Skip to content
Home » ಕನ್ನಡ » ವಿಚಾರ » ಕಮಠೋಪಸರ್ಗ ಪಾರ್ಶ್ವನಾಥ ತೀರ್ಥಂಕರರು – ಸಾಂಪ್ರದಾಯಿಕ, ಪೌರಾಣಿಕ ಹಿನ್ನೆಲೆ ಹಾಗೂ ವಿಗ್ರಹಗಳು

ಕಮಠೋಪಸರ್ಗ ಪಾರ್ಶ್ವನಾಥ ತೀರ್ಥಂಕರರು – ಸಾಂಪ್ರದಾಯಿಕ, ಪೌರಾಣಿಕ ಹಿನ್ನೆಲೆ ಹಾಗೂ ವಿಗ್ರಹಗಳು

  ಜೈನಧರ್ಮವು ಭಾರತದ ಪುರಾತನ ಧರ್ಮವಾಗಿದ್ದು ಇದರ ವ್ಯಾಪ್ತಿಯು ದೇಶದ ಉದ್ದಗಲಕ್ಕೂ ಹರಡಿದೆ. ವರ್ತಮಾನ ಕಾಲದ 24 ತೀರ್ಥಂಕರಲ್ಲಿ ಜೈನಧರ್ಮದ 23ನೇ ತೀರ್ಥಂಕರರಾದ ಪಾರ್ಶ್ವನಾಥರನ್ನು ಹೆಚ್ಚಾಗಿ ಆರಾಧಿಸುವುದನ್ನು ಕಾಣುತ್ತೇವೆ. ಅಲ್ಲದೆ ತೀರ್ಥಂಕರ ಪಾರ್ಶ್ವನಾಥರ ವಿಗ್ರಹಗಳನ್ನು ಭಾರತದಾದ್ಯಂತ ಕಾಣಬಹುದು. ಅವುಗಳಲ್ಲಿ ಕಮಠೋಪಸರ್ಗದ ವಿಗ್ರಹಗಳು ವಿಶೇಷವಾದದ್ದು. ಇವು ಪಾರ್ಶ್ವನಾಥ ತೀರ್ಥಂಕರರು ಕಾಯೋತ್ಸರ್ಗಭಂಗಿಯಲ್ಲಿರುವಾಗ ಕಮಠನು ಅವರಿಗೆ ತಾನು ಶಂಬರನಾಗಿ ಪುನರ್ಜನ್ಮವೆತ್ತಿ ಬಂದಾಗ ಉಪಸರ್ಗವನ್ನು ನೀಡಿದ ಚಿತ್ರಣವನ್ನು ನೀಡುವ ಶಿಲ್ಪಗಳು.

  ಕಮಠೋಪಸರ್ಗ ಪಾರ್ಶ್ವನಾಥ ತೀರ್ಥಂಕರರು - ಸಾಂಪ್ರದಾಯಿಕ, ಪೌರಾಣಿಕ ಹಿನ್ನೆಲೆ ಹಾಗೂ ವಿಗ್ರಹಗಳು
  ಕಮಠೋಪಸರ್ಗ ಪಾರ್ಶ್ವನಾಥ ತೀರ್ಥಂಕರರು – ಸಾಂಪ್ರದಾಯಿಕ, ಪೌರಾಣಿಕ ಹಿನ್ನೆಲೆ ಹಾಗೂ ವಿಗ್ರಹಗಳು

  ಸಾಂಪ್ರದಾಯಿಕ ಹಿನ್ನೆಲೆ – 1ಕಮಠನು ತನ್ನ ಪುನರ್ಜನ್ಮದಲ್ಲಿ ಪಾರ್ಶ್ವನಾಥ ತೀರ್ಥಂಕರರ ಮೇಲೆ ದಾಳಿ ಮಾಡಿದುದು ಹಾಗೂ ಆತನ ದ್ವೇಶಕ್ಕೆ ಅವರಿಬ್ಬರ ಹಿಂದಿನ ಜನ್ಮದ ಘಟನೆಯೊಂದಕ್ಕೆ ಸಂಬಂಧಿಸಿದ್ದಾಗಿದೆ. ಕಮಠನು ಯಜ್ಞವೊಂದರಲ್ಲಿ ಮಗ್ನನಾಗಿದ್ದಾಗ ಹಾವುಗಳು ಮರದ ದಿಮ್ಮಿಯೊಳಗಿದ್ದು ಅವು ಮರಣ ಹೊಂದುತ್ತಿವೆ ಎಂದು ಪಾರ್ಶ್ವನಾಥರು ತಿಳಿಸಿ ಕಮಠನ ಈ ಕಾರ್ಯವೂ ನಿಷ್ಪ್ರಯೋಜಕವಾಗಿದ್ದು ಹಿಂಸೆಯನ್ನು ಪ್ರೇರೇಪಿಸುತ್ತದೆ ಎಂದು ತಿಳಿಸಿದರು. ಇದರಿಂದ ಕುಪಿತನಾದ ಕಮಠನು ತನ್ನ ಈ ಕಾರ್ಯವು ಹಿಂಸೆಯನ್ನು ಹೇಗೆ ಪ್ರೇರೇಪಿಸುತ್ತದೆ ಎಂದು ಕೇಳಿದನು. ಆಗ ಪಾರ್ಶ್ವನಾಥರು ಮರದ ದಿಮ್ಮಿಯೊಂದನ್ನು ಎಳೆದು ಸೀಳಿದಾಗ ಅದರಿಂದ ಎರಡು ಹಾವುಗಳು ಹೊರಬಂದವು. ಇದರಿಂದ ವ್ಯಗ್ರನಾದ ಕಮಠನು ಪಾರ್ಶ್ವನಾಥರ ವಿರುದ್ಧ ಸೇಡನ್ನು ತೀರಿಸಿಕೊಳ್ಳುವ ಶಪಥ ಮಾಡಿದ, ನಂತರ ಆತನು ತನ್ನ ಮುಂದಿನ ಇನ್ನೊಂದು ಜನ್ಮದಲ್ಲಿ ಶಂಬರನಾಗಿ ಪುನರ್ಜನ್ಮವೆತ್ತಿದ್ದನು. ಇದೇ ಹಾವುಗಳು ನಂತರ ನಾಗರಗಳ ರಾಜ ಧರಣೇಂದ್ರನೆಂದು ಹಾಗೂ ಧರಣೇಂದ್ರನ ರಾಣಿಯಾಗಿ ಪದ್ಮಾವತಿಯು ಪುನರ್ಜನ್ಮ ತಳೆದರು.

  ಕೌಶಂಬಿಯ ದಟ್ಟಡವಿಗಳ ನಡುವೆ ಪಾರ್ಶ್ವನಾಥ ತೀರ್ಥಂಕರರು ದೇವದಾರು ಮರದ ಕೆಳಗೆ ತಪಸ್ಸಿನಲ್ಲಿ ಮಗ್ನರಾಗಿದ್ದರು. ಶಂಬರನು ಆ ಪ್ರದೇಶವನ್ನು ಹಾದು ಹೋಗುವ ಸಮಯದಲ್ಲಿ ಅವನ ವಿಮಾನವು ಅಲ್ಲಿ ನಿಲ್ಲುತ್ತದೆ. ಶಂಬರನು ತನ್ನ ವಿಭಂಗ ಜ್ಞಾನದಿಂದ2 ಪಾರ್ಶ್ವನಾಥರ ಮೇಲೆ ತನಗಿದ್ದ ದ್ವೇಷವನ್ನು ನೆನಪಿಸಿಕೊಂಡು ದಾಳಿ ಮಾಡಿದನು3. ಪಾರ್ಶ್ವನಾಥರ ಮೇಲೆ ಹುಲಿ, ಸಿಂಹ, ಆನೆ, ಇನ್ನಿತರ ಕಾಡಾಡಿಗಳು, ಬಿಲ್ಲು-ಬಾಣ ಹಾಗೂ ಬೃಹತ್ ಪರ್ವತಗಳ ಮೂಲಕ ದಾಳಿ ಮಾಡಿ ಕೊನೆಯದಾಗಿ ಭೀಕರವಾದ ಮಳೆ ಸುರಿಯುವಂತೆ ಮಾಡುತ್ತಾನೆ. ಇದರಿಂದ ನೆರೆ ಉಂಟಾಗಿ ಪಾರ್ಶ್ವನಾಥರ ಮೂಗಿನವರೆಗೂ ನೀರು ಸಂಗ್ರಹಗೊಳ್ಳುತ್ತದೆ. ತನ್ನ ವಿಭಂಗ ಜ್ಞಾನದಿಂದ ಇದನ್ನರಿತ ಧರಣೇಂದ್ರನು ತನ್ನ ರಾಣಿಯೊಂದಿಗೆ ಸ್ಥಳಕ್ಕಾಗಮಿಸಿ ತನ್ನ ಹೆಡೆಗಳನ್ನು ಪಾರ್ಶ್ವನಾಥರ ತಲೆಯ ಮೇಲೆ ವಿಸ್ತರಿಸಿ, ಜಿನರ ದೇಹದ ಸುತ್ತ ಸುತ್ತಿಕೊಂಡು ಪಾರ್ಶ್ವನಾಥರನ್ನು ನೀರಿನಿಂದ ಮೇಲಕ್ಕೆತ್ತಿದನು. ಪದ್ಮಾವತಿಯು ಪಾರ್ಶ್ವನಾಥರ ತಲೆಯ ಮೇಲೆ ವಜ್ರದ ಕೊಡೆಯನ್ನು ಹಿಡಿದಳು. ಕಮಠನ ಉಪಸರ್ಗದಿಂದ ಗಮನವನ್ನು ಬೇರೆಡೆ ಸೆಳೆಯಲು ನಾಗರಾಣಿಯರು ನೃತ್ಯ ಮಾಡಿದರು. ಇದೆಲ್ಲದರ ನಡುವೆ ಪಾರ್ಶ್ವನಾಥರು ಶಾಂತಚಿತ್ತರಾಗಿ ಶಂಬರನ ಉಪಸರ್ಗ ಅಥವಾ ಧರಣೇಂದ್ರ ಪದ್ಮಾವತಿಯರ ರಕ್ಷಣೆ ಇರಬಹುದು ಇವ್ಯಾವುಗಳಿಂದಲೂ  ವಿಚಲಿತರಾಗದೆ ಸ್ಥಿತಪ್ರಜ್ಞರಾಗಿ ನಿಂತಿದ್ದರು. ಇದನ್ನು ಕಂಡು ಪಶ್ಚಾತ್ತಾಪಪಟ್ಟ ಶಂಬರನು ತನ್ನ ಪತ್ನಿಯೊಂದಿಗೆ ಪಾರ್ಶ್ವನಾಥರ ಕಾಲಿಗೆರಗಿ ಕ್ಷಮೆ ಯಾಚಿಸಿದನು.

  ಜೈನ ಪುರಾಣಗಳಲ್ಲಿ ಕಮಠೋಪಸರ್ಗ – ಕಮಠೋಪಸರ್ಗದ ಬಗ್ಗೆ ವಿವಿಧ ಜೈನ ಪುರಾಣಗಳು ಹಾಗೂ ಪಾರ್ಶ್ವ ಪುರಾಣಗಳಲ್ಲಿ ವಿಸ್ತೃತವಾಗಿ ವಿವರಿಸಲಾಗಿದೆ. ಸುಮಾರು 60ಕ್ಕೂ ಹೆಚ್ಚು ಪಾರ್ಶ್ವ ಪುರಾಣಗಳನ್ನು ಹಲವಾರು ಭಾಷೆಗಳಲ್ಲಿ ಕಾಣಬಹುದು – ಅಪಭ್ರಂಶ, ದೊಂಡಾರಿ, ಕನ್ನಡ, ಮರಾಠಿ, ಪ್ರಾಕೃತ, ತಮಿಳು ಹಾಗೂ ಇನ್ನಿತರ ಭಾಷೆಗಳು.

  ಕೆಲವು ಪುರಾಣಗಳ ವಿವರಣೆ –

  • ತಿಲೋಯಪಣ್ಣತ್ತಿ – ಆಚಾರ್ಯ ಯತಿವೃಷಭರಿಂದ ವಿರಚಿತ ಪ್ರಾಕೃತ ಭಾಷೆಯ ಗ್ರಂಥ 4-5ನೇ ಶತಮಾನ.
  • ಮಹಾಪುರಾಣ – ಆಚಾರ್ಯ ಜಿನಸೇನ ಹಾಗೂ ಗುಣಭದ್ರರಿಂದ ವಿರಚಿತ 77 ಪರ್ವಗಳು ಹಾಗೂ 20 ಸಾವಿರ ಗಾಹೆಳಿರುವ ಸಂಸ್ಕೃತ ಕೃತಿ. ಇದರಲ್ಲಿ ಜೈನಧರ್ಮದ 63 ಮಹಾಪುರುಷರುಗಳ ಬಗ್ಗೆ ಅಥವಾ ತ್ರಿಶಷ್ಟಿ ಶಲಾಕ ಪುರುಷರ ಬಗ್ಗೆ ವಿಸ್ತೃತವಾಗಿ ವಿವರಿಸಲಾಗಿದೆ. ಇದರಲ್ಲಿ ಪೂರ್ವ ಪುರಾಣ ಹಾಗೂ ಉತ್ತರ ಪುರಾಣಗಳಿವೆ. ಉತ್ತರ ಪುರಾಣದಲ್ಲಿ ತೀರ್ಥಂಕರ ಪಾರ್ಶ್ವನಾಥರ ಜೀವನದ ವಿವರಣೆಯಿದೆ4.
  • ರಾಜಸ್ಥಾನದ ಬಾರ್ಮರ್ ನಲ್ಲಿ ದೊರೆತ ಅಪ್ರಕಟಿತ ಪ್ರಾಕೃತ ಕೃತಿ.
  • ’ಚಾವುಡರಾಯ ಪುರಾಣ’ದಲ್ಲಿ ’ಪಾರ್ಶ್ವನಾಥ ಚರಿತ್ರೆ’5 – ಆಚಾರ್ಯ ಗುಣಭದ್ರರಿಂದ ವಿರಚಿತವಾದ ಮಹಾಪುರಾಣದಲ್ಲಿರುವ ಪಾರ್ಶ್ವನಾಥ ಚರಿತ್ರೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.
  • ಪಾರ್ಶ್ವ ಪಂಡಿತನಿಂದ ವಿರಚಿತ ಕನ್ನಡದ ‘ಪಾರ್ಶ್ವ ಪುರಾಣ’ವು6 (ಕ್ರಿ.ಶ. 1222) ಚಂಪೂ ಶೈಲಿಯಲ್ಲಿ ಬರೆಯಲಾಗಿದೆ.
  • ಶಾಂತಕೀರ್ತಿಯಿಂದ ವಿರಚಿತ ಕನ್ನಡದ ‘ಪಾರ್ಶ್ವ ಪುರಾಣ’ವನ್ನು7 (ಕ್ರಿ.ಶ. 1733) ಸಾಂಗತ್ಯ ಶೈಲಿಯಲ್ಲಿ ಬರೆಯಲಾಗಿದೆ.
  • ಗುಣಚಂದ್ರಾಗ್ನಿ ವಿರಚಿತ ಪ್ರಾಕೃತ ಭಾಷೆಯ ಪಸನಹಚರ್ಯ8(ಪಾರ್ಶ್ವನಾಥ ಚರಿತ).
  • ಅಜ್ಞಾತ ಕವಿಯಿಂದ ವಿರಚಿತ ಪ್ರಾಕೃತ ಭಾಷೆಯಲ್ಲಿ 2564 ಗಾಹೆಗಳಿರುವ ಪಾರ್ಶ್ವನಾಥ ದಶಭಾವ ಚರಿತ್ರೆ9.
  • ನಾಗದೇವನಿಂದ ವಿರಚಿತ ಪ್ರಾಕೃತದ ಪಾರ್ಶ್ವನಾಥ ಪುರಾಣ10.
  • ಅನಂತರಾಜ ಆಭಾಜಿ ಭೋಪಾಲ್ಕರ್ ರವರು ಮರಾಠಿ ಭಾಷೆಯಲ್ಲಿ ಬರೆದಿರುವ ಶ್ರ‍ೀ ಪಾರ್ಶ್ವಪುರಾಣ11 (ಕ್ರಿ.ಶ.1928-33).

  ಕಮಠೋಪಸರ್ಗದ ಚಿತ್ರಣವಿರುವ ಪಾರ್ಶ್ವನಾಥ ವಿಗ್ರಹಗಳು – ಇವುಗಳನ್ನು ಬಾದಾಮಿ-ಐಹೊಳೆಯ ಜೈನ ಗುಹೆಗಳಲ್ಲಿ (ಕ್ರಿ.ಶ. 6ನೇ ಶತಮಾನದ ಕೊನೆ12); ಎಲ್ಲೋರ ಜೈನ ಗುಹೆಗಳಲ್ಲಿ; ಮಲೈನಾಥಾರ್ ಬಸದಿ, ಮೇಲ್ಸೀತಾಮೂರ್; ಮುಳಗುಂದದ ತ್ರಿಕೂಟ ಜಿನಾಲಯ; ಹೊಂಬುಜದ ಪಾರ್ಶ್ವನಾಥ ಬಸದಿ; ತಮಿಳುನಾಡಿನ ಕಳಗುಮಲೈ ಬಂಡೆ ಕೆತ್ತನೆಗಳು; ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದಲ್ಲಿನ ಶ್ರೀ ಅಂತರಾಳ ಪಾರ್ಶ್ವನಾಥ ಸ್ವಾಮಿ ಬಸದಿಗಳಲ್ಲಿ ಕಾಣುತ್ತೇವೆ. ತಮಿಳುನಾಡಿನಲ್ಲಿ ಇವು ಹೆಚ್ಚಿನ ಸಂಖ್ಯೆಯಲ್ಲಿವೆ.

  ಕರ್ನಾಟಕದಲ್ಲಿನ ಕಮಠೋಪಸರ್ಗ ಪಾರ್ಶ್ವನಾಥ ವಿಗ್ರಹಗಳು

  • ಐಹೊಳೆಯ ಗುಹೆಗಳು – ಮೀನ ಬಸದಿ ಎಂದು ಕರೆಯಲಾಗುವ ಐಹೊಳೆಯ ಜೈನ ಗುಹೆಯೊಂದರಲ್ಲಿ ತೀರ್ಥಂಕರ ಪಾರ್ಶ್ವನಾಥರ ಕೆತ್ತನೆ ಇದೆ. ತೀರ್ಥಂಕರರ ತಲೆಯ ಮೇಲೆ ಐದು ಹೆಡೆಗಳಿದ್ದು ಕಮಠನು ಅವರೆಡೆಗೆ ಪರ್ವತವೊಂದನ್ನು ಎಸೆಯುತ್ತಿರುವ ಚಿತ್ರ, ತೀರ್ಥಂಕರರ ಬಲಭಾಗದಲ್ಲಿ ಪದ್ಮಾವತಿ ಯಕ್ಷಿ ಇದ್ದು, ಆಕೆಯ ಕೈಯಲ್ಲಿ ಹಿಡಿ ಸಮೇತ ಇರುವ ಕೊಡೆಯೊಂದನ್ನು ಕಾಣಬಹುದು. ಪದ್ಮಾವತಿ ಯಕ್ಷಿಯೊಂದಿಗೆ ಧರಣೇಂದ್ರ ಯಕ್ಷನ ಕೆತ್ತನೆಯನ್ನು ಕೂಡ ನಾವು ಕಾಣಬಹುದು. ತೀರ್ಥಂಕರರ ಎಡಭಾಗದಲ್ಲಿ ಅವರ ಪಾದದ ಸಮೀಪ ಕಮಠನು ತನ್ನ ಎರಡೂ ಕೈಗಳನ್ನು ಮುಗಿದು ಕ್ಷಮೆ ಯಾಚಿಸುತ್ತಿರುವ ಚಿತ್ರಣವನ್ನು ಕಾಣಬಹುದು. ಐಹೊಳೆಯು ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿದೆ.

  ಇದು ಬಹುಶಃ ವಿಶ್ವದ ಅತಿ ಪುರಾತನವಾದ ಕಮಠೋಪಸರ್ಗ ಪಾರ್ಶ್ವನಾಥ ತೀರ್ಥಂಕರರ ಕೆತ್ತನೆ.

  • ಬಾದಾಮಿಯ ಗುಹೆಗಳು – ಬಾದಾಮಿ ಪಟ್ಟಣವು ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿದೆ. ಇಲ್ಲಿ ನಾಲ್ಕು ಗುಹಾಲಯಗಳಿದ್ದು, ಅವುಗಳು ನಾಲ್ಕು ವಿವಿಧ ಹಂತಗಳಲ್ಲಿದ್ದು, ಒಂದರ ನಂತರ ಒಂದರಂತೆ ದರ್ಶನಗಯ್ಯಬಹುದು. ಇಲ್ಲಿನ ಮೊದಲ ಮೂರು ಗುಹಾಲಯಗಳು ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದಾಗಿದ್ದರೆ ನಾಲ್ಕನೆಯ ಗುಹಾಲಯ ಜೈನಧರ್ಮಕ್ಕೆ ಸಂಬಂಧಿಸಿದ್ದು.

  ನಾಲ್ಕನೇ ಗುಹಾಲಯವನ್ನು ’ಮೇಗಣ ಬಸದಿ’ ಎಂದೂ ಕೂಡ ಕರೆಯುತ್ತಾರೆ. ಇಲ್ಲಿ ಎದುರುಬದುರು ಕೆತ್ತಲಾಗಿರುವ ಚವ್ವೀಸ ತೀರ್ಥಂಕರರ ವಿಗ್ರಹಗಳು, ಮಹಾವೀರರದ್ದೆಂದು ಹೇಳಲಾಗುವ ಪದ್ಮಾಸನ ಮೂರ್ತಿ, ಜಕ್ಕವ್ವೆ ಎಂಬ ಶ್ರಾವಕಿಯ ಸಲ್ಲೇಖನ ಸ್ಮಾರಕ, ಭಗವಾನ್ ಬಾಹುಬಲಿ ಹಾಗೂ ಪಾರ್ಶ್ವನಾಥರು ಎದುರು ಬದುರು ಇರುವ ಕೆತ್ತನೆಯನ್ನು ಕಾಣಬಹುದು. ಈ ಕೆತ್ತನೆಯು ಬಹಳ ಪ್ರಖ್ಯಾತವಾದದ್ದು.

  ಇಲ್ಲಿ ಕಾಣಲಾಗುವ ಪಾರ್ಶ್ವನಾಥರ ಕೆತ್ತನೆಯೂ ಕೂಡ ಕಮಠೋಪಸರ್ಗ ಪಾರ್ಶ್ವನಾಥ ತೀರ್ಥಂಕರರ ಕೆತ್ತನೆಯೇ. ತೀರ್ಥಂಕರರ ಬಲಭಾಗದಲ್ಲಿ ಪದ್ಮಾವತಿ ಯಕ್ಷಿ ಇದ್ದು, ಆಕೆಯ ಕೈಯಲ್ಲಿ ಹಿಡಿ ಸಮೇತ ಇರುವ ಕೊಡೆಯೊಂದನ್ನು ಕಾಣಬಹುದು. ತೀರ್ಥಂಕರರ ತಲೆಯ ಮೇಲಿನ ಎಡಭಾಗದಲ್ಲಿ ತೀರ್ಥಂಕರರಿಗೆ ಉಪದ್ರವವನ್ನು ನೀಡುತ್ತಿರುವ ಕಮಠನ ಚಿತ್ರಣವನ್ನು ಹಾಗೂ ಅವರ ಪಾದತಳದಲ್ಲಿ ಕುಳಿತಿರುವ ಶಂಭರನ ಕೆತ್ತನೆಯನ್ನು ಕಾಣಬಹುದು.

  Kamatopasarga Parshwanath Tirthankar Idol at Trikuta Jinalaya, Mulagunda, Gadag District, Karnataka, India. 902-03 AD | Photo: HPN@JHC
  • ಮುಳಗುಂದದ ತ್ರಿಕೂಟ ಜಿನಾಲಯ – ಇಲ್ಲಿ ವಿಶಿಷ್ಟವಾಗಿರುವ ಪಾರ್ಶನಾಥರ ಕಮಠೋಪಸರ್ಗ ವಿಗ್ರಹವನ್ನು ಕಾಣಬಹುದು. ಈ ವಿಗ್ರಹದ ಕೆಳಗಿನ ⅓ ಭಾಗವು ಶಿಥಿಲವಾಗಿದೆ. ಈ ವಿಗ್ರಹದ ಹಿಂಭಾಗದಲ್ಲಿರುವ ಕ್ರಿ.ಶ.902-903ನೇ ಇಸವಿಗೆ ಸೇರಿದ ಸಂಸ್ಕೃತದ ಶಾಸನವು13 ಈ ತೀರ್ಥಂಕರರ ಕಾಲವನ್ನು ತಿಳಿಸುತ್ತದೆ. ಈ ವಿಗ್ರಹವನ್ನು ಜಿನಾಲಯದ ಗೋಡೆಯೊಳಗಿಟ್ಟು ಕಟ್ಟಲಾಗಿತ್ತು. ಈ ಬಸದಿಯ ಜೀರ್ಣೋದ್ಧಾರದ ಸಂದರ್ಭದಲ್ಲಿ ಜೈನ ವಿದ್ವಾಂಸರಾದ ಪ್ರ‍ೊ.ಹಂಪ ನಾಗರಾಜಯ್ಯನವರು ತಮ್ಮ ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ಪತ್ತೆಮಾಡಿದ್ದರು – 1998-99.
   ತೀರ್ಥಂಕರರಿಗೆ ಉಪಸರ್ಗವನ್ನು ನೀಡುತ್ತಿರುವ ಆನೆ, ತೀರ್ಥಂಕರರೆಡೆಗೆ ಬಡೆಯೊಂದನ್ನು ಎಸೆಯುತ್ತಿರುವ ಶಂಬರ ಹಾಗೂ ಇನ್ನಿತರ ಕೆತ್ತನೆಗಳನ್ನು ಕಾಣಬಹುದು. ತೀರ್ಥಂಕರರ ತಲೆಯ ಮೇಲೆ ಕೊಡೆ ಹಾಗೂ ಅವರ ಬಲಭಾಗದವರೆಗೂ ವಿಸ್ತರಿಸುವ ಹಿಡಿಯನ್ನು ಕಾಣಬಹುದು.

  ಮುಳಗುಂದವು ಕರ್ನಾಟಕದ ಗದಗ ಜಿಲ್ಲೆಯಲ್ಲಿರುವ ಪಟ್ಟಣವಾಗಿದ್ದು, ಜಿಲ್ಲಾ ಕೇಂದ್ರ ಗದಗದಿಂದ ಸುಮಾರು 23 ಕಿ.ಮೀ.ದೂರದಲ್ಲಿದೆ.

  ಹೊಂಬುಜದ ಪಾರ್ಶ್ವನಾಥ ಬಸದಿ – ಪಾರ್ಶ್ವನಾಥ ಬಸದಿಯ ನವರಂಗದಲ್ಲಿ ಗರ್ಭಗುಡಿಯ ಎಡ-ಬಲಗಳಲ್ಲಿ ಕಮಠೊಪಸರ್ಗ ಪಾರ್ಶ್ವನಾಥ ತೀರ್ಥಂಕರರ ಎರಡು ವಿಗ್ರಹಗಳನ್ನು ಕಾಣಬಹುದು. ಇವು ಕ್ರಿ.ಶ.9 ನೇ ಶತಮಾನದ14 ಕೊನೆಯ ಭಾಗಕ್ಕೆ ಸೇರಿದೆ. ಇವು ಸುಮಾರು 7ಅಡಿ ಎತ್ತರವಿದ್ದು ವಿಶ್ವಪದ್ಮದ (ಎರಡು ತಾವರೆಗಳು) ಮೇಲೆ ನಿಂತಿವೆ. ಕೆಲವು ಅಂಶಗಳನ್ನು ಬಿಟ್ಟರೆ ಇವು ಬಹುತೇಕ ಒಂದೇ ರೀತಿಯಲ್ಲಿವೆ.

  • ಗರ್ಭಗೃಹದ ಬಲಭಾಗದಲ್ಲಿರುವ ಪಾರ್ಶ್ವನಾಥ ವಿಗ್ರಹ – ವಿಗ್ರಹದ ಬಲಭಾಗದಲ್ಲಿ ಮೇಲಿನಿಂದ ಕೆಳಗೆ ತೀರ್ಥಂಕರ ರೆಡೆಗೆ ಬಂಡೆಯೊಂದನ್ನು ಎಸೆಯುತ್ತಿರುವ ರಾಕ್ಷಸ, ಬಾಣವನ್ನು ತೀರ್ಥಂಕರರೆಡೆಗೆ ಬಿಡುತ್ತಿರುವ ರಾಕ್ಷಸ, ತೀರ್ಥಂಕರ ರೆಡೆಗೆ ಓಡಿಬರುತ್ತಿರುವ ಎತ್ತು; ಬಲಭಾಗದಲ್ಲಿ ಮೇಲಿನಿಂದ ಕೆಳಗೆ ತೀರ್ಥಂಕರ ರೆಡೆಗೆ  ಈಟಿಯೊಂದನ್ನುಎಸೆಯುತ್ತಿರುವ ರಾಕ್ಷಸ, ಒಂದು ಕೈಯ್ಯಲ್ಲಿ ಈಟಿ ಹಾಗೂ ಮತ್ತೊಂದು ಕೈಯ್ಯಲ್ಲಿ ವಿಷಕಾರಿ ಸರ್ಪವನ್ನು ಹೊಂದಿರುವ ರಾಕ್ಷಸ, ರೊಚ್ಚಿಗೆದ್ದು ತೀರ್ಥಂಕರ ರೆಡೆಗೆ ಧಾವಿಸುತ್ತಿರುವ ಹುಲಿ ಮತ್ತು ಆನೆ. ಇವಲ್ಲದೆ ತೀರ್ಥಂಕರರ ಎಡ-ಬಲಗಳಲ್ಲಿ ಪದ್ಮಾವತಿ ಧರಣೇಂದ್ರರ ಕೆತ್ತನೆಗಳನ್ನು ಹಾಗೂ ಅವರಿಬ್ಬರು ವಿವಿಧ ಆಭರಣಗಳನ್ನು ಧರಿಸಿರುವ ಚಿತ್ರಣ ಕಾಣಬಹುದು. ತ್ರಿಭಂಗ ಭಂಗಿಯಲ್ಲಿರುವ ಧರಣೇಂದ್ರನು ತನ್ನ ಬಲಗೈಯ್ಯಲ್ಲಿ ಕಮಲದ ಹೂವನ್ನು ಹಿಡಿದಿದ್ದು ಎಡಗೈಯ್ಯನ್ನು ತನ್ನ ಸೊಂಟದ ಮೇಲೆ ಇಟ್ಟುಕೊಂಡಿದ್ದಾನೆ. ಪದ್ಮಾವತಿಯಕ್ಷಿಯು ವಜ್ರಕೊಡೆಯ ಹಿಡಿಯನ್ನು ಹಿಡಿದಿದ್ದು ಅದು ತೀರ್ಥಂಕರರ ತಲೆಯ ಮೇಲಿನವರೆಗೆ ವಿಸ್ತರಿಸಿರುವುದನ್ನು ಕಾಣಬಹುದು. ಧರಣೇಂದ್ರ ಯಕ್ಷನ ಕೆಳಗಡೆ ತನ್ನ ಎರಡೂ ಕೈಮುಗಿದು ಕ್ಷಮೆಯಾಚಿಸುತ್ತಿರುವ ಕಮಠನ ಕೆತ್ತನೆಯನ್ನು ಕಾಣಬಹುದು. ಕಮಠನ ಎದುರುಗಡೆ ಹಾಗೂ ಪದ್ಮಾವತಿ ಯಕ್ಷಿಯ ಕೆಳಗೆ ಪಾರ್ಶ್ವನಾಥ ತೀರ್ಥಂಕರರ ಗುಣಗಾನ ಮಾಡುತ್ತ ಕೈಯನ್ನು ಎತ್ತಿರುವ ಕಮಠನ ಹೆಂಡತಿಯನ್ನು ಕಾಣಬಹುದು. ಕಮಠ ಹಾಗೂ ಆತನ ಪತ್ನಿಯ ನಡುವೆ ಮಾನವ ರೂಪದಲ್ಲಿರುವ ನಾಗಕನ್ಯೆಯರು ವಿಶ್ವಪದ್ಮ ಪೀಠವನ್ನು ಹಿಡಿದಿರುವುದನ್ನು ಕಾಣಬಹುದು. ಇದು ಪಾರ್ಶ್ವನಾಥ ತೀರ್ಥಂಕರರ ದೇಹವು ಧರಣೇಂದ್ರನಿಂದ ಎತ್ತಲ್ಪಟ್ಟ್ಟಿತ್ತೆಂದು ಸೂಚಿಸುತ್ತದೆ.
  • ಗರ್ಭಗೃಹದ ಬಲಭಾಗದಲ್ಲಿರುವ ಪಾರ್ಶ್ವನಾಥ ವಿಗ್ರಹ – ಈ ವಿಗ್ರಹವು ಕೆಲವು ಅಂಶಗಳನ್ನು ಹೊರತುಪಡಿಸಿ ಗರ್ಭಗುಡಿಯ ಬಲ ಭಾಗದಲ್ಲಿರುವ ಪಾರ್ಶ್ವನಾಥ ತೀರ್ಥಂಕರರ ವಿಗ್ರಹದಂತೆಯೇ ಇದೇ. ಇದರಲ್ಲಿನ ವ್ಯತ್ಯಾಸಗಳು – ಕಮಠನ ಪತ್ನಿಯು ಕಮಠನಂತೆಯೇ ತನ್ನ ಎರಡೂ ಕೈಗಳನ್ನು ಮುಗಿದಿದ್ದಾಳೆ, ತೀರ್ಥಂಕರರು ವಿಶ್ವಪದ್ಮದ ಮೇಲೆ ನಿಂತಿದ್ದರೂ ಕೂಡ ವಿಶ್ವ ಪದ್ಮವನ್ನು ಎತ್ತಿರುವ ಕನ್ಯೆಯರನ್ನು ಇಲ್ಲಿ ಕಾಣಲಾಗುವುದಿಲ್ಲ, ವಿಗ್ರಹದ ಮುಂಭಾಗದ ಮದ್ಯದಲ್ಲಿ ಕುಕ್ಕುಟ ಸರ್ಪವನ್ನು ತೀರ್ಥಂಕರರ ಲಾಂಛನದಂತೆ ಚಿತ್ರಿಸಲಾಗಿದೆ.

  ಹೊಂಬುಜ ಕ್ಷೇತ್ರವು ಮಹಾಮಾತೆ ಪದ್ಮಾವತಿ ಅಮ್ಮನವರ ಬಸದಿಯಿಂದ ವಿಶ್ವ ಪ್ರಸಿದ್ಧವಾಗಿದ್ದು ಇಲ್ಲಿನ ಜೈನ ಮಠವು ಕರ್ನಾಟಕದ ಅತಿ ಪುರಾತನ ಜೈನಮಠವಾಗಿದ್ದು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಇಲ್ಲಿನ ಪೀಠಾಧಿಪತಿಗಳಾಗಿದ್ದಾರೆ. ಹೊಂಬುಜವು ಹೊಸನಗರ ತಾಲೂಕಿನಲ್ಲಿದ್ದು ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ 55 ಕಿ.ಮೀ. ದೂರದಲ್ಲಿದೆ.

  Kamata Parshwanath Tirthankar, Antarala Parshwanath Basadi, Chandragiri, Shravanabelagola, Hassan District, Karnataka. 12th Century AD. | Photo : HPN@JHC
  • ಅಂತರಾಳ ಪಾರ್ಶ್ವನಾಥ ಸ್ವಾಮಿ ಬಸದಿ – ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದಲ್ಲಿರುವ ಸುಮಾರು 15 ಅಡಿ ಎತ್ತರದ ಪಾರ್ಶ್ವನಾಥ ತೀರ್ಥಂಕರರ ವಿಗ್ರಹವಿರುವ ಬಸದಿಯನ್ನು ಅಂತರಾಳ ಪಾರ್ಶ್ವನಾಥಸ್ವಾಮಿ ಬಸದಿ ಎಂದು ಕರೆಯುತ್ತಾರೆ. ದಾಖಲೆಗಳಲ್ಲಿ ಈ ಬಸದಿಯನ್ನು ಕಮಠ ಪಾರ್ಶ್ವನಾಥ ಬಸದಿ ಎಂದು ಹೆಸರಿಸಲಾಗಿದೆ ಇದನ್ನು ಬಹುಶಃ ಹನ್ನೊಂದನೇ ಶತಮಾನದಲ್ಲಿ15 ಕಟ್ಟಿಸಿರಬಹುದು. ಈ ಬಸದಿಯಲ್ಲಿರುವ ಶಾಸನವೊಂದು (ಕ್ರಿ.ಶ. 1257) ಕಮಟ ಪಾರ್ಶ್ವನಾಥರಿಗೆ ಉಡುಗೊರೆಯನ್ನು ನೀಡಿದ ಉಲ್ಲೇಖವನ್ನು ನೀಡುತ್ತದೆ.

  ಕಮಠನ ಉಪಸರ್ಗದ ಕೆತ್ತನೆ – ತೀರ್ಥಂಕರರ ಮಂಡಿಯ ಕೆಳಭಾಗದ ಎರಡು ಬದಿಗಳಲ್ಲಿ ಕಮಠನ ಉಪಸರ್ಗದ ಕೆತ್ತನೆಗಳನ್ನು ಕಾಣಬಹುದು. ಈ ಕೆತ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮೊದಲು ತೀರ್ಥಂಕರರೆಡೆಗೆ ಬೆಟ್ಟವೊಂದನ್ನು ಎಸೆಯುತ್ತಿರುವ ಕಮಠ, ಎರಡನೆಯ ಶಿಲ್ಪದಲ್ಲಿ ತೀರ್ಥಂಕರರೆಡೆಗೆ ಈಟಿಯನ್ನು ಎಸೆಯುತ್ತಿರುವ ರಾಕ್ಷಸ, ಮೂರನೆಯ ಕೆತ್ತನೆಯಲ್ಲಿ ವಿಷಸರ್ಪವನ್ನು ಕೈಯಲ್ಲಿ ಹಿಡಿದಿರುವ ರಾಕ್ಷಸರು, ನಾಲ್ಕನೆಯ ಕೆತ್ತನೆಯಲ್ಲಿ ಕಮಠನು ತನ್ನ ಹೆಂಡತಿಯೊಂದಿಗೆ ಎರಡೂ ಕೈಗಳನ್ನು ಮುಗಿದಿ ಕ್ಷಮೆಕೇಳುತ್ತಿರುವ ಕೆತ್ತನೆಯನ್ನು ಕಾಣಬಹುದು. ಈ ಕೆತ್ತನೆಗಳು ಇವು ಕಮಠೋಪಸರ್ಗಕ್ಕೆ ಸಂಬಂಧಿಸಿದ ಕೆತ್ತನೆಗಳೆಂದು ನಿಶ್ಚಯಿಸಲು ಸಾಕಷ್ಟು ಪುರಾವೆಗಳನ್ನೊದಗಿಸುತ್ತವೆ. ಇಲ್ಲಿರುವ ಕೆತ್ತನೆಗಳು ಕಮಠೋಪಸರ್ಗಕ್ಕೆ ಸಂಬಂಧಿಸಿದ್ದೆಂದು ಹೆಚ್ಚಿನ ಜನರಿಗೆ ತಿಳಿದಿಲ್ಲ.

  ಮಹಾರಾಷ್ಟ್ರದಲ್ಲಿನ ಕಮಠೋಪಸರ್ಗ ಪಾರ್ಶ್ವನಾಥ ವಿಗ್ರಹಗಳು

  • ಎಲ್ಲೋರಾ ಜೈನ ಗುಹೆಗಳು – ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೊದವತಿಯಿಂದ ವಿಶ್ವ ಪರಂಪರೆಯ ತಾಣವೆಂದು ಗುರುತಿಸಲಾಗಿರುವ ಕ್ಷೇತ್ರ ಎಲ್ಲೋರಾ. ಇಲ್ಲಿ ಬೃಹತ್ ಬಂಡೆಗಳಲ್ಲಿ ಕೆತ್ತಲಾಗಿರುವ ಗುಹಾಲಯಗಳಿದ್ದು ಅವುಗಳು ಜೈನ, ಬೌದ್ಧ ಹಾಗೂ ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದಾಗಿವೆ. ಅವುಗಳಲ್ಲಿ5 ಗುಹೆಗಳು (ಗುಹೆ ಸಂಖ್ಯೆ – 30 ರಿಂದ 34) ಜೈನಧರ್ಮದ ದಿಗಂಬರ ಸಂಪ್ರದಾಯಕ್ಕೆ ಸಂಬಂಧಿಸಿದ್ದಾಗಿವೆ. ಇವುಗಳನ್ನು ಕ್ರಿ.ಶ. 6 ರಿಂದ 10 ನೇ ಶತಮಾನದ ಸಮಯದಲ್ಲಿ ನಿರ್ಮಿಸಲಾಗಿದೆ. ಜೈನ ಗುಹಾಲಯಗಳನ್ನು ಯಾದವರ ಆಳ್ವಿಕೆಯ ಸಮಯದಲ್ಲಿ ಸುಮಾರು 9-10 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇವುಗಳಿಗೆ ಹಣಕಾಸಿನ ನೆರವನ್ನು ಆಯಾ ಸಮಯದಲ್ಲಿದ್ದ ರಾಜ ಮನೆತನದವರು, ವರ್ತಕರು ಹಾಗೂ ಧನವಂತರು ನೀಡಿದರು.
   ಎಲ್ಲೋರಾದ ಎಲ್ಲ ಜೈನ ಗುಹಾಲಯಗಳಲ್ಲಿ (ಗುಹೆ 34 ಅನ್ನು ಹೊರತು ಪಡಿಸಿ) ಕಮಠೋಪಸರ್ಗದ 15 ಕ್ಕೂ ಹೆಚ್ಚು ಕೆತ್ತನೆಗಳನ್ನು ಕಾಣಬಹುದು. ಸಾಮಾನ್ಯವಾಗಿ ಈ ಎಲ್ಲ ಕೆತ್ತನೆಗಳಲ್ಲಿ ತೀರ್ಥಂಕರರ ತಲೆ ಮೇಲೆ ಹಾಗೂ ಎಡ ಬಲಗಳಲ್ಲಿ ಕಮಠನು ವಿವಿಧ ರೀತಿಯಲ್ಲಿ ಉಪಸರ್ಗಗಳನ್ನು ನೀಡುತ್ತಿರುವ ಚಿತ್ರಣವನ್ನು ನಾವು ಕಾಣಬಹುದು. ಬಹುತೇಕ ಎಲ್ಲ ಕೆತ್ತನೆಗಳಲ್ಲಿ ತೀರ್ಥಂಕರರ ಬಲ ಭಾಗದಲ್ಲಿ ಪದ್ಮಾವತಿ ಯಕ್ಷಿಯು ಕೊಡೆಯ ಹಿಡಿಯನ್ನು ಹಿಡಿದಿದ್ದು ತೀರ್ಥಂಕರರ ತಲೆಯ ಮೇಲೆ ಕೊಡೆಯನ್ನು ಕಾಣಬಹುದು. ತೀರ್ಥಂಕರರ ಎಡ ಭಾಗದಲ್ಲಿ ಸಾಮಾನ್ಯವಾಗಿ ಕಮಠನು ತೀರ್ಥಂಕರರ ಕ್ಷಮೆಯಾಚಿಸುತ್ತಿರುವ ಚಿತ್ರಣವನ್ನು ಕಾಣಬಹುದು.

  ಪ್ರಪಂಚದಲ್ಲಿ ಕೇವಲ ಒಂದೇ ಕ್ಷೇತ್ರದಲ್ಲಿ ಅತಿಹೆಚ್ಚು ಕಮಠೋಪಸರ್ಗ ಪಾರ್ಶ್ವನಾಥ ತೀರ್ಥಂಕರರ ವಿಗ್ರಹವಿರುವುದು ಎಲ್ಲೋರಾದಲ್ಲಿ ಮಾತ್ರ.

  ಎಲ್ಲೋರಾ, ಜಿಲ್ಲಾ ಕೇಂದ್ರ ಔರಂಗಾಬಾದ್ ನಿಂದ 31 ಕಿ.ಮೀ. ದೂರ‍ದಲ್ಲಿದೆ.

  ತಮಿಳುನಾಡಿನನ ಕಮಠೋಪಸರ್ಗ ಪಾರ್ಶ್ವನಾಥ ವಿಗ್ರಹಗಳು

  Kamatopasarga Parshwanath Tirthankar Carvings on Rocks at Malainathar Temple, Melsithauram District, Tamil Nadu, India. Period - 9th Century A.D. | Photo: HPN@JHC
  • ಮಲೈನಾಥಾರ್ ಬಸದಿ, ಮೇಲ್ಸಿಥಾಮೂರ್ –  ಮೇಲ್ಸಿಥಾಮೂರ್ ನಲ್ಲಿನ ಬೃಹತ್ ಪಾರ್ಶ್ವನಾಥ ಬಸದಿಯ ಹಿಂಭಾಗದಲ್ಲಿ ಮಲೈನಾಥಾರ್ ಬಸದಿ ಇದೆ. ಈ ಬಸದಿಯಲ್ಲಿ ಬೃಹತ್ ಬಂಡೆಯ ಮೇಲೆ ಜೈನಧರ್ಮಕ್ಕೆ ಸಂಬಂಧಿಸಿದ ವಿವಿದ ಕೆತ್ತನೆಗಳನ್ನು ಕಾಣಬಹುದು. ಬೃಹತ್ ಬಂಡೆಯ ಮೇಲೆ ಕೆತ್ತನೆಗಳಿರುವುದರಿಂದ ಇದನ್ನು ”ಮಲೈನಾಥಾರ್ ಬಸದಿ” ಎನ್ನಲಾಗಿದೆ. ತಮಿಳಿನಲ್ಲಿ ”ಮಲೈ” ಎಂದರೆ ಬೆಟ್ಟ ಎಂದರ್ಥ.

  ಕ್ರಿ.ಶ. 9 ನೇ ಶತಮಾನಕ್ಕೆ ಸೇರಿದ ಇಲ್ಲಿನ ಬಂಡೆಯ ಮೇಲಿನ ಕೆತ್ತನೆಗಳು ವಿಶಿಷ್ಠವಾಗಿವೆ. ಒಂದೇ ಬಂಡೆಯ ಮೇಲೆ ಐದು ವಿಭಿನ್ನ ವಿಶಿಷ್ಠ ಕೆತ್ತನೆಗಳಿವೆ. 

  ಇಲ್ಲಿರುವ ಕೆತ್ತನೆಗಳ ವಿವರ –

  • ತಮ್ಮ ಸಹೋದರಿಯರಾದ ಬ್ರಾಹ್ಮಿ ಮತ್ತು ಸುಂದರಿಯರೊಂದಿಗಿರುವ ಭಗವಾನ್ ಬಾಹುಬಲಿ;
  • ಕಮಠೋಪಸರ್ಗ ಪಾರ್ಶ್ವನಾಥರ ಕೆತ್ತನೆ – ಪಾರ್ಶ್ವನಾಥ ತೀರ್ಥಂಕರರ ತಲೆಯ ಮೇಲೆ ಅವರಿಗೆ ಉಪಸರ್ಗ ನೀಡುತ್ತಿರುವ ಆನೆಗಳು ಹಾಗೂ ಅವರ ಪಾದದ ಇಕ್ಕೆಲಗಳಲ್ಲಿ ಅವರ ಕ್ಷಮೆಯಾಚಿಸುತ್ತಿರುವ ಕಮಠ ಹಾಗೂ ಆತನ ಪತ್ನಿಯ ಕೆತ್ತನೆಯನ್ನು ಕಾಣಬಹುದು.
  • ಪಾರ್ಶ್ವನಾಥರ ಕೆತ್ತನೆಯ ಪಕ್ಕದಲ್ಲಿ ಪದ್ಮಾಸನಯುಕ್ತ ಆದಿನಾಥ ಹಾಗೂ ನೇಮಿನಾಥರ ವಿಗ್ರಹವನ್ನು ಕಾಣಬಹುದು.
  • ನೇಮಿನಾಥರ ವಿಗ್ರಹದ ಪಕ್ಕದಲ್ಲಿ ಕೂಷ್ಮಾಂಡಿನಿ ಯಕ್ಷಿಯ ಕೆತ್ತನೆಯನ್ನು ಕಾಣಬಹುದು.
  • ತಿರಕ್ಕೊಳ್ – ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯ ವಂಡವಾಸಿ ಸಮೀಪದ ತಿರಕ್ಕೊಳ್ ನ ಬಂಡೆಯ ಮೇಲೆ ಉದ್ದವಾದ ಕಮಠೋಪಸರ್ಗ ಪಾರ್ಶ್ವನಾಥರ ಕೆತ್ತನೆಯನ್ನು ಕಾಣಬಹುದು. ಇದನ್ನು ವಾಸುದೇವ ಸಿದ್ಧಾಂತ ಭಟ್ಟಾರ‍ಕರು ಕ್ರಿ.ಶ. 8 ನೇ ಶತಮಾನದಲ್ಲಿ16 ಕೆತ್ತಿಸಿದರೆಂದು ಶಾಸನವೊಂದು ತಿಳಿಸುತ್ತದೆ. ಕಾಯೋತ್ಸರ್ಗ ಭಂಗಿಯಲ್ಲಿರುವ ಪಾರ್ಶ್ವನಾಥರ ತಲೆಯ ಮೇಲೆ ಐದು ಹೆಡೆಗಳಿವೆ. ಪಾರ್ಶ್ವನಾಥರೆಡೆಗೆ ಕಮಠನು ಅತ್ಯುಘ್ರನಾಗಿ17 ಬಂಡೆಯನ್ನು ತನ್ನ ಒಂದು ಕೈಯಲ್ಲಿ ಎಸೆಯುತ್ತಿದ್ದಾನೆ, ಅಲ್ಲದೆ ಮತ್ತೊಂದು ಕೈಯ್ಯಲ್ಲಿ ಗದೆಯನ್ನು ಹೊಂದಿದ್ದಾನೆ. ತೀರ್ಥಂಕರರ ಎಡ ಭಾಗದಲ್ಲಿ ಪದ್ಮಾವತಿ ಯಕ್ಷಿಯು ಕೊಡೆಯ ಹಿಡಿಯನ್ನು ಹಿಡಿದಿದ್ದು ತೀರ್ಥಂಕರರ ತಲೆಯ ಮೇಲಿರುವ ಹೆಡೆಯ ಮೇಲೆ ಕೊಡೆಯನ್ನು ಕಾಣಬಹುದು, ಅವರ ಪಾದದ ಬಲಭಾಗದಲ್ಲಿ ಕ್ಷಮೆಯಾಚಿಸುತ್ತಿರುವ ಕಮಠನ ಕೆತ್ತನೆಯನ್ನು ಕಾಣಬಹುದು.
  • ಅಟಚಿಪಕ್ಕಮ್ – ಅಟಚಿಪಕ್ಕಮ್ ನಲ್ಲಿ 9ನೇ ಶತಮಾನಕ್ಕೆ18 ಸೇರಿದ ಚೋಳ ಶೈಲಿಯಲ್ಲಿ  ಕೆತ್ತಲಾದ ಕಾಯೋತ್ಸರ್ಗ ಭಂಗಿಯಲ್ಲಿರು ಪಾರ್ಶ್ವನಾಥ ತೀರ್ಥಂಕರರ ಶಿಲ್ಪವನ್ನು ಬೃಹತ್ ಬಂಡೆಯೊಂದರ ಮೇಲೆ ಕೆತ್ತಿರುವುದನ್ನು ಕಾಣಬಹುದು. ಪಾರ್ಶ್ವನಾಥರ ಇಕ್ಕೆಲಗಳಲ್ಲಿ ಧರಣೇಂದ್ರ ಪದ್ಮಾವತಿಯರ ಕೆತ್ತನೆ ಇದ್ದು ಪದ್ಮಾವತಿ ಯಕ್ಷಿಯು ಕೊಡೆಯ ಹಿಡಿಯನ್ನು ಹಿಡಿದಿದ್ದು ತೀರ್ಥಂಕರರ ತಲೆಯ ಮೇಲಿರುವ ಹೆಡೆಯ ಮೇಲೆ ಕೊಡೆಯನ್ನು ಕಾಣಬಹುದು. ಕಮಠನು ತನ್ನ ನಾಲ್ಕು ಕೈಗಳಲ್ಲಿ ಬಂಡೆಯನ್ನುಎತ್ತಿ ಪಾರ್ಶ್ವನಾಥರೆಡೆಗೆ ಎಸೆಯುತ್ತಿರುವುದನ್ನು ಕಾಣಬಹುದು. ಕಮಠನ ಎದುರಿಗೆ ನಾಲ್ಕು ಕೈಗಳಿರುವ ಶಿಲ್ಪವೊಂದು ರಥವನ್ನು ಮುನ್ನಡೆಸುತ್ತಿರುವುದನ್ನು ಕಾಣಬಹುದು. ಅಲ್ಲದೆ ತೀರ್ಥಂಕರರ ಪಾದತಲದಲ್ಲಿ ಮಂಡಿಯೂರಿ ಕುಳಿತಿರುವ ಕಮಠನ ಕೆತ್ತನೆಯಿದೆ.
  • ಸೀಯಮಂಗಳಂ – ಉತ್ತರ ಆರ್ಕಾಟ್ ಜಿಲ್ಲೆಯ ಸೀಯಮಂಗಳಂನಲ್ಲಿ ಗುಹಾಲಯವೊಂದಿದ್ದು ಇದನ್ನು ಪಶ್ಚಿಮ ಗಂಗ ಸಾಮ್ರಾಜ್ಯದ ರಾಜಮಲ್ಲ – II19 (ಕ್ರಿ.ಶ. 877-907) ನಿರ್ಮಿಸಿದನು. ಪಾರ್ಶ್ವನಾಥ ತೀರ್ಥಂಕರರ ಇಕ್ಕೆಲಗಳಲ್ಲಿ ಧರಣೇಂದ್ರ ಪದ್ಮಾವತಿಯರ ಕೆತ್ತನೆ ಇದ್ದು ಪಾರ್ಶ್ವನಾಥರೆಡೆಗೆ ಬಂಡೆಯೊಂದನ್ನು ಎಸೆಯಿತ್ತಿರುವುದನ್ನು ಕಾಣಬಹುದು.
  • ಕಳಗುಮಲೈ – ಇಲ್ಲಿನ ಪಾರ್ಶ್ವನಾಥರ ಕೆತ್ತನೆಯು ಕ್ರಿ.ಶ.9 ನೇ ಶತಮಾನಕ್ಕೆ ಸೇರಿದ್ದು ಕಮಠನ ಉಪಸರ್ಗವನ್ನು ಪಾರ್ಶ್ವನಾಥರೆಡೆಗೆ ಬಂಡೆಯನ್ನು ಎಸೆಯುತ್ತಿರುವ ರಾಕ್ಷಸನೊಬ್ಬನ ಕೆತ್ತನೆಯ ಮೂಲಕ ಚಿತ್ರಿಸಲಾಗಿದೆ. ತೀರ್ಥಂಕರರ ತಲೆಯೆ ಮೇಲೆ ಹಾವಿನೊಂದಿಗಿರುವ ಧರಣೇಂದ್ರನು ಎರಡು ಕೈಗಳಲ್ಲಿ ಚಾಮರವನ್ನು ಹಿಡಿದಿದ್ದಾನೆ. ಈ ರೀತಿಯ ಚಿತ್ರಣ ಹಾಗೂ ಕೆತ್ತನೆಯನ್ನು ವಿಶ್ವದ ಇನ್ಯಾವ ಭಾಗದಲ್ಲೂ ಕಾಣಲಾಗುವುದಿಲ್ಲ. ಪಾರ್ಶ್ವನಾಥರಿಗೆ ಶಿರಭಾಗಿರುವ ಕಮಠನ ಕೆತ್ತನೆಯನ್ನು ಬಲ ಭಾಗದಲ್ಲೂ ಹಾಗೂ ಎಡ ಭಾಗದಲ್ಲಿ ತೀರ್ಥಂಕರರ ಸೇವೆಗೈಯ್ಯುತ್ತಿರುವ ಪದ್ಮಾವತಿಯ ಕೆತ್ತೆನೆಯನ್ನು ಕಾಣಬಹುದು. ಕಳಗುಮಲೈ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕೋವಿಲ್ ಪಟ್ಟಿ ತಾಲೂಕಿನಲ್ಲಿದೆ.
  • ಮಧುರೈ ಸಮೀಪದ ಸಮಣಾರ್ ಮಲೈ, ತಿರುಪತಿಕುಂಡ್ರ‍ಂ ಹಾಗೂ ಆನಂದ ಮಂಗಳಂಗಳಲ್ಲಿ ಕಮಠೋಪಸರ್ಗ ಪಾರ್ಶ್ವನಾಥ ತೀರ್ಥಂಕರರ ವಿಗ್ರಹವನ್ನು ನಾವು ಕಾಣಬಹುದು.

  ಉಲ್ಲೇಖಗಳು

  1. ಪ್ರೊ.ಹಂಪನಾ – ಗ್ಲೋರಿ ಆಫ್ ಹೊಂಬುಜ, 2013, ಶ್ರ‍ೀ ಸಿದ್ಧಾಂತಕೀರ್ತಿ ಗ್ರಂಥಮಾಲೆ, ಹೊಂಬುಜ ಜೈನ ಮಠ, ಹೊಂಬುಜ, ಪುಟ 110-111.
  2. ಅನುವಾದ ಜಿ.ಬ್ರಹ್ಮಪ್ಪ, ಆಚಾರ್ಯ ಜಿನಸೇನ ಹಾಗೂ ಗುಣಭದ್ರ ವಿರಚಿತ ಮಹಾಪುರಾಣ (1985), ಶ್ರ‍ೀ ಸಿದ್ಧಾಂತಕೀರ್ತಿ ಗ್ರಂಥಮಾಲೆ, ಹೊಂಬುಜ ಜೈನ ಮಠ, ಹೊಂಬುಜ, ಪುಟ 1017.
  3. ನಾಡೋಜ ಪ್ರೊ.ಹಂಪ ನಾಗರಾಜಯ್ಯ – ಹೊಂಬುಜ ಕ್ಷೇತ್ರ ಅನುಸಂಧಾನ (2011), ವಿಕ್ರಾಂತ ಪ್ರಕಾಶನ, ಪುಟ 39.
  4. ಅನುವಾದ ಜಿ.ಬ್ರಹ್ಮಪ್ಪ, ಆಚಾರ್ಯ ಜಿನಸೇನ ಹಾಗೂ ಗುಣಭದ್ರ ವಿರಚಿತ ಮಹಾಪುರಾಣ (1985), ಶ್ರ‍ೀ ಸಿದ್ಧಾಂತಕೀರ್ತಿ ಗ್ರಂಥಮಾಲೆ, ಹೊಂಬುಜ ಜೈನ ಮಠ, ಹೊಂಬುಜ, ಪುಟ V.
  5. ಸಂಪಾದಕರು: ಡಾ.ಟಿ.ಜಿ.ಕಲಘಟಗಿ – ತೀರ್ಥಂಕರ ಪಾರ್ಶ್ವನಾಥ – ಎ ಸ್ಟಡಿ, 1977, ಪ್ರಕಟಣೆ ಜೈನಾಲಜಿ ಮತ್ತು ಪ್ರಾಕೃತ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು – 570006, ಲೇಖನ: ಚಾವುಂಡರಾಯ ಪುರಾಣ ಭಗವದ್ ಪಾರ್ಶ್ವನಾಥ ಚರಿತ್ರೆ – ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು, ಪುಟ 72.
  6. ಸಂಪಾದಕರು: ಡಾ.ಟಿ.ಜಿ.ಕಲಘಟಗಿ – ತೀರ್ಥಂಕರ ಪಾರ್ಶ್ವನಾಥ – ಎ ಸ್ಟಡಿ, 1977, ಪ್ರಕಟಣೆ ಜೈನಾಲಜಿ ಮತ್ತು ಪ್ರಾಕೃತ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು – 570006, ಲೇಖನ: ಪಾರ್ಶ್ವನಾಥ ಪಂಡಿತನು ಚಿತ್ರಿಸಿರುವ ಪಾರ್ಶ್ವನಾಥ – ಬಿ.ಎಸ್.ಸಣ್ಣಯ್ಯ, ಪುಟ – 75.
  7. ಸಂಪಾದಕರು: ಡಾ.ಟಿ.ಜಿ.ಕಲಘಟಗಿ – ತೀರ್ಥಂಕರ ಪಾರ್ಶ್ವನಾಥ – ಎ ಸ್ಟಡಿ, 1977, ಪ್ರಕಟಣೆ ಜೈನಾಲಜಿ ಮತ್ತು ಪ್ರಾಕೃತ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು – 570006, ಲೇಖನ: ಪಾರ್ಶ್ವನಾಥ ಕನ್ನಡ ಸಾಹಿತ್ಯದಲ್ಲಿ: ಎಂ.ಎ.ಜಯಚಂದ್ರ, ಪುಟ – 92.
  8. ಸಂಪಾದಕರು: ಡಾ.ಟಿ.ಜಿ.ಕಲಘಟಗಿ – ತೀರ್ಥಂಕರ ಪಾರ್ಶ್ವನಾಥ – ಎ ಸ್ಟಡಿ, 1977, ಪ್ರಕಟಣೆ ಜೈನಾಲಜಿ ಮತ್ತು ಪ್ರಾಕೃತ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು – 570006, ಲೇಖನ: ಪ್ರಾಕೃತ ಸಾಹಿತ್ಯದಲ್ಲಿ ಪಾಶ್ವನಾಥ – ಎಸ್.ಎ.ಶಿರಗುಪ್ಪಿ, ಪುಟ – 123.
  9. ಸಂಪಾದಕರು: ಡಾ.ಟಿ.ಜಿ.ಕಲಘಟಗಿ – ತೀರ್ಥಂಕರ ಪಾರ್ಶ್ವನಾಥ – ಎ ಸ್ಟಡಿ, 1977, ಪ್ರಕಟಣೆ ಜೈನಾಲಜಿ ಮತ್ತು ಪ್ರಾಕೃತ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು – 570006, ಲೇಖನ: ಪ್ರಾಕೃತ ಸಾಹಿತ್ಯದಲ್ಲಿ ಪಾಶ್ವನಾಥ – ಎಸ್.ಎ.ಶಿರಗುಪ್ಪಿ, ಪುಟ – 129.
  10. ಸಂಪಾದಕರು: ಡಾ.ಟಿ.ಜಿ.ಕಲಘಟಗಿ – ತೀರ್ಥಂಕರ ಪಾರ್ಶ್ವನಾಥ – ಎ ಸ್ಟಡಿ, 1977, ಪ್ರಕಟಣೆ ಜೈನಾಲಜಿ ಮತ್ತು ಪ್ರಾಕೃತ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು – 570006, ಲೇಖನ: ಪ್ರಾಕೃತ ಸಾಹಿತ್ಯದಲ್ಲಿ ಪಾಶ್ವನಾಥ – ಎಸ್.ಎ.ಶಿರಗುಪ್ಪಿ, ಪುಟ – 129.
  11. ಸಂಪಾದಕರು: ಡಾ.ಟಿ.ಜಿ.ಕಲಘಟಗಿ – ತೀರ್ಥಂಕರ ಪಾರ್ಶ್ವನಾಥ – ಎ ಸ್ಟಡಿ, 1977, ಪ್ರಕಟಣೆ ಜೈನಾಲಜಿ ಮತ್ತು ಪ್ರಾಕೃತ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು – 570006, ಲೇಖನ: ಅನಂತರಾಜಕವಿಯ ಮರಾಠಿ ಶ್ರ‍ೀ ಪಾರ್ಶ್ವಪುರಾಣ – ಎಸ್.ಪಿ.ಪಾಟೀಲ್, ಪುಟ – 130-131.
  12. ಡಾ. ನಾಗರಾಜಯ್ಯ ಹಂಪ – ಜಿನ ಪಾರ್ಶ್ವ ಟೆಂಪಲ್ಸ್ ಇನ್ ಕರ್ನಾಟಕ (1999), ಶ್ರ‍ೀ ಸಿದ್ಧಾಂತಕೀರ್ತಿ ಗ್ರಂಥಮಾಲೆ, ಹೊಂಬುಜ ಜೈನ ಮಠ, ಹೊಂಬುಜ, ಪುಟ 2.
  13. ಡಾ. ನಾಗರಾಜಯ್ಯ ಹಂಪ – ಜಿನ ಪಾರ್ಶ್ವ ಟೆಂಪಲ್ಸ್ ಇನ್ ಕರ್ನಾಟಕ (1999), ಶ್ರ‍ೀ ಸಿದ್ಧಾಂತಕೀರ್ತಿ ಗ್ರಂಥಮಾಲೆ, ಹೊಂಬುಜ ಜೈನ ಮಠ, ಹೊಂಬುಜ, ಪುಟ 31-32.
  14. ಡಾ. ನಾಗರಾಜಯ್ಯ ಹಂಪ – ಜಿನ ಪಾರ್ಶ್ವ ಟೆಂಪಲ್ಸ್ ಇನ್ ಕರ್ನಾಟಕ (1999), ಶ್ರ‍ೀ ಸಿದ್ಧಾಂತಕೀರ್ತಿ ಗ್ರಂಥಮಾಲೆ, ಹೊಂಬುಜ ಜೈನ ಮಠ, ಹೊಂಬುಜ, ಪುಟ IX-X.
  15. ಷ.ಶೆಟ್ಟರ್ – ಶ್ರ‍ವಣಬೆಳಗೊಳ, ಪ್ರಕಾಶಕರು: ಕರ್ನಾಟಕ ಪ್ರವಾಸೋದ್ಯಮ ಇಲಾಖೆ, 1981, ಪುಟ: 14.
  16. ಜರ್ನಲ್ ಆಫ್ ದಿ ಮದ್ರಾಸ್ ಯೂನಿವರ್ಸಿಟಿ, XLI, 1969, ಪುಟ 112.
  17. ಡಾ.ಎ.ಏಕಾಂಬರನಾಥನ್ – ಜೈನಿಸಂ ಇನ್ ತಮಿಳ್ನಾಡು (ಆರ್ಟ್ ಅಂಡ್ ಆರ್ಕಿಯಾಲಜಿ), 1996, ಪ್ರಕಾಶಕರು: ಜೈನ್ ಹ್ಯುಮ್ಯಾನಿಟೀಸ್ ಪ್ರೆಸ್, ಪುಟ 84.
  18. ಡಾ.ಎ.ಏಕಾಂಬರನಾಥನ್ – ಜೈನಿಸಂ ಇನ್ ತಮಿಳ್ನಾಡು (ಆರ್ಟ್ ಅಂಡ್ ಆರ್ಕಿಯಾಲಜಿ), 1996, ಪ್ರಕಾಶಕರು: ಜೈನ್ ಹ್ಯುಮ್ಯಾನಿಟೀಸ್ ಪ್ರೆಸ್, ಪುಟ 84-85.
  19. ಡಾ.ಎ.ಏಕಾಂಬರನಾಥನ್ – ಜೈನಿಸಂ ಇನ್ ತಮಿಳ್ನಾಡು (ಆರ್ಟ್ ಅಂಡ್ ಆರ್ಕಿಯಾಲಜಿ), 1996, ಪ್ರಕಾಶಕರು: ಜೈನ್ ಹ್ಯುಮ್ಯಾನಿಟೀಸ್ ಪ್ರೆಸ್, ಪುಟ 85.

  ವಿಶೇಷ ಧನ್ಯವಾದಗಳು:

  1. ಡಾ.ಅಭಿಜಿತ್ ಶಾಸ್ತ್ರಿ, ಮೈಸೂರು, ಕರ್ನಾಟಕ.
  2. ಪ್ರೊ.ಅಜಿತ್ ಪ್ರಸಾದ್, ಮೂಡುಬಿದರೆ, ದಕ್ಷಿಣ ಕನ್ನಡ, ಕರ್ನಾಟಕ.
  3. ಡಾ.ಹೆಚ್.ಎ.ಪಾರ್ಶ್ವನಾಥ್, ಮೈಸೂರು, ಕರ್ನಾಟಕ.
  4. ಪ್ರೊ.ಕನಕಅಜಿತ ದಾಸ್, ಚೆನ್ನೈ, ತಮಿಳುನಾಡು.
  error: Jain Heritage Centres - Celebrating Jain Heritage.....Globally!