Skip to content
Home » ಕನ್ನಡ » ಸುದ್ದಿ-ಸಮಾಚಾರ » ಹುಬ್ಬಳ್ಳಿಯಲ್ಲಿ ೧೨ನೆಯ ಶತಮಾನದ ಹೊಸ ಜೈನಶಾಸನ ಬೆಳಕಿಗೆ

ಹುಬ್ಬಳ್ಳಿಯಲ್ಲಿ ೧೨ನೆಯ ಶತಮಾನದ ಹೊಸ ಜೈನಶಾಸನ ಬೆಳಕಿಗೆ

    • ಆದಿನಾಥ ತೀರ್ಥಂಕರರೊಂದಿಗೆ ಚವ್ವೀಸ ತೀರ್ಥಂಕರರನ್ನು ಹೊಂದಿರುವ ವಿಗ್ರಹದ ಪಾದಪೀಠದಲ್ಲಿ ಶೋಧಿಸಲಾದ ೧೨ನೇ ಶತಮಾನಕ್ಕೆ ಸೇರಿದ ಶಾಸನ.
    • ಶಾಸನದಿಂದ ತಿಳಿದು ಬರುವ ಅಂಶಗಳು – ಜೈನಧರ್ಮದ ಯಾಪನೀಯ ಸಂಘದ ಕಾರೇಯಗಣಕ್ಕೆ ಸಂಬಂಧಿಸಿದ ನಗರಜಿನಾಲಯದ ಬಸದಿಗೆ ಅದೇ ಯಾಪನೀಯ ಸಂಘ ವೃಕ್ಷಮೂಲಗಣದ ಅನುಯಾಯಿ ಪದುಮಸಿರಿಯವೆ
      ಎಂಬುವಳು “ಆಣತಿ ನೋಂಪಿ”ಯನ್ನು ಆಚರಿಸಿ ಉದ್ಯಾಪನೆ ಮಾಡಿದ ನಿಮಿತ್ತ ಸುಗಂಧವರ್ತ್ತಿಯ ನಗರಜಿನಾಲಯದಲ್ಲಿ ಪ್ರತಿಷ್ಠಾಪಿಸಲು ಚವ್ವೀಸÀ (೨೪) ತೀರ್ಥಂಕರ ಪ್ರತಿಮೆಯನ್ನು ಮಾಡಿಸಿಕೊಟ್ಟದ್ದಾಗಿ ಶಾಸನದಲ್ಲಿ
      ಶ್ರುತಪಡಿಸಲಾಗಿದೆ.
    • ಹೊಂಬುಜದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸೂಚನೆಯಂತೆ ಹುಬ್ಬಳ್ಳಿಯ ದಿ. ಮಹಾವೀರ ಸೂಜಿಯವರ ಮನೆಯಲ್ಲಿ ಶೋಧಿಸಲಾದ ಶಾಸನ.
    • ಸಂಶೋಧಕ ಹರಿಹರದ ಡಾ.ರವಿಕುಮಾರ ಕೆ. ನವಲಗುಂದರವರಿಗೆ ಕ್ಷೇತ್ರಕಾರ್ಯದ ಸಮಯದಲ್ಲಿ ದೊರೆತ ಶಾಸನ.

    ಹುಬ್ಬಳ್ಳಿ, ಆಗಸ್ಟ್ ೮, ೨೦೨೨: ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತೀ ಭಟ್ಟಾರಕ ಪಟ್ಟಾಚಾರ್ಯ್ಯವರ್ಯ್ಯ ಜೈನಮಠ ಹೊಂಬುಜ., ಇವರು ಕೊಟ್ಟ ಮಾಹಿತಿ ಮೇರೆಗೆ ಇತ್ತೀಚೆಗೆ ಕ್ಷೇತ್ರಕಾರ್ಯಕ್ಕೆಂದು ಹುಬ್ಬಳ್ಳಿಗೆ ಹೋದಾಗ ಹುಬ್ಬಳ್ಳಿಯ ದೇಶಪಾಂಡೆ ನಗರದ ನಿವಾಸಿ ಮತ್ತು ನಗರದ ಗಣ್ಯ ವರ್ತಕರು ಆದ ಶ್ರೀ ಅಮರ್ ಮಹಾವೀರ ಸೂಜಿ ಇವರ ಮನೆಯಲ್ಲಿ ಒಂದು ಶಾಸನಸಹಿತ ಜಿನಬಿಂಬ ಶೋಧಿತವಾಗಿದೆ. ೧೧ ಇಂಚು ಅಗಲ, ೯.೫ ಇಂಚು ಉದ್ದವಿರುವ ಈ ಜಿನಬಿಂಬವು ಕಪ್ಪು ಅಮೃತಶಿಲೆಯಲ್ಲಿ ರಚನೆಯಾಗಿದೆ. ೧೧-೧೨ ನೆಯ ಶತಮಾನದ ಲಿಪಿಯ ಆರು ಸಾಲಿನ ಶಾಸನವು ಮೂರ್ತಿಯ ಪಾದಪೀಠದಲ್ಲಿದ್ದು, ಮೂರ್ತಿ ರಚನೆಯಾದ ಹಿನ್ನೆಲೆಯನ್ನು ಸಾದರಪಡಿಸುತ್ತದೆ. ಶಾಸನ ಮತ್ತು ಮೂರ್ತಿ ;ಅಲ್ಲಲ್ಲಿ ತ್ರುಟಿತವಾಗಿದ್ದರೂ ಶಾಸನದ ಮುಖ್ಯ ವಿವರಗಳು ಲಭ್ಯವಾಗಿವೆ. ಇದುವರೆಗೂ ಈ ಶಾಸನ ಎಲ್ಲಿಯೂ ವರದಿ ಮತ್ತು ಪ್ರಕಟವಾಗಿಲ್ಲದ್ದರಿಂದ ಇದು ಒಂದು ಹೊಸ ಶಾಸನವಾಗಿದೆ.

    ಹುಬ್ಬಳ್ಳಿಯಲ್ಲಿ ೧೨ನೆಯ ಶತಮಾನದ ಹೊಸ ಜೈನಶಾಸನ ಬೆಳಕಿಗೆ
    ಹುಬ್ಬಳ್ಳಿಯಲ್ಲಿ ೧೨ನೆಯ ಶತಮಾನದ ಹೊಸ ಜೈನಶಾಸನ ಬೆಳಕಿಗೆ

    ಶಾಸನ ಸಾರ – ಜೈನಧರ್ಮದ ಯಾಪನೀಯ ಸಂಘದ ಕಾರೇಯಗಣಕ್ಕೆ ಸಂಬಂಧಿಸಿದ ನಗರಜಿನಾಲಯದ ಬಸದಿಗೆ ಅದೇ ಯಾಪನೀಯ ಸಂಘ ವೃಕ್ಷಮೂಲಗಣದ ಅನುಯಾಯಿ ಪದುಮಸಿರಿಯವೆ ಎಂಬುವಳು “ಆಣತಿ ನೋಂಪಿ”ಯನ್ನು ಆಚರಿಸಿ ಉದ್ಯಾಪನೆ ಮಾಡಿದ ನಿಮಿತ್ತ ಸುಗಂಧವರ್ತ್ತಿಯ ನಗರಜಿನಾಲಯದಲ್ಲಿ ಪ್ರತಿಷ್ಠಾಪಿಸಲು ಚೌವೀಸ(೨೪) ತೀರ್ತ್ಥಂಕರ ಪ್ರತಿಮೆಯನ್ನು ಮಾಡಿಸಿಕೊಟ್ಟದ್ದಾಗಿ ಶಾಸನದಲ್ಲಿ ಶ್ರುತಪಡಿಸಲಾಗಿದೆ.

    New 12th Century’s Jain Inscription Explored at Hubli
    ಹುಬ್ಬಳ್ಳಿಯಲ್ಲಿ ೧೨ನೆಯ ಶತಮಾನದ ಹೊಸ ಜೈನಶಾಸನ ಬೆಳಕಿಗೆ

    ನೋಂಪಿ – ನೋಂಪಿ ಎಂದರೆ ವ್ರತ ಎಂದರ್ಥ. ಜೈನಧರ್ಮದ ಶ್ರಾವಕರು ದೇಹದಂಡಿಸಲು, ಮನೋಅಭೀಪ್ಸೇ ಈಡೇರಿಸಿಕೊಳ್ಳಲು ನಿಗಧಿತ ಧರ್ಮನಿಯಮಗಳ ಚೌಕಟ್ಟಿನೊಳಗೆ ಪಾಲಿಸುವ ಆಚರಣೆಯೆ ನೋಂಪಿ. ಈ ಧರ್ಮದಲ್ಲಿ ಸಾವಿರಾರು ಬಗೆಯ ನೋಂಪಿಗಳಿದ್ದು, ಇವುಗಳಲ್ಲಿ ಆಣತಿ, ಆಣಂತಿ, ಅಣತಿ ನೋಂಪಿಯೂ ಒಂದು. ಹಲವಾರು ತಿಂಗಳುಗಳ, ವರ್ಷಗಳ ಕಾಲ ಆಚರಿಸಲ್ಪಡುವ ನೋಂಪಿಗಳನ್ನು ಪೂರ್ಣಗೊಳಿಸುವ ಕ್ರಿಯೆಗೆ ಉದ್ಯಾಪನೆ, ಉದ್ಯಾಪ್ತಿ ಎನ್ನುವರು. ಈ ಸಂದರ್ಭದಲ್ಲಿ ನೋಂಪಿ ಆಚರಿಸಿದ ವ್ಯಕ್ತಿಗಳು ನೆನಪಿಗೋಸ್ಕರ ಹತ್ತಿರದ ಬಸದಿಗೆ ಅಥವಾ ನೋಂಪಿ ಪೂರ್ಣಗೊಳಿಸಿದ ಜಿನಾಲಯಕ್ಕೆ ಒಂದು ಕೈಪಿಡಿ ಜಿನಬಿಂಬ ಮಾಡಿಸಿಕೊಡುವುದು ರೂಢಿ. ಸಾಮಾನ್ಯವಾಗಿ ಈ ಮೂರ್ತಿ ೨೪ ತೀರ್ಥಂಕರ ಬಿಂಬಗಳನ್ನು ಒಳಗೊಂಡಿರುತ್ತದೆ. ಪ್ರಸ್ತುತ ಪದುಮಸಿರಿಯವ್ವೆ ಇದೇ ತರಹದ ಆದಿನಾಥ ಪ್ರಧಾನ ೨೪(ಚೌವ್ವೀಸ) ತೀರ್ಥಂಕರ ಮೂರ್ತಿಯನ್ನು ಸವದತ್ತಿ(ಸುಗಂಧವರ್ತ್ತಿ) ನಗರ ಜಿನಾಲಯಕ್ಕೆ ಮಾಡಿಸಿಕೊಟ್ಟಿದ್ದಾಳೆ. ಸಧ್ಯ ಈ ಮೂರ್ತಿ ತ್ರುಟಿತವಾಗಿದ್ದು, ಪ್ರಭಾವಳಿಯಲ್ಲಿರುವ ೧೯ ತೀರ್ಥಂಕರ ಚಿಕಣಿ ಶಿಲ್ಪಗಳು ಇಲ್ಲವಾಗಿವೆ.

    ಸುಗಂಧವರ್ತಿ – ಇಲ್ಲಿ ಉಲ್ಲೇಖಗೊಂಡ ಸುಗಂಧವರ್ತಿಯು ಸಂಸ್ಕೃತಿಕರಣಗೊಂಡ ಸ್ಥಳನಾಮ. ಇದರ ಮೂಲ ಹೆಸರು ಸವಣದತ್ತಿ. ಇದೇ ಇಂದಿನ ಸೌಂದತ್ತಿ, ಸೌದತ್ತಿ, ಸವದತ್ತಿಯಾಗಿದೆ. ಸವಣ ಎಂದರೆ ಜಿನಮುನಿ. ರಾಷ್ಟçಕೂಟರು ಸವಣರಿಗೆ ದತ್ತಿ ಕೊಟ್ಟ ಸ್ಥಳವೆ ಮುಂದೆ ಸವಣದತ್ತಿಯಾಯ್ತು. ಸವದತ್ತಿ ಹನ್ನೊಂದನೆಯ ಶತಮಾನಕ್ಕೆ ಒಂದು ಪ್ರಮುಖ ದೊಡ್ಡ ಜೈನಕೇಂದ್ರವಾಗಿತ್ತು. ಈ ಪ್ರದೇಶವನ್ನು ರಟ್ಟರು ಆಳುತ್ತಿದ್ದರು. ಇವರನ್ನು ಸವದತ್ತಿ ರಟ್ಟರೆಂದೇ ಖ್ಯಾತಿಸಲಾಗಿದೆ. ಸವದತ್ತಿ ಇವರ ರಾಜಧಾನಿಯಾದ್ದರಿಂದ ಈ ಅಭಿಧಾನ ಪ್ರಾಪ್ತಿಯಾಗಿರಲಿಕ್ಕೆ ಸಾಕು. ಈ ರಟ್ಟರು ಸವದತ್ತಿಯಲ್ಲಿ ಒಂದು ಪಟ್ಟಜಿನಾಲಯವನ್ನು ಕಟ್ಟಿಸಿದ್ದರಲ್ಲದೆ ಅದಕ್ಕೆ ಸಾಕಷ್ಟು ದಾನ-ದತ್ತಿಗಳನ್ನು ಕೊಟ್ಟಿದ್ದರೆಂಬುದು ಅಲ್ಲಿರುವ ಶಾಸನಗಳನ್ನು ಗಮನಿಸಿದಾಗ ತಿಳಿದುಬರುತ್ತದೆ. ಈ ಪಟ್ಟಜಿನಾಲಯವಲ್ಲದೆ ಅನೇಕ ಜಿನಾಲಯಗಳು ಸವದತ್ತಿಯಲ್ಲಿ ಇದ್ದುದಾಗಿ ಶಾಸನಗಳ ಉಲ್ಲೇಖದಿಂದ ತಿಳಿದುಬರುತ್ತದೆ. ಇವುಗಳಲ್ಲಿ ಪ್ರಸ್ತುತ ಶಾಸನದಲ್ಲಿ ಉಲ್ಲೇಖಿಸಿದ ನಗರ ಜಿನಾಲಯವೂ ಒಂದಾಗಿದೆ.

    ಹುಬ್ಬಳ್ಳಿಯಲ್ಲಿ ೧೨ನೆಯ ಶತಮಾನದ ಹೊಸ ಜೈನಶಾಸನ ಬೆಳಕಿಗೆ

    ಯಾಪನೀಯ ಸಂಘ – ಜೈನಧರ್ಮದ ಪ್ರಬಲ ಮೂರು ಮುನಿ ಪಂಥಗಳಲ್ಲಿ ಯಾಪನೀಯ ಮುನಿಗಣವೂ ಒಂದು. ನಿರ್ಗ್ರಂಥ(ದಿಗಂಬರ) ಮಹಾಶ್ರಮಣ ಸಂಘ, ಶ್ವೇತಪಟ(ಶ್ವೇತಾಂಬರ) ಮಹಾಶ್ರಮಣ ಸಂಘಗಳ ಸೇತುಕೊಂಡಿ ಈ ಯಾಪನೀಯ ಶ್ರಮಣ ಸಂಘ. ಕರ್ನಾಟಕದಲ್ಲಿಯೇ ಹುಟ್ಟಿಕೊಂಡ ಈ ಜಿನಮುನಿ ಸಂಘ., ಕ್ರಿ.ಶ ೧೪೮ ರಲ್ಲಿ ಶ್ರೀಕಲಶ ಎಂಬ ಜಿನಮುನಿಯಿಂದ ಕಲ್ಯಾಣದಲ್ಲಿ ಸ್ಥಾಪಿತವಾಯ್ತು. ಮುಂದೆ ಈ ಸಂಘ ವಿಪುಲವಾಗಿ ಬೆಳೆದು ಹತ್ತು-ಹನ್ನೊಂದನೆ ಶತಮಾನದ ಹೊತ್ತಿಗೆ ಮೂಲಸಂಘ(ದಿಗಂಬರ) ಸಂಘದ ಜೊತೆ ವಿಲೀನವಾಗತೊಡಗಿತು.

    ಗಣ – ಯಾಪನೀಯ ಎಂಬುದು ಒಂದು ನಿಗಧಿತ ಜಿನತತ್ವದಡಿ ಹುಟ್ಟಿಕೊಂಡ ಸಂಪ್ರದಾಯವಾಗಿದ್ದು., ಈ ತತ್ವವನ್ನು ಪಾಲಿಸುವ ಎಲ್ಲ ಜಿನಮುನಿಗಳ ಸಮೂಹಕ್ಕೆ “ಯಾಪನೀಯ ಸಂಘ” ಎಂದು ಕರೆಯಲಾಗುತ್ತದೆ. ಈ ಸಂಘದ ಉಪಶಾಖೆಗಳೆ ಗಣಗಳು. ಈ ಗಣಗಳಿಗೆ ಒಬ್ಬ ಜಿನ ಆಚಾರ್ಯರ ನೇತೃತ್ವ ಇರುತ್ತದೆ. ಗಣಗಳು ಮತ್ತೆ ಉಪಶಾಖೆಗಳಾಗಿ ಗಚ್ಛಗಳಾಗುತ್ತವೆ, ಗಚ್ಛಗಳು ಬಳಿ, ಬಳಿಗಳು ಅನ್ವಯ ಅನ್ವಯವಾಗುತ್ತವೆ. ಇವೆಲ್ಲವೂ ಮುನಿಗಳ ಗುಂಪುಗಳೇ ಆಗಿದ್ದು, ಲೋಕಸಂಚಾರದ ದೃಷ್ಟಿಯಿಂದ ಚಿಕ್ಕ ಚಿಕ್ಕ ಗುಂಪುಗಳಾಗಿದ್ದು ಕಂಡುಬರುತ್ತದೆ. ಸಂಘ-ಗಣ-ಗಚ್ಛ-ಬಳಿ-ಅನ್ವಯಗಳ ಪ್ರತ್ಯೇಕವಾದ ಅನುಯಾಯಿಗಳು ಇದ್ದರು. ಸಧ್ಯದ ಶಾಸನದಲ್ಲಿ ವೃಕ್ಷಮೂಲಗಣದ ಅನುಯಾಯಿ ಪದುಮಸಿರಿಯವ್ವೆ ಕಾರೇಯಗಣದವರು ಕಟ್ಟಿಸಿದ ಬಸದಿಗೆ ಮೂರ್ತಿ ಮಾಡಿಸಿಕೊಟ್ಟಿದ್ದಾಳೆ ಎಂಬುದು ತಿಳಿದುಬರುತ್ತದೆ.

    ಮೂರ್ತಿಯು ಸೂಜಿಯವರ ಮನೆಗೆ ಬಂದ ಹಿನ್ನೆಲೆಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಪಾಯಸಾಗರ ಮುನಿಯವರದ್ದು ದೊಡ್ಡ ಹೆಸರು. ಇವರೊಬ್ಬ ದಿಗಂಬರ ಮಹಾಮುನಿಯಾಗಿದ್ದು ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಮೂಲದವರಾಗಿದ್ದರು. ಧರ್ಮ ಬೋಧನೆಯ ಜೊತೆಗೆ ಸಾಕಷ್ಟು ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಣೆ ಮಾಡಿದ ಶ್ರೆಯಸ್ಸು ಇವರಿಗೆ ಸಲ್ಲುತ್ತದೆ. ಪಾಯಸಾಗರರು ಹುಬ್ಬಳ್ಳಿಯಲ್ಲಿ ಚಾತುರ್ಮಾಸ ಆಚರಿಸಲು ಬಂದಾಗ ಅಜ್ಞಾತ ಮೂಲದಿಂದ ತಮ್ಮ ಬಳಿ ಸೇರಿದ್ದ ಪ್ರಸ್ತುತ ಮೂರ್ತಿಯನ್ನು ಶ್ರೀ ಮಹಾವೀರ ಸೂಜಿಯವರ ತಂದೆಯವರಾದ ಶ್ರೀ ನೇಮಿರಾಜಪ್ಪ ಕೆಂಚಪ್ಪ ಸೂಜಿ ಇವರಿಗೆ ಕೊಟ್ಟು ಮನೆಯಲ್ಲಿ ನಿತ್ಯ ಪೂಜಿಸಲು ಹೇಳಿದರು. ಅದರಂತೆಯೆ ಈ ಮನೆತನದವರು ಪ್ರಸ್ತುತ ಮೂರ್ತಿಯನ್ನು ಪ್ರತಿಷ್ಠಾಪಿಸಿ ೭೦-೮೦ ವರ್ಷಗಳಿಂದ ನಿತ್ಯ ಪೂಜೆಗೈಯುತ್ತಿದ್ದಾರೆ. ಜಿನಮುನಿಯ ಕೈಯಿಂದ ದೊರೆತ ಜಿನಬಿಂಬವು ಪೂಜೆಗೆ ಬಹು ಯೋಗ್ಯನೀಯವೂ ಹೌದೆಂಬ ನಂಬಿಕೆಯೂ ಇದೆ.

    ಶಾಸನ ಶೋಧನೆಯಲ್ಲಿ ಸಹಕರಿಸಿದ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತೀ ಭಟ್ಟಾರಕ ಪಟ್ಟಾಚಾರ್ಯ್ಯವರ್ಯ್ಯ ಜೈನಮಠ, ಹೊಂಬುಜ ಇವರಿಗೆ., ದಿ.ಮಹಾವೀರ ನೇಮಿರಾಜಪ್ಪ ಸೂಜಿ, ಶ್ರೀಮತಿ ಪಂಕಜ ಮಹಾವೀರ ಸೂಜಿ., ಶ್ರೀ ಅಮರ್ ಮಹಾವೀರ ಸೂಜಿ., ಡಾ.ನಾಗರಾಜ ಕೆ ನವಲಗುಂದ ಇವರುಗಳಿಗೆ ತುಂಬು ಹೃದಯದ ಕೃತಜ್ಞತೆಗಳು.

    error: Jain Heritage Centres - Celebrating Jain Heritage.....Globally!