ದಾನಚಿಂತಾಮಣಿ ಅತ್ತಿಮಬ್ಬೆ ಪ್ರಾಚೀನ ಕರ್ನಾಟಕದ ಸ್ತ್ರೀಯರಲ್ಲಿ ಅಗ್ರಗಣ್ಯರು. ಇವರ ಕಾಲ ಕ್ರಿ.ಶ. ಹತ್ತನೆಯ ಶತಮಾನದ ಉತ್ತರಾರ್ಧ ಮತ್ತು ಹನ್ನೊಂದನೆಯ ಶತಮಾನದ ಪೂರ್ವಾರ್ಧ ಅಂದರೆ ಇವರು ಚಾಳುಕ್ಯ ಚಕ್ರವರ್ತಿ ಅಹವಮಲ್ಲ ತೈಲಪ (೯೭೩-೯೯೭) ಹಾಗೂ ಆತನ ಮಗ ಇರಿವ ಬೆಡಂಗ ಸತ್ಯಾಶ್ರಯರ (೯೯೭-೧೦೦೮) ಕಾಲದಲ್ಲಿದ್ದರು.
ಅತ್ತಿಮಬ್ಬೆ ಅವರ ಆಶ್ರಯದಲ್ಲೇ ರನ್ನಕವಿ ತಮ್ಮ ಅಜಿತಪುರಾಣವನ್ನು ಬರೆದದ್ದು (೯೯೩). ಈಕೆ ಲಕ್ಕುಂಡಿಯಲ್ಲಿ ಬಸದಿಯನ್ನು ಕಟ್ಟಿಸಿ ಅದಕ್ಕೆ ದತ್ತಿಗಳನ್ನು ಬಿಡಿಸಿದ್ದು ೧೦೦೭ರಲ್ಲಿ ಎಂದು ಅಲ್ಲಿಯ ಶಾಸನದಿಂದ ತಿಳಿದುಬರುತ್ತದೆ.
ಅತ್ತಿಮಬ್ಬೆಯವರ ಕುರಿತು ಅನೇಕ ಸಂಗತಿಗಳು ರನ್ನ ಕವಿಯ ಅಜಿತಪುರಾಣದಿಂದಲೂ ಆತನೇ ಬರದಿರಬಹುದಾದ ಲಕ್ಕುಂಡಿಯ ಶಾಸನದಿಂದಲೂ ತಿಳಿದುಬರುತ್ತವೆ. ಈಕೆಯ ತೌರುಮನೆಯ ಹಲವು ಸಂಗತಿಗಳು ಪೊನ್ನನ ಶಾಂತಿಪುರಾಣದಿಂದ ತಿಳಿದುಬರುತ್ತವೆ. ಜೊತೆಗೆ, ಈಕೆಯ ಮೇಲೆ ರಚಿತವಾದ ಬ್ರಹ್ಮಶಿವನ ಸಮಯಪರೀಕ್ಷೆಯೂ ಏಳೆಂಟು ಶಾಸನಗಳೂ ಅತ್ತಿಮಬ್ಬೆಯವರನ್ನು ಕೊಂಡಾಡಿವೆ. ಅತ್ತಿಮಬ್ಬೆಯ ತಂದೆಯ ತಂದೆ ನಾಗಮಯ್ಯ. ಈತ ಈಗಿನ ಆಂಧ್ರಪ್ರದೇಶಕ್ಕೆ ಸೇರಿರುವ ವೆಂಗಿಮಂಡಲದ ಕಮ್ಮೆನಾಡಿನ ಪುಂಗನೂರಿನವರು.
ಜೈನ ಬ್ರಾಹ್ಮಣ ಸಂಪ್ರದಾಯಸ್ಥರಾದ ಇವರ ಮಕ್ಕಳು ಮಲ್ಲಪಯ್ಯ ಮತ್ತು ಪೊನ್ನಮಯ್ಯ. ಮಲ್ಲಪಯ್ಯ ಪಂಡಿತ ಮಂಡಳಿಗಂ ಕವಿಮಂಡಳಿಗಂ ತನ್ನ ಮನೆ ತವರ್ಮನೆಯೆನೆ ಬಾಳಿದವರು. ಈ ಸೋದರರಿಬ್ಬರ ಆಶ್ರಯದಲ್ಲಿ ಪೊನ್ನ ಶಾಂತಿಪುರಾಣವನ್ನು ಬರೆದದ್ದು. ಪೊನ್ನಮಯ್ಯ ತನ್ನ ದೊರೆ ತೈಲಪನಿಗಾಗಿ ಕಾವೇರಿ ತೀರದ ಯುದ್ದದಲ್ಲಿ ಪ್ರಾಣವನ್ನು ಒಪ್ಪಿಸಿದ. ಇವರಲ್ಲಿ ಮಲ್ಲಪಯ್ಯ ಮತ್ತು ಅಪ್ಪಕಬ್ಬೆಯರ ಮಗಳೇ ಅತ್ತಿಮಬ್ಬೆ.
ಅತ್ತಿಮಬ್ಬೆಯನ್ನು ಅವರ ತಂಗಿ ಗುಂಡಮಬ್ಬೆಯ ಜೊತೆಯಲ್ಲಿ ಚಾಲುಕ್ಯ ಚಕ್ರವರ್ತಿ ಅಹವಮಲ್ಲನ ಭುಜಾದಂಡದಂತಿದ್ದ ನಾಗದೇವನಿಗೆ ಕೊಟ್ಟಿದ್ದರು. ಈ ನಾಗದೇವ ಚಾಲುಕ್ಯ ಚಕ್ರವರ್ತಿಯ ಮಹಾಮಂತ್ರಿ ಧಲ್ಲಪನ ಹಿರಿಯ ಮಗ. ಹೀಗೆ ಅತ್ತಿಮಬ್ಬೆಯನ್ನು ಕೊಟ್ಟ ಮತ್ತು ತಂದುಕೊಂಡ ಮನೆತನಗಳೆರಡೂ ಪ್ರಖ್ಯಾತವಾಗಿದ್ದುವು. ಅತ್ತಿಮಬ್ಬೆ ಅವರಿಗೆ ಅಣ್ಣಿಗದೇವನೆಂಬ ಕಿರಿ ವಯಸ್ಸಿನ ಮಗನೂ ಇದ್ದ. ಆದರೆ ಆಕೆ ಇನ್ನೂ ಯೌವನದಲ್ಲಿರುವಾಗಲೇ ಆಕೆಯ ಗಂಡ ನಾಗದೇವ ಸ್ವರ್ಗಸ್ಥನಾದ. ಆಗ ಅವಳ ತಂಗಿ ಗುಂಡಮಬ್ಬೆ ಅಕ್ಕನನ್ನು ಕಷ್ಟದಿಂದ ಒಪ್ಪಿಸಿ, ತಾನೂ ಗಂಡನೊಡನೆ ಸಹಗಮನ ಮಾಡಿದಳು.
ಪತಿಯ ಅಗಲಿಕೆಯಿಂದ ಜರ್ಝರಿತರಾದ ಅತ್ತಿಮಬ್ಬೆ ಕಟ್ಟುಮನಸ್ಸು ಮಾಡಿ ಮಗನ ಲಾಲನೆ ಪಾಲನೆಗೊಸ್ಕರ ಉಳಿದರು. ಆದರೆ ಉಗ್ರವ್ರಂತನೇಮಾದಿಗಳಲ್ಲಿ ದೇಹವನ್ನು ಬಳಲಿಸಿದರು; ತಮ್ಮ ಬಳಿಯಿದ್ದ ಐಶ್ವರ್ಯವನ್ನು ಉದಾರವಾಗಿ ಸತ್ಕಾರ್ಯಗಳಿಗೆ ವ್ಯಯಿಸಿದರು.
ಅತ್ತಿಮಬ್ಬೆ ಅವರು ಮಾಡಿದ ಧಾರ್ಮಿಕ ಕಾರ್ಯಗಳಲ್ಲಿ ಕೆಲವು ಇಂತಿವೆ: ಮಣಿಖಚಿತವಾದ ೧,೫೦೦ ಜಿನ ಪ್ರತಿಮೆಗಳನ್ನು ಮಾಡಿಸಿ ದಾನ ಮಾಡಿದರು; ಲಕ್ಕುಂಡಿಯಲ್ಲಿ ದೊಡ್ಡ ಬಸದಿಯನ್ನು ಕಟ್ಟಿಸಿದರು; ರನ್ನ ಕವಿಯಿಂದ ಅಜಿತಪುರಾಣವನ್ನು ಹೇಳಿಸಿದ್ದಲ್ಲದೆ, ಅಜಿತ ಪುರಾಣ ೨ನೇಯ ತೀರ್ಥಂಕರ ಅಜಿತಸ್ವಾಮಿಯ ಕುರಿತ ೧೨ ಆಶ್ವಾಸಗಳ ವಿಸ್ತçತ ಕಥೆ. ಮತ್ತು ದಾನಚಿಂತಾಮಣಿ ‘ಅತ್ತಿಮಬ್ಬೆ’ ರನ್ನನಿಂದ ಬರೆಯಿಸಿದಳು. ಪೊನ್ನನಿಂದ ಹೇಳಿಸಿದ ಶಾಂತಿ ಪುರಾಣ ಹಸ್ತಪ್ರತಿಗಳ ಅಭಾವದಿಂದ ಜನರಲ್ಲಿ ಪ್ರಚಾರವಾಗದಿರುವ ಸಂಗತಿಯನ್ನು ಗಮನಿಸಿ ಅದರ ಸಾವಿರ ಪ್ರತಿಗಳನ್ನು ಮಾಡಿಸಿ ಹಂಚಿಸಿದರು.
ಅತ್ತಿಮಬ್ಬೆ ತಮ್ಮ ತಪಸ್ಸು, ನಿಷ್ಠೆ, ಔದಾರ್ಯ, ತ್ಯಾಗ, ಧರ್ಮಾನುರಾಗ, ಕಾವ್ಯಪ್ರೇಮ ಇತ್ಯಾದಿಗಳಿಂದ ತಮ್ಮ ಕಾಲದ ಜನರ ಕಣ್ಣಲ್ಲಿ ಅದ್ಭುತ ವ್ಯಕ್ತಿಯಾದರು. ಅವರು ಮೆರೆದ ಪವಾಡಗಳನ್ನು ಅವರ ಆಶ್ರಯದಲ್ಲಿದ್ದ ರನ್ನ ಕವಿಯ ಮಾತುಗಳು ಮತ್ತು ಆಕೆಯ ಕುರಿತ ಶಾಸನವೂ ಕೊಂಡಾಡಿವೆ. ಜಿನನನ್ನು ಹೊತ್ತು ತಂದ ಅತ್ತಿಮಬ್ಬೆಯನ್ನು ಕಂಡ ಗೋದಾವರಿ ತನ್ನ ಪ್ರವಾಹವನ್ನು ಉಡುಗಿಸಿತು; ಇದರಿಂದಾಗಿ ತೈಲಪ ತನ್ನ ಸೈನ್ಯದೊಡನೆ ನದಿಯನ್ನು ದಾಟುವುದು ಸಾಧ್ಯವಾಯಿತು.
ಮದಿಸಿದ ಆನೆ ಅತ್ತಿಮಬ್ಬೆಯ ಪಾದಗಳಿಗೆ ಶರಣಾಗಿ ಎರಗಿತು. ಅಕಸ್ಮಾತ್ ನದಿಯಲ್ಲಿ ಬಿದ್ದುಹೋದ ಜಿನಬಿಂಬ ಎಂಟು ದಿನಗಳಲ್ಲಿ ಕೈಗೆ ಬಂದಿತು (ಆ ಎಂಟು ದಿನವೂ ಆಕೆ ಉಪವಾಸವಿದ್ದರು). ಶ್ರವಣಬೆಳಗೊಳದ ಗೊಮ್ಮಟ ವಿಗ್ರಹವನ್ನು ನೋಡುವವರೆಗೆ ಅನ್ನವನ್ನು ತ್ಯಜಿಸುವೆನೆಂಬ ನಿಯಮವನ್ನು ಪಾಲಿಸಿ, ದರ್ಶನಕ್ಕಾಗಿ ಪರ್ವತವನ್ನು ಹತ್ತಿದಾಗ ಅವರ ಮಾರ್ಗಾಯಾಸ ಪರಿಹಾರಕ್ಕಾಗಿ ಅಕಾಲವೃಷ್ಟಿಯೂ ಆಯಿತು. ಇವು ಅತ್ತಿಮಬ್ಬೆ ಮಾಡಿದರೆಂದು ಹೇಳಲಾದ ಕೆಲವು ಪವಾಡಗಳು.
ಹೀಗೆ ಅತ್ತಿಮಬ್ಬೆ ಈಚಿನವರ ಕಣ್ಣಲ್ಲಿ ಮಾತ್ರವಲ್ಲ, ತಮ್ಮ ಕಾಲದಲ್ಲಿಯೇ ಪವಾಡ ವ್ಯಕ್ತಿಯಾಗಿ ಪರಿಣಮಿಸಿದ್ದರು. ಚಕ್ರವರ್ತಿ ಪೂಜಿತೆಯೂ ಆಗಿದ್ದರು. ಅವರ ಜೀವಿತ ಕಾಲದ ನಂತರ ಹುಟ್ಟಿದ ಅನೇಕ ಶಾಸನಗಳಲ್ಲಿಯೂ ಬ್ರಹ್ಮಶಿವನ ಸಮಯ ಪರೀಕ್ಷೆಯಲ್ಲಿಯೂ ಅವರನ್ನು ಮನಸಾರೆ ಕೊಂಡಾಡಲಾಗಿದೆ. ಅವರು ನಾಡಿನಲ್ಲಿ ಶೀಲ ಅನುಪಮಗುಣ ಔದಾರ್ಯ ಅಭಿಮಾನಗಳಿಗೆ ಸಂಕೇತವಾಗಿ ಬಾಳಿದರು.
ಅತ್ತಿಮಬ್ಬೆ ಮುಂದಿನ ಜನಾಂಗದ ಮೇಲೆಯೂ ತಮ್ಮ ಪ್ರಭಾವನ್ನು ಬೀರಿದ ಮಹಾವ್ಯಕ್ತಿಗಳಲ್ಲಿ ಒಬ್ಬರನಿಸಿದ್ದಾರೆ.
ಅತ್ತಿಮಬ್ಬೆ ಮಾಡಿರುವ ಕೆಲಸಗಳು:
೧. ರನ್ನನಂಥ ವರಕವಿಗಳಿಗೆ ಸ್ಫೂರ್ತಿ, ಆಶ್ರಯ ಕೊಟ್ಟಳು.
೨. ನಾಗದೇವ, ಅಣ್ಣಿಗದೇವರಂಥ ರಣಕಲಿಗಳಿಗೆ ಉತ್ಸಾಹ ತುಂಬಿದಳು.
೩. ಓಲೆಗರಿ ಪ್ರತಿಗಳನ್ನು – ಶಾಂತಿಪುರಾಣ, ಅಜಿತಪುರಾಣ ಕಾವ್ಯಗಳ ಹಲವಾರು ಪ್ರತಿಗಳನ್ನು ಬರಸಿ ಕನ್ನಡ ಸಾಹಿತ್ಯವನ್ನು ಪುನರುಜೀವಿಸಿದ ಪುಣ್ಯಮೂರ್ತಿಯಾದಳು.
೪. ಜಿನಬಿಂಬಗಳನ್ನು ದಾನಮಾಡಿ ಭಕ್ತರನ್ನು ಉದ್ದೀಪನಗೊಳಿಸಿದಳು.
೫. ಮುನಿಗಳಿಗೆ ಆತ್ಮಾನುಸಂಧಾನದ ಧ್ಯಾನಕಾರ್ಯದಲ್ಲಿ ನೆರವಾದಳು.
೬. ಆರ್ಯಿಕೆಯರಿಗೆ ಆಹಾರ ದಾನವಿತ್ತು ಅವರ ನಿರಾತಂಕ ಜೀವನಕ್ಕೆ ಇಂಬಾದಳು.
೭. ನಾಡಿನಾದ್ಯಂತ ನೂರಾರು ಚೈತ್ಯಾಲಯಗಳನ್ನು ನಿರ್ಮಿಸುವುದರ ಮೂಲಕ ಧಾರ್ಮಿಕ ಚೈತನ್ಯವನ್ನು ಸಾಮಾನ್ಯ ಚೇತನದಲ್ಲೂ ತುಂಬಿ ಹರಿಯಿಸಿದ ಮಹಾಚೇತನವಾದಳು.
೮. ಬೇಡಿದವರಿಗೆ ಅವರು ಬೇಡಿದ್ದನ್ನು ತಡಮಾಡದೆ ಒಡನೆಯೇ ಹಿಡಿ ಹಿಡಿಯಾಗಿ ‘ಹಿಡಿ-ಹಿಡಿ’ ಎಂದು ಮುಕ್ತಹಸ್ತದಿಂದ ನೀಡಿದಳು; ತನ್ನದೆಂಬ ಸರ್ವಸ್ವವನ್ನೂ ಧರ್ಮಕ್ಕಾಗಿ, ಸಹಮಾನವರ ಒಳಿತಿಗಾಗಿ ದಾನಾಮಾಡಿದಳು.
ಅತ್ತಿಮಬ್ಬೆಯ ಬಿರುದುಗಳು:
೧. ಕವಿವರ ಕಾಮಧೇನು
೨. ಗಿಣದಂಕಕಾರ್ತಿ
೩. ಜಿನಶಾಸನದೀಪಿಕೆ
೪. ದಾನಚಿಂತಾಮಣಿ
೫. ಗುಣದಖನಿ
೬. ಜೈನ ಶಾಸನ ಲಕ್ಷö್ಮ
೭. ಅಕಲಂಕಚರಿತೆ
೮. ಸಜ್ಜನೈಕಚೂಡಾಮಣಿ
೯. ಸರ್ವಕಳಾವಿದೆ; ಮುಂತಾದುವು
ಭಾರತೀಯ ಅಂಚೆ ಇಲಾಖೆಯು ಕನ್ನಡ ರಾಜ್ಯೋತ್ಸವ – ೨೦೨೨ರ ಅಂಗವಾಗಿ “ಜಿನರತ್ನ ಭೂಷಣರು” ಮಾಲಿಕೆಯ ಭಾಗವಾಗಿ “ದಾನಚಿಂತಾಮಣಿ ಅತ್ತಿಮಬ್ಬೆಯ” ವರ್ಣಚಿತ್ರದ ಪೋಸ್ಟಕಾರ್ಡ್ ಹೊರತಂದಿದೆ. ಹೊಂಬುಜ ಜೈನಮಠದ ವತಿಯಿಂದ ವರ್ಣಚಿತ್ರದ ಪೋಸ್ಟಕಾರ್ಡುಗಳನ್ನು ಪ್ರಾಯೋಜಿಸಲಾಗಿದೆ.
Visit this link for an article About “DanaChintamani Attimabbe” in English