Skip to content
Home » ಕನ್ನಡ » ಸುದ್ದಿ-ಸಮಾಚಾರ » ಆತ್ಮ ಕಲ್ಯಾಣದ ಜತೆಗೆ ಸಮಾಜ ಕಲ್ಯಾಣ ಮಾಡುವುದು ಮಠಾಧೀಶರ ಕರ್ತವ್ಯ – ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಆತ್ಮ ಕಲ್ಯಾಣದ ಜತೆಗೆ ಸಮಾಜ ಕಲ್ಯಾಣ ಮಾಡುವುದು ಮಠಾಧೀಶರ ಕರ್ತವ್ಯ – ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

    ಶ್ರವಣಬೆಳಗೊಳ, 8 ಡಿಸೆಂಬರ್ 2019:  ಆತ್ಮ ಕಲ್ಯಾಣದ ಜತೆಗೆ ಸಮಾಜ ಕಲ್ಯಾಣ ಮಾಡುವುದು ಮಠಾಧೀಶರ ಕರ್ತವ್ಯವಾಗಿದ್ದು, ಸರ್ವಧರ್ಮ ಸಮನ್ವಯತೆ ಸಾಧಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಹೇಳಿದರು.
    ಶ್ರವಣಬೆಳಗೊಳದ ಚಾವುಂಡರಾಯ ಸಭಾ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸ್ವಾಮೀಜಿಯವರ 50 ನೇ ವರ್ಷದ ದೀಕ್ಷಾ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಆಶಿರ್ವಚನ ನೀಡಿ ಮಾತನಾಡಿದ ಅವರು, ರಾಜಕೀಯದಿಂದ ಮಠಾಧಿಪತಿಗಳು ದೂರ ಇರಬೇಕು. ಆಗ ಮಠ-ಮಾನ್ಯಗಳು ಸಮಾಜಮುಖಿಯಾಗಿರುತ್ತವೆ ಎಂದರು.
    ತುಂಬಾ ಕಷ್ಟದ ಸಂದರ್ಭದಲ್ಲಿ ಈ ಜವಾಬ್ದಾರಿ ವಹಿಸಿಕೊಂಡು ಶ್ರದ್ಧೆ, ಭಕ್ತಿ ಹಾಗೂ ಗುರುಗಳ ಆಶೀರ್ವಾದದಿಂದ ಸಮಾಜ ನಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಸೇವೆ ಸಲ್ಲಿಸುತ್ತಿದ್ದೇವೆ. 50 ವರ್ಷಗಳು 50 ದಿನಗಳಂತೆ ಕಳೆದುಹೋಗಿವೆ. ಅನೇಕ ಯೋಜನೆಗಳು ಇನ್ನೂ ಸಾಕಾರಗೊಳ್ಳಬೇಕಾಗಿರುವುದರಿಂದ ನಮಗೆ ತೃಪ್ತಿ ತಂದಿಲ್ಲ. ಸಮಾಜಕ್ಕೆ ಇನ್ನೂ ಹಲವಾರು ಕೊಡುಗೆಗಳನ್ನು ನೀಡಿ ಉತ್ತಮ ಕೆಲಸ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.
    ಧರ್ಮ ಎಂದರೆ ಕೇವಲ ಪೂಜೆ ಮತ್ತು ಭಕ್ತಿ ಮಾತ್ರವಲ್ಲ. ಪರೋಪಕಾರ ಹಾಗೂ ಸಮಾಜಕ್ಕೆ ಒಳಿತು ಮಾಡುವುದೇ ನಿಜವಾದ ಧರ್ಮ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ಕಾರ್ಯೋನ್ಮುಖರಾಗಿದ್ದೇವೆ. ನಾವು ಭಕ್ತಾಧಿಗಳು ನೀಡುವ ಕಾಣಿಕೆಯನ್ನು ಮಕ್ಕಳ ಆಸ್ಪತ್ರೆಯ ಉಚಿತ ಚಿಕಿತ್ಸೆಗಾಗಿ ನೀಡುತ್ತಿದ್ದೇವೆ ಎಂದರು.
    ಧರ್ಮ ಮತ್ತು ವಿಜ್ಞಾನ ಎರಡೂ ಸಮನ್ವಯತೆಯಿಂದ ಮೇಳೈಸಿಕೊಂಡು ಮುಂದುವರಿಯಬೇಕು. ಧರ್ಮವು ಆತ್ಮಶುದ್ಧಿ, ಮನಶುದ್ಧಿ ಮತ್ತು ಅಂತಃಕರಣ ಶುದ್ಧಿಗೆ ಸಾಕಾರವಾದರೆ, ವಿಜ್ಞಾನ ಹೊಸ ಹೊಸ ಆವಿಷ್ಕಾರಗಳ ಸಾಧನೆಗೆ ಪೂರಕವಾಗಿದೆ.
    ಅಹಿಂಸಾ ಪರಮೋ ಧರ್ಮ ಎಂಬ ಧ್ಯೇಯದೊಂದಿಗೆ ಎಲ್ಲಕಡೆ ಅಹಿಂಸೆ ಆಚರಣೆ ಮೂಲಕ ಶಾಂತಿ ನೆಲೆಸಬೇಕು. ದೀಕ್ಷೆ ಇಲ್ಲದೆ ಮೋಕ್ಷ ಸಾಧ್ಯವಿಲ್ಲ. ಆತ್ಮವಿಶುದ್ಧಿಯೇ ದೀಕ್ಷೆ ಎಂದು ತಿಳಿಸಿದರು.
    ಮಾಜಿ ಕೇಂದ್ರ ಸಚಿವ ಡಾ. ಎಂ.ವೀರಪ್ಪ ಮೊಯಿಲಿ ಮಾತನಾಡಿ, ಶ್ರೀಗಳ ಸಾಹಿತ್ಯ ಅಭಿರುಚಿ ಬಹುವಾದುದು, 2018 ರ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಬಾಹುಬಲಿ ದಿಗ್ವಿಜಯಂ ಗ್ರಂಥ ರಚನೆ ಮಾಡಲು ನಮಗೆ ಸ್ವಾಮೀಜಿಯವರೇ ಪ್ರೇರಣೆ ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ಸಮಸ್ತ ಭಟ್ಟಾರಕ ಸ್ವಾಮೀಜಿಗಳು, ಧರ್ಮಸ್ಥಳದ ಸುರೇಂದ್ರ ಹೆಗ್ಗಡೆ, ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ವಿಧಾನ ಪರಿಷತ್ ಮಾಜಿ ಸಚಿವ ಗೊ.ಮಧುಸೂದನ್, ಕಸಾಪ ಅಧ್ಯಕ್ಷ ಮನು ಬಳಿಗಾರ್, ಬಿಜೆಪಿ ತಾಲೂಕು ಅಧ್ಯಕ್ಷ ಶಿವನಂಜೇಗೌಡ, ಕಾಂಗ್ರೆಸ್ ಮುಖಂಡ ಜತ್ತೇನಹಳ್ಳಿ ರಾಮಚಂದ್ರ, ಜೈನ ಸಮಾಜದ ಮುಖಂಡರು ಹಾಗೂ ಇತರರಿದ್ದರು. – ಜೈನ್ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ

    error: Jain Heritage Centres - Celebrating Jain Heritage.....Globally!