Skip to content
Home » ಕನ್ನಡ » ಸುದ್ದಿ-ಸಮಾಚಾರ » ಧರ್ಮಸ್ಥಳ ಬಾಹುಬಲಿಗೆ ಮಹಾಮಜ್ಜನ, ವಿಶೇಷ ಕಾರ್ಯಕ್ರಮಗಳ ಗೊಂಚಲು

ಧರ್ಮಸ್ಥಳ ಬಾಹುಬಲಿಗೆ ಮಹಾಮಜ್ಜನ, ವಿಶೇಷ ಕಾರ್ಯಕ್ರಮಗಳ ಗೊಂಚಲು

    ಧರ್ಮಸ್ಥಳ, ೮ ಫೆಬ್ರವರಿ ೨೦೧೯: ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನಗಿರಿಯಲ್ಲಿ ವಿರಾಜಮಾನನಾಗಿರುವ ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಗೆ ಹನ್ನೆರಡು ವರ್ಷಗಳ ಬಳಿಕ ನಡೆಯಲಿರುವ ಮಹಾಮಜ್ಜನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಮಹಾಮಜ್ಜನದ ಹಿನ್ನೆಲೆಯಲ್ಲಿ ಫೆ.9ರಿಂದ 18ರ ವರೆಗೆ ಸಂತ ಸಮ್ಮೇಳನ ಸೇರಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

    ಶ್ರೀ 108 ವರ್ಧಮಾನ ಸಾಗರಜೀ ಮುನಿಮಹಾರಾಜರ ಸಾನ್ನಿಧ್ಯ ಮತ್ತು ನೇತೃತ್ವದಲ್ಲಿ ಆಚಾರ್ಯ ಶ್ರೀ ವಾತ್ಸಲ್ಯವಾರಿಧಿ 108 ಪುಷ್ಪದಂತ ಸಾಗರ ಮುನಿಮಹಾರಾಜರು, ಮುನಿಗಳು, ಆರ್ಯಿಕಾ ಮಾತಾಜಿಯವರ ಉಪಸ್ಥಿತಿಯಲ್ಲಿ ಶ್ರವಣಬೆಳಗೊಳ ಜೈನ ಮಠದ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಸ್ವಾಮೀಜಿ ಮಾರ್ಗದರ್ಶನದಲ್ಲಿ ಬಾಹುಬಲಿಗೆ ಮಹಾಮಜ್ಜನ ನೆರವೇರಲಿದೆ. ಕಾರ್ಕಳ ಮಠದ ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತ ಭಟ್ಟಾರಕ ಮಹಾಸ್ವಾಮೀಜಿ ಹಾಗೂ ಸಮಸ್ತ ಮಠಗಳ ಭಟ್ಟಾರಕರು ಈ ವೇಳೆ ಉಪಸ್ಥಿತರಿರಲಿದ್ದಾರೆ.

    ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಂದರ್ಶನ

    ಬಾಹುಬಲಿಯ ಪ್ರತಿಷ್ಠಾಪಕರಾಗಿರುವ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆಯವರ ನೇತೃತ್ವದಲ್ಲಿ ಮಹಾಮಸ್ತಕಾಭಿಷೇಕದ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಮಹಾಮಜ್ಜನದ ಭಾಗವಾಗಿ ವಿವಿಧ ಜನಮಂಗಲ, ಜನಕಲ್ಯಾಣ ಕಾರ್ಯಕ್ರಮಗಳು ನಾಡಿಗೆ ಸಮರ್ಪಿತವಾಗಲಿವೆ. ನಾಡಿನ ಸುಪ್ರಸಿದ್ಧ ಕಲಾವಿದರಿಂದ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳೂ ಭಕ್ತರ ಕಣ್ಮನ ತಣಿಸಲಿವೆ.

    ಫೆ.9ರಂದು ಜನಕಲ್ಯಾಣ ಕಾರ್ಯಕ್ರಮಗಳ ಅಂಗವಾಗಿ ಧರ್ಮಸ್ಥಳ ಸ್ನಾನಘಟ್ಟದಿಂದ ದೇವಸ್ಥಾನದ ವರೆಗೆ ಚತುಷ್ಪಥ ರಸ್ತೆಯ ಪ್ರಥಮ ಹಂತದ ಉದ್ಘಾಟನೆ, ಸ್ಮರಣ ಸಂಚಿಕೆ ಬಿಡುಗಡೆ, ಕೆರೆ ಸಂಜೀವಿನಿ, ವಸ್ತುಪ್ರದರ್ಶನ, ಲೇಸರ್‌ ಶೋ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನೆರವೇರಲಿದೆ. ಫೆ.10ರಂದು ಕ್ಷುಲ್ಲಕ ದೀಕ್ಷಾ ಮಹೋತ್ಸವ ಹಾಗೂ ಜನಮಂಗಲ ಕಾರ್ಯಕ್ರಮ ನಡೆಯಲಿದೆ. ಫೆ.14ರಂದು ಗ್ರಂಥಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

    ವಿನೂತನ ಪಂಚಮಹಾವೈಭವ: ಅಮೃತವರ್ಷಿಣಿ ಸಭಾಭವನದ ಬಳಿ ನಿರ್ಮಿಸಿರುವ ಅಯೋಧ್ಯೆ ಮತ್ತು ಪೌದನಾಪುರ ಸಭಾಂಗಣದಲ್ಲಿ ಪಂಚಮಹಾವೈಭವ ಎಂಬ ಪೂಜಾ ಕಾರ್ಯಕ್ರಮಗಳು ಫೆ.11ರಿಂದ 15ರ ವರೆಗೆ ನಡೆಯಲಿವೆ. ಈ ಪೂಜಾ ವೈಭವ ಮೊದಲ ಬಾರಿಗೆ ಧರ್ಮಸ್ಥಳದಲ್ಲಿ ಅನಾವರಣಗೊಳ್ಳಲಿದ್ದು, ಧರ್ಮಾಧಿಕಾರಿಗಳ ಈ ಬಾರಿಯ ಹೊಸ ಪರಿಕಲ್ಪನೆಯಾಗಿದೆ.

    ಫೆ.16, 17, 18ರಂದು ಬಾಹುಬಲಿಗೆ ಮಹಾಮಜ್ಜನ: ಬಾಹುಬಲಿಗೆ ಫೆ.16, 17 ಮತ್ತು 18ರಂದು ಮಹಾಮಜ್ಜನ ನೆರವೇರಲಿದೆ. 16ರಂದು ಬೆಳಗ್ಗೆ 8.45ಕ್ಕೆ ಬಾಹುಬಲಿ ಪ್ರತಿಷ್ಠಾಪಕರಾದ ಡಿ.ವೀರೇಂದ್ರ ಹೆಗ್ಗಡೆಯವರು ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಗೆ 1,008 ಕಲಶಗಳಿಂದ ಮಹಾಮಸ್ತಕಾಭಿಷೇಕ ನೆರವೇರಿಸಲಿದ್ದಾರೆ. 17 ಮತ್ತು 18ರಂದು 1,008 ಕಲಶಗಳಿಂದ ಅಭಿಷೇಕ ನೆರವೇರಲಿದೆ. – ಕೃಪೆ: ಏಷ್ಯಾನೆಟ್ ನ್ಯೂಸ್

    error: Jain Heritage Centres - Celebrating Jain Heritage.....Globally!