Skip to content
Home » ಕನ್ನಡ » ಸುದ್ದಿ-ಸಮಾಚಾರ » ಹುಪರಿಯಲ್ಲಿ 11-12ನೇ ಶತಮಾನಕ್ಕೆ ಸೇರಿದ ಪಾರ್ಶ್ವನಾಥ ತೀರ್ಥಂಕರರ ವಿಗ್ರಹಗಳು ಪತ್ತೆ

ಹುಪರಿಯಲ್ಲಿ 11-12ನೇ ಶತಮಾನಕ್ಕೆ ಸೇರಿದ ಪಾರ್ಶ್ವನಾಥ ತೀರ್ಥಂಕರರ ವಿಗ್ರಹಗಳು ಪತ್ತೆ

  ಹುಪರಿ (ಹಾತಕಣಗಲೆ ತಾಲೂಕು, ಕೊಲ್ಲಾಪುರ ಜಿಲ್ಲೆ, ಮಹಾರಾಷ್ಟ್ರ), 6 ಜುಲೈ 2020: ಹನ್ನೊಂದು – ಹನ್ನೆರಡನೆಯ ಶತಮಾನಕ್ಕೆ ಸೇರಿದ ಪಾರ್ಶ್ವನಾಥ ತೀರ್ಥಂಕರರ ಎರಡು ವಿಗ್ರಹಗಳು ಹುಪರಿ ನಗರದಲ್ಲಿ ಸಿಕ್ಕಿವೆ. ಈ ವಿಗ್ರಹಗಳು ಹುಪರಿಯ 1008 ಭಗವಾನ್ ಚಂದ್ರನಾಥ ಬಸದಿಯ ಆವರಣದಲ್ಲಿ ನೂತನ ಜಿನಮಂದಿರದ ನಿರ್ಮಾಣಕ್ಕೆ ಪಾಯವನ್ನು ತೋಡುವಾಗ ದೊರೆತಿವೆ.

  ನೆಲ ಮಟ್ಟದಿಂದ ಸುಮಾರು 3.5 ಅಡಿ ಆಳದಲ್ಲಿ ಪಾರ್ಶ್ವನಾಥ ತೀರ್ಥಂಕರರ ಮೊದಲ ಜಿನ ಬಿಂಬ ದೊರೆತಿದೆ. ಅದು ಭಾಗಶಃ ಭಿನ್ನವಾಗಿದ್ದು ಶಿಲ್ಪವು ಸ್ಪಷ್ಟವಾಗಿದೆ. ಇದರಲ್ಲಿ ಯಾವುದೇ ಶಾಸನಗಳಿಲ್ಲದಿರುವುದರಿಂದ ವಿಗ್ರಹದ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ನೆಲದ ಅಗೆತವನ್ನು ಮತ್ತಷ್ಟು ಮುಂದುವರೆಸಿದಾಗ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ನೆಲ ಮಟ್ಟದಿಂದ ಸುಮಾರು 13.5 ಅಡಿಗಷ್ಟು ಆಳದಲ್ಲಿ ಮತ್ತೊಂದು ಪಾರ್ಶ್ವನಾಥ ತೀರ್ಥಂಕರರ ವಿಗ್ರಹವು ಪತ್ತೆಯಾಯಿತು. ಅದರ ಪಾದಪೀಠದಲ್ಲಿ ನಾಲ್ಕುಸಾಲುಗಳ ಕನ್ನಡದ ಶಾಸನವನ್ನು ನಾವು ಕಾಣಬಹುದಾಗಿದೆ. ಇದು 11-12 ನೇ ಶತಮಾನಕ್ಕೆ ಸೇರಿದ ಶಾಸನ ವೆಂದು ಅಭಿಪ್ರಾಯ ಪಡಲಾಗಿದೆ.

  ಶಾಸನದ ವಿವರ: ಶಾಸನದ ವಿವರ ಹಾಗೂ ಪಾಠವನ್ನು ಹಿರಿಯ ಜೈನ ವಿದ್ವಾಂಸರಾದ ನಾಡೋಜ ಪ್ರೊ.ಹಂಪನಾ (ಹಂ.ಪ.ನಾಗರಾಜಯ್ಯ) ರವರು ಡಾ.ರವಿಕುಮಾರ್ ಕೆ.ನವಲಗುಂದ ರವರೊಂದಿಗೆ ಚರ್ಚಿಸಿ ಬಿಡುಗಡೆ ಮಾಡಿದ್ದಾರೆ.

  ಶಾಸನದ ಪಾಠ:

  ೧ @  ಶ್ರೀ [ಯಾಪನೀಯ]ಸಂಘದ ಪುನ್ನಾವೃಕ್ಷ ಮೂಲಗಣದ ರಾತ್ರಿಮತಿ ಕನ್ತಿಯರ ಶಿಷ್ಯೆಯರಪ್ಪ
  ೨ ತೇರಿವಾಡದ ಜಿನಮತಿ ಕನ್ತಿಯಗ್ಗೆರ್ಗ್ಗೆವರ ಗುಡ್ಡ   ಹಿಲರಯರ ಲಕುಮಗಾವುಂ
  ೩ ಣ್ಡನಾವುರಲ್ಮಾಡಿಸಿಕೊಟ್ಟ ಬಸದಿಗಿನ್ನೂಱಿಪ್ಪತ್ತಯ್ದ(ಯ್ದು) ಮ[ತ್ತರು] ಭೂಮಿ ಆಱುಗ
  ೪ ಯ್ಯ ಮನೆ  ಬಸ(೦)ತವಾಡಲು ಮಂಗಳ ಮಹಾ  ಶ್ರೀ  ಶ್ರೀ || @

  YouTube player
  ಹುಪರಿಯಲ್ಲಿ 11-12ನೇ ಶತಮಾನಕ್ಕೆ ಸೇರಿದ ಪಾರ್ಶ್ವನಾಥ ತೀರ್ಥಂಕರರ ವಿಗ್ರಹಗಳು ಪತ್ತೆ

  ”ಜಿನಮತಿಗಂತಿಯ ಶಿಷ್ಯನಾದ ಹಿಲರಯರ ಲಕುಮ ಗಾವುಂಡ(ಗ್ರಾಮದ ಮುಖ್ಯಸ್ಥ)ನು ತೆರವಾಡದಲ್ಲಿ ಬಸದಿಯೊಂದನ್ನು ನಿರ್ಮಿಸಿದನು. ಜಿನಮತಿಗಂತಿಯು ಯಾಪನೀಯ ಸಂಘದ ಪುನ್ನಾಗವೃಕ್ಷ ಮೂಲಗಣಕ್ಕೆ ಸೇರಿದ ರಾತ್ರಿಮತಿಗಂತಿಯ ಶಿಷ್ಯೆಯಾಗಿದ್ದಳು. ಲಕುಮ ಗಾವುಂಡನು ತನ್ನ ಗುರುವಿಗಾಗೆ ಬಸದಿಯನ್ನು ನಿರ್ಮಿಸಿದ ನಂತರ ಅದರ ನಿರ್ವಹಣೆಗೆ 225 ಮತ್ತರ ಭೂಮಿಯನ್ನು (ಒಂದು ಮತ್ತರ ಎಂದರೆ 100 ಮಾರಿಗೆ ಸಮ) ಹಾಗೂ ಆರು ಮೊಳದಷ್ಟು ಉದ್ದವಾದ ಮನೆಯನ್ನು ಬಸಂತವಾಡದಲ್ಲಿ (ಇಂದಿನ ಬಸ್ತವಾಡ) ನೀಡಿದನು. ಮಂಗಳ ಮಹಾ ಶ್ರೀ” ಎಂದು ತಿಳಿಸುತ್ತದೆ ಎಂದು ಪ್ರೊ.ಹಂಪನಾರವರು ತಿಳಿಸಿದ್ದಾರೆ.

  ಶಾಸನದಲ್ಲಿ ಪ್ರಯೋಗ ಮಾಡಲಾದ ಕೆಲವು ಪದಗಳ ವಿಶ್ಲೇಷಣೆ: ಶಾಸನದಲ್ಲಿ ಬಳಸಲಾದ ”ತೆರವಾಡ”ವು ಮಹಾರಾಷ್ಟ್ರದ ಕೊಲ್ಲಾಪುರದ ಶಿರೋಳ ತಾಲೂಕಿನಲ್ಲಿದ್ದು ಇದು ಹುಪರಿಯಿಂದ ಸುಮಾರು 25 ಕಿ.ಮಿ.ದೂರದಲ್ಲಿದೆ. ಇದರಲ್ಲಿ ಹೆಸರಿಸಲಾದ ಬಸ್ತವಾಡವು ಹುಪರಿಯಿಂದ 40 ಕಿ.ಮಿ.ದೂರದಲ್ಲಿದೆ.

  ”ಈ ವಿಗ್ರಹಗಳು ದೊರೆತಿರುವುದು ಹಾಗೂ ಶಾಸನವನ್ನು ಗಮನಿಸಿದರೆ ಹುಪರಿಯಲ್ಲಿ ಸುಮಾರು 800 ವರ್ಷಗಳ ಹಿಂದೆ ದ್ವಿಕೂಟ ಅಥವಾ ತ್ರಿಕೂಟ ಬಸದಿ ಇದ್ದಿರಬಹುದು, ಇಲ್ಲಿ ಹೆಚ್ಚಿನ ಉತ್ಖನನವನ್ನು ನಡೆಸಿದರೆ ಇನ್ನೂ ಹೆಚ್ಚಿನ ವಿವರಗಳು ಲಭ್ಯವಾಗಬಹುದು,” ಎಂದು ಹಂಪನಾರವರು ತಿಳಿಸಿದ್ದಾರೆ.

  ಹುಪರಿಯ ಬಗ್ಗೆ: ಹುಪರಿಯು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಹಾತಕಣಂಗಿಲೆ ತಾಲೂಕಿನಲ್ಲಿದ್ದು, ತಾಲೂಕು ಕೇಂದ್ರ ಹಾತಕಣಂಗಿಲೆಯಿಂದ 20 ಕಿ.ಮಿ.ದೂರದಲ್ಲಿದ್ದು, ಜಿಲ್ಲಾ ಕೇಂದ್ರ ಕೊಲ್ಹಾಪುರದಿಂದ 23 ಕಿ.ಮಿ.ದೂರದಲ್ಲಿದೆ. ಹುಪರಿಯಲ್ಲಿ ಚಂದ್ರನಾಥ ತೀರ್ಥಂಕರರ ಬಸದಿಯಲ್ಲದೆ, ಅಲ್ಲಿನ ಚಾಂದಿನಗರ ಹಾಗೂ ಯಶವಂತನಗರದಲ್ಲಿ ಶಾಂತಿನಾಥ ತೀರ್ಥಂಕರರ ಬಸದಿಗಳನ್ನು ಕಾಣಬಹುದು.

  ಚಿತ್ರಗಳು: ಅಭಿಲಾಷ್ ಪಾಟೀಲ್ (ಬೆಳಗಾವಿ), ಅಣ್ಣಾಸಾಹೇಬ್ ಶೇಂಡೂರ‍ೆ (ಹುಪರಿ), ಪ್ರಶಾಂತ್ ಜೆ ಉಪಾಧ್ಯೆ (ಗಳತಗಾ) ಹಾಗೂ ಸುನೀಲ್ ಉಪಾಧ್ಯೆ (ಹುಪರಿ).
  ವೀಡಿಯೋ: ಸುನೀಲ್ ಉಪಾಧ್ಯೆ (ಹುಪರಿ)
  – ಜೈನ್ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ, ಡಾ.ರವಿಕುಮಾರ್ ಕೆ ನವಲಗುಂದ ರವರೊಂದಿಗೆ

  error: Jain Heritage Centres - Celebrating Jain Heritage.....Globally!