
ತುಮಕೂರು, ಜುಲೈ ೧, ೨೦೨೬: ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಜೈನ ಅಧ್ಯಯನ ಡಿಪ್ಲೊಮಾ ವಿಭಾಗದ ವತಿಯಿಂದ “ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆ” ವಿಷಯದ ಕುರಿತು ಎರಡು ದಿನಗಳ ವಿಶೇಷ ಕಾರ್ಯಾಗಾರವನ್ನು 2026ರ ಜುಲೈ 3 ಮತ್ತು 4 ರಂದು ಆಯೋಜಿಸಲಾಗಿದೆ.
ಜೈನ ಸಂಶೋಧಕರಾದ ಬೆಂಗಳೂರಿನ ಶ್ರೀ ಹೆಚ್.ಪಿ. ನಿತಿನ್ರವರು ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ. ಶ್ರೀ ನಿತಿನ್ ರವರು ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ – www.jainheritagecentres.com ಅಂತರ್ಜಾಲತಾಣದ ಸಂಸ್ಥಾಪಕರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದು, ವಿಪ್ರೋ ಕಂಪೆನಿಯಲ್ಲಿ ಮಾರ್ಕೆಟಿಂಗ್ ಟೆಕ್ನಾಲಜಿ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ಜುಲೈ 3ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್. ಶ್ರೀನಿವಾಸ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರಾಧ್ಯಾಪಕರಾದ ಡಾ. ಎಂ. ಕೋಟ್ರೇಶ್ ಹಾಗೂ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಎಚ್. ಪಿ. ನಿತಿನ್ ಅವರು ಭಾಗವಹಿಸಲಿದ್ದಾರೆ.
ಕಾರ್ಯಾಗಾರದಲ್ಲಿ ಜೈನ ಧರ್ಮವು ಭಾರತೀಯ ಸಂಸ್ಕೃತಿಗೆ ನೀಡಿದ ಬಹುಮುಖ ಕೊಡುಗೆಗಳ ಕುರಿತು ನಿತಿನ್ ರವರಿಂದ ಉಪನ್ಯಾಸಗಳು ನಡೆಯಲಿವೆ. ಪ್ರಮುಖ ವಿಷಯಗಳು ಹೀಗಿವೆ:
ಭಾರತದಲ್ಲಿ ಜೈನ ಚಿತ್ರಕಲೆ–ಶಿಲ್ಪಕಲೆಗಳು
ಭಾರತದಲ್ಲಿ ಜೈನ ಗುಹೆಗಳ ವೈಶಿಷ್ಟ್ಯ
ಜೈನ ಪ್ರತಿಮಾಶಾಸ್ತ್ರ ಮತ್ತು ವಿಶೇಷ ರಚನೆಗಳು
ಜೈನ ದೇವಾಲಯ ವಾಸ್ತುಶಿಲ್ಪ – ವೈಶಿಷ್ಟ್ಯಗಳ ಪರಿಚಯ
ಜುಲೈ 4ರಂದು ನಡೆಯುವ ಸಮಾರೋಪ ಅಧಿವೇಶನದಲ್ಲಿ ಜೈನ ದೇವಾಲಯ ವಾಸ್ತುಶಿಲ್ಪ ಮತ್ತು ಅದರ ವೈಶಿಷ್ಟ್ಯಗಳ ಕುರಿತು ವಿಶೇಷ ಉಪನ್ಯಾಸ ನಡೆಯಲಿದ್ದು, ಮಧ್ಯಾಹ್ನ ಸಮಾರೋಪ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜೈನ ಧರ್ಮವು ಭಾರತೀಯ ಕಲೆ, ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು ಸಾಂಸ್ಕೃತಿಕ ಪರಂಪರೆಗೆ ನೀಡಿರುವ ಅಪೂರ್ವ ಕೊಡುಗೆಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
