Home » ಕನ್ನಡ » ಸುದ್ದಿ-ಸಮಾಚಾರ » ದೇಶದ ಅಭಿವೃದ್ಧಿಗೆ ಜೈನರ ಕೊಡುಗೆ ಅನನ್ಯ

ದೇಶದ ಅಭಿವೃದ್ಧಿಗೆ ಜೈನರ ಕೊಡುಗೆ ಅನನ್ಯ

ಜೈನ ಸಮುದಾಯದ ಜನಸಂಖ್ಯೆ ಕಡಿಮೆ ಇದ್ದರೂ ದೇಶದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಅಪಾರವಾದುದು…ಕನಕಗಿರಿ ಅತಿಶಯ ಮಹೋತ್ಸವದಲ್ಲಿ ಸಂಸದ ಆರ್‌. ಧ್ರುವನಾರಾಯಣ ಅಭಿಮತ

ಕನಕಗಿರಿ(ಮಹರ್ಷಿ ಪೂಜ್ಯಪಾದ ಸಭಾ ಮಂಟಪ), ಜನವರಿ ೩೦, ೨೦೧೭: ‘ಜೈನ ಸಮುದಾಯದ ಜನಸಂಖ್ಯೆ ಕಡಿಮೆ ಇದ್ದರೂ ದೇಶದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಅಪಾರವಾದುದು’ ಎಂದು ಸಂಸದ ಆರ್‌. ಧ್ರುವನಾರಾಯಣ ಹೇಳಿದರು.
ಚಾಮರಾಜನಗರ ತಾಲ್ಲೂಕಿನ ಮಲೆಯೂರು ಗ್ರಾಮದ ಶ್ರೀಕ್ಷೇತ್ರ ಕನಕಗಿರಿಯಲ್ಲಿ ಭಾನುವಾರ ಕನಕಗಿರಿ ಅತಿಶಯ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಹಲವು ಧರ್ಮಗಳಿವೆ. ಅವುಗಳಲ್ಲಿ ಜೈನ ಧರ್ಮ ಕೂಡ ಶ್ರೇಷ್ಠವಾದುದು. ದೇಶಕ್ಕೆ ತೆರಿಗೆ ಪಾವತಿಸುವವರ ಪೈಕಿ ಶೇ 23ರಷ್ಟು ಮಂದಿ ಜೈನ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಸಮುದಾಯದಲ್ಲಿ ಹಲವು ಉದ್ಯಮಿಗಳಿದ್ದಾರೆ. ಸುಭದ್ರವಾದ ದೇಶ ನಿರ್ಮಾಣದಲ್ಲಿ ಅವರ ಕೊಡುಗೆ ಹೆಚ್ಚಿದೆ ಎಂದರು.
ರಾಜ್ಯದ ಅಭಿವೃದ್ಧಿಗೆ ಧರ್ಮಸ್ಥಳದ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಕೊಡುಗೆ ಅನನ್ಯವಾದುದು. ಪ್ರಸ್ತುತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯದ ಎಲ್ಲ ಜಿಲ್ಲೆಯಲ್ಲೂ ಅನುಷ್ಠಾನಗೊಂಡಿದೆ. ಜಿಲ್ಲೆಯಲ್ಲೂ ಈ ಯೋಜನೆ ಜಾರಿಗೊಂಡಿದೆ. ಸ್ವಸಹಾಯ ಸಂಘಗಳ ಮೂಲಕ ಜನರು ಅಭಿವೃದ್ಧಿ ಹೊಂದಲು ಯೋಜನೆ ಪೂರಕವಾಗಿದೆ ಎಂದು ತಿಳಿಸಿದರು.
‘ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಕನಕಗಿರಿಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಾಜ್ಯ ಸರ್ಕಾರದಿಂದಲೂ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೆ ಕ್ರಮವಹಿಸುತ್ತೇನೆ’ ಎಂದು ಭರವಸೆ ನೀಡಿದರು.
‘ಕನಕಗಿರಿಯು ಭಾರತದಲ್ಲಿರುವ ಜೈನರ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಈ ಕ್ಷೇತ್ರ ಇರುವುದೇ ಹೆಮ್ಮೆಯ ಸಂಗತಿ’ ಎಂದು ತಿಳಿಸಿದರು.
ಪ್ರಸನ್ನ ಸಾಗರ ಮಹಾರಾಜರು, ಪಿಯೂಷ ಸಾಗರ ಮಹಾರಾಜರು, ಪರ್ವಸಾಗರ ಮಹಾರಾಜರು ನೇತೃತ್ವವಹಿಸಿದ್ದರು. ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರೀಕ್ಷೇತ್ರ ಕಂಬದಹಳ್ಳಿಯ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಕನಕಗಿರಿ ಅತಿಶಯ ಮಹೋತ್ಸವದ ರಾಷ್ಟ್ರೀಯ ಅಧ್ಯಕ್ಷ ಆರ್‌.ಕೆ. ಜೈನ್‌, ತ್ಯಾಗಿ ಸೇವಾ ಸಮಿತಿ ಅಧ್ಯಕ್ಷ ಧರ್ಮಸ್ಥಳ ಸುರೇಂದ್ರಕುಮಾರ್‌, ಅನಿತಾ ಸುರೇಂದ್ರಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ, ಸ್ಥಾಯಿಸಮಿತಿ ಅಧ್ಯಕ್ಷ ಕೆ.ಪಿ. ಸದಾಶಿವಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು, ಮಹೋತ್ಸವ ಸಮಿತಿಯ ರಾಷ್ಟ್ರೀಯ ಕಾರ್ಯದರ್ಶಿ ಹರೀಶ್‌ಕುಮಾರ್‌ ಹೆಗಡೆ, ಕಾರ್ಯಾಧ್ಯಕ್ಷ ಎಂ.ಎ. ಸುಧೀರ್‌ ಕುಮಾರ್‌, ಸ್ನೇಕ್‌ ಶ್ಯಾಮ್‌ ಹಾಜರಿದ್ದರು.
**
ಮಹೋತ್ಸವದಲ್ಲಿ ಇಂದು
ಚಾಮರಾಜನಗರ: ಕನಕಗಿರಿಯಲ್ಲಿ ಜ. 30ರಂದು ಬೆಳಿಗ್ಗೆ 6ಗಂಟೆಗೆ ವಿವಿಧ ಪೂಜೆ, ಜನ್ಮಕಲ್ಯಾಣ ಕಾರ್ಯಕ್ರಮ ನಡೆಯಲಿದೆ.
 ಮಧ್ಯಾಹ್ನ 3ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ಪ್ರಸನ್ನ ಸಾಗರ ಮಹಾರಾಜರು, ಶ್ರೀಕ್ಷೇತ್ರ ಕಂಬದಹಳ್ಳಿಯ ಭಾನು ಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರೀಕ್ಷೇತ್ರ ಜಿನಕಂಚಿಯ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ ನೇತೃತ್ವವಹಿಸಲಿದ್ದಾರೆ.
 ಮೈಕ್ರೋ ಲ್ಯಾಬ್ಸ್‌ನ ವ್ಯವಸ್ಥಾಪಕ ನಿರ್ದೇಶಕ ದಿಲೀಪ್‌ ಸುರಾನಾ ಅಧ್ಯಕ್ಷತೆವಹಿಸಲಿದ್ದಾರೆ. ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾ ಮೂರ್ತಿ ಉದ್ಘಾಟನೆ ನೆರವೇರಿಸಲಿದ್ದಾರೆ. ಭಾರತ ವರ್ಷೀಯ ದಿಗಂಬರ ಜೈನ ತೀರ್ಥಕ್ಷೇತ್ರ ಕಮಿಟಿಯ ಮಾಜಿ ಅಧ್ಯಕ್ಷ ಆರ್‌.ಕೆ. ಜೈನ್, ಉದ್ಯಮಿ ಅನಿಲ್ ಸೇಥಿ, ತೇಜರಾಜ್‌ ಗುಲೇಚಾ ಭಾಗವಹಿಸಲಿದ್ದಾರೆ. ಸಂಜೆ 6.30ಕ್ಕೆ ವಿದ್ವಾನ್‌ ಎಚ್.ಎಲ್‌. ಶಿವಶಂಕರಸ್ವಾಮಿ ಮತ್ತು ತಂಡದಿಂದ ವಿಶೇಷ ತಾಳವಾದ್ಯ ಸಂಗೀತ ನಡೆಯಲಿದೆ.
 **
ಯುಪಿಎ ಸರ್ಕಾರದ ಅವಧಿಯಲ್ಲಿ ಜೈನ ಸಮುದಾಯಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಲಾಯಿತು. ಇದರಿಂದ ಈ ಸಮುದಾಯದ ಬಡವರಿಗೆ ಅನುಕೂಲವಾಗಿದೆ.
-ಆರ್. ಧ್ರುವನಾರಾಯಣ
ಸಂಸದ