ಪಶ್ಚಿಮ ಬಂಗಾಳದ ಭಾಂಕುರಾ ಜಿಲ್ಲೆಯ ಕೇಚಂಡಟದಲ್ಲಿರುವ ಜೈನ ಯಕ್ಷಿ ಅಂಬಿಕಾ – ಕೂಷ್ಮಾಂಡಿನಿಯ ಅಪರೂಪದ ವಿಗ್ರಹ. 4.5 ಅಡಿ ಎತ್ತರದ ಈ ವಿಗ್ರಹವು ವಿಶಿಷ್ಟ ಭಂಗಿಯಲ್ಲಿದ್ದು, ಅದರ ಇಕ್ಕೆಲಗಳಲ್ಲಿ ಅವರ ಮಕ್ಕಳು, ಭಕ್ತರು ಮತ್ತು ಸಖಿಯರ ಕೆತ್ತನೆಯನ್ನು ಕಾಣಬಹುದು. ಐದು ಜೈನ ತೀರ್ಥಂಕರರು ಅವಳ ಮೇಲೆ ಇದ್ದಾರೆ – ಜೈನ ಪ್ರತಿಮಾಶಾಸ್ತ್ರದಲ್ಲಿ ಅತ್ಯಂತ ಅಪರೂಪದ ವೈಶಿಷ್ಟ್ಯ – ಈ ಶಿಲ್ಪವು ಜೈನ ಪರಂಪರೆಯ ಗಮನಾರ್ಹ ಸಂಕೇತವಾಗಿದೆ.
– ನಿತಿನ್.ಹೆಚ್.ಪಿ., ಬೆಂಗಳುರು

ಪಶ್ಚಿಮ ಬಂಗಾಳದ ಭಾಂಕುರಾ ಜಿಲ್ಲೆಯ ಖತ್ರಾ ಉಪವಿಭಾಗದಲ್ಲಿರುವ ಕೇಚಂಡಾದಲ್ಲಿ ಅಪರೂಪ ಕೂಷ್ಮಾಂಡಿನಿ ಅಥವಾ ಧರ್ಮದೇವಿ ಎಂದೂ ಕರೆಯಲ್ಪಡುವ ಯಕ್ಷಿ ಅಂಬಿಕಾ ದೇವಿಯ ಪ್ರಾಚೀನ ವಿಗ್ರಹವನ್ನು ಕಾಣಬಹುದು. ಹಳ್ಳಿಯ ಹೃದಯಭಾಗದಲ್ಲಿ ಸ್ಥಾಪಿತವಾಗಿರುವ ಈ ವಿಶಿಷ್ಠ ವಿಗ್ರಹ ಸದ್ದಿಲ್ಲದೆ ತನ್ನ ಆಧ್ಯಾತ್ಮಿಕ ಉಪಸ್ಥಿತಿಯ ಮೂಲಕ ಅಲ್ಲಿನ ಜನಮಾನಸದಲ್ಲಿ ಸಮ್ಮಿಳಿತವಾಗಿದೆ.
ಪಶ್ಚಿಮ ಬಂಗಾಳದ ಭಾಂಕುರಾ ಜಿಲ್ಲೆಯ ಖತ್ರಾ ಉಪವಿಭಾಗದಲ್ಲಿರುವ ಕೇಚಂಡಾದಲ್ಲಿ ಜೈನ ಪರಂಪರೆಯ ಗಮನಾರ್ಹವಾದ ಅಪರೂಪದ ಕೂಷ್ಮಾಂಡಿನಿ ಅಥವಾ ಧರ್ಮದೇವಿ ಎಂದೂ ಕರೆಯಲ್ಪಡುವ ಯಕ್ಷಿ ಅಂಬಿಕಾ ದೇವಿಯ ಪ್ರಾಚೀನ ವಿಗ್ರಹವನ್ನು ಕಾಣಬಹುದು. ಹಳ್ಳಿಯ ಹೃದಯಭಾಗದಲ್ಲಿ ಸ್ಥಾಪಿತವಾಗಿರುವ ಈ ವಿಶಿಷ್ಠ ವಿಗ್ರಹ ಸದ್ದಿಲ್ಲದೆ ತನ್ನ ಆಧ್ಯಾತ್ಮಿಕ ಉಪಸ್ಥಿತಿಯ ಮೂಲಕ ಅಲ್ಲಿನ ಜನಮಾನಸದಲ್ಲಿ ಸಮ್ಮಿಳಿತವಾಗಿದೆ.
22 ನೇ ಜೈನ ತೀರ್ಥಂಕರ ನೇಮಿನಾಥರ ಯಕ್ಷಿಯಾದ ಅಂಬಿಕಾ, ಜೈನ ಸಂಪ್ರದಾಯದಲ್ಲಿ ಹೆಚ್ಚಾಗಿ ಪೂಜಿಸಲ್ಪಡುವ ಯಕ್ಷಿಯರಲ್ಲೊಬ್ಬರು. ಕೂಷ್ಮಾಂಡಿನಿ ಅಮ್ಮನವರಿಗೆ ಮಾವು ಅತ್ಯಂತ ಪ್ರಿಯವಾದ ಹಣ್ಣು ಹಾಗೂ ಅವರ ವಾಹನ ಸಿಂಹ. ಅಲ್ಲದೆ ಅವರನ್ನು ಮಕ್ಕಳತಾಯಿ ಎಂದೂ ಕೂಡ ಕರೆಯುತ್ತಾರೆ. ಈ ಹಿನ್ನೆಲೆಯಲ್ಲಿ ಭಾರತದ ಇನ್ನೂ ಹಲವು ಅಂಬಿಕಾ ವಿಗ್ರಹಗಳಲ್ಲಿದ್ದಂತೆ ಈ ವಿಗ್ರಹದ ಇಕ್ಕೆಲಗಳಲ್ಲಿ ಮಾವಿನ ಗೊಂಚಲುಗಳನ್ನು, ಸಿಂಹ ಹಾಗೂ ಮಕ್ಕಳನ್ನು ಕೆತ್ತಲಾಗಿದೆ. ಈ ಅಂಶಗಳು ಈ ವಿಗ್ರಹವು ಅಂಬಿಕಾ ಯಕ್ಷಿಯದ್ದೆಂದು ನಿಶ್ಚಯಿಸಲು ಸಹಾಯ ಮಾಡುತ್ತವೆ. ನಿಂತ ಭಂಗಿಯಲ್ಲಿರುವುದು ಈ ವಿಗ್ರಹದ ಮತ್ತೊಂದು ವಿಶೇಷತೆ.
ಸಾಮಾನ್ಯವಾಗಿ ಜೈನ ಯಕ್ಷ – ಯಕ್ಷಿಯರ ವಿಗ್ರಹಗಳ ತಲೆಯ ಮೇಲ್ಭಾದಲ್ಲಿ ಒಂದು ತೀರ್ಥಂಕರರ ಕೆತ್ತನೆಯು ಕಂಡು ಬರುತ್ತದೆ. ಆದರೆ ಈ ವಿಗ್ರಹದ ತಲೆಯ ಮೇಲೆ ಪದ್ಮಾಸನದಲ್ಲಿ ಕುಳಿತಿರುವ ಐದು ತೀರ್ಥಂಕರರ ಕೆತ್ತನೆಯನ್ನು ಕಾಣಬಹುದು. ಅವುಗಳ ಮಧ್ಯದಲ್ಲಿ ನೇಮಿನಾಥರು ಮತ್ತು ಅವರ ಇಕ್ಕೆಲಗಳಲ್ಲಿ ಚಾಮರಧಾರಿಗಳನ್ನು ಕಾಣಬಾಹುದು.
ಅಂಬಿಕಾ ಯಕ್ಷಿಯ ಈ ವಿಗ್ರಹದ ಇಕ್ಕೆಲಗಳಲ್ಲಿ ಅವರ ಸಖಿಯರು ಹಾಗೂ ಭಕ್ತಾದಿಗಳ ಕೆತ್ತನೆಯನ್ನು ಕಾಣಬಹುದು. ಇದು ಕೂಷ್ಮಾಂಡಿನಿ ಯಕ್ಷಿಯ ವಿಗ್ರಹಗಳಲ್ಲೇ ವಿರಳಾತಿವಿರಳ.
ಜೈನ ಯಕ್ಷಿಯ ತಲೆಯ ಮೇಲೆ ಐದು ತೀರ್ಥಂಕರರ ವಿಗ್ರಹಗಳು, ಇಕ್ಕೆಲಗಳಲ್ಲಿ ಸಖಿಯರು ಹಾಗೂ ಭಕ್ತಾದಿಗಳ ಕೆತ್ತನೆಗಳು ಈ ಶಿಲ್ಪಕ್ಕೆ ಜೈನ ಪ್ರತಿಮಾಶಾಸ್ತ್ರದಲ್ಲಿ ಅಪರೂಪದ ಮತ್ತು ಬಹುಶಃ ವಿಶಿಷ್ಟವಾದ ಸ್ಥಾನವನ್ನು ಕಲ್ಪಿಸುತ್ತದೆ.
ಆದರೆ ಈ ಸುಂದರವಾದ ವಿಗ್ರಹವು ಶಿಥಿಲಾವಸ್ಥೆಯಲ್ಲಿದ್ದು, ಅದರ ಮುಖವು ಸವೆದು ಹಾನಿಗೊಳಗಾಗಿದೆ.
ಈ ವಿಶಿಷ್ಠ ವಿಗ್ರಹವು ಜೈನ ಭಕ್ತಿ, ಕಲೆ ಮತ್ತು ಪರಂಪರೆಯ ಜೀವಂತ ಸಾಕ್ಷಿ. ಭವಿಷ್ಯದ ಪೀಳಿಗೆಗೆ ಇಂತಹ ಅಮೂಲ್ಯ ವಿಗ್ರಹವನ್ನು ಸಂರಕ್ಷಿಸಿ ಮತ್ತು ರಕ್ಷಿಸುವ ಕ್ರಮವನ್ನು ತೆಗೆದುಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದ್ದು, ವಿಶೇಷವಾಗಿ ಜೈನ ಸಮುದಾಯವು ಇದರೆಡೆಗೆ ಗಮನಹರಿಸಬೇಕಾಗಿದೆ.
ಕೇಚಂಡಾ ತಲುಪುವುದು ಹೇಗೆ
ಕೇಚಂಡಾವು ಭಾಂಕುರಾದಿಂದ ಸುಮಾರು 50 ಕಿ.ಮೀ, ಪುರುಲಿಯಾದಿಂದ 87 ಕಿ.ಮೀ ಮತ್ತು ಕೋಲ್ಕತ್ತಾದಿಂದ 211 ಕಿ.ಮೀ ದೂರದಲ್ಲಿದೆ. ನೇರ ಸಾರ್ವಜನಿಕ ಸಾರಿಗೆ ಸೌಲಭ್ಯವಿಲ್ಲ, ಈ ಸ್ಥಳವನ್ನು ಕಾರು ಅಥವಾ ದ್ವಿಚಕ್ರ ವಾಹನದ ಮೂಲಕ ತಲುಪಬಹುದು.