Skip to content
Home » ಕನ್ನಡ » ಜೈನ ಹಬ್ಬಗಳು » ದಶಲಕ್ಷಣ ಪರ್ವ » ಉತಮ ಸತ್ಯ ಧರ್ಮ

ಉತಮ ಸತ್ಯ ಧರ್ಮ

    ಉತ್ತಮ ಸತ್ಯ ಧರ್ಮ – ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಐದನೇ ಧರ್ಮ.

    ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಐದನೇ ಧರ್ಮ – ಉತ್ತಮ ಸತ್ಯ ಧರ್ಮ

    ಅಸತ್ಯವಚನದಿಂದ ಪ್ರಾಣಿಗಳಿಗೆ ಬಾಧೆಯಾಗುವುದರಿಂದ ಅಂತಹ ವಚನವನ್ನು ಶಾಸ್ತ್ರದಲ್ಲಿ ನಿಷೇಧಿಸಿರುತ್ತಾರೆ. ಒಂದು ವೇಳೆ ಅಸತ್ಯವಚನದಿಂದ ಪ್ರಾಣಿಗಳಿಗೆ ಬಾಧೆಯಾಗದಿದ್ದರೂ ತನ್ನ ಆತ್ಮದಲ್ಲಿ ಆ ದುಸ್ಸಂಸ್ಕಾರವು ಬೆಳೆಯುವುದರಿಂದ ವಿನೋದಕ್ಕೋಸ್ಕರವೂ ಸುಳ್ಳು ಮಾತನಾಡಬಾರದು. ಅಷ್ಟೇ ಅಲ್ಲ – “ಸತ್ಯಮಪಿ ವಿಪದೇ” ಎಂದು ಶ್ರೀ ಸಮಂತಭದ್ರಾಚಾರ್ಯರು ಹೇಳಿರುವಂತೆ ಸತ್ಯವಚನವನ್ನೇ ನುಡಿದರೂ ಅದರಿಂದ ಪ್ರಾಣಿಬಾಧೆಯಾಗುವ ಪಕ್ಷದಲ್ಲಿ ಅಂತಹ ಸತ್ಯವನ್ನೂ ನುಡಿಯಬಾರದು. ಉದಾಹರಣೆಗಾಗಿ- ಒಬ್ಬ ಬೇಟೆಗಾರನು ಒಂದು ಮೃಗವನ್ನು ಬೇಟೆಯಾಡುತ್ತ ಓಡಿಸಿಕೊಂಡು ಬಂದನೆಂದೂ ಆ ಮೃಗವು ತಪ್ಪಿಸಿಕೊಂಡು ಪೂರ್ವದಿಕ್ಕಿಗೆ ಓಡಿ ಹೋಯಿತೆಂದೂ ಅದನ್ನು ನಾವು ನೋಡಿದೆವೆಂದೂ ತಿಳಿಯೋಣ, ಆಗ ಆ ಬೇಟೆಗಾರನು ಒಂದು ‘ಮೃಗವು ಯಾವ ಕಡೆಗೆ ಹೋಯಿತು ಎಂದು ಕೇಳಿದರೆ ನಾವು ಪೂರ್ವದಿಕ್ಕಿಗೆ ಹೋಯಿತೆಂದು ಸತ್ಯವನ್ನೇ ನುಡಿದರೂ ಅದರಿಂದ ಆ ಪ್ರಾಣಿಗೆ ಅಪಾಯವಾಗುವುದು. ಆದುದರಿಂದ ಅಂತಹ ಸಂದರ್ಭದಲ್ಲಿ ಸತ್ಯ ವಚನವನ್ನೂ ನುಡಿಯಬಾರದೆಂದು ಹೇಳಿರುತ್ತಾರೆ. ಕೆಲವರು ಅಂತಹ ಸಂದರ್ಭದಲ್ಲಿ ಪ್ರಾಣಿರಕ್ಷಣೆಗಾಗಿ ಅಸತ್ಯವನ್ನು ನುಡಿಯಬಹುದೆಂದು ಹೇಳುತ್ತಾರೆ. ಹಾಗೆ ಶಾಸ್ತ್ರಾಜ್ಞೆಯಿಲ್ಲದಿರುವುದರಿಂದ ಅದು ಸರಿಯಲ್ಲ. ಆ ಅಸತ್ಯ ವಚನದಿಂದ ಆ ಪ್ರಾಣಿಬಾಧೆಯು ತಪ್ಪಿದರೂ ಆ ಬೇಟೆಗಾರನಿಗೆ ತೊಂದರೆಯಾಗುವುದರಿಂದಲೂ ತಮ್ಮ ಆತ್ಮದಲ್ಲಿ ದುಸ್ಸಂಸ್ಕಾರವುಂಟಾಗುವುದರಿಂದಲೂ ಅಸತ್ಯವನ್ನೂ ನುಡಿಯಬಾರದೆಂದೇ ಆಚಾರ್ಯರ ಅಭಿ ಪ್ರಾಯ. ಈ ಅಭಿಪ್ರಾಯವು “ಸತ್ಯಮಪಿ” ಎಂಬುದರಲ್ಲಿರುವ ಅಪಿ ಶಬ್ದದಿಂದ ಸೂಚಿತವಾಗುವುದು. ಅಸತ್ಯವನ್ನೂ ಪ್ರಾಣಿವಿಪತ್ತನ್ನುಂಟುಮಾಡತಕ್ಕ ಸತ್ಯವನ್ನೂ ನುಡಿಯಬಾರದೆಂಬುದೇ ಇದರ ಅಭಿಪ್ರಾಯ. ಇಂತಹ ಸಂದರ್ಭದಲ್ಲಿ ಆ ಪ್ರಾಣಿವಧೆಯ ದೋಷವನ್ನೂ ಅದರ ರಕ್ಷಣೆಗಾಗಿ ನುಡಿಯುವ ಅಸತ್ಯವಚನದ ದೋಷವನ್ನೂ ಹೋಲಿಸಿದರೆ ಅಸತ್ಯವಚನದ ದೋಷವು ಕಡಮೆಯಾಗಿ ತೋರುವುದರಿಂದ ಅಂತಹ ಅಸತ್ಯವನ್ನು ನುಡಿಯುವುದು ತಪ್ಪಲ್ಲವೆಂದೂ ಕೆಲವರು ಹೇಳುವುದುಂಟು, ಆದರೆ ಅದು ಶಾಸ್ತ್ರ ಸಮ್ಮತವಲ್ಲ. ಏವಂಚ ಪ್ರಾಣಿಹಿಂಸಾ ಸಾಧಕವಾದ ಸತ್ಯವನ್ನೂ ಪ್ರಾಣಿರಕ್ಷಣೆಗೆ ಸಾಧಕವಾದ ಅಸತ್ಯವನ್ನು ನುಡಿಯದೆ ತನ್ನ ಬುದ್ಧಿಚಾತುರ್ಯದಿಂದ ಆ ಪ್ರಾಣಿಹಿಂಸೆಯನ್ನು ತಪ್ಪಿಸುವುದೇ ಶಾಸ್ತ್ರ ಸಮ್ಮತವಾದ ಉತ್ತಮಪಕ್ಷ, ಉಪಾಯಾಂತರವನ್ನು ತಿಳಿಯದೆ ಅಸತ್ಯವನ್ನು ನುಡಿದು ಆ ಪ್ರಾಣಿಹಿಂಸೆಯನ್ನು ತಪ್ಪಿಸುವುದು ಮತ್ತೊಂದು ಪಕ್ಷ, ಇದಕ್ಕೆ ಶಾಸ್ತ್ರಾಜ್ಞೆಯಿಲ್ಲ.
    ಸತ್ಯವಚನದ ಮಹತ್ವವನ್ನು ಹೇಳುವಾಗ “ಸತ್ಯಾನಾಸ್ತಿ ಪರೋಧರ್ಮಃ’ ಸತ್ಯಕ್ಕಿಂತ ಉತ್ಕೃಷ್ಟವಾದ ಧರ್ಮವಿಲ್ಲವೆಂದು ನೀತಿಕಾರರು ಹೇಳಿರುತ್ತಾರೆ. ಅಸತ್ಯವನ್ನು ನುಡಿಯುವವನು ಲೋಕನಿಂದ್ಯನೂ ಅವಿಶ್ವಾಸಿಯೂ ಆಗುತ್ತಾನೆ. ಅಸತ್ಯವಕ್ತನು ದೊಡ್ಡ ಶ್ರೀಮಂತನಾಗಿದ್ದರೂ ಅವನ ಮಾತಿನಲ್ಲಿ ಜನಗಳಿಗೆ ನಂಬಿಕೆಯಿರುವುದಿಲ್ಲ. ಅವನಿಗೆ ಲೋಕದಲ್ಲಿ ನಿಜವಾದ ಗೌರವಸ್ಥಾನವೂ ದೊರೆಯಲಾರದು. ಸುಳ್ಳುಗಾರನು ಒಂದೊಂದು ವೇಳೆಯಲ್ಲಿ ಸತ್ಯವನ್ನು ನುಡಿದರೂ ಆ ಮಾತಿನಲ್ಲಿಯೂ ಜನಗಳಿಗೆ ನಂಬಿಕೆಯುಂಟಾಗುವುದಿಲ್ಲ. ಅಸತ್ಯವಚನದಿಂದ ಒಂದು ವೇಳೆ ತಾತ್ಕಾಲಿಕವಾಗಿ ಸ್ವಲ್ಪ ಪ್ರಯೋಜನವಾಗಬಹುದಾದರೂ ಆ ಪ್ರಯೋಜನಕ್ಕಿಂತಲೂ ಹೆಚ್ಚು ಹಾನಿಯೇ ಉಂಟಾಗುವುದು. ಪಾಪ ಬಂಧವಾಗುವುದು ಕಣ್ಣಿಗೆ ಕಾಣುವುದಿಲ್ಲವೆಂದು ಅದನ್ನು ಒತ್ತಟ್ಟಿಗಿಟ್ಟುಕೊಂಡರೂ ಮೇಲೆ ಹೇಳಿದಂತೆ ಅಪನಂಬಿಕೆಯೂ ಲೋಕ ತಿರಸ್ಕಾರವೂ ಅಗೌರವವೂ ಪ್ರತ್ಯಕ್ಷಗೋಚರವಾಗುವ ಹಾನಿಗಳು.
    ಒಂದು ಕಾಡಿನಲ್ಲಿ ಒಬ್ಬ ತಂದೆಯೂ ಮಗನೂ ಹೋಗುತ್ತಿರುವಾಗ ಹಿಂದಿದ್ದ ಮಗನು ಹುಲಿಯು ಬಂದಿತೆಂದು ಒಂದೆರಡು ಸಲ ಸುಳ್ಳು ಹೇಳಿ ತಂದೆಗೆ ವ್ಯರ್ಥಶ್ರಮವನ್ನುಂಟುಮಾಡಿದುದರಿಂದ ಅವನ ಮಾತಿನಲ್ಲಿ ತಂದೆಗೆ ಅಪನಂಬಿಕೆಯುಂಟಾಗಿ ಕೊನೆಗೆ ನಿಜವಾಗಿಯೂ ಹುಲಿಯು ಬಂದು ಆ ಮಗನನ್ನು ಹಿಡಿದುಕೊಂಡಾಗ ಅವನು ಕೂಗಿಕೊಂಡರೂ ತಂದೆಯು ಹಿಂದಿರುಗಿ ಬಾರದೆ ಹೋದುದರಿಂದ ಮಗನು ಹುಲಿಯ ಪಾಲಾದನೆಂದು ಹೇಳುವುದೊಂದು ಕಲ್ಪಿತಕಥೆಯಾದರೂ ಇದರಿಂದ ಕಲಿತುಕೊಳ್ಳಬೇಕಾದ ಪಾಠವೊಂದಿರುವುದು, ಅದಾವುದೆಂದರೆ ಸುಳ್ಳುಗಾರನು ಸತ್ಯವನ್ನು ನುಡಿದರೂ ಜನಗಳಿಗೆ ಅವನ ಮಾತಿನಲ್ಲಿ ನಂಬಿಕೆಯುಂಟಾಗುವುದಿಲ್ಲವೆನ್ನುವುದು.
    ಸತ್ಯವಕ್ತನು ಬಡವನಾಗಿದ್ದರೂ ಅವನ ಮಾತಿನಲ್ಲಿ ಜನಗಳಿಗೆ ನಂಬಿಕೆಯೂ ಗೌರವವೂ ಇರುವುದು. ಅವನಿಗೆ ಪುರಸ್ಕಾರವೂ ಇರುವುದು. ಸತ್ಯ ಸಂಧನಿಗೆ ಉಂಟಾಗುವ ಆತ್ಮತೃಪ್ತಿಯೂ ಆತ್ಮವಿಶ್ವಾಸವೂ ಸಂತೋಷವೂ ತಂತಮ್ಮ ಅನುಭವಗೋಚರವಾಗಿರುವುವು.
    ವಾಣಿಜ್ಯ-ವ್ಯಾಪಾರವೃತ್ತಿಯಲ್ಲಿರುವವರು ಕೆಲವರು ಸುಳ್ಳನ್ನು ಹೇಳ ದಿದ್ದರೆ ವ್ಯಾಪಾರವು ಸಾಗುವುದಿಲ್ಲವೆಂದು ಹೇಳುತ್ತ ಆ ಮಾತನ್ನು ಸಮರ್ಥಿಸು ವುದಕ್ಕಾಗಿ ಮುಂದಿನ ಈ ವಾಕ್ಯವನ್ನು ಉದಾಹರಿಸುವುದುಂಟು. “ವ್ಯಾಪಾರೋ ದ್ರೋಹಚಿಂತನಂ” ದ್ರೋಹ ಚಿಂತನೆಯನ್ನು ಮಾಡುವುದು ವ್ಯಾಪಾರದ ಲಕ್ಷಣ. ಇದು ತಮ್ಮ ಅನುಕೂಲಕ್ಕೋಸ್ಕರ ಮಾರ್ಪಾಟುಮಾಡಲ್ಪಟ್ಟ ವಾಕ್ಯ ವಲ್ಲದೆ ನಿಜವಾದುದಲ್ಲ. ನಿಜವಾದ ಆ ವಾಕ್ಯವಾದರೋ “ವ್ಯಾಪಾದೋ ದ್ರೋಹಚಿಂತನಂ” ಎಂದಿರುವುದು. ವ್ಯಾಪಾದ ಶಬ್ದಕ್ಕೆ ದ್ರೋಹ ಚಿಂತನ ಶಬ್ದವು ಪ್ರತಿಶಬ್ದ, ದ್ರೋಹಚಿಂತನ ಶಬ್ದಕ್ಕೆ ಇತರರಿಗೆ ದ್ರೋಹವನ್ನು ಚಿಂತಿಸುವುದೆಂದರ್ಥ. ಇದೇ ವ್ಯಾಪಾದ ಶಬ್ದಕ್ಕೂ ಅರ್ಥವಲ್ಲದೆ ಪರರಿಗೆ ದ್ರೋಹ ಚಿಂತನೆಯನ್ನು ಮಾಡುವುದು ವ್ಯಾಪಾರದ ಲಕ್ಷಣವೆಂದರ್ಥವಲ್ಲ. ವ್ಯಾಪರಿಯು ನಿಜವಾಗಿಯೂ ಸತ್ಯಸಂಧನಾಗಿದ್ದರೆ ಅವನಿಗಾಗುವಷ್ಟು ವ್ಯಾಪಾರವು ಬೇರೆಯವರಿಗಾಗುವುದಿಲ್ಲ.
    ಹೀಗೆ ಸತ್ಯದ ಮಹತ್ವವನ್ನೂ ಪವಿತ್ರತೆಯನ್ನೂ ಪರಿಭಾವಿಸಿ ಎಂತಹ ಸಂದರ್ಭದಲ್ಲಿಯೂ ಅಸತ್ಯವನ್ನು ನುಡಿಯದಿರುವುದೇ ಯತಿಗಳ ಉಉತ್ತಮ ಸತ್ಯಧರ್ಮ” ವಾಗಿರುವುದು. ಇದನ್ನು ಗೃಹಸ್ಥರೂ ಯಥಾಶಕ್ತಿ ಅವಲಂಬಿಸು ವುದು ಇಹಪರ ಶ್ರೇಯಸ್ಕರವಾಗಿರುವುದು.

    error: Jain Heritage Centres - Celebrating Jain Heritage.....Globally!