Home » ಕನ್ನಡ » ಸುದ್ದಿ-ಸಮಾಚಾರ » ಪ್ರೊ. ಹಂಪನಾ ರವರಿಂದ ಸಂಪಾದಿತ ವಡ್ಡಾರಾಧನೆ ಹಾಗೂ ಕವಿರಾಜಮಾರ್ಗ ಕೃತಿಗಳು ಲೋಕಾರ್ಪಣೆ

ಪ್ರೊ. ಹಂಪನಾ ರವರಿಂದ ಸಂಪಾದಿತ ವಡ್ಡಾರಾಧನೆ ಹಾಗೂ ಕವಿರಾಜಮಾರ್ಗ ಕೃತಿಗಳು ಲೋಕಾರ್ಪಣೆ

ಬೆಂಗಳೂರು, 13 ಮಾರ್ಚ್ 2021: ಹೆಸರಾಂತ ಜೈನ ಹಾಗೂ ಕನ್ನಡ ಸಾಹಿತಿಗಳಾದ ಪ್ರೊ. ಹಂಪನಾ ರವರಿಂದ ಸಂಪಾದಿತ “ವಡ್ಡಾರಾಧನೆ – ಮರು ಓದು” ಹಾಗೂ “ಕವಿರಾಜಮಾರ್ಗ – ಹೊಸ ಶೋಧದ ಬೆಳಕಿನಲ್ಲಿ” ಕೃತಿಗಳು ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಲೋಕಾರ್ಪಣೆ ಗೊಂಡವು. “ವಡ್ಡಾರಾಧನೆ – ಮರು ಓದು” ಕೃತಿಯನ್ನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪ್ರೊ.ಬಿ.ವಿ.ವಸಂತ ಕುಮಾರ್ ರವರು ಹಾಗೂ “ಕವಿರಾಜಮಾರ್ಗ – ಹೊಸ ಶೋಧದ ಬೆಳಕಿನಲ್ಲಿ” ಕೃತಿಯನ್ನು ಹೆಸರಾಂತ ಕನ್ನಡ ಸಾಹಿತಿಗಳಾದ ಪ್ರೊ.ಪಿ.ವಿ.ನಾರಾಯಣರವರು ಲೋಕಾರ್ಪಣೆ ಗೊಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರ‍ೀ ಎಸ್.ರಂಗಪ್ಪನವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರ‍ೀ ಟಿ.ಎಸ್.ನಾಗಾಭರಣರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರೊ.ಹಂಪನಾ ಹಾಗೂ ಶ್ರ‍ೀಮತಿ ಕಮಲಾ ಹಂಪನಾ ಅಮ್ಮನವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಡ್ಡಾರಾಧನೆಯು ಶಿವಕೋಟ್ಯಾಚಾರ್ಯ ಬರೆದಿರುವನೆಂದು ನಂಬಲಾಗಿರುವ ಜೈನ ಧಾರ್ಮಿಕ(ನೋಂಪಿ) ಕಥೆಗಳ ಸಂಗ್ರಹ. ಕನ್ನಡದಲ್ಲಿ ದೊರೆತಿರುವ ಕೃತಿಗಳಲ್ಲಿ, ಎಲ್ಲದಕ್ಕಿಂತ ಹಳೆಯದಾದ ಮೊಟ್ಟಮೊದಲ ಗದ್ಯಕೃತಿ ಇದಾಗಿದೆ.
ಇದರ ರಚನೆಯ ಕಾಲ ಸು. 920. ಇದರಲ್ಲಿ ಸುಕುಮಾರಸ್ವಾಮಿ, ವೃಷಭಸೇನರಿಸಿ ಮೊದಲಾದ 19 ಮಹಾಪುರುಷರ ಕಥೆಗಳಿವೆ. ಪ್ರೊ.ಹಂಪನಾ ರವರು ಈ ಕೃತಿಯನ್ನು ಹೊಸ ದೃಷ್ಟಿಕೋನ ದಿಂದ ವಿಶ್ಲೇಷಿಸಿ ಮರು ಓದನ್ನು ನೀಡಿದ್ದಾರೆ.
ಕವಿರಾಜಮಾರ್ಗ ಕನ್ನಡದಲ್ಲಿ ಇದುವರೆಗೆ ಲಭ್ಯವಾಗಿರುವ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನ. ಇದು ಪಂಪಪೂರ್ವ ಯುಗದಲ್ಲಿ ರಚಿತವಾದುದು. ಇದೊಂದು ಅಲಂಕಾರಿಕ ಲಕ್ಷಣ ಗ್ರಂಥ. ಇದನ್ನು ಕ್ರಿ.ಶ. ೮೫೦ ರ ಆಸುಪಾಸಿನಲ್ಲಿ ರಚಿಸಲಾಗಿದೆ. ಪ್ರೊ. ಹಂ.ಪ.ನಾ ರವರು ಈ ಕೃತಿಯ ಕುರಿತು ಸಂಶೋಧನೆಯನ್ನು ಕೈಗೊಂಡು ಕೃತಿಯನ್ನು ಹೊಸ ದೃಷ್ಟಿಯಿಂದ ವಿಶ್ಲೇಷಿಸಿದ್ದಾರೆ.
ಈ ಎರಡೂ ಕೃತಿಗಳನ್ನು ನಾಡಿನ ಹೆಸರಾಂತ ಪ್ರಕಾಶಕರಾದ ಸಪ್ನ ಬುಕ್ ಹೌಸ್ ರವರು ಪ್ರಕಟಿಸಿದ್ದಾರೆ.
-ಜೈನ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ, ಚಿತ್ರ ಕೃಪೆ: ಶ್ರ‍ೀ ಅಜಿತ್ ಮುರುಗುಂಡೆ, ಬೆಂಗಳೂರು