Skip to content
Home » ಕನ್ನಡ » ಜಿನ ರತ್ನ ಭೂಷಣರು » ಭಾರತದ ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿ

ಭಾರತದ ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿ

    ಜನನ : ೧೫೩೬ ಹಾಡವಳ್ಳಿ, ಉತ್ತರ ಕನ್ನಡ, ಕರ್ನಾಟಕ, ಭಾರತ.
    ಮರಣ : ೧೬೦೬ (ವಯಸ್ಸು ೭೦) ನಗಿರೆ, ಉತ್ತರ ಕನ್ನಡ.
    ಇತರೆ ಹೆಸರುಗಳು : ಕರಿಮೆಣಸಿನ ರಾಣಿ, ಕಾಳು ಮೆಣಸಿನ ರಾಣಿ, ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ,
    ನಗಿರೆಯ ರಾಣಿ ಚೆನ್ನಭೈರಾದೇವಿ, ಅವ್ವರಸಿ.

    ಸಂಗೀತಪುರ ಅಥವಾ ಹಾಡುವಳ್ಳಿಯನ್ನು ಆಳುತ್ತಿದ್ದ ಚೆನ್ನಬಭೈರಾದೇವಿಯನ್ನು ಗೇರುಸೊಪ್ಪೆಯ ರಾಣಿ ಎಂದು ವರ್ಣಿಸಲಾಗಿದೆ. ಮಲೆನಾಡಿನ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದ ಕಾಳುಮೆಣಸನ್ನು ಯುರೋಪಿಗೆ ರಫ್ತು ಮಾಡುತ್ತಿದ್ದ ಈಕೆಗೆ ಕರಿಮೆಣಸಿನ ರಾಣಿ ಎಂದೂ ಕರೆಯಲಾಗಿದೆ. ಪೋರ್ಚುಗೀಸರು, ಕೆಳದಿ ಅರಸರು ಮತ್ತು ಬಿಜಾಪುರದ ಸುಲ್ತಾನರ ನಡುವಿನ ಯುದ್ದಗಳನ್ನು ತನ್ನ ಜಾಣ್ಮೆಯಿಂದ ನಿರ್ವಹಿಸಿದ ಈಕೆ ೧೫೫೨-೧೬೦೬ ರ ನಡುವಿನ ಐವತ್ನಾಲ್ಕು ವರ್ಷಗಳ ಕಾಲ ರಾಜ್ಯಭಾರ ಸಡೆಸಿದಳು. ಭರತಖಂಡದ ಇತಿಹಾಸದಲ್ಲಿ ರಾಣಿ ಚೆನ್ನಭೈರಾದೇವಿಯಷ್ಟು ಸುದೀರ್ಥಕಾಲ ರಾಜ್ಯವಾಳಿದ ಇನ್ನೊಬ್ಬ ರಾಣಿಯಿಲ್ಲ. ಒಟ್ಟು ಐವತ್ನಾಲ್ಕು ವರ್ಷಗಳ ಕಾಲ ರಾಜ್ಯವಾಳಿದ ಸಾಳುವ ವಂಶದ ಈ ವೀರವನಿತೆ, ತಾನು ಬದುಕಿರುವಷ್ಟೂ ಕಾಲ ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದವಳು. ದಕ್ಷಿಣ ಕೊಂಕಣಕ್ಕೆ ತಮ್ಮ ಒಡೆತನವನ್ನು ಮತ್ತು ಮತಾಂತರ ಪ್ರಕ್ರಿಯೆಯನ್ನು ವಿಸ್ತರಿಸಲು ತುದಿಗಾಲಲ್ಲಿ ನಿಂತಿದ್ದ ಪೋರ್ಚುಗೀಸರ ಪ್ರಯತ್ನಕ್ಕೆ ತಡೆಗೋಡೆಯಾಗಿ ಅಡ್ಡ ನಿಂತು ಇಂದಿನ ಕೆನರಾ ಪ್ರದೇಶವನ್ನು ಸಂರಕ್ಷಿಸಿದವಳು ರಾಣಿ ಚನ್ನಭೈರಾದೇವಿ. ಪರಂಗಿಯವರೂಡನೆ ಅಗತ್ಯವಿದ್ದಾಗ ಸ್ನೇಹ, ಅನಿವಾರ್ಯವಾದಾಗ ಸಮರ ಎರಡಕ್ಕೂ ಸೈ ಎನ್ನಿಸಿಕೊಂಡಿದ್ದವಳು.
    ರಾಜಕೀಯವಾಗಿ ಪೋರ್ಚುಗೀಸರನ್ನು ವಿರೋಧಿಸಿದರೂ ಬಹು ಚಾಣಾಕ್ಷತೆಯಿಂದ ಅವರೊಂದಿಗೆ ವ್ಯಾವಹಾರಿಕ ಮೈತ್ರಿಯನ್ನು ಬೆಸೆದುಕೊಂಡು, ಅಕ್ಕಿ, ಮೆಣಸು, ಏಲಕ್ಕಿ, ದಾಲ್ಚಿನ್ನಿ, ಬೆಲ್ಲ, ಬೆತ್ತ, ಗಂಧ, ಶುಂಠಿ, ಲವಂಗ, ದಂತ ಮುಂತಾದ ಪದಾರ್ಥಗಳನ್ನು ಮಾರಿ ಅವರಿಂದಲೇ ‘ರೈನಾ ದ ಪಿಮೆಂಟಾ’ (ಖಚಿiಟಿhಚಿ ಜಚಿ ಠಿimeಟಿಣo- ಖಿhe ಠಿeಠಿಠಿeಡಿ ಕಿueeಟಿ) ಎಂಬ ಬಿರುದನ್ನು ಪಡೆದು ಮುತ್ಸದ್ದಿ ಎನ್ನಿಸಿಕೊಂಡವಳು. ಅವಳೊಬ್ಬಳಿಲ್ಲದಿದ್ದರೆ ಪೋರ್ಚುಗೀಸರು ನಾವೆಗಳ ನಿರ್ಮಾಣಕ್ಕೆ ಬೇಕಾದ ಮಾವು, ಗುಳಮಾವು, ಸುರಹೊನ್ನೆ, ಹೆಬ್ಬಲಸು ಮುಂತಾದ ಮರಗಳನ್ನು ಕಡಿದು ಕದ್ದೊಯ್ದು ಇಡೀ ಪಶ್ಚಿಮಘಟ್ಟದ ದಟ್ಟಡವಿಯನ್ನು ಅಂದೇ ಬೆತ್ತಲಾಗಿಸಿಬಿಡುತ್ತಿದ್ದರು. ಗೇರುಸೊಪ್ಪೆಯಲ್ಲಿ ಅಲ್ಲಿನ ನಾಡವರು ಮತ್ತು ಖಾರ್ವಿಗಳು “ಅವ್ವರಸಿ” ಎಂದು ಪೂಜಿಸುವ ರಾಣಿ ಚೆನ್ನಭೈರಾದೇವಿಯ ದೇವಸ್ಥಾನವಿದೆ. ಈಕೆಗೆ ಪೋರ್ಚುಗೀಸರು “ರೈನಾ ದೆ ಪಿಮೆಂಟಾ” ಎಂದು ಕರೆಯುತ್ತಿದ್ದರು.
    ೧೫೫೯ ಮತ್ತು ೧೫೭೦ರಲ್ಲಿ ಪೋರ್ಚುಗೀಸರ ವಿರುದ್ದ ನಡೆದ ಹೋರಾಟ ನಡೆಸಿದ ರಾಣಿ, ಆದಿಲ್ ಶಾನ ನೆರವಿನಿಂದ ಆ ಯುದ್ಧಗಳನ್ನು ಗೆದ್ದಳು.
    ಕಾನೂರು ಹೆಸರಿಗೆ ತಕ್ಕಂತೆ ಪಶ್ಚಿಮಘಟ್ಟದ ಸಹ್ಯಾದ್ರಿಶ್ರೇಣಿಯ ಗೋವರ್ಧನ ಗಿರಿಪಂಕ್ತಿಯ ನಡುವಿನ ದಟ್ಟಡವಿಯ ನಡುವೆ ಹುದುಗಿರುವ ಪುಟ್ಟ ಗಿರಿಗ್ರಾಮ. ಗ್ರಾಮದಂಚಿನ ಬೆಟ್ಟ, ಮೂರು ದಿಕ್ಕಿನಲ್ಲಿ ಒಂದೂವರೆ ಸಾವಿರ ಅಡಿಗೂ ತಗ್ಗಿನ ಕಣಿವೆ ಮತ್ತು ಊರಿನ ದಿಕ್ಕಿನಿಂದ ಮಾತ್ರ ಪ್ರವೇಶ ಸಾಧ್ಯವಿರುವ ನೈಸರ್ಗಿಕ ರಕ್ಷಣಾವರಣವುಳ್ಳ ಆಯಕಟ್ಟಿನ ಪ್ರದೇಶ. ಚಾಲುಕ್ಯ ಹಾಗೂ ರಾಷ್ಟçಕೂಟರ ಕಾಲದಲ್ಲಿ ಪ್ರತಿಷ್ಠಿತ ಸಾಮಂತರೆAದು ಯಶೋಜ್ವಲ ಕೀರ್ತಿವಂತರಾಗಿದ್ದ ಹೊಂಬುಜದ ಸಾಂತರಸರು ತಮ್ಮ ರಾಜ್ಯದ ವ್ಯಾಪ್ತಿಯಲ್ಲಿದ್ದ ಈ ತಾಣವನ್ನು ಆಯ್ದು ಮೊದಲು ಇಲ್ಲೊಂದು ನೆಲಗೋಂಟೆಯನ್ನು ನಿರ್ಮಿಸಿದ್ದರು. ಅತ್ಯಂತ ಎತ್ತರದಲ್ಲಿ ಅಡವಿಯ ನಡುವೆ ಶತ್ರುವಿನ ವಿರುದ್ದ ಸಹಜವಾಗಿ ಒದಗುವ ರಕ್ಷಣೆ, ಸುತ್ತಲಿನ ಪ್ರದೇಶಗಳ ಮೇಲಿನ ಒಡೆತನ ಹಾಗೂ ನೆಲ ಜಲಗಳ ಸಮೃದ್ಧಿ ಅವರನ್ನು ಆಕರ್ಷಿಸಿದ್ದರಲ್ಲಿ ಆಶ್ಚರ್ಯವಿಲ್ಲ.
    ಹೊಗೆವಡ್ಡಿ, ಮೇಘಾನೆ, ಬಾಳಿಗೆ, ಭೀಮೇಶ್ವರ, ಅಂಬಾರಗುಡ್ಡವೇ ಮೊದಲಾದ ಹಲವು ಗಿರಿಶಿಖರಗಳ ಸಾಲಿನ ಈ ಕಾನೂರು ಬೆಟ್ಟದ ತುದಿಯಲ್ಲಿ ವರ್ತುಲಾಕಾರದ ಮಣ್ಣುಕಟ್ಟೆ, ಸುತ್ತಲೂ ನೀರಿನ ಕಂದಕ, ನಡುವೆ ಚೂಪಾದ ಉದ್ದನೆ ಗೂಟಗಳ ಬೇಲಿಯನ್ನು ಕಟ್ಟಿ ಇಲ್ಲಿ ಕೆಲವು ತಾತ್ಕಾಲಿಕ ಕಟ್ಟಡಗಳನ್ನು ನಿರ್ಮಿಸಿದ್ದ ಸಾಂತರಸರಿಗೆ ಇದು ಪಶ್ಚಿಮದ ದಿಕ್ಕಿನಿಂದ ತಮ್ಮ ರಾಜ್ಯದ ಮೇಲೆ ನಡೆಯಬಹುದಾಗಿದ್ದ ಆಕ್ರಮಣವನ್ನು ತಡೆಯಲು ಸಹಕಾರಿಯಾಗಿತ್ತು. ನಂತರದ ದಿನಗಳಲ್ಲಿ ಇದು ಪಾಳುಬಿದ್ದಿತ್ತು. ಮುಂದೆ ಸಾಳುವ ವಂಶದ ಹೊನ್ನ ಇದನ್ನು ಸಾಕಷ್ಟು ಅಭಿವೃದ್ಧಿ ಪಡಿಸಿದ್ದನಾದರೂ ಇದು ಹೆಚ್ಚು ಬಳಕೆಗೆ ತೆರೆದುಕೊಂಡಿದ್ದು ಗೇರುಸೊಪ್ಪೆ ರಾಜ್ಯಕ್ಕೆ ರಾಣಿ ಚೆನ್ನಭೈರಾದೇವಿಯ ಪಟ್ಟಕ್ಕೆ ಬಂದಮೇಲೆಯೇ. ವಿಶಾಲವಾದ ಕೋಟೆ ಆಂಜನೇಯ ಸ್ವಾಮಿ ದೇಗುಲವನ್ನೂ ಅದರ ಪಕ್ಕದಲ್ಲಿ ಶತ್ರುಗಳು ಹಠಾತ್ ದಾಳಿ ನಡೆಸಿದರೆ ರಕ್ಷಣೆ ಪಡೆಯಲು ನೆಲಮಾಳಿಗೆಯನ್ನೂ ಅಲ್ಲಿಂದ ಗೇರುಸೊಪ್ಪೆಗೆ ಗುಪ್ತಮಾರ್ಗವನ್ನೂ ನಿರ್ಮಿಸಿದಳು. ತನಗೆ ಅತ್ಯಂತ ಪ್ರಿಯವಾದ ಏಳು ಸುತ್ತಿನ ಕೋಟೆಯ ಕಾನೂರಿನಲ್ಲಿ ಒಂದು ಸುಂದರವಾದ ರಾಣಿವಾಸವನ್ನು ನಿರ್ಮಿಸಿ ಆಗಾಗ ಬಂದು ಅದರಲ್ಲಿ ವಾಸ್ತವ್ಯ ಹೂಡುತ್ತಿದ್ದಳು.
    ಶರಾವತಿಯ ಒಂದು ದಂಡೆಯಲ್ಲಿರುವ ಗ್ರಾಮವನ್ನು ಗೇರುಸೊಪ್ಪೆ ಎಂದು ಕರೆದರೆ ಮತ್ತೊಂದು ಬದಿಯ ಹಳ್ಳಿಯನ್ನು ನಗಿರೆ ಬಸ್ತಿಕೇರಿ ಎಂದು ಕರೆಯುತ್ತಿದ್ದರು. ಅಲ್ಲಿ ಜೈನರ ಬಸದಿಗಳು ಇರುವುದರಿಂದಲೇ ಅದು ಆ ಹೆಸರನ್ನು ಪಡೆಯಿತು. ಚೆನ್ನಭೈರಾದೇವಿ ನಗಿರೆಯನ್ನೂ ಆಳುತ್ತಿದ್ದರಿಂದ ಆಕೆಗೆ ನಗಿರೆಯ ರಾಣಿ ಎಂಬ ಹೆಸರೂ ಇತ್ತು.
    ವಿಜಯನಗರದ ಸಾಳುವ ವಂಶದ ಒಂದು ಶಾಖೆಯ ಅರಸರು ಗೇರುಸೊಪ್ಪೆಯನ್ನು ಆಳುತ್ತಿದ್ದರೆ ಮತ್ತೊಂದು ವಂಶದವರು ಹಾಡುವಳ್ಳಿಯನ್ನು ಆಳುತ್ತಿದ್ದರು. ಗೇರುಸೊಪ್ಪೆಯ ಅರಸ ಇಮ್ಮಡಿ ದೇವರಾಯ (೧೫೧೫-೫೦) ಪೋರ್ಚುಗೀಸರ ಮೇಲೆ ಯುದ್ಧಮಾಡಿದ. ಮಡಗೋವೆಯ ಬಳಿ ೧೫೪೨ರಲ್ಲಿ ನಡೆದ ಭೀಕರ ಯುದ್ಧದಲ್ಲಿ ಆತ ಸೋಲನ್ನಪ್ಪಿದ ಬಳಿಕ ಪೋರ್ಚುಗೀಸರು ಆತನ ರಾಜಧಾನಿ ಭಟ್ಕಳವನ್ನು ಸುಟ್ಟು ಹಾಕಿದರು. ಆತನ ಪತ್ನಿ ಚೆನ್ನಾದೇವಿಯ ತಂಗಿಯೇ ಚೆನ್ನಭೈರಾದೇವಿ, ಪೋರ್ಚುಗೀಸರ ಜೊತೆಗಿನ ಒಪ್ಪಂದದAತೆ ಕಪ್ಪವನ್ನು ಕೊಡಲಿಲ್ಲವೆಂದು, ಕಾರ್ಟಜ್ ಪಡೆಯದ ಮಹಮದ್ದೀಯರ ಹಡಗುಗಳಿಗೆ ಭಟ್ಕಳ ಬಂದರಿನಲ್ಲಿ ಆಶ್ರಯ ಕೊಟ್ಟಿರುವಳೆಂದು ಆರೋಪಿಸಿ, ಪೋರ್ಚುಗೀಸ್ ಕಪ್ತಾನ ಆಲ್ಫನ್ಸೋ ಡಿಸೋಜಾ ಭಟ್ಕಳವನ್ನು ಮುತ್ತಿ ರಾಣಿಯನ್ನು ಸೋಲಿಸಿ ಭಟ್ಕಳವನ್ನು ಸುಟ್ಟುಹಾಕಿದ. ಅಕ್ಕನ ನಂತರ ತಂಗಿ ಚೆನ್ನಭೈರಾದೇವಿಗೆ ಹಾಡುವಳ್ಳಿಯ ಜೊತೆಗೆ ಗೇರುಸೊಪ್ಪೆಯ ಅಧಿಕಾರವೂ ದೊರಕಿತು.
    ಚೆನ್ನಭೈರಾದೇವಿಯ ರಾಜ್ಯ ದಕ್ಷಿಣ ಗೋವೆಯಿಂದ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಭಟ್ಕಳ, ಮಲ್ಪೆ, ಹೊನ್ನಾವರ, ಮಿರ್ಜಾನ್, ಅಂಕೋಲಾ, ಬೈಂದೂರು, ಕಾರವಾರಗಳನ್ನೊಳಗೊಂಡಿತ್ತು. ಈ ಕರಾವಳಿಯ ಜೊತೆಗೆ ಘಟ್ಟದ ಮೇಲಿನ ಭಾರಂಗಿ, ಮರಬಿಡಿ, ಕರೂರು, ಹನ್ನಾರ, ಬಿದನೂರು, ಸೌಳನಾಡು, ಆವಿನಹಳ್ಳಿ ಸೀಮೆಗಳು ಚೆನ್ನಭೈರಾದೇವಿಯ ಆಡಳಿತಕ್ಕೆ ಒಳಪಟ್ಟಿದ್ದವು. ಈಕೆಯ ಆಳ್ವಿಕೆಯಲ್ಲಿ ಯುರೋಪಿನ ರಾಷ್ಟçಗಳಿಗೆ ಕಾಳುಮೆಣಸು, ದಾಲ್ಚಿನ್ನಿ, ಅಡಿಕೆ, ಶುಂಠಿ, ಗಂಧಗಳನ್ನು ರಫ್ತು ಮಾಡಲಾಗುತ್ತಿತ್ತು. ಈಕೆಯ ಕಾಲದಲ್ಲಿನ ಮಿರ್ಜಾನ್ ಕೋಟೆ, ಕಾನೂರು ಕೋಟೆಗಳನ್ನೂ ಈಗಲೂ ಕಾಣಬಹುದು. ಈಕೆ ೧೫೬೨ರಲ್ಲಿ ಕಾರ್ಕಳದಲ್ಲಿನ ಚತುರ್ಮುಖ ಬಸದಿಯನ್ನು ಕಟ್ಟಿಸಿದಳು. ಪೋರ್ಚುಗೀಸರ ಮತಾಂತರದಿAದ ತಪ್ಪಿಸಿಕೊಳ್ಳಲು ಚೆನ್ನಭೈರಾದೇವಿಯ ರಾಜ್ಯಕ್ಕೆ ಆಶ್ರಯ ಕೋರಿ ಬಂದ ಸಾರಸ್ವತ ಬ್ರಾಹ್ಮಣರು ಮತ್ತು ಕೊಂಕಣಿಗರಿಗೆ ರಾಣಿ ತನ್ನ ರಾಜ್ಯದಲ್ಲಿ ಆಶ್ರಯ ಕೊಟ್ಟಳು. ಜೈನ ಮತದವಳಾದ ರಾಣಿ ಅನೇಕ ಶೈವ, ವೈಷ್ಣವ ಮತ್ತು ಶಕ್ತಿ ದೇಗುಲಗಳನ್ನು ಕಟ್ಟಲು, ಜೀರ್ಣೋದ್ದಾರಕ್ಕೂ ನೆರವು ನೀಡಿದ್ದಳು. ಬಿದರೂರು ಅಥವಾ ವೇಣುಪುರದ ಯೋಗಾನರಸಿಂಹ ಸ್ವಾಮಿ ದೇಗುಲ ಮತ್ತು ವರ್ಧಮಾನ ಬಸದಿಗಳ ಜೀರ್ಣೋದ್ಧಾರಕ್ಕೂ ರಾಣಿ ನೆರವು ನೀಡಿದ್ದಳು. “ಕರ್ನಾಟಕ ಶಬ್ದಾನುಶಾಸನ” ಎಂಬ ವ್ಯಾಕರಣ ಗ್ರಂಥ ರಚನಾಕಾರ, ಸ್ವಾದಿ ದಿಗಂಬರ ಜೈನ ಮಠದ ಯತಿ ಅಭಿನವ ಭಟ್ಟಾಕಲಂಕರು ಈ ರಾಣಿಯ ಆಶ್ರಯದಲ್ಲಿದ್ದರು. ಪೋರ್ಚುಗೀಸರ ವಶದಲ್ಲಿದ್ದ ಕೊಚ್ಚಿನ್ ಬಂದರಿನ ಕ್ಯಾಪ್ಟನ್ ಆಲ್ಫನ್ಸೋ ಮೆಕ್ಸಿಯ ಪೋರ್ಚುಗೀಸ್ ರಾಜನಿಗೆ “ಬಟಿಕಳ (ಭಟ್ಕಳ) ಮತ್ತು ಗೋವಾಗಳ ನಡುವೆ ಒನೋರ್ (ಕಾನೂರು), ಮರ್ಜೆನ್(ಮಿರ್ಜಾನ್) ಮತ್ತು ಅಂಕೋಲಾಗಳೆAಬ ಜಾಗಗಳಿವೆ. ಅವುಗಳಿಂದ ವಾರ್ಷಿಕ ೫೦೦೦ ಕ್ರೂಜೇಡೋಸ್(ಹದಿನೈದನೆದನೇ ಶತಮಾನದಲ್ಲಿದ್ದ ಪೋರ್ಚುಗೀಸ್ ಬಂಗಾರದ ನಾಣ್ಯ)ಗಳಷ್ಟು ಕಾಳು ಮೆಣಸು ವಾರ್ಷಿಕವಾಗಿ ರಫ್ತಾಗುತ್ತಿತ್ತು. ಈ ಜಾಗಗಳು ಗೇರುಸೊಪ್ಪೆಯ ರಾಣಿ(ಚೆನ್ನಭೈರಾದೇವಿ)ಯ ಆಳ್ವಿಕೆಗೆ ಒಳಪಟ್ಟಿತ್ತು ಈ ಕಾಳುಮೆಣಸು ಕೊಚ್ಚಿನ್ನಿನ ಕಾಳುಮೆಣಸಿಗಿಂತ ದಪ್ಪವೂ, ಕಮ್ಮಿ ತೂಕ ಮತ್ತು ಖಾರದ್ದೂ ಆಗಿತ್ತು. “ಈ ಜಾಗಗಳನ್ನು ನಮ್ಮ ವಶಕ್ಕೆ ಪಡೆಯಬೇಕು” ಎಂದು ೧೬೦೬ರಲ್ಲಿ ಕೆಳದಿ ಮತ್ತು ಬಿಳಗಿ ಅರಸರು ಒಟ್ಟುಗೂಡಿ ಗೇರುಸೊಪ್ಪೆಯ ಮೇಲೆ ಆಕ್ರಮಣ ಮಾಡುತ್ತಾರೆ. ಆ ಯುದ್ಧದಲ್ಲಿ ತನ್ನ ಸೇನಾಪತಿ ಗೊಂಡನಾಯಕನ ಮೋಸದಿಂದ ವೃದ್ಧರಾಣಿ ಚೆನ್ನಭೈರಾದೇವಿ ಸೋಲುವ ಮೂಲಕ ಗೇರುಸೊಪ್ಪೆ ಕೆಳದಿ ಸಾಮ್ರಾಜ್ಯದ ಭಾಗವಾಗುತ್ತದೆ.
    ಅಮೇರಿಕಾದ ಟೆಕ್ಸಾಸ್ ಯೂನಿವರ್ಸಿಟಿಯಲ್ಲಿ ಆಂಗ್ಲ ಭಾಷಾ ಪ್ರಾಧ್ಯಾಪಕಿ ಮತ್ತು ದಕ್ಷಿಣ ಏಷ್ಯಾ ಇನ್ಸಿಟ್ಯೂಟಿನಲ್ಲಿ ತೌಲನಿಕ ಸಾಹಿತ್ಯ ಮುಖ್ಯಸ್ಥೆಯಾಗಿರುವ ಡಾ. ಹನ್ನಾಚಾಪೆಲ್ಲೆ ವೋಜಿಹೋಸ್ಕಿ (ಆಡಿ. ಊಚಿಟಿಟಿಚಿಛಿhಚಿಠಿeಟಟe Wohiಛಿiehoತಿsಞi) ಅವರು ತಮ್ಮ ಪ್ರಬಂಧದಲ್ಲಿ “ಚೆನ್ನಭೈರಾದೇವಿಯು ಇಂಗ್ಲೆAಡಿನ ರಾಣಿ ಎಲಿಜಬೆತ್ತಳ ಸಮಕಾಲೀನಳು ಮತ್ತು ಅನೇಕ ವಿಷಯಗಳಲ್ಲಿ ಅವಳಿಗೆ ಸರಿಮಿಗಿಲಾಗಿದ್ದವಳು. ಚೆನ್ನಭೈರಾದೇವಿಯು ತನಗೆ ಎದುರಾದ ಅನೇಕ ಬಗೆಯ ವೈರುಧ್ಯಗಳನ್ನು ಚಾಣಾಕ್ಷ ಮೈತ್ರಿಗಳ ಮೂಲಕ ದಿಟ್ಟತನದಿಂದ ನಿಭಾಯಿಸುತ್ತ ತನ್ನ ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಮೇಲುಗೈಯನ್ನು ಬಿಟ್ಟುಕೊಡದೆ ಐವತ್ತು ವರ್ಷಗಳಿಗೂ ಹೆಚ್ಚು ಕಾಲ ತನ್ನ ರಾಜ್ಯವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಸಮರ್ಥವಾಗಿ ಆಳುವಲ್ಲಿ ಯಶಸ್ವಿಯಾಗಿದ್ದಳು” ಎಂದು ಬರೆದಿದ್ದಾರೆ.

    Visit this link for an article About “Pepper Queen of India – Chennabhairadevi” in English

    error: Jain Heritage Centres - Celebrating Jain Heritage.....Globally!