆದುಕೊಳ್ಳುತ್ತಿರುವ ಮಹಿಳೆಗೆ ಬೊಧಿಸುತ್ತಿದ್ದಾರೆ, ಎಡಭಾಗದಲ್ಲಿ ಅಂಜಲಿಮುದ್ರೆಯಲ್ಲಿರುವ ಮಹಿಳೆಯ ಶಿಲ್ಪದ ಕೆತ್ತನೆಯಿದ್ದು, ಮಧ್ಯದಲ್ಲಿ ಸುಖಾಸನದಲ್ಲಿರುವ ತೀರ್ಥಂಕರ ಕೆತ್ತನೆಯಿದೆ. ಈ ಶಾಸನವು ಹಳೆಗನ್ನಡದಲ್ಲಿದ್ದು ಆರು ಸಾಲುಗಳಿಂದ ಕೂಡಿದೆ. ಲಿಪಿಯ ಆಧಾರದ ಮೇಲೆ ಇದು ೧೨ನೇ ಶತಮಾನಕ್ಕೆ ಸೇರಿದ್ದೆಂದು ಹೇಳಬಹುದು.
    ಶಾಸನದ ಪಾಠ
    ೧. ಶ್ರೀ ಮತು ಪರಮ ಗಂಭೀರಸ್ಯ [ದ್ವಾದಾಮೋಘ]
    ೨. ಜಿಯಾ ತ್ರೆಲೋಕ್ಯನಾಥಸ್ಯ ಸಾಸನ [ ಜಿನ ಸಾಸನ ] ಶ್ರೀ
    ೩. ಮನ್ಮಮಹಾಮಣ್ಡಳೇಸ್ವರ ಶ್ರೀ ಬೊಂಮ
    ೪. ಸಾನ್ತಿಶ ದೇವರ . ೪ ರಾಜನ
    ೫. ಶ್ರೀ ಮ ಪಿರಿಯ . . ದೇವಳಿಗೆ
    ೬. . ದ
    ಶಾಸನದ ಸಾರಾಂಶ
    ಈ ಶಾಸನವು ಆರಂಭದಲ್ಲಿ ಜೈನರ ಪ್ರಾರ್ಥನ ಶ್ಲೋಕವನ್ನು ಹೊಂದಿದ್ದು ನಂತರ ಮಹಾ ಮಂಡಳೇಶ್ವರನಾದ ಸಾಂತರಸರ ಶ್ರೀ ಬೊಂಮ ಸಾನ್ತಿ ದೇವನ ಆಳ್ವಿಕೆಯಲ್ಲಿ ಮಹಿಳೆಯು ಸಲ್ಲೇಖನ ವ್ರತ ಕೈಗೊಂಡು ನಿ಼ಷಿಧಿ ಹೋಗಿರುವುದನ್ನು ಉಲ್ಲೇಖಿಸುತ್ತದೆ. ಇಲ್ಲಿ ಶ್ರೀ ಬೊಂಮ ಸಾನ್ತಿ ದೇವರಸನು ಕ್ರಿ.ಶ. ೧೨ ನೇ ಶತಮಾನದ ಕಲ್ಯಾಣ ಚಾಲುಕ್ಯರ ಸಾಂಮತರಸನಾಗಿದ್ದನು ಎಂದು ತಿಳಿಯಬಹುದಾಗಿದೆ.  ಆದರೆ ಕ್ರಿ.ಶ. ೧೩ ನೇ ಶತಮಾನದ ಬೊಂಮರಸ ಹಾಗೂ ಈ ಬೊಂಮ ಸಾನ್ತರಸ ಬೇರೆ ಇರಬಹುದೇ ಎಂಬುದು ಸೂಕ್ಷ್ಮ ಅಧ್ಯಯನ ಮಾಡಬೇಕಾಗಿದೆ. ಹಾಗೂ ಇಲ್ಲಿ ಮಹಿಳೆಯು ಯಾರು ಎಂಬುದು ತಿಳಿದು ಬಂದಿರುವುದಿಲ್ಲ ಬಹುಶಃ ಪಿರಿಯಮ್ಮ ಅಥವಾ ಪಿರಿಯರಸಿ ಇರಬಹುದು ಎಂದು ತಿಳಿಯಬಹುದಾಗಿದೆ.
    ನಾಲ್ಕು ಪಟ್ಟಿಕೆ ಶಾಸನಗಳು
    ಕ್ರಿ.ಶ. ೧೨ ನೇ ಶತಮಾನದಲ್ಲಿ ಸಾಂತರಸರಿಂದ ಕುಮದ್ವತಿ ನದಿಯ ಉಗಮವಾದ ತೀರ್ಥ ಕೋಳವು ನಿರ್ಮಾಣವಾಗಿತ್ತು. ಆದರೆ ಈಗ ಈ ಕೋಳದ ಮೆಟ್ಟಿಲುಗಳಲ್ಲಿ ನಾಲ್ಕು ಚಿಕ್ಕ ಪಟ್ಟಿಕೆಗಳಿಂದ ಕೂಡಿರುವ ಶಾಸನಗಳು ಪತ್ತೆಯಾಗಿದ್ದು ಇವುಗಳು ವಿಜಯನಗರದ ನಂತರದ ಕಾಲದವುಗಳಾಗಿದ್ದು ಇವು ಕೆಲವು ಸಂಖ್ಯೆಗಳನ್ನು ಕೆಲವು ಲಿಪಿಗಳನ್ನು ಹೊಂದಿದ್ದು ಇವುಗಳ ಆಧಾರದ ಮೇಲೆ ಈ ಕೊಳವು ೧೭-೧೮ ನೇ ಶತಮಾನದಲ್ಲಿ ಜೀರ್ಣೋದ್ಧಾರವಾಗಿರುವುದು ಸ್ಪಷ್ಟವಾಗಿ ತಿಳಿದು ಬರುತ್ತದೆ.
    ಶಾಸನ ಪತ್ತೆ ಹಚ್ಚುವಲ್ಲಿ ಸಹಕರಿಸಿದ ಚಂದನ ಟೀವಿಯ ನಾಗೇಶ್ ಹಾಗೂ ಶಾಸನ ಓದಿಕೊಟ್ಟ ಡಾ. ಜಗದೀಶ, ಸರ್ವಮಂಗಳ, ರವಿಕುಮಾರ ಇವರಿಗೆ. ಶೇಜೇಶ್ವರ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
    – ಜೈನ್ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ (ಚಿತ್ರಗಳು:ಆರ್ ಶೇಜೇಶ್ವರ, ಶಿವಮೊಗ್ಗ)

    error: Jain Heritage Centres - Celebrating Jain Heritage.....Globally!