Skip to content
Home » ಕನ್ನಡ » ತೀರ್ಥಕ್ಷೇತ್ರ ದರ್ಶನ » ಸಮಾಣಾರ್ ಮಲೈ ಜೈನ ಗುಹೆ, ಮಧುರೈ

ಸಮಾಣಾರ್ ಮಲೈ ಜೈನ ಗುಹೆ, ಮಧುರೈ

    ತಮಿಳುನಾಡಿನ ಪರಂಪರೆ ನಗರ ಮಧುರೈ ನಗರದಿಂದ ಸುಮಾರು ೧೧ ಕಿ.ಮಿ.ದೂರದಲ್ಲಿರುವ ಕಿಲಕುಯಿಲ್ ಕುಡಿ ಗ್ರಾಮದಲ್ಲಿರುವ ಪುರಾತನ ಜೈನ ಕ್ಷೇತ್ರ ಸಮಾಣಾರ್ ಮಲೈ. ತಮಿಳಿನಲ್ಲಿ ಸಮಣಾರ್ ಎಂದರೆ ಜೈನರು ಹಾಗೂ ಮಲೈ ಅಂದರೆ ಬೆಟ್ಟ. ಆದ್ದರಿಂದ ಸಮಾಣಾರ್ ಮಲೈ ಎಂದರೆ ಜೈನರ ಬೆಟ್ಟ.

    ಸಮಣಾರ್ ಮಲೈನಲ್ಲಿ ಜೈನಧರ್ಮಕ್ಕೆ ಸಂಬಂಧಿಸಿದ ಒಟ್ಟು ಮೂರು ಸ್ಥಳಗಳನ್ನು ಕಾಣಬಹುದು:

    • ಶಾಸನೋಕ್ತವಾದ ಬಂಡೆ
    • ಪೆಚ್ಚಿಪಳ್ಳಂ – ಬಂಡೆಯ ಮೇಲೆ ಕೆತ್ತಲಾದ ಜೈನಧರ್ಮಕ್ಕೆ ಸಂಬಂಧಿಸಿದ ಶಿಲ್ಪಗಳು ಹಾಗೂ ಶಾಸನಗಳು.
    • ಸೆಟ್ಟಿಪೊಡವು – ಬಂಡೆಯ ಮೇಲಿನ ತೀರ್ಥಂಕರರ ಕೆತ್ತನೆ, ಗುಹೆ ಹಾಗೂ ಶಾಸನಗಳು.

    ಶಾಸನೋಕ್ತವಾದ ಬಂಡೆ – ಇದರ ಕಾಲ ಕ್ರಿ.ಪೂ. ೨ನೇ ಶತಮಾನ. ಇದರಲ್ಲಿ ” ತಟ್ಟೈ ಅಥವಾ ಪೆರುತೆರೂರ್ ನ ಕೊಳ” ಎಂದು ಬರೆಯಲಾಗಿದೆ.

    ಪೆಚ್ಚಿಪಳ್ಳಂ – ಸಮಣಾರ್ ಮಲೈ ಬೆಟ್ಟದ ತಪ್ಪಲಿನಲ್ಲಿ ಚಿತ್ತಾಕರ್ಷಕವಾದ ಕಮಲದ ಹೂವುಗಳಿರುವ ಕೊಳವೊಂದನ್ನು ಕಾಣಬಹುದು. ಸುಮಾರು ೧೫೦ ಮೆಟ್ಟಿಲುಗಳನ್ನು ಹತ್ತಿ ಸ್ವಲ್ಪದೂರ ನಡೆದಾಗ ಬೆಟ್ಟದ ಮೇಲೆ ಬಂಡೆಯೊಂದರ ಮೇಲೆ ಕೆತ್ತಲಾದ ಜೈನ ಶಿಲ್ಪಗಳು ಹಾಗೂ ಅದರ ಮುಂಭಾಗದಲ್ಲಿ ಸಣ್ಣ ದೊನೆಯೊಂದನ್ನು ಕಾಣಬಹುದು.
    ಇಲ್ಲಿ ಭಗವಾನ್ ಬಾಹುಬಲಿಯ ಶಿಲ್ಪ, ಕಾಯೋತ್ಸರ್ಗ ಭಂಗಿಯಲ್ಲಿರುವ ಪಾರ್ಶ್ವನಾಥರ ತಲೆಯ ಕಮಠನು ಪಾರ್ಶ್ವನಾಥ ತೀರ್ಥಂಕರರಿಗೆ ವಿವಿಧ ಬಗೆಯ ಉಪಸರ್ಗವನ್ನು ನೀಡುತ್ತಿರುವುದನ್ನು ಚಿತ್ರಸಲಾಗಿದೆ, ಕಾಯೋತ್ಸರ್ಗಯುಕ್ತ ಪಾರ್ಶ್ವನಾಥ ತೀರ್ಥಂಕರರ, ಪರ್ಯಂಕಾಸನಯುಕ್ತ ತೀರ್ಥಂಕರರ ಶಿಲ್ಪ, ಕಾಯೋತ್ಸರ್ಗಯುಕ್ತ ಪಾರ್ಶ್ವನಾಥ ತೀರ್ಥಂಕರರ ವಿಗ್ರಹದ ತಲೆಯ ಮೇಲೆ ಹಾವಿನೊಂದಿಗಿರುವ ಧರಣೇಂದ್ರ ಯಕ್ಷನು ಎರಡು ಕೈಗಳಲ್ಲಿ ಚಾಮರವನ್ನು ಹಿಡಿದಿರುವ ಶಿಲ್ಪ ಹಾಗೂ ಇನ್ನಿತರವುಗಳನ್ನು ಕಾಣಬಹುದು.
    ಈ ಶಿಲ್ಪಗಳ ಕೆಳಭಾಗದಲ್ಲಿ ವಟ್ಟೆಲುಟ್ಟು ಲಿಪಿಯಲ್ಲಿರುವ ಒಟ್ಟು ೬ ತಮಿಳು ಶಾಸನಗಳನ್ನು ಕಾಣಬಹುದು. ಇವುಗಳಲ್ಲಿ ಎರಡು ಶಾಸನಗಳು ೮ನೇ ಶತಮಾನದ್ದಾಗಿದ್ದರೆ ಉಳಿದ ನಾಲ್ಕು ಶಾಸನಗಳು ೯-೧೦ನೇ ಶತಮಾನದ ಶಾಸನಗಳು.

    ಪೆಚ್ಚಿಪಳ್ಳಂ ಗುಡ್ಡದ ಈ ಶಿಲ್ಪಗಳಿಂದ ಮೇಲ್ಭಾಗದಲ್ಲಿ ಜೈನ ಬಸದಿಯೊಂದರ ಅವಶೇಷಗಳು ಹಾಗೂ ಜಗತ್ತಿಯನ್ನು ಕಾಣಬಹುದು. ಇಲ್ಲಿ ಹತ್ತನೇ ಶತಮಾನದ ಶಾಸನವೊಂದನ್ನು ಕಾಣಬಹುದು. ಈ ಶಾಸನವು ಮೂಲಸಂಘಕ್ಕೆ ಸೇರಿದ್ದ ಶ್ರವಣಬೆಳಗೊಳದ ಜೈನ ಗುರುಗಳು ಈ ಕ್ಷೇತ್ರಕ್ಕೆ ಭೇಟಿ ನೀಡಿದ್ದ ವಿವರಗಳನ್ನು ನೀಡುತ್ತದೆ.

    ಸೆಟ್ಟಿಪೊಡವು – ಈ ಈ ಪುರಾತನ ಬೆಟ್ಟದ ಪೂರ್ವ ಭಾಗದ ಹಿಂಭಾಗದಲ್ಲಿ ಒಂದು ಗುಹೆ ಇದ್ದು ಇದನ್ನು ಸೆಟ್ಟಿಪೊಡವು ಎನ್ನುವರು. ನೆಲ ಮಟ್ಟದಿಂದ ಸುಮಾರು ೧೫ ಅಡಿ ಮೇಲೆ ಪೀಠವೊಂದರ ಮೇಲೆ ಆಸೀನರಾದ ಪರ್ಯಂಕಾಸನಯುಕ್ತ ಮಂದಸ್ಮಿತರಾದ ೮ ಅಡಿಗಳ ಎತ್ತರದ ತೀರ್ಥಂಕರರ ಕೆತ್ತನೆಯನ್ನು ಕಾಣಬಹುದು. ತೀರ್ಥಂಕರರ ಪೀಠದ ಕೆಳಭಾಗದಲ್ಲಿ ೯ನೇ ಶತಮಾನಕ್ಕೆ ಸೇರಿದ ಮೂರು ಸಾಲುಗಳ ಜೈನ ಶಾಸನವನ್ನು ಕಾಣಬಹುದು.
    ಈ ವಿಗ್ರಹದ ಪಕ್ಕದಲ್ಲಿಯೇ ನಾವು ಗುಹೆಯೊಂದನ್ನು ಕಾಣಬಹುದು. ಗುಹೆಯ ಒಳಭಾಗದಲ್ಲಿ ನಾವು ಒಟ್ಟು ಐದು ಶಿಲ್ಪಗಳನ್ನು ಕಾಣಬಹುದು. ಅವುಗಳಲ್ಲಿ ಮೂರು ಶಿಲ್ಪ ಪರ್ಯಂಕಾಸನಯುಕ್ತ ತೀರ್ಥಂಕರರ ಶಿಲ್ಪಗಳು. ಈ ಎಲ್ಲ ಕೆತ್ತನೆಗಳ ಕೆಳಭಾಗದಲ್ಲಿ ನಾವು ತಮಿಳು ಭಾಷೆಯ ವಟ್ಟೇಲುಟ್ಟು ಲಿಪಿಯಲ್ಲಿರುವ ಜೈನ ಶಾಸನಗಳನ್ನು ಕಾಣಬಹುದು.

    ಸಂಶೋಧನೆ, ಸಂಯೋಜನೆ,
    ಛಾಯಾಗ್ರಹಣ, ಸಂಕಲನ, ಮತ್ತು ನಿರೂಪಣೆ –
    ನಿತಿನ್ ಹೆಚ್.ಪಿ.
    ಸಂಸ್ಥಾಪಕರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು
    www.jainheritagecentres.com

    1 thought on “ಸಮಾಣಾರ್ ಮಲೈ ಜೈನ ಗುಹೆ, ಮಧುರೈ”

    1. ಸುನೀಲ್ ಕುಮಾರ್

      ನಾನು ಸುಮಾರು ಮೂರು ತಿಂಗಳ ಹಿಂದೆ ಮದುರೈ ಗೆ ಹೋಗಿದ್ದೆ ಅಲ್ಲಿ ಮತ್ತೊಂದು ಬೆಟ್ಟ ಯಾನೈ ಮಲೈ ಅಂತ ಇದೆ ಅದನ್ನು ನೋಡಿದ್ದೆ ಇದನ್ನು ನೋಡಲು ಸಮಯ ಸಾಲಲಿಲ್ಲ ಮತ್ತೊಮ್ಮೆ ಹೋದಾಗ ನೋಡುತ್ತೇನೆ.ಒಳ್ಳೆಯ ಮಾಹಿತಿ ಧನ್ಯವಾದಗಳು

    Comments are closed.

    error: Jain Heritage Centres - Celebrating Jain Heritage.....Globally!