Skip to content
Home » ಕನ್ನಡ » ಸುದ್ದಿ-ಸಮಾಚಾರ » ಹಿರಯ ಜೈನ ವಿದ್ವಾಂಸರಾದ ಡಾ. ಎಸ್. ಪಿ. ಪಾಟೀಲರು ಇನ್ನಿಲ್ಲ

ಹಿರಯ ಜೈನ ವಿದ್ವಾಂಸರಾದ ಡಾ. ಎಸ್. ಪಿ. ಪಾಟೀಲರು ಇನ್ನಿಲ್ಲ

    ಸಾಂಗಲಿ (ಮಹಾರಾಷ್ಟ್ರ), ಜುಲೈ ೧೨, ೨೦೨೬: ಹಿರಯ ಜೈನ ವಿದ್ವಾಂಸರಾದ ಡಾ. ಎಸ್. ಪಿ. ಪಾಟೀಲರು ಸಾಂಗಲಿಯ ತಮ್ಮ ಸ್ವಗೃಹದಲ್ಲಿ ಜುಲೈ ೧೨ರ ಬೆಳಗಿನ ಜಾವ ೪ ಘಂಟೆಗೆ ನಿಧನ ಹೊಂದಿದರು. ಧಾರವಾಡದ ಕರ್ನಾಟಕ ವಿ. ವಿ ಕನ್ನಡ ಅಧ್ಯಯನ ಪೀಠದ ಹಾಗೂ ಜೈನ ಅಧ್ಯಯನ ಪೀಠದ ವಿಶ್ರಾಂತ ಪ್ರಾಧ್ಯಾಪಕರಾಗಿದ್ದ ಡಾ. ಎಸ್. ಪಿ. ಪಾಟೀಲ ಅವರು ಇಂದು ತಮ್ಮ ೮೬ ನೆಯ ವಯಸ್ಸಿನಲ್ಲಿ ತಮ್ಮ ಕುಟುಂಬ ಹಾಗೂ ಅಪಾರ ಬಂಧು ಬಳಗವನ್ನು  ಅಗಲಿದ್ದಾರೆ.

    ಡಾ. ಎಸ್. ಪಿ. ಪಾಟೀಲರು ಕನ್ನಡ ಸಾಹಿತ್ಯ, ವಿಶೇಷವಾಗಿ ಜೈನ ಸಾಹಿತ್ಯ, ಸಂಶೋಧನೆ, ವಿಮರ್ಶೆ ಹಾಗೂ ಸಂಪಾದನಾ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಹಿರಿಯ ವಿದ್ವಾಂಸರಾಗಿದ್ದಾರೆ. ಕನ್ನಡ ಭಾಷೆ, ಜೈನ ತತ್ವಶಾಸ್ತ್ರ, ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನವನ್ನು ಸಮನ್ವಯಗೊಳಿಸಿ ಅವರು ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಸಂಶೋಧಕರಾಗಿ, ಸಂಪಾದಕರಾಗಿ, ವಿಮರ್ಶಕರಾಗಿ ಹಾಗೂ ಉಪನ್ಯಾಸಕರಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅವರು ಗೌರವಾನ್ವಿತ ಸ್ಥಾನವನ್ನು ಪಡೆದಿದ್ದಾರೆ.

    ವಿದ್ಯಾಭ್ಯಾಸ – ಡಾ. ಪಾಟೀಲರು ಕನ್ನಡ ಹಾಗೂ ಜೈನ ಅಧ್ಯಯನ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಪಡೆದು ಸಂಶೋಧನೆಯಲ್ಲಿ ತೊಡಗಿದರು: ಎಂ.ಎ. – ಜೈನ ಸಾಹಿತ್ಯ, ಸಂಸ್ಕೃತಿ, ತತ್ವಶಾಸ್ತ್ರ ಮತ್ತು ಧರ್ಮ; ಎಂ.ಫಿಲ್.; ಪಿಎಚ್.ಡಿ.

    ವೃತ್ತಿಜೀವನ ಅವರು ಕರ್ನಾಟಕದ ವಿವಿಧ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಸಂಶೋಧನೆ, ಮಾರ್ಗದರ್ಶನ, ಸಂಪಾದನೆ ಹಾಗೂ ಜೈನ ಸಾಹಿತ್ಯದ ಪ್ರಸಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

    ಸಾಹಿತ್ಯ ಸೇವೆ ಡಾ. ಎಸ್. ಪಿ. ಪಾಟೀಲರ ಸಾಹಿತ್ಯ ಸೇವೆಯ ವ್ಯಾಪ್ತಿ ವಿಶಾಲವಾಗಿದೆ:

    • ಜೈನ ಧರ್ಮ, ತತ್ವಶಾಸ್ತ್ರ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಅನೇಕ ಗ್ರಂಥಗಳ ರಚನೆ.
    • ಕನ್ನಡ ಸಾಹಿತ್ಯ ವಿಮರ್ಶೆಗೆ ಸಂಬಂಧಿಸಿದ ಸಂಶೋಧನಾತ್ಮಕ ಕೃತಿಗಳ ಪ್ರಕಟಣೆ.
    • ಪ್ರಾಚೀನ ಕನ್ನಡ ಹಾಗೂ ಜೈನ ಸಾಹಿತ್ಯ ಗ್ರಂಥಗಳ ಸಂಪಾದನೆ.
    • ಅಪರೂಪದ ಹಸ್ತಪ್ರತಿಗಳು ಹಾಗೂ ಶಾಸನಗಳ ಅಧ್ಯಯನ.
    • ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧ ಮಂಡನೆ.
    • ಕನ್ನಡ ವಿಶ್ವವಿದ್ಯಾಲಯ, ಹಂಪಿ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ಸಂಶೋಧನಾ ಚಟುವಟಿಕೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ.

    ಅವರು ಕಾರ್ಯನಿರ್ವಹಿಸಿದ ಪ್ರಮುಖ ಸಂಶೋಧನಾ ಕ್ಷೇತ್ರಗಳುಜೈನ ಸಾಹಿತ್ಯ, ಜೈನ ತತ್ವಶಾಸ್ತ್ರ, ಕನ್ನಡ ಸಾಹಿತ್ಯ, ಕನ್ನಡ ಭಾಷೆಯ ಇತಿಹಾಸ, ಶಾಸನ ಅಧ್ಯಯನ, ಸಂಸ್ಕೃತಿ ಅಧ್ಯಯನ, ವಿಮರ್ಶೆ, ಸಂಪಾದನಾಶಾಸ್ತ್ರ.

    ಸಾಹಿತ್ಯಿಕ ಕೃತಿಗಳು – ಡಾ. ಪಾಟೀಲರು ಅನೇಕ ಮೌಲಿಕ ಹಾಗೂ ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು:

    • ಪ್ರಬಂಧಗಳುಜೈನ ಸಾಹಿತ್ಯ ಸಂಸ್ಕೃತಿ, ಸಿದ್ಧಶೇಷೆ, ರಾಷ್ಟ್ರೀಯ ಭಾವೈಕ್ಯ, ಸಮಪ್ರಭಾವನ, ಜೈನ ಸಂಸ್ಕೃತಿಯ ಹಬ್ಬಗಳು,
    • ಸಂಪಾದಿತ ಕೃತಿಗಳು – ಪೂರ್ವಪುರಾಣ, ಸುವಿಚಾರ ಚರಿತೆ, ಧರ್ಮಾಮೃತಂ, ನಯಸೇನ ಸಂಪುಟ, ಸಮ್ಯಕ್ತ್ವ ಕೌಮುದಿ, ಶಂಖ ಜಿನೋದ್ಭವ ಕಾವ್ಯ, ರಯಣಸಾರ, ಮುನಿಧರ್ಮಸಾಗರರ ಕನ್ನಡ ಸಿದ್ಧಾಂತ ಶಾಹಿರಿ ಪದ್ಯಾವಳಿ, ಧವಲತ್ರಯ ಪ್ರವೇಶ (ಸಂ.), ಧ್ವನಿ (ವಿದ್ಯಾರ್ಥಿ ಕವನ ಸಂಗ್ರಹ), ದ್ವಾರಪಾಲ ವಿರಚಿತ ಶಾಂತಿಸಾಗರ ಲಾವಣಿ, ಬಾಬುರಾವ್‌ ಗಾಯಕವಾಡ ಅವರ ಕವನಗಳು, ಐನಾಪೂರ ಆಚಾರ್ಯ ಕುಂಥುಸಾಗರರು ಸಮಗ್ರ ಕೃತಿಗಳು ಸಂಪುಟ ೧ ಮತ್ತಿ ೨.
    • ವಿಮರ್ಶೆ – ಕವಿ ಬ್ರಹ್ಮ ಶಿವ, ೨ನೇ ನಾಗವರ್ಮನ ವರ್ಧಮಾನ ಪುರಾಣ, ಮಹಾಕವಿ ರನ್ನ, ಆಧುನಿಕ ಕನ್ನಡ ಲೇಖಕರು.
    • ತೌಲನಿಕ – ಬಾಂಧವ್ಯ
    • ಜೀವನ ಚರಿತ್ರೆ – ಆದಿನಾಥ, ದಾನ ಚಿಂತಾಮಣಿ ಅತ್ತಿಮಬ್ಬೆ, ಶ್ರಮಣ ರತ್ನ ಸುಬಲಸಾಗರ ಮಹಾರಾಜರು, ಐನಾಪೂರ ಆಚಾರ್ಯ ಕುಂಥುಸಾಗರ ಮಹಾರಾಜರು.
    • ಅನುವಾಧ – ಕಥಾಸಂಕಲನ: ಹೆಣ್ಣು, ಮಹಿಳೆಯರ ಕೆಲವು ಮರಾಠಿ ಕಥೆಗಳು, ಬಾಬುರಾವ್‌ ಗಾಯಕವಾಡ ಅವರ ಆಯ್ದ ಕವನಗಳು,
    • ಸಂಗ್ರಹಾನುವಾದ – ಧರ್ಮಾಮೃತದ ಕಥೆಗಳು, ಅಜಿತಪುರಾಣಸಾರ.
    • ಸಂಕಲನಗಳು – ಡಾ. ಪಾಟೀಲರು ಹಲವು ಮಹತ್ವದ ಸಂಕಲನಗಳನ್ನು ಸಂಪಾದಿಸಿದ್ದಾರೆ. ಅವುಗಳಲ್ಲಿ: ಅಧುನಿಕ ಕನ್ನಡ ಜೈನ ಲೇಖಕರು, ಜೈನ ಅಧ್ಯಯನ ಸಂಶೋಧನೆಗಳು, ಜೈನ ದರ್ಶನ, ಜೈನ ಮಾಣಿಕ್ಯ, ಬಾಂಧವ್ಯ, ಮಹಾಮಸ್ತಕಾಭಿಷೇಕ ವಿಶೇಷ ಸಂಚಿಕೆ, ಪ್ರಗತಿ–ಜಿನವಿಜಯ ವಿಶೇಷ ಸಂಚಿಕೆ, ಪ್ರಗತಿ–ಜಿನವಿಜಯ ಗೌರವ ಸಂಚಿಕೆ.
    • ಸಂಶೋಧನಾ ಲೇಖನಗಳು – ಅವರ ಸಂಶೋಧನಾ ಲೇಖನಗಳು ವಿವಿಧ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಜರ್ನಲ್‌ಗಳು, ಸಂಶೋಧನಾ ಸಂಕಲನಗಳು ಹಾಗೂ ಸಮ್ಮೇಳನ ಗ್ರಂಥಗಳಲ್ಲಿ ಪ್ರಕಟವಾಗಿವೆ. ಕನ್ನಡ ಸಾಹಿತ್ಯ, ಜೈನ ತತ್ವಶಾಸ್ತ್ರ, ಶಾಸನಗಳು, ಸಂಸ್ಕೃತಿ, ಭಾಷಾ ಅಧ್ಯಯನ ಹಾಗೂ ವಿಮರ್ಶೆ ಕುರಿತ ಅನೇಕ ಲೇಖನಗಳನ್ನು ಅವರು ಪ್ರಕಟಿಸಿದ್ದಾರೆ.
    • ವಿಚಾರ ಸಂಕಿರಣಗಳು – ಡಾ. ಪಾಟೀಲರು ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಅನೇಕ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ವಿಶೇಷವಾಗಿ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಬೆಂಗಳೂರು, ಧಾರವಾಡ, ಬೆಳಗಾವಿ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆ ಗಮನಾರ್ಹವಾಗಿದೆ.

    ಸಾಹಿತ್ಯ ಕ್ಷೇತ್ರದಲ್ಲಿನ ಸ್ಥಾನ – ಡಾ. ಎಸ್. ಪಿ. ಪಾಟೀಲರು ಜೈನ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಿದ ವಿದ್ವಾಂಸರಾಗಿದ್ದಾರೆ. ಅವರ ಕೃತಿಗಳು ಜೈನ ಧರ್ಮ, ತತ್ವಶಾಸ್ತ್ರ, ಇತಿಹಾಸ ಮತ್ತು ಕನ್ನಡ ಸಾಹಿತ್ಯದ ಅಧ್ಯಯನಕ್ಕೆ ಮಹತ್ವದ ಆಕರಗ್ರಂಥಗಳಾಗಿದ್ದು, ಸಂಶೋಧಕರಿಗೆ ಮಾರ್ಗದರ್ಶಕವಾಗಿವೆ. ಅವರ ಅಧ್ಯಯನ, ಸಂಪಾದನೆ ಮತ್ತು ವಿಮರ್ಶಾ ಕಾರ್ಯಗಳು ಕನ್ನಡ ಜೈನ ಸಾಹಿತ್ಯದ ವಿಸ್ತರಣೆಗೆ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿವೆ.

    ಅವರ ನಿಧನದ ಸುದ್ದಿಯನ್ನು ತಿಳಿದ ಜೈನ ಸಮಾಜ ಹಾಗೂ ಸಾಹಿತ್ಯ ವಲಯ ಕಂಬನಿ ಮಿಡಿದಿದೆ

    ಬೆಂಗಳೂರು, ಡಾ. ಹೆಚ್. ಎ. ಪಾರ್ಶ್ವನಾಥ್‌ – ಹಿರಿಯ ಜೈನ ವಿದ್ವಾಂಸ, ಕನ್ನಡ ಸಾಹಿತ್ಯ ಹಾಗೂ ಜೈನ ಅಧ್ಯಯನ ಕ್ಷೇತ್ರದ ವಿಶಿಷ್ಟ ಸಂಶೋಧಕರಾದ ಡಾ. ಎಸ್. ಪಿ. ಪಾಟೀಲರ ವಿಧಿವಶರಾದ ಸುದ್ದಿ ಅತ್ಯಂತ ದುಃಖವನ್ನುಂಟು ಮಾಡಿದೆ. ಅವರ ಅಗಲಿಕೆಯಿಂದ ಜೈನ ಸಾಹಿತ್ಯ, ಸಂಶೋಧನೆ ಮತ್ತು ಕನ್ನಡದ ಬೌದ್ಧಿಕ ಲೋಕವು ಓರ್ವ ಮೇರು ವಿದ್ವಾಂಸ, ಮಾರ್ಗದರ್ಶಕ ಹಾಗೂ ಚಿಂತಕರನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಪರಮ ಸದ್ಗತಿ ದೊರೆಯಲಿ. ಅಲ್ಲದೆ, ಅವರ ಕುಟುಂಬದ ಸದಸ್ಯರು, ಶಿಷ್ಯವೃಂದ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಡಾ. ಹೆಚ್. ಎ. ಪಾರ್ಶ್ವನಾಥ್‌ ಸಂತಾಪ ಸೂಚಿಸಿದ್ದಾರೆ.

    ಡಾ. ಎಸ್. ಪಿ. ಪಾಟೀಲರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದ ಅವರು, “‘ತೀರ್ಥವಂದನೆ’ ಸ್ಮರಣ ಸಂಚಿಕೆಯ ಪ್ರಕಟಣೆಯ ಸಂದರ್ಭದಲ್ಲಿ ಅವರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿದ ಕ್ಷಣಗಳು ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಧಾರವಾಡದಲ್ಲಿ ನಡೆದ ಅನೇಕ ಸಾಹಿತ್ಯಿಕ ಹಾಗೂ ಜೈನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರೊಂದಿಗೆ ಭಾಗವಹಿಸಿದ ಸುಂದರ ನೆನಪುಗಳು ನನ್ನ ಮನದಲ್ಲಿ ಚಿರಸ್ಥಾಯಿಯಾಗಿವೆ. ಅವರ ಸರಳತೆ, ಅಪಾರ ಪಾಂಡಿತ್ಯ ಮತ್ತು ಯುವ ಸಂಶೋಧಕರನ್ನು ಪ್ರೋತ್ಸಾಹಿಸುವ ಗುಣ ಸದಾ ಸ್ಮರಣೀಯ. ಜೈನ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆ ಮುಂದಿನ ಪೀಳಿಗೆಗಳಿಗೆ ಸದಾ ಮಾರ್ಗದರ್ಶನವಾಗಿರುತ್ತದೆ” ಎಂದು ಭಾವುಕರಾಗಿ ನುಡಿದರು.‌

    ಶ್ರೀ ಡಿ.ಎನ್.ಅಕ್ಕಿ, ಇಂಡಿ – ನನ್ನ ಬರಹಕ್ಕೆ ಒತ್ತಾಸೆಯಾಗಿ ನಿಂತ ಪುಣ್ಯ ಪುರು಼ಷರು. ಅವರ ದಿವ್ಯಾತ್ಮಕ್ಕೆ ಗೌರವದಿಂದ ನಮಿಸಿ ಚಿರಶಾಂತಿಯನ್ನು ಕೋರುವೆ. ನಿಮ್ಮೆಲ್ಲರ ದುಃಖದಲ್ಲಿ ನಾನೂ ಭಾಗಿ. ಓಂಶಾಂತಿ ಭಾವಪೂರ್ಣ ಶ್ರದ್ಧಾಂಜಲಿ.

    ಡಾ.ಪಿ.ಜಿ.ಕೆಂಪಣ್ಣವರ್‌, ಬೆಳಗಾವಿ – ನನ್ನ ವಿದ್ಯಾ ಗುರುಗಳು, ಧಾರವಾಡ ಕ. ವಿ. ವಿ ಕನ್ನಡ ಅಧ್ಯಯನ ಪೀಠದ ವಿಶ್ರಾಂತ ಪ್ರಾಧ್ಯಾಪಕರಾಗಿದ್ದ ಡಾ. ಎಸ್. ಪಿ. ಪಾಟೀಲ ಅವರು ಇಂದು ತಮ್ಮ ೮೬ ನೆಯ ವಯಸ್ಸಿನಲ್ಲಿ ಅಗಲಿದ್ದು ತುಂಬ ನೋವಿನ ಸಂಗತಿ. ಕನ್ನಡ ಮರಾಠಿ ಭಾಷೆಯ ಸೇತುಬಂಧವಾಗಿದ್ದ ಪೂಜ್ಯರು ಚಾವುಂಡರಾಯ ಪುರಾಣ ಕುರಿತು ಬರೆದ ಪ್ರೌಢ ಪ್ರಬಂಧವು ವಿದ್ವಾಂಸರ ಗಮನ ಸೆಳೆದಿತ್ತು. ಮೃದು ಮಾತಿನ ಸರಳ ಸಜ್ಜನ ಗುರುಗಳ ೭೫ ನೆಯ ಅಮೃತ ಮಹೋತ್ಸವದ ಸ್ಮರಣೆಗಾಗಿ ಅರ್ಪಿಸಿದ “ಸ್ನೇಹಸೇತು”ಅಭಿನಂದನ ಗ್ರಂಥದ ಪ್ರಧಾನ ಸಂಪಾದಕನಾಗುವ ಭಾಗ್ಯ ನನಗೆ ದೊರೆತಿದ್ದನ್ನು ಮರೆಯಲಿಕ್ಕಾಗದು. ಪ್ರಚಾರದಿಂದ ಬಹುದೂರವಿದ್ದವರು ಡಾ. ಎಸ್. ಪಿ. ಪಾಟೀಲರು.

    ಡಾ. ಅಪ್ಪಣ್ಣ ಹಂಜೆ, ಗದಗ – ಪೂಜ್ಯನೀಯ ವಿದ್ಯಾಗುರುಗಳು ಡಾ. ಎಸ್.ಪಿ. ಪಾಟೀಲ ಅವರು ಇಂದು ಬೆಳಗಿನ ಜಾವ 4 ಗಂಟೆಗೆ ಮಹಾರಾಷ್ಟ್ರದ ಸಾಂಗಲಿ ನಗರದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ನಮನಗಳನ್ನು ಸಲ್ಲಿಸುತ್ತ, ಆತ್ಮಕ್ಕೆ ಸದ್ಗತಿ ಪ್ರಾಪ್ತವಾಗಲೆಂದು ಪ್ರಾರ್ಥಿಸುತ್ತೇನೆ !!

    ಅಜಿತ್‌ ಮುರುಗುಂಡೆ, ಬೆಂಗಳೂರು – ಪೂಜ್ಯನೀಯ ವಿದ್ಯಾಗುರುಗಳು ಡಾ. ಎಸ್.ಪಿ. ಪಾಟೀಲ ಅವರು ಇಂದು ಬೆಳಗಿನ ಜಾವ 4 ಗಂಟೆಗೆ ಮಹಾರಾಷ್ಟ್ರದ ಸಾಂಗಲಿ ನಗರದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ನಮನಗಳನ್ನು ಸಲ್ಲಿಸುತ್ತ, ಆತ್ಮಕ್ಕೆ ಸದ್ಗತಿ ಪ್ರಾಪ್ತವಾಗಲೆಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ.

    ಬೆಂಗಳೂರು, ನಿತಿನ್ ಹೆಚ್.ಪಿ. – ಹಿರಿಯ ಜೈನ ವಿದ್ವಾಂಸರಾದ ಡಾ. ಎಸ್. ಪಿ. ಪಾಟೀಲ ಸರ್ ರವರ ಅಗಲಿಕೆ ಜೈನ ಸಾಹಿತ್ಯ ಮತ್ತು ಜ್ಞಾನಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ನಿಧನದಿಂದ ಜೈನ ಸಾಹಿತ್ಯ ಕ್ಷೇತ್ರವು ಓರ್ವ ಅಪರೂಪದ ವಿದ್ವಾಂಸ, ಸಂಶೋಧಕ ಹಾಗೂ ಮಾರ್ಗದರ್ಶಕರನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಪರಮ ಸದ್ಗತಿ ದೊರೆಯಲಿ ಎಂದು ಜೈನ್ ಹೆರಿಟೇಜ್ ಸೆಂಟರ್ಸ್‌ನ ಸಂಸ್ಥಾಪಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ನಿತಿನ್ ಹೆಚ್.ಪಿ. ಸಂತಾಪ ವ್ಯಕ್ತಪಡಿಸಿದ್ದಾರೆ.

    ಈ ಸಂದರ್ಭದಲ್ಲಿ ಡಾ. ಪಾಟೀಲರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದ ಅವರು, “ಬಾಲ್ಯದಲ್ಲಿಯೇ ನನ್ನ ತಂದೆಯವರೊಂದಿಗೆ ಧಾರವಾಡದಲ್ಲಿ ನಡೆದ ಅನೇಕ ಸಾಹಿತ್ಯಿಕ ಹಾಗೂ ಜೈನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತಿತ್ತು. ಆ ಸಂದರ್ಭಗಳಲ್ಲಿ ಡಾ. ಎಸ್. ಪಿ. ಪಾಟೀಲರ ಅನೇಕ ಉಪನ್ಯಾಸಗಳನ್ನು ಆಲಿಸಿ ಬೆಳೆದಿದ್ದೇನೆ. ಜೈನ ಧರ್ಮ, ಸಾಹಿತ್ಯ ಮತ್ತು ಸಂಶೋಧನೆಯ ಕುರಿತು ನನ್ನಲ್ಲಿ ಆಸಕ್ತಿ ಮೂಡಲು ಅವರ ವಿಚಾರಪೂರ್ಣ ಉಪನ್ಯಾಸಗಳು ಮತ್ತು ಅವರೊಂದಿಗಿನ ಒಡನಾಟ ಮಹತ್ತರ ಪ್ರೇರಣೆಯಾಯಿತು. ಹಲವು ವರ್ಷಗಳ ಬಳಿಕ ಹೊಂಬುಜದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರನ್ನು ಪುನಃ ಭೇಟಿ ಮಾಡಿ, ಜೈನ್ ಹೆರಿಟೇಜ್ ಸೆಂಟರ್ಸ್‌ನ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದಾಗ ಅವರು ಅತ್ಯಂತ ಸಂತೋಷ ವ್ಯಕ್ತಪಡಿಸಿ ಬೆನ್ನುತಟ್ಟಿದರು. ‘ನಿನ್ನಂತಹ ಯುವಕರು ಜೈನ ಧರ್ಮದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದೇ ಉತ್ಸಾಹದಿಂದ ಈ ಸೇವೆಯನ್ನು ಮುಂದುವರಿಸು. ನಿನಗೆ ಒಳ್ಳೆಯದಾಗಲಿ’ ಎಂದು ಆಶೀರ್ವದಿಸಿ ಹುರಿದುಂಬಿಸಿದ್ದರು. ಅವರ ಆ ಮಾತುಗಳು ಇಂದಿಗೂ ನನಗೆ ಪ್ರೇರಣೆಯಾಗಿ ಉಳಿದಿವೆ,” ಎಂದು ನಿತಿನ್ ಹೆಚ್.ಪಿ. ಭಾವುಕರಾಗಿ ಸ್ಮರಿಸಿದ್ದಾರೆ.

    Leave a Reply

    Your email address will not be published. Required fields are marked *

    error: Jain Heritage Centres - Celebrating Jain Heritage.....Globally!