Skip to content
Home » ಕನ್ನಡ » ಸುದ್ದಿ-ಸಮಾಚಾರ » ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಸ್ವಾಮೀಜಿಯವರ ಪಟ್ಟಾಭಿಷೇಕ ಮಹೋತ್ಸವವು 27ನೇ ಮಾರ್ಚ್ 2023 ರಂದು ಸಂಪನ್ನ

ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಸ್ವಾಮೀಜಿಯವರ ಪಟ್ಟಾಭಿಷೇಕ ಮಹೋತ್ಸವವು 27ನೇ ಮಾರ್ಚ್ 2023 ರಂದು ಸಂಪನ್ನ

    ಶ್ರವಣಬೆಳಗೊಳ (ಹಾಸನ ಜಿಲ್ಲೆ, ಕರ್ನಾಟಕ), 27 ಮಾರ್ಚ್ 2023: ಜಗದ್ಗುರು ಕರ್ಮಯೋಗಿ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಂದ ನೇಮಕಗೊಂಡು, ವಿಚಾರಪಟ್ಟ ಕ್ಷುಲ್ಲಕ ದೀಕ್ಷೆಯನ್ನು ಪಡೆದಿದ್ದ ಸ್ವಸ್ತಿಶ್ರೀ ಆಗಮಕೀರ್ತಿ ಸ್ವಾಮೀಜಿಯವರ ಪಟ್ಟಾಭಿಷೇಕ ಮಹೋತ್ಸವವು ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಮಠದ ಬಸದಿಯಲ್ಲಿ ಜರುಗಿತು. ಎಲ್ಲಾ ಜೈನ ಮಠಗಳ ಮಠಾಧಿಪತಿಗಳು ಮತ್ತು ನೂರಾರು ಭಕ್ತರ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಸಂಪನ್ನಗೊಂಡಿತು.

    ಮಂಗಳ ಸ್ನಾನ – ಮುಂಜಾನೆ ಸುಮಾರು 5.00 ಗಂಟೆಗೆ ನಿಯೋಜಿತ ಭಟ್ಟಾರಕರಾದ ಶ್ರೀ ಆಗಮಕೀರ್ತಿಜಿಯವರ ಮಂಗಳ ಸ್ನಾನದೊಂದಿಗೆ ಪಟ್ಟಾಭಿಷೇಕದ ವಿಧಿ-ವಿಧಾನಗಳು ಪ್ರಾರಂಭವಾದವು, ನಂತರ ಜಿನ ಮಂದಿರ ದರ್ಶನ, ಪಟ್ಟಬಂಧ, ಮಂಗಳ ಕಲಶ ಸ್ಥಾಪನೆ, ಜಪ, ಧ್ಯಾನ ಮತ್ತು ಸಕಲೀಕರಣ ವಿಧಿಗಳು ನೆರವೇರಿದವು.

    ಇದಾದ ನಂತರ ಬೆಳಿಗ್ಗೆ 6.30 ರಿಂದ ಹಲವು ಪೂಜಾ-ವಿಧಿ ವಿಧಾನಗಳನ್ನು ಮಾಡಲಾಯಿತು – ಚಂದ್ರನಾಥ ಸ್ವಾಮಿಗೆ ನವಕಲಶ ಅಭಿಷೇಕ, ಮಹಾಶಾಂತಿ ಮಂತ್ರ ಪಠಣ, ಶಾಂತಿಧಾರ. ಶ್ರವಣಬೆಳಗೊಳದ ಎಲ್ಲಾ ಜಿನಾಲಯಗಳಲ್ಲಿ ವಿಶೇಷ ಅಭಿಷೇಕ ಪೂಜೆ, ಯಕ್ಷಿ ಕೂಷ್ಮಾಂಡಿನಿದೇವಿಗೆ ಪಂಚಾಮೃತ ಅಭಿಷೇಕ ಪೂಜೆ ನಂತರ ಷೋಡಶೋಪಚಾರದೊಂದಿಗೆ ಮಹಾಮಂಗಳಾರತಿ ಜರುಗಿತು.

    ನಂತರ 9:00 ಗಂಟೆಯಿಂದ ಭಟ್ಟಾರಕರ ಪೀಠದ ಪೂಜೆ ಹಾಗೂ ಪಟ್ಟಾಭಿಷೇಕ ಪೂರ್ವಕ್ರಿಯೆಗಳನ್ನು ನಡೆಸಲಾಯಿತು. ಇದೇ ವೇಳೆಗೆ ಎಲ್ಲಾ ಭಟ್ಟಾರಕರು ಮತ್ತು ಗಣ್ಯರು ಮಠದ ಬಸದಿಯೊಳಗೆ ಸೇರಿದರು.

    ಶ್ರೀ ಆಗಮಕೀರ್ತಿಜಿಯವರನ್ನು ಇತರ ಭಟ್ಟಾರಕರೊಂದಿಗೆ ಶ್ರೀ ಮಠದ ಭಕ್ತ ಕುಟುಂಬಗಳಲ್ಲೊಂದರ ಶ್ರಾವಕರಾದ ಶ್ರೀ ಸುದರ್ಶನರಿಂದ ಮಠದ ಬಸದಿಯೊಳಗೆ ಕರೆದೊಯ್ಯಲಾಯಿತು. ಶ್ರೀ ಆಗಮಕೀರ್ತಿಯವರು ಚಂದ್ರನಾಥ ತೀರ್ಥಂಕರರು, ಮಹಾಮಾತೆ ಕೂಷ್ಮಾಂಡಿನಿ ಅಮ್ಮನವರ ದರ್ಶನ ಪಡೆದು ತಮ್ಮ ಗುರುಗಳಾದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಭಾವಚಿತ್ರಕ್ಕೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದರು. ಈ ಸಮಯದಲ್ಲಿ ಅರ್ಚಕರು ಸಿಂಹಾಸನದ ಬಳಿ ಬೆಳ್ಳಿ ಕಮಂಡಲ, ಚಿನ್ನದ ಪಾದುಕೆಗಳು ಮತ್ತು ಚಿನ್ನದ ಪಿಂಚಿಯನ್ನು ತಂದರು.

    ಕಮಂಡಲ, ಪಾದುಕೆಗಳು ಮತ್ತು ಪಿಂಚಿಗಳು ಹಿಂದಿನ ಭಟ್ಟಾರಕರಿಂದ ಆನುವಂಶಿಕವಾಗಿ ಬಂದವು ಮತ್ತು ಹಲವಾರು ಶತಮಾನಗಳಿಗಿಂತಲೂ ಹಳೆಯದು ಎಂದು ಹೇಳಲಾಗುತ್ತದೆ. ಆಗಮಕೀರ್ತಿಯವರನ್ನು ಶ್ರೀ ಸುದರ್ಶನರು ಸಿಂಹಾಸನದ ಸುತ್ತಲಿನ ಪ್ರದೇಶಕ್ಕೆ ಕರೆದೊಯ್ದರು. ಆಗಮಕೀರ್ತಿಜಿಯವರು ಅರ್ಚಕರೊಂದಿಗೆ ಸಿಂಹಾಸನಕ್ಕೆ ಪೂಜೆ ಸಲ್ಲಿಸಿದರು. ಪೂಜೆಯಲ್ಲಿ ಅರ್ಚಕರಿಂದ ಅಷ್ಟವಿಧಾರ್ಚನೆ, ಆರತಿ ನಡೆಯಿತು. ಈ ಎಲ್ಲಾ ವಿಧಿವಿಧಾನಗಳು ಮುಗಿಯುವ ವೇಳೆಗೆ ಸುಮಾರು 9:21 ಗಂಟೆಯಾಗಿತ್ತು.

    ಅರಿಹಂತಗಿರಿ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದರು, ಪಟ್ಟಾಭಿಷೇಕದ ಶುಭ ಮುಹೂರ್ತ ಬಂದಿದೆ ಎಂದು ಘೋಷಿಸಿದರು. ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಪೀಠದ ಸಿಂಹಾಸನದ ಮುಂದಿನ ಉತ್ತರಾಧಿಕಾರಿಯಾಗಿ ಶ್ರೀ ಆಗಮನಕೀರ್ತಿಜಿಯವರನ್ನು ಹೊಂದಲು ಅವರು ಭಟ್ಟಾರಕರು ಮತ್ತು ಶ್ರಾವಕರ ಒಪ್ಪಿಗೆಯನ್ನು ಕೇಳಿದರು. ಎಲ್ಲಾ ಭಟ್ಟಾರಕರು ಮತ್ತು ಶ್ರಾವಕರು ಸಕಾರಾತ್ಮಕವಾಗಿ ಉತ್ತರಿಸಿದರು.

    ಪಟ್ಟಾಭಿಷೇಕ ಕ್ರಿಯೆಗಳು – ಸರಿಯಾಗಿ 9:21 ಗಂಟೆಗೆ ಶ್ರೀ ಸುದರ್ಶನರು ಆಗಮಕೀರ್ತಿಯವರನ್ನು ಅಲಂಕೃತ ಸಿಂಹಾಸನಕ್ಕೆ ಕರೆದೊಯ್ದರು. ಆ ಸಮಯದಿಂದ ಶ್ರೀ ಆಗಮಕೀರ್ತಿ ಯವರನ್ನು ಸ್ವಸ್ತಿ ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಎಂದು ಕರೆಯಲಾಯಿತು. ಚಾರುಕೀರ್ತಿ ಸ್ವಾಮೀಜಿಯವರು ಸಿಂಹಾಸನದ ಮೇಲೆ ಕುಳಿತು ಪ್ರಾರ್ಥನೆ ಸಲ್ಲಿಸಿದಾಗ ಪುರೋಹಿತರು ಪವಿತ್ರ ಮಂತ್ರಗಳನ್ನು ಪಠಿಸಲು ಪ್ರಾರಂಭಿಸಿದರು. ಸುತ್ತಲಿನ ಭಕ್ತರ ’ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕೀ ಜೈ’ ಎಂದು ಘೋಷಣೆಗಳು ಮುಗಿಲು ಮುಟ್ಟಿದವು. ಇದಲ್ಲದೆ, ಶ್ರೀ ಸುದರ್ಶನರು ಶ್ರೀ ಚಾರುಕೀರ್ತಿ ಸ್ವಾಮೀಜಿಯವರಿಗೆ ಪ್ರಾಚೀನ ಕಮಂಡಲ, ಪಿಂಚಿ, ಚಿನ್ನದ ಸರ, ಬೆರಳಿನ ಉಂಗುರ ಮತ್ತು 108 ಮಣಿಗಳ ಸ್ಪಟಿಕ (ಸ್ಫಟಿಕ ಹಿಮ) ಸರವನ್ನು ಅರ್ಪಿಸಿದರು. ಚಿನ್ನದ ಸರವನ್ನು ಚಾರುಕೀರ್ತಿ ಸ್ವಾಮೀಜಿಯವರಿಗೆ ತೊಡಿಸಲಾಯಿತು, ಬೆರಳಿನ ಉಂಗುರವನ್ನು ಅವರ ಬಲಗೈಯ ಉಂಗುರದ ಬೆರಳಿಗೆ ತೊಡಿಸಲಾಯಿತು. ಇದಾದ ನಂತರ ಚಾರುಕೀರ್ತಿ ಸ್ವಾಮೀಜಿಯವರು ಚಿನ್ನದ ಪಾದುಕೆಗಳಿಗೆ ಪೂಜೆ ಸಲ್ಲಿಸಿದರು. ನಂತರ ಅವರು ಬಲಗೈಯಲ್ಲಿ ಸ್ಫಟಿಕ ಮಣಿಗಳು ಮತ್ತು ಚಿನ್ನದ ಪಿಂಚಿಯನ್ನು ಹಿಡಿದು ಶ್ರವಣಬೆಳಗೊಳದ ಭಟ್ಟಾರಕರಾಗಿ ದೀಕ್ಷೆ ಪಡೆದ ನಂತರ ತಮ್ಮ ಮೊದಲ ಜಪವನ್ನು ಮಾಡಿದರು. ಅಷ್ಟರಲ್ಲಿ ಪುರೋಹಿತರು ಪವಿತ್ರ ಸ್ತೋತ್ರಗಳನ್ನು ಪಠಿಸಿ ಚಿನ್ನದ ಪಾದುಕೆಗಳಿಗೆ ಕಲಶ ಅಭಿಷೇಕ ಮತ್ತು ಆರತಿ ಮೂಲಕ ಪೂಜೆ ಸಲ್ಲಿಸಿದರು ಮತ್ತು ಪಟ್ಟಾಭಿಷೇಕಕ್ಕೆ ಸಂಬಂಧಿಸಿದ ಎಲ್ಲಾ ವಿಧಿ/ಪೂಜೆಗಳನ್ನು ಮುಕ್ತಾಯಗೊಳಿಸಿದರು.

    ಮೊದಲ ಧರ್ಮೋಪದೇಶ – ಪರಮಪೂಜ್ಯ ಶ್ರೀ ಚಾರುಕೀರ್ತಿ ಸ್ವಾಮೀಜಿಯವರು ಈ ಕಾರ್ಯಕ್ರಮದ ನಂತರ ತಮ್ಮ ಮೊದಲ ಧರ್ಮೋಪದೇಶವನ್ನು ಮಠದ ಬಸದಿಯ ಪವಿತ್ರ ಭಟ್ಟಾರಕ ಪೀಠದಿಂದ ನೀಡಿದರು.

    ಮೊದಲ ದರ್ಶನ – ನಂತರ ಶ್ರೀ ಚಾರುಕೀರ್ತಿ ಸ್ವಾಮೀಜಿಯವರು ಮಠದ ಬಸದಿಯಲ್ಲಿ ತೀರ್ಥಂಕರ ಚಂದ್ರನಾಥ ಮತ್ತು ಯಕ್ಷಿ ಕೂಷ್ಮಾಂಡಿನಿ ದೇವಿಯ ದರ್ಶನ ಪಡೆದು ನಂತರ ಶ್ರವಣಬೆಳಗೊಳದ ಭಂಡಾರಿ ಬಸದಿಗೆ ತೆರಳಿದರು. ಅವರು ಭಟ್ಟಾರಕ ಸಿಂಹಾಸನವನ್ನು ವಹಿಸಿದ ನಂತರ ಮೊದಲ ಬಾರಿಗೆ ಭಂಡಾರ ಬಸದಿಯಲ್ಲಿ ಎಲ್ಲಾ 24 ತೀರ್ಥಂಕರರ ವಿಗ್ರಹಗಳ ಮೊದಲ ಪವಿತ್ರ ದರ್ಶನವನ್ನು ಪಡೆದರು.

    ಪಲ್ಲಕ್ಕಿ ಉತ್ಸವ – ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರವಣಬೆಳಗೊಳದ ಎಲ್ಲಾ ಪ್ರಮುಖ ರಸ್ತೆಗಳಿಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಮೆರವಣಿಗೆಯ ಎರಡೂ ಬದಿಯ ಮನೆಗಳ ಜನರು ರಸ್ತೆಗಳನ್ನು ರಂಗೋಲಿಯಿಂದ ಅಲಂಕರಿಸಿದರು. ಚಾರುಕೀರ್ತಿ ಸ್ವಾಮೀಜಿಯವರ ಪಲ್ಲಕ್ಕಿಯು ಮನೆಗಳ ಮುಂದೆ ಬಂದಾಗ ಮನೆಯವರು ತೆಂಗಿನಕಾಯಿ, ಹಣ್ಣುಗಳು ಮತ್ತು ಹಣವನ್ನು ತಟ್ಟೆಯಲ್ಲಿ ಅರ್ಪಿಸಿ ಚಾರುಕೀರ್ತಿ ಸ್ವಾಮೀಜಿಯವರ ಆಶೀರ್ವಾದವನ್ನು ಕೋರಿದರು. ಚಾರುಕೀರ್ತಿಯವರು ಬಣ್ಣದ ಅಕ್ಕಿಯನ್ನು ಎರಚುವ ಮೂಲಕ ಮತ್ತು ಪವಿತ್ರ ಸ್ತೋತ್ರಗಳನ್ನು ಪಠಿಸುವ ಮೂಲಕ ಆಶೀರ್ವಾದ ನೀಡಿದರು.

    ಧಾರ್ಮಿಕ ಸಭೆ – ಪಲ್ಲಕ್ಕಿ ಉತ್ಸವದ ನಂತರ ಚಾವುಂಡರಾಯ ಮಂಟಪದಲ್ಲಿ ಧಾರ್ಮಿಕ ಸಭೆ ಆಯೋಜಿಸಲಾಗಿತ್ತು. ಎಲ್ಲಾ ಭಟ್ಟಾರಕ ಸ್ವಾಮೀಜಿಗಳು ಮತ್ತು ಸಹಸ್ರಾರು ಭಕ್ತರು ಸಭೆಯಲ್ಲಿ ಭಾಗವಹಿಸಿದ್ದರು.

    – ಡಾ.ಹೆಚ್.ಎ.ಪಾರ್ಶ್ವನಾಥ್ ಮತ್ತು ನಿತಿನ್ ಹೆಚ್.ಪಿ., ಬೆಂಗಳೂರು; ಜೈನ್ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ

    error: Jain Heritage Centres - Celebrating Jain Heritage.....Globally!