Skip to content
Home » ಕನ್ನಡ » ಸುದ್ದಿ-ಸಮಾಚಾರ » ಶ್ರವಣಬೆಳಗೊಳ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ

ಶ್ರವಣಬೆಳಗೊಳ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ

    ಶ್ರವಣಬೆಳಗೊಳ (ಹಾಸನ ಜಿಲ್ಲೆ, ಕರ್ನಾಟಕ), 23 ಮಾರ್ಚ್ 2023: ಶ್ರವಣಬೆಳಗೊಳದ ಶ್ರೀ ದಿಗಂಬರ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಇಂದು ಬೆಳಿಗ್ಗೆ ಶ್ರವಣಬೆಳಗೊಳದಲ್ಲಿ ನಿಧನ ಹೊಂದಿದ್ದಾರೆ.

    ಮಠದ ಮೂಲಗಳ ಪ್ರಕಾರ, ಮಾರ್ಚ್ 23 ರಂದು ಬೆಳಿಗ್ಗೆ ಪೂಜ್ಯ ಸ್ವಾಮೀಜಿ ಕೆಳಗೆ ಬಿದ್ದಿದ್ದು ನಂತರ ಅವರನ್ನು ಬೆಳ್ಳೂರು ಕ್ರಾಸ್‌ನಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆಗೆ ಹರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು.

    ಪರಮಪೂಜ್ಯ ಸ್ವಾಮೀಜಿಯವರು 1949ರ ಮೇ 3ರಂದು ಕರ್ನಾಟಕದ ಉಡುಪಿ ಜಿಲ್ಲೆಯ ವರಂಗದಲ್ಲಿ ಜನಿಸಿದರು. ಕೌಟುಂಬಿಕ ಜೀವನದಲ್ಲಿ ಅವರನ್ನು ರತ್ನವರ್ಮ ಎಂದು ಕರೆಯಲಾಗುತ್ತಿತ್ತು. ಅವರು ಡಿಸೆಂಬರ್ 12, 1969 ರಂದು ಶ್ರವಣಬೆಳಗೊಳದ ಭಟ್ಟಾರಕ ಪೀಠದ ಮಠಾಧೀಶರಾದರು. ಅವರು ಮೂಲಸಂಘ ದೇಶಿಗಣ ಕುಂದಕುಂದ ಆಚಾರ್ಯ ಪರಂಪರೆಯ ಶ್ರೀ ನೇಮಿ ಸಾಗರವರ್ಣೀಯವರ ಭಟ್ಟಾರಕ ಪರಂಪರೆಯ ವರ್ತಮಾನ ಪೀಠಾಧೀಶರಾಗಿದ್ದರು.

    ಶ್ರವಣಬೆಳಗೊಳದ ದಿಗಂಬರ ಜೈನಮಠದ ಮಠಾಧೀಶರಾದ ನಂತರ ಪರಮಪೂಜ್ಯ ಸ್ವಾಮೀಜಿಯವರು ಶ್ರೀ ದಿಗಂಬರ ಜೈನ ಮಠ ಸಂಸ್ಥೆಗಳ ವ್ಯವಸ್ಥಾಪನಾ ಸಮಿತಿಯನ್ನು (SDJMIMC) ಸ್ಥಾಪಿಸಿ ಶ್ರವಣಬೆಳಗೊಳದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. 12 ವರ್ಷಗಳಿಗೊಮ್ಮೆ ನಡೆಯುವ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಮೇಲಿರುವ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವವು ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ 1981, 1993, 2006 ಮತ್ತು 2018 ರಲ್ಲಿ ನಡೆಸಲ್ಪಟ್ಟಿತು.

    ಅವರು ಕನ್ನಡ, ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳ ವಿದ್ವಾಂಸರಾಗಿದ್ದ ಅವರು ಪ್ರಾಕೃತ ಭಾಷೆಯ ಅಧ್ಯಯನ ಮತ್ತು ಸಂಶೋಧನೆಯ ಬಗ್ಗೆ ಕೇಂದ್ರೀಕರಿಸಿ ಶ್ರವಣಬೆಳಗೊಳದಲ್ಲಿ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ (NIPSAR) ಅನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಧವಳ, ಜಯ ಧವಳ ಮತ್ತು ಮಹಾ ಧವಳ ಕೃತಿಗಳನ್ನು ಈ ಸಂಸ್ಥೆಯ ಮೂಲಕ ಕನ್ನಡ ಭಾಷೆಗೆ ಅನುವಾದಿಸಿ ಅವುಗಳ ವಿವರವಾದ ವ್ಯಾಖ್ಯಾನವನ್ನು ಕನ್ನಡದಲ್ಲಿ ಬರೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರು NIPSAR ಅನ್ನು ವಿಶ್ವದ ಮೊದಲ ಪ್ರಾಕೃತ ವಿಶ್ವವಿದ್ಯಾಲಯವಾಗಿ ಪರಿವರ್ತಿಸುವ ಕನಸು ಕಂಡಿದ್ದರು ಮತ್ತು ಆ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿದ್ದವು. ಅವರ ಕನಸುಗಳು ನನಸಾಗುವ ಮೊದಲೇ ಅವರು ನಿಧನರಾದುದು ವಿಧಿಯ ವಿಪರ್ಯಾಸ.

    ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಶಾಖೆಗಳೊಂದಿಗೆ ಶ್ರವಣಬೆಳಗೊಳವನ್ನು ಕೇಂದ್ರ ಸ್ಥಾನವನ್ನಾಗಿಸಿ ಜೈನ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಜೈನ ಅಧ್ಯಯನ ಕೇಂದ್ರದ ಜಿಲ್ಲಾ ಘಟಕಗಳು ವಿವಿಧ ಜಿಲ್ಲೆಗಳಲ್ಲಿ ಜೈನ ಧರ್ಮಕ್ಕೆ ಸಂಬಂಧಿಸಿದ ಸಂಶೋಧನಾ ಚಟುವಟಿಕೆಗಳನ್ನು ನಡೆಸುತ್ತಿದ್ದವು.

    ದಿಗಂಬರ ಜೈನ ಪಂಥದ ಕಟ್ಟಾ ಅನುಯಾಯಿಗಳಾಗಿದ್ದ ಅವರು ಕರ್ನಾಟಕದಾದ್ಯಂತ ಹಲವಾರು ಜೈನ ಬಸದಿಗಳು/ದೇವಾಲಯಗಳ ಜೀರ್ಣೋದ್ಧಾರ ಯೋಜನೆಗಳ ನೇತೃತ್ವ ವಹಿಸಿದ್ದರು. ಅವರ ಸರಳತೆ ಮತ್ತು ಪಾಂಡಿತ್ಯಪೂರ್ಣ ಜ್ಞಾನಕ್ಕಾಗಿ ಪ್ರಪಂಚದಾದ್ಯಂತದ ವಿದ್ವಾಂಸರು ಮತ್ತು ಜನಸಾಮಾನ್ಯರು ಅವರನ್ನು ಗೌರವದಿಂದ ನೋಡುತ್ತಿದ್ದರು.

    ಆದಿಚುಂಚನಗಿರಿ ಆಸ್ಪತ್ರೆಯಿಂದ ಮಧ್ಯಾಹ್ನ 12:30ಕ್ಕೆ ಶ್ರವಣಬೆಳಗೊಳಕ್ಕೆ ಅವರನ್ನು ಕರೆತಂದು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು, ಸಂಜೆ 4:30ಕ್ಕೆ ಮೆರವಣಿಗೆಯಲ್ಲಿ ಕರೆದೊಯ್ದು ಶ್ರವಣಬೆಳಗೊಳದ ಬೋಳುಬೆಟ್ಟದಲ್ಲಿ ದಿಗಂಬರ ಜೈನ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಸಲಾಯಿತು.

    ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ ತಂಡವು ಪರಮಪೂಜ್ಯ ಸ್ವಾಮೀಜಿಯವರ ಆತ್ಮಕ್ಕೆ ಸದ್ಗತಿ ಸಿಗಲೆಂದು ಪ್ರಾರ್ಥಿಸುತ್ತದೆ.
    – ಜೈನ್ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ

    error: Jain Heritage Centres - Celebrating Jain Heritage.....Globally!