Skip to content
Home » ಕನ್ನಡ » ಸುದ್ದಿ-ಸಮಾಚಾರ » ಗುಮ್ಮೆತ್ತು ಚಂದ್ರನಾಥ ಬಸದಿಯಲ್ಲಿ ನಾಲ್ಕು ಅಪ್ರಕಟಿತ ಜೈನ ಶಾಸನಗಳು ಪತ್ತೆ

ಗುಮ್ಮೆತ್ತು ಚಂದ್ರನಾಥ ಬಸದಿಯಲ್ಲಿ ನಾಲ್ಕು ಅಪ್ರಕಟಿತ ಜೈನ ಶಾಸನಗಳು ಪತ್ತೆ

    ಕಾರ್ಕಳ, 13 ಮಾರ್ಚ್ 2021: ಕಾರ್ಕಳ ತಾಲ್ಲೂಕಿನ ಹೊಸ್ಮಾರು ಬಳಿಯ ಗುಮ್ಮೆತ್ತು ಚಂದ್ರನಾಥ ಬಸದಿಯ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಒಟ್ಟು ನಾಲ್ಕು ಜೈನ ಪೀಠಶಾಸನಗಳನ್ನು ಸಂಶೋಧಕ ಹರಿಹರದ ಡಾ.ರವಿಕುಮಾರ್ ಕೆ. ನವಲಗುಂದ ರವರಿಗೆ ದೊರೆತಿವೆ. ಇವು ಹದಿಮೂರನೆಯ ಶತಮಾನದಿಂದ ಹದಿನಾರನೆಯ ಶತಮಾನದ ಮಧ್ಯಾವಧಿಯಲ್ಲಿ ನಿರ್ಮಾಣವಾಗಿವೆ. ಇವುಗಳಲ್ಲಿ ಒಂದು ಪಂಚಲೋಹದ್ದಾದರೆ ಉಳಿದವು ಹಿತ್ತಾಳೆ ಶಾಸನಗಳು.
       ಪ್ರಸ್ತುತ ಹೊಸದಾಗಿ ಬೆಳಕಿಗೆಬಂದ ಚಂದ್ರನಾಥ ಬಸದಿಯ ಶಾಸನಗಳಲ್ಲಿ “ಗಣಧರ ಪಾದಪ್ರತಿಮೆ”ಯಲ್ಲಿರುವ ಶಾಸನ ಹಳೆಯದು. ಎತ್ತರವಾದ ಜಗತಿಯಪೀಠ, ಅದರಮೇಲೆ  ಕೆಳಮುಖದಲ್ಲಿ ಅರಳಿದ ಕಮಲ, ಅದರಮೇಲೆ ದಳಗಳನ್ನು ಸ್ವಚ್ಚಂದವಾಗಿ ಹರಡಿಕೊಂಡು ಪುಷ್ಕರ, ಆ ಕಮಲದ ಊರ್ಧ್ವದ ಸಮತಟ್ಟಾದ ಜಾಗದಲ್ಲಿ ಗಣಧರ ಪಾದದ್ವಯಗಳನ್ನು ಚಿತ್ರಿಸಲಾಗಿದೆ. ಬಿಂಬದ ಕಲಾವಂತಿಕೆ ನಾಜೂಕಾಗಿದ್ದು ವೃತ್ತಿನಿರತ ಲೋಹಶಿಲ್ಪಿ ಮಾಡಿದ್ದಾಗಿ ಗೋಚರವಾಗುತ್ತದೆ. ತೀರ್ಥಂಕರರ ದಿವ್ಯವಾಣಿಗಳನ್ನು ಜನತೆಗೆ ತಲುಪಿಸುವವರೆ ಗಣಧರರು. ಸರಳವಾಗಿ ಜಿನಮುನಿಗಳೆನ್ನಬಹುದು. ಅಂತೆಯೇ ಅಸಂಖ್ಯಾತ ಮುನಿಗಣದ ಧರ್ಮಪ್ರಸರಣದ ನೆನೆಕೆಗಾಗಿ ಮತ್ತು ತ್ಯಾಗದ ಪ್ರತೀಕವಾಗಿ ಗಣಧರ ಪ್ರತಿಮೆಯನ್ನು ಮಾಡಿಸಲಾಗಿದೆ. “ಉಳಿಯ ಹೊಸಬುಸೆಟ್ಟಿಯ ಮಗನಾದ ಪುಳೀಯಸೆಟ್ಟಿ ಮತ್ತು ಉಳಿಯ ವರ್ದ್ಧಮಾನಸೆಟ್ಟಿ” ಮಾಡಿಸಿದ್ದಾಗಿ ಪ್ರತಿಮೆಯ ಸುತ್ತಲೂ ಶಾಸನವನ್ನು ಕೆತ್ತಿಸಲಾಗಿದೆ. ಉಳಿಯ ಎಂಬುದು ಒಂದು ಊರು ಅಥವಾ ಮನೆತನದ ಹೆಸರಾಗಿರಲಿಕ್ಕೆ ಸಾಧ್ಯವಿದೆ. ಶಾಸನದ ಕಾಲ ಉಲ್ಲೇಖಿಸಲಾಗಿಲ್ಲ. ಲಿಪಿದೃಷ್ಟಿಯಿಂದ ಹದಿಮೂರನೆಯ ಶತಮಾನದ ಶಾಸನವೆಂದು ಗುರುತಿಸಬಹುದು. 
       ಎರಡನೆಯ ಶಾಸನವೂ ಹದಿಮೂರನೆಯ ಶತಮಾನಕ್ಕೆ ಸೇರಿದ್ದು ಜೈನರ ಪಂಚಪರಮೇಷ್ಟಿಗಳ ಬಿಂದ ಮೇಲೆ ಕೆತ್ತಲಾಗಿದೆ. “ಆಳುವ ಅಮ್ಮಣ ಸೆಟ್ಟಿಯ ಹೆಂಡತಿಯು ಅರಸನಿಗೆ ಪುಣ್ಯ ಲಭಿಸಲಿ ಎಂದು ಪಂಚಪರಮೇಷ್ಟಿಗಳ ಪ್ರತಿಮೆಯನ್ನು ಮಾಡಿಸಿಕೊಟ್ಟಳು” ಎಂಬುದು ಶಾಸನ ಸಾರ. ಅಮ್ಮಣಸೆಟ್ಟಿಯ ಹೆಂಡತಿ ಹೆಸರನ್ನು ದಾಖಲಿಸಲಾಗಿಲ್ಲ. ಇನ್ನು ಇಲ್ಲಿ ಪುಣ್ಯಾರ್ಥಕ್ಕೆ ಭಾಜನವಾದ ಅರಸನು ಯಾರೆಂಬ ಮಾಹಿತಿಯೂ ಅಲಭ್ಯ. ಬಹುಶಃ ಪ್ರತಿಯೊಬ್ಬ ಹೆಂಡತಿಗೆ ತನ್ನ ಗಂಡನೇ ಅರಸನಾಗಿರುತ್ತಾನೆ. ಆದ್ದರಿಂದ ಅಮ್ಮಣಸೆಟ್ಟಿಗೆ ಅರಸ ಎಂಬ ವಿಶೇಷಣವನ್ನು ಬಳಸಿರುವುದನ್ನು ಅಲ್ಲಗಳೆಯುವಂತಿಲ್ಲ. ಅಮ್ಮಣ ಎಂಬ ವ್ಯಕ್ತಿನಾಮವು ಪ್ರಾಚೀನ ವ್ಯಕ್ತಿನಾಮದ ಮರುಬಳಕೆ ಆಗಿರುವುದನ್ನು ಇಲ್ಲಿ ಗಮನಿಸಬೇಕು. ಅಮ್ಮ ಎಂದರೆ ತಂದೆ ಎಂದರ್ಥ. ಅಂಮ್ಮಣ ಗಂಧವಾರಣ ಎಂಬ ಪದವನ್ನು ಪಂಪ, ರನ್ನ ತಮ್ಮ ಕಾವ್ಯದಲ್ಲಿ ಬಳಸಿದ್ದಾರೆ.
       ಒಂದೂವರೆ ಗೇಣೆತ್ತರದ ಪಂಚಪರಮೇಷ್ಟಿ ಬಿಂಬವು ಹಿತ್ತಾಳೆಯಿಂದ ಮಾಡಲ್ಪಟ್ಟಿದೆ. ಹೆಸರೇ ಹೇಳುವಂತೆ ಇದೊಂದು ಅರಹಂತರು, ಸಿದ್ಧರು, ಆಚಾರ್ಯರು, ಉಪಾಧ್ಯಾಯರು, ಸರ್ವಸಾಧುಗಳು ಎಂಬ ಪಂಚ ಪರಮ ಇಷ್ಟಿಗಳನ್ನು ಸ್ಮರಿಸುವ ಬಿಂಬವಾಗಿದೆ. ಹಿತ್ತಾಳೆಯ ಪೀಠ, ಅದರಮೇಲೆ ದುಂಡುಶಿಲ್ಪದ ಸಿದ್ಧರ ಸ್ವತಂತ್ರ ಪದ್ಮಾಸನ ಮೂರ್ತಿಯನ್ನು ವಿರಾಜಮಾನಿಸಲಾಗಿದೆ. ಇದರ ಹಿಂದೆ ಪ್ರಭಾವಳಿ ಇದ್ದು ಅದರಲ್ಲಿ ಉಳಿದ ಪರಮೇಷ್ಟಿಗಳ ಚಿಕಣಿ ಶಿಲ್ಪಗಳನ್ನು ಕೆತ್ತಲಾಗಿದೆ. ಪ್ರಭಾವಳಿಯ ತುದಿಗೆ ಸಿಂಹಮೊಗದ ಕೀರ್ತಿಮುಖವನ್ನೂ ಅದರ ಕೆಳಗೆ ಮುಕ್ಕೊಡೆಯನ್ನೂ ಇಕ್ಕೆಲಗಳಲ್ಲಿ ಚಾಮರಗಳನ್ನೂ ಕೆತ್ತಲಾಗಿದೆ. ಪ್ರಭಾವಳಿಯಲ್ಲಿ ಯಕ್ಷಯಕ್ಷಿಯರನ್ನು ತಂದಿರುವುದು ವಿಶೇಷ. ಇದು ಇತರೆ ತೀರ್ಥಂಕರ ಬಿಂಬಗಳ ಪ್ರಭಾವ.
       ಪಂಚಪರಮೇಷ್ಟಿಗಳ ಕುರಿತಾದ ಸ್ತುತಿಯನ್ನು ‘ಣಮೋಕಾರ ಮಂತ್ರ’ ಎನ್ನಲಾಗುತ್ತದೆ. ಪಂಚಪದ, ಪಂಚನಮಸ್ಕಾರ ಎಂಬುದು ಇದಕ್ಕಿರುವ ವಿವಿಧ ಹೆಸರುಗಳಾಗಿವೆ. ಈ ಮಂತ್ರದ ಕೆಲ ಭಾಗಗಳು ಮೊದಲು ಓರಿಸ್ಸಾದ ಹಾಥಿಗುಂಫಾದಲ್ಲಿರುವ ಖಾರವೇಲನ ಶಾಸನದಲ್ಲಿ ದೊರೆಯುತ್ತವೆ. ಣಮೋಕಾರ ಮಂತ್ರದಲ್ಲಿ ಮೊದಲ ಸ್ತುತಿ ಅರಹಂತರಿಗೆ ಲಭ್ಯವಾದರೂ ಆರಾಧನೆಯಲ್ಲಿ ಮೊದಲ ಸ್ಥಾನ ಸಿದ್ಧರಿಗೆ ಸಲ್ಲುತ್ತದೆ. ಸಿದ್ಧಸ್ಥಿತಿ ಅಂತಿಮವಾದ್ದರಿAದ ಈ ಆರಾಧನಾ ಕ್ರಮ ಧರ್ಮಯುತವಾಗಿ ಅಳವಟ್ಟಿದೆ. ಪ್ರಸ್ತುತ ಬಿಂಬದಲ್ಲಿ ಸಿದ್ಧರು ಪ್ರಾಧಾನ್ಯವಾಗಿದ್ದು ಮೂರ್ತಿಯ ಬಲಭುಜಕ್ಕೆ ಅರಹಂತ, ಎಡಭುಜಕ್ಕೆ ಆಚಾರ್ಯ, ಬಲಮಂಡಿಯ ಮೇಲೆ ಉಪಾಧ್ಯಾಯ, ಎಡಮಂಡಿಯ ಮೇಲೆ ಸರ್ವಸಾಧುಗಳನ್ನು ಚಿತ್ರಿಸಲಾಗಿದೆ.
       ಚಂದ್ರನಾಥ ಬಸದಿಯಲ್ಲಿ ದೊರೆತ ಮೂರನೆಯ ಶಾಸನವು ‘ಪಾರ್ಶ್ವನಾಥ ತೀರ್ಥಂಕರ’ ಪಾದಪೀಠದ ಮೇಲಿದೆ. ವಿಕ್ರಾಂತಸೆಟ್ಟಿ ಬಳಿಯ ಎಂಬುವವನು ಪೀಠ ಸಹಿತ ಪ್ರಭಾವಳಿ ಮಾಡಿಸಿದ್ದಾಗಿ ಶಾಸನ ತಿಳಿಸುತ್ತದೆ. ಬಸದಿಯಲ್ಲಿ ಈ ಹಿಂದೆ ಇದ್ದಿರಬಹುದಾದ ಚಿಕ್ಕ ಪಾರ್ಶ್ವನಾಥ ಚಿಕ್ಕ ಬಿಂಬಕ್ಕೆ ಹಿತ್ತಾಳೆಯ ಪೀಠಸಹಿತ ಪ್ರಭಾವಳಿ ಮಾಡಿಸಿದ್ದಕ್ಕಾಗಿ ಶಾಸನವನ್ನು ಹಾಕಿಸಲಾಗಿದೆ. ೬ ಇಂಚಿನ ಕಾಯೋತ್ಸರ್ಗ ಪಾರ್ಶ್ವನಾಥ ತೀರ್ಥಂಕರ ಬಿಂಬ ಬಳಪದ ಶಿಲೆಯಲ್ಲಿ ಮಾಡಲಾಗಿದ್ದು ನಾಚೂಕು ಕೆತ್ತನೆಯನ್ನು ಹೊಂದಿದೆ. ಸರ್ಪದ ಹೆಡೆ, ಹೆಡೆಯ ಹಿಂದೆ ಅರಳಿದ ಪುಷ್ಪದಲ್ಲಿ ಶಿಲ್ಪಿಯ ಕಲಾವಂತಿಕೆಯ ಕೈಚಳಕ ಎದ್ದು ತೋರುತ್ತದೆ. ಲಿಪಿ ದೃಷ್ಟಿಯಿಂದ ಇದೊಂದು ಹದಿನಾಲ್ಕನೆಯ ಶತಮಾನದ ರಚನೆ ಎನ್ನಲಡ್ಡಿಯಿಲ್ಲ.

    ತುಂಗಾತ ಬಳಿಯ ಕುಂಞದುಡಿಯ ತೀರ್ಥಂಕರ ಬಿಂಬವನ್ನು ಮಾಡಿಸಿದ್ದು ನಾಲ್ಕನೆಯ ಶಾಸನದ ಸಾರ. ಲಿಪಿದೃಷ್ಟಿಯಿಂದ ಹದಿನಾರನೆಯ ಶತಮಾನದ ಶಾಸನವಿದು. ಕುಂಞದುಡಿಯ ಈ ಶಾಸನವನ್ನು ಮತ್ತು ತೀರ್ಥಂಕರ ಬಿಂಬವನ್ನು ಮಾಡಿಸಿದನು. ಯಾವ ತೀರ್ಥಂಕರ ಎಂದು ಹೇಳಲಾಗಿಲ್ಲ. ಕಾಯೋತ್ಸರ್ಗದ ಈ ಬಿಂಬವನ್ನು ಹಿತ್ತಾಳೆಯಿಂದ ಮಾಡಲ್ಪಟ್ಟಿದೆ ಪ್ರಭಾವಳಿ, ಕೀರ್ತಿಮುಖ, ಏಕಛಾತ್ರವನ್ನು ಮತ್ತು ಯಕ್ಷಯಕ್ಷಿಯರನ್ನು ಹೊಂದಿದೆ.
    ಸಾಕಷ್ಟು ಶಾಸನಗಳು, ತೀರ್ಥಂಕರ, ಗಣಧರ ಬಿಂಬಗಳು ಮತ್ತು ಬಸದಿಯ ಮೂಲನಾಯಕ ಬಿಂಬದ ಹರಿನೀರಪೀಠದ ಸಹಾಯದಿಂದ ಗುಮ್ಮೆತ್ತಿನ ಚಂದ್ರನಾಥ ಬಸದಿಯು ಹದಿಮೂರನೆಯ ಶತಮಾನದಷ್ಟು ಹಳೆಯದು ಎಂದು ಗುರುತಿಸಬಹುದು. ಸದ್ಯ ಇಲ್ಲಿ ದೊರೆತಿರುವ ಹಳೆಯಉಳಿಕೆಗಳು ಈ ಮಾಹಿತಿಯನ್ನು ಶೃತಪಡಿಸಿವೆ. ಇಲ್ಲಿ ಇನ್ನೂ ಇದ್ದಿರಬಹುದಾದ ಅನೇಕ ಶಾಸನಗಳು, ಪ್ರಾಚೀನ ಅವಶೇಷಗಳು ಕಾಲನ ಹೊಡೆತಕ್ಕೆ ನಾಶವಾಗಿವೆ. ಪ್ರಯತ್ನಪಟ್ಟರೆ ಅವೆಲ್ಲವು ಸುತ್ತಮುತ್ತಲಿನ ಪರಿಸರದಲ್ಲಿ ಲಭ್ಯವಾಗಬಹುದು.

    ಕ್ಷೇತ್ರಕಾರ್ಯದಲ್ಲಿ ನೆರವಾದ ಶ್ರೀ ಸಂದೇಶ್ ಜೈನ್ ಅಭಿಯಂತರರು ಬೆಂಗಳೂರು ಹಾಗೂ ಶ್ರೀ ಭರತ್ ರಾಜ್ ಮೂಡಾರು ಅಭಿಯಂತರರು ಕಾರ್ಕಳ ಇವರಿಗೆ ಧನ್ಯವಾದಗಳು. ಹಾಗೂ ಚಂದ್ರನಾಥ ಬಸದಿಯ ಶಾಸನಗಳ ಅಧ್ಯಯನಕ್ಕೆ ಸಹಕರಿಸಿದ ಶ್ರೀ ವಿಜಯಕುಮಾರ ಹೊಸ್ಮಾರು ಇವರಿಗೆ ಬಸದಿಯ ಇಂದ್ರರಾದ ಶ್ರೀ ಶಮಿತ್ಚಂದ್ರ ಇವರಿಗೆ ಡಾ.ರವಿಕುಮಾರ್ ಕೆ. ನವಲಗುಂದರವರು ಧನ್ಯವಾದಗಳನ್ನು ತಿಳಿಸಿದ್ದಾರೆ.
    - ಜೈನ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ
    error: Jain Heritage Centres - Celebrating Jain Heritage.....Globally!