Skip to content
Home » ಕನ್ನಡ » ಸುದ್ದಿ-ಸಮಾಚಾರ » ಮೋರಿಗೆರೆಯಲ್ಲಿ ರಾಷ್ಟ್ರಕೂಟರ ಕಾಲದ ಹೊಸ ನಿಸಿಧಿಶಾಸನಗಂಭ ಪತ್ತೆ

ಮೋರಿಗೆರೆಯಲ್ಲಿ ರಾಷ್ಟ್ರಕೂಟರ ಕಾಲದ ಹೊಸ ನಿಸಿಧಿಶಾಸನಗಂಭ ಪತ್ತೆ

  • ಕರ್ನಾಟಕದ ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲ್ಲೂಕು ಮೋರಿಗೆರೆ ಗ್ರಾಮದಲ್ಲಿ ಪತ್ತೆಯಾದ ಜೈನ ಶಾಸನ
  • ಜೈನ ಮುನಿ ಯತಿಂಕರ ಭಟ್ಟಾರಕರ ನಿಸಿಧಿ ಶಾಸನ
  • ರಾಷ್ಟ್ರಕೂಟರ ದೊರೆ ಮೂರನೆಯ ಕೃಷ್ಣನ ಕಾಲ – ೧೦ನೇ ಶತಮಾನಕ್ಕೆ ಸೇರಿದ ನಿಸಿಧಿಶಾಸನಗಂಭ
  • ಹರಿಹರದ ಡಾ.ರವಿಕುಮಾರ ಕೆ. ನವಲಗುಂದ ರವರ ಸಂಶೋಧನೆ.

  ಮೋರಿಗೆರೆಯಲ್ಲಿ (ಹಗರಿಬೊಮ್ಮನಹಳ್ಳಿ ತಾಲ್ಲೂಕು, ವಿಜಯನಗರ ಜಿಲ್ಲೆ, ಕರ್ನಾಟಕ), ೨೪ ಏಪ್ರಿಲ್, ೨೦೨೨: ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕು ಮೋರಿಗೆರೆಯಲ್ಲಿ ೧೦ನೇ ಶತಮಾನಕ್ಕೆ ಸೇರಿದ ಜೈನಧರ್ಮಕ್ಕೆ ಸಂಬಂಧಿಸಿದ ನಿಸಿಧಿಶಾಸನಸ್ತಂಭ ಪತ್ತೆಯಾಗಿದೆ. ಡಾ. ರವಿಕುಮಾರ ಕೆ ನವಲಗುಂದ., ಶಾಸನ ಸಂಶೋಧಕ, ಕನ್ನಡ ಉಪನ್ಯಾಸಕ ಸರ್ಕಾರಿ ಪದವಿಪೂರ್ವ ಕಾಲೇಜು ಬನ್ನಿಕೋಡು ಇವರು ಇತ್ತೀಚೆಗೆ ಮೋರಿಗೆರೆಗೆ ಕ್ಷೇತ್ರಕಾರ್ಯ ಕೈಗೊಂಡಾಗ ಈ ಶಾಸನವು ಪತ್ತೆಯಾಗಿದೆ.

  ಮೋರಿಗೆರೆಯಲ್ಲಿ ರಾಷ್ಟ್ರಕೂಟರ ಕಾಲದ ಹೊಸ ನಿಸಿಧಿಶಾಸನಗಂಭ ಪತ್ತೆ
  ಮೋರಿಗೆರೆಯಲ್ಲಿ ರಾಷ್ಟ್ರಕೂಟರ ಕಾಲದ ಹೊಸ ನಿಸಿಧಿಶಾಸನಗಂಭ ಪತ್ತೆ

  ಇಲ್ಲಿನ ಶೀತಲನಾಥ(ಬ್ರಹ್ಮದೇವ ಬಸದಿ)ಜಿನಾಲಯಕ್ಕೆ ಸುತ್ತುಗೋಡೆಯನ್ನು ನಿರ್ಮಿಸಲು ಪಾಯ ಅಗೆಯುವಾಗ ಕಾಯೋತ್ಸರ್ಗ ತೀರ್ಥಂಕರ ಪ್ರತಿಮೆಯುಕ್ತ ಈ ನಿಸಿಧಿಶಾಸನಕಂಭ ದೊರೆಕಿದೆ. ೧೪೮ ಸೆಂಟಿಮೀಟರ್ ಉದ್ದ, ೩೧ ಸೆಂಟಿಮೀಟರ್ ಅಗಲವಿರುವ ಈ ನಿಸಿಧಿಯು ಕಪ್ಪು ಕಣಶಿಲೆಯಲ್ಲಿ ಒಡಮೂಡಿದೆ. ನಿಸಿಧಿಯಲ್ಲಿ ಒಟ್ಟು ೩೭ ಸಾಲುಗಳ ಶಾಸನವಿದ್ದು, ಇದು ರಚನೆಯಾದ ಹಿನ್ನೆಲೆಯನ್ನು ಸಾದರಪಡಿಸುತ್ತದೆ. ಶಾಸನ ಅಲ್ಲಲ್ಲಿ ತುಟಿತವಾಗಿದ್ದರೂ ಶಾಸನದ ಮುಖ್ಯ ವಿವರಗಳು ಲಭ್ಯವಾಗಿವೆ. ಒಟ್ಟು ಮೂರುಬದಿಯಲ್ಲಿ ಶಾಸನವಿದೆ. ಇದುವರೆಗೂ ಈ ಶಾಸನ ಎಲ್ಲಿಯೂ ವರದಿ ಮತ್ತು ಪ್ರಕಟವಾಗಿಲ್ಲದ್ದರಿಂದ ಇದು ಒಂದು ಹೊಸ ಶಾಸನವಾಗಿದೆ.

  “ಶಾಸನವು ಶಕವರ್ಷ ಎಂಟುನೂರಾ ಎಪ್ಪತ್ತಮೂರು(873) ವಿರೋಧಿಕೃತ ಸಂವತ್ಸರದ ಜೇಷ್ಠ ಬಹುಳ ಬಿದಿಗೆ ಸೋಮವಾರದಂದು ರಚನೆಯಾಗಿದ್ದು ಕ್ರಿ.ಶ 951 ಸೋಮವಾರ 26 ಕೆ ಸರಿ ಹೊಂದುತ್ತದೆ. ಇಲ್ಲಿ ಹೇಳಿರುವ ಬಿದಿಗೆಯು 25 ರವಿವಾರ ಬರುತ್ತಿದ್ದು, ಕಾಲಗಣನೆಯಲ್ಲಿ ಒಂದು ದಿನ ವ್ಯತ್ಯಾಸವಾಗುತ್ತದೆ. ಪ್ರಸ್ತುತ ಶಾಸನವು ಕನ್ನಡ ದೊರೆಗಳಾದ ರಾಷ್ಟ್ರಕೂಟ ರಾಜಮನೆತನವು ಕನ್ನಡನಾಡನ್ನು ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ರಚನೆಯಾಗಿದೆ. ಕ್ರಿ.ಶ 951 ರ ಕಾಲಾವಧಿಯಲ್ಲಿ ರಾಷ್ಟ್ರಕೂಟರ ಮೂರನೆಯ ಕೃಷ್ಣ ರಾಜ್ಯಭಾರ ಮಾಡುತ್ತಿದ್ದ. ಶಾಸನದಲ್ಲಿ ರಾಷ್ಟ್ರಕೂಟರ ಮನೆತನದ ಹೆಸರನ್ನಾಗಲಿ ಮತ್ತು ಮೂರನೆಯ ಕೃಷ್ಣನ ಉಲ್ಲೇಖ ಇಲ್ಲವಾದರೂ ಶಾಸನದಲ್ಲಿ ದಾಖಲಾದ ತೇದಿಯು ರಾಷ್ಟ್ರಕೂಟರ ಇಂದ್ರನ ಆಳ್ವಿಕೆಯನ್ನೇ ಶ್ರುತಪಡಿಸುತ್ತದೆ,” ಎಂದು ಡಾ.ರವಿಕುಮಾರ ರವರು ತಿಳಿಸಿದ್ದಾರೆ.

  ಶಾಸನದ ಮುಖ್ಯ ವಿಷಯ ಜಿನಮುನಿ ಒಬ್ಬರ ಪ್ರಾಣತ್ಯಾಗದ ಕುರಿತಾಗಿದೆ. ಶಕವರ್ಷ 873 ವಿರೋಧಿಕೃತ ಸಂವತ್ಸರ ಜೇಷ್ಠ ಬಹುಳ ಬಿದಿಗೆ ಸೋಮವಾರದಂದು ಜಿನಮುನಿಯಾದ ಯತಿಂಕರ ಭಟ್ಟಾರಕರು ಸನ್ಯಸನ ವಿಧಾನದಿಂದ ಮರಣವನ್ನು ಆಹ್ವಾನಿಸಿ ಹದಿನೈದು ದಿನ ಸಂಪೂರ್ಣ ಉಪವಾಸವಿದ್ದು ಕೊನೆಗೆ ಪ್ರಾಣತ್ಯಾಗ ಮಾಡಿ ಸ್ವರ್ಗಗಾಮಿಗಳಗುತ್ತಾರೆ. ಇವರ ಮಹಾಮರಣದ ಸ್ಮರಣೆಗೋಸ್ಕರ ಪರೋಕ್ಷವಿನಯಾರ್ಥವಾಗಿ ಯತಿಂಕರ ಭಟ್ಟಾರಕರ ಶಿಷ್ಯೆನ್ಥಿ(ಶಿಷ್ಯ) ದೇವಸಿರಿ ಕಂತಿಯು ಈ ಶಾಸನವನ್ನು ಕೆತ್ತಿಸಿ ಪೂಜೆಮಾಡಿ ನಿಲ್ಲಿಸುತ್ತಾರೆ. ಶಿಷ್ಯೆಯೊಬ್ಬಳು ತನ್ನ ಗುರುವಿನ ನೆನಪಿಗಾಗಿ ನಿಲ್ಲಿಸಿದ ಅಪರೂಪದ ನಿಸಿಧಿ ಇದಾಗಿದೆ.

  ಇಲ್ಲಿ ಹೆಸರಿಸಲಾದ ಯತಿಂಕರ ಭಟ್ಟಾರಕರು ವೈರಾಗ್ಯ ನಿಮಿತ್ತ ಸನ್ಯಸನ ವ್ರತ ಸ್ವೀಕರಿಸುವ ಮುನ್ನ ಅಗತ್ಯ ಪಾತ್ರರಿಗೆ ದಾನ ಮಾಡಿದ್ದಾರೆ. ಬ್ರಹ್ಮಚಾರಿಗಳಾದ ಇವರು ಜಿನಾರಾಧನೆ ಮಾಡುತ್ತ ದೇಹದಿಂದ ಪ್ರಾಣವನ್ನು ತ್ಯಾಗಮಾಡಿದ ಅಂಶವನ್ನು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಕೀರ್ತಿಯು ಭುವನ ವಿಖ್ಯಾತವೂ, ಗುಣವು ಅಮಳವೂ, ಚರಿತ್ರೆಯು ಚಾರುವಿನಂಥೆಯೂ ಇತ್ತು ಎಂದು ಯತಿಂಕರ ಭಟ್ಟಾರಕರ ಗುಣಾವಳಿಯನ್ನು ಕೊಂಡಾಡಲಾಗಿದೆ. ಶಾಸನ ತ್ರುಟಿವಾದ್ದರಿಂದ ಇವರ ಬಗ್ಗೆ ಹೆಚ್ಚಿನ ಮಾಹಿತಿ ಅಲಭ್ಯ. ಶಾಸನವು ತ್ರುಟಿತವಾದ ಭಾಗದಲ್ಲಿ ಕಂದಪದ್ಯಗಳು ಕಂಡುಬರುತ್ತಿದ್ದು ಸಧ್ಯಕ್ಕೆ ಅಪೂರ್ಣವಾಗಿವೆ.

  ನಿಸಿಧಿ ಎಂದರೇನು : ಜೈನರು ಮರಣವನ್ನು ಮಹಾನವಮಿ ಎಂದು ಬಗೆದು ಆತ್ಮ ಉನ್ನತಿಗೋಸ್ಕರ ಮತ್ತು ದೇಹಕ್ಕೆ ಒದಗಿದ ಮುಪ್ಪು, ಗುಣವಾಗದ ರೋಗ, ಬರಗಾಲ ಹಾಗೂ ಇತರೆ ಉಪಸರ್ಗಗಳು (ತೊಂದರೆಗಳು) ಬಂದಾಗ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಾವನ್ನು ಆಹ್ವಾನಿಸುತ್ತಾರೆ. ಈ ಸಾವನ್ನು ಸನ್ಯಸನ, ಸಮಾಧಿ, ಆರಾಧನ, ಪಂಚಪದ, ಅಷ್ಟವಿಧಾರ್ಚನೆ ಎಂಬ ಬೇರೆ ಬೇರೆ ವಿಧಾನಗಳ ಮೂಲಕ ಆಹ್ವಾನಿಸಬಹುದು. ಸರಳವಾಗಿ ಜನಬಳಕೆಯ ಪದದಲ್ಲಿ ಹೇಳಬೇಕೆಂದರೆ ಸಲ್ಲೇಖನ ತೆಗೆದುಕೊಳ್ಳಬಹುದು. ಹೀಗೆ ಸಲ್ಲೇಖನ ವ್ರತದ ಮೂಲಕ ಪರಮಾರ್ಥ ಸಾಧನೆಗಾಗಿ ಪ್ರಾಣತ್ಯಾಗ ಮಾಡಿದ ಜಿನಮುನಿ, ಕಂತಿ, ಶ್ರ‍ಾವಕ, ಶ್ರಾಮಿಕೆಯರ ನೆನಪಿಗಾಗಿ ನಿಲ್ಲಿಸುವ ಸ್ಮರಣಿಕೆಗಳ ಸಾಮಾನ್ಯ ಅರ್ಥದಲ್ಲಿ ನಿಸಿಧಿಗಳೆನಿಸುತ್ತವೆ. ನಿಸಿದಿ, ನಿಸಿಧಿಗೆ, ನಿಶಿದಿ, ನಿಸ್ತಿಕ, ನಿಶಧಿಗೆ, ನಿಷಿದ್ಯಾಲಯ ಎಂಬ ಪದಗಳು ನಿಸಿಧಿಗಿರುವ ವಿವಿಧ ರೂಪಗಳು. ಪದಗಳು ಬೇರೆಯಾದರೂ ಅರ್ಥ ಒಂದೆ ಪ್ರಾಣತ್ಯಾಗದ ಕುರುಹು.

  ಪ್ರಸ್ತುತ ನಿಸಿಧಿಶಾಸನದ ಕಂಭದಿಂದ ಮೋರಿಗೆರೆಯಲ್ಲಿ ರಾಷ್ಟ್ರಕೂಟರ ಕಾಲದಿಂದಲೆ ಒಂದು ಜಿನಾಲಯವೂ ಜೈನರ ಬಾಹುಳ್ಯವೂ ಇತ್ತು ಎಂದು ಸಾಧಿತವಾಗುತ್ತದೆ. ಸಧ್ಯ ಬೆರಳೆಣಿಕೆಯ ಜೈನಕುಟುಂಬಗಳು ಈ ಊರಲ್ಲಿವೆ. ಭಗವಾನ್ ಶೀತಲನಾಥ ತೀರ್ಥಂಕರರ ಜಿನಾಲಯ ಇಲ್ಲಿದ್ದು ಈ ತೀರ್ಥಂಕರರ ಬ್ರಹ್ಮಯಕ್ಷನನ್ನು ಮುನ್ನೆಲೆಗೆ ತರಲಾಗಿದೆ. ಜಿನಾಲಯವು ಕಾಲಕಾಲಕ್ಕೆ ಜೀರ್ಣೋದ್ಧಾರವಾಗುತ್ತಾ ಬಂದು ಆಧುನಿಕಗೊಂಡಿದೆ.

  ಮೋರಿಗೆರೆ : ಮೋರಿಗೆರೆಯು ಪ್ರಾಚೀನ ಅಗ್ರಹಾರವೂ ಆಡಳಿತ ಘಟಕವೂ ಆಗಿದ್ದು, ವಿವಿಧ ಅರಸು ಮನೆತನಗಳ ರಾಜ್ಯಭಾರದ ವೈಭವವನ್ನು ಕಂಡಿದೆ. ಊರಲ್ಲಿ ಹತ್ತಾರು ಶಾಸನಗಳು 20 ಕ್ಕೂ ಹೆಚ್ಚು ಉತ್ತಮ ಶಿಲ್ಪಕಲೆಯ ವೀರಗಲ್ಲುಗಳೂ ಕಂಡುಬರುತ್ತವೆ. ಈ ಎಲ್ಲ ವೀರಗಲ್ಲುಗಳನ್ನು ಬಸದಿಯ ಆವರಣದಲ್ಲಿ ಜೋಡಿಸಿ ಇಡಲಾಗಿದೆ. ನೊಳಂಬರು ಕಟ್ಟಿಸಿದ ದೇವಾಲಯಗಳು ಮೋರಿಗೆರೆಯಲ್ಲಿವೆ.

  ಕ್ಷೇತ್ರಕಾರ್ಯದಲ್ಲಿ ಸಹಕರಿಸಿದ ಶ್ರೀ ಪದ್ಮನಾಭ ಎಚ್; ಶ್ರೀ ಸಣ್ಣಪ್ಪ ಎಚ್.; ಶ್ರೀ ಜಿನದತ್ತಪ್ಪ ಜೆ; ಶ್ರ‍ೀ ಸುರೇಶಬಾಬು ಜೆ; ಶ್ರ‍ೀ ವಸಂತಕುಮಾರ್ ಆರ್; ಬಸದಿ ಅರ್ಚಕರಾದ ಶ್ರ‍ೀ ವಿಜಯಕುಮಾರ ಗುಂಜಾಳ; ಸಹೋದರ ಡಾ. ನಾಗರಾಜ ಕೆ ನವಲಗುಂದ; ಹಾಗೂ ಮೋರಿಗೇರಿಯ ಗ್ರಾಮಸ್ಥರಿಗೆ ಡಾ.ರವಿಕುಮಾರ ರವರು ಧನ್ಯವಾದಗಳನ್ನು ತಿಳಿಸಿದ್ದಾರೆ. – ಜೈನ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ

  error: Jain Heritage Centres - Celebrating Jain Heritage.....Globally!