Skip to content
Home » ಕನ್ನಡ » ಜೈನ ಹಬ್ಬಗಳು » ದಶಲಕ್ಷಣ ಪರ್ವ » ಉತ್ತಮ ಕ್ಷಮಾ ಧರ್ಮ

ಉತ್ತಮ ಕ್ಷಮಾ ಧರ್ಮ

    ಉತ್ತಮ ಕ್ಷಮಾ ಧರ್ಮ – ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಮೊದಲ ಧರ್ಮ.

    ಸಾಮಾನ್ಯವಾಗಿ ಪರಿಣಾಮವೆಂಬ ಶಬ್ದಕ್ಕೆ ರೂಪಾಂತಾರವನ್ನು ಅಥವಾ ಪರಿಣಮನವನ್ನು ಹೊಂದುವುದೆಂದು ಅರ್ಥವಾಗುವುದಾದರೂ “ಜೀವಾತ್ಮನ ಪರಿಣಾಮ” ಎಂಬ ಕಡೆಗಳಲ್ಲಿ ಪರಿಣಾಮ ಶಬ್ದಕ್ಕೆ ಜೀವಾತ್ಮನ ಮಾನಸಿಕ ಭಾವವೆಂದು ಜೈನಸಿದ್ಧಾಂತಾನುಸಾರವಾದ ಅರ್ಥ. ಈ ಪರಿಣಾಮವು ಸ್ವಭಾವಪರಿಣಾಮವೆಂದೂ ವಿಭಾವಪರಿಣಾಮವೆ೦ದೂ ಎರಡು ಪ್ರಕಾರ ವಾಗಿರುತ್ತದೆ. ಕರ್ಮದ ಪ್ರೇರಣೆಯಿಂದುಂಟಾಗುವ ಕ್ರೋಧ, ರಾಗ, ದ್ವೇಷಾದಿಭಾವಗಳಿಗೆ ವಿಭಾವಪರಿಣಾಮಗಳೆಂದೂ ನೈಜವಾದ ಭಾವಗಳಿಗೆ ಸ್ವಭಾವಪರಿಣಾಮಗಳೆಂದೂ ಹೆಸರು. ಉದಾಹರಣೆ ನೀರಿನಲ್ಲಿ ಸ್ವಚ್ಛತೆಯು ಸ್ವಭಾವ, ಕೆಸರಿನ ಸಂಬಂಧದಿಂದ ಕಲಂಕಿತವಾಗಿರುವುದು ವಿಭಾವ.

    ಉತ್ತಮ ಕ್ಷಮಾ ಧರ್ಮ
    ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಮೊದಲ ಧರ್ಮ – ಉತ್ತಮ ಕ್ಷಮಾ ಧರ್ಮ

    ಜೀವಾತ್ಮನ ವಿಭಾವಪರಿಣಾಮಗಳು ಶುಭಾಶುಭಭೇದದಿಂದ ಎರಡು ಪ್ರಕಾರವಾಗಿರುತ್ತವೆ. ಶುಭವಿಭಾವಪರಿಣಾಮಗಳಿಂದ ಪುಣ್ಯಕರ್ಮಗಳೂ ಅಶುಭವಿಭಾವಪರಿಣಾಮಗಳಿಂದ ಪಾಪಕರ್ಮಗಳೂ ಬಂದು ಬಂಧವಾಗುವುವು. ಇಲ್ಲಿ ಅನುಭವಿಭಾವಪರಿಣಾಮಗಳ ವರ್ಣನವು ಸಂದರ್ಭೋಚಿತ ವಾಗಿರುತ್ತದೆ. ಅಂತಹ ಪರಿಣಾಮಗಳಲ್ಲಿ ಕಷಾಯಪರಿಣಾಮಗಳು ಮುಖ್ಯ ವಾಗಿರುವುವು, ಕಷಾಯ ಶಬ್ದವು “ಕೃಷ-ವಿಲೇಖನೇ” ಎಂಬ ಧಾತುವಿನಿಂದ ನಿಷ್ಪನ್ನವಾದಾಗ “ಜೀವದ ಸುಖ ದುಃಖಗಳೆಂಬ ಅನೇಕ ಸಸ್ಯಗಳುಳ್ಳುದೂ ಸಂಸಾರದ ದೂರವಾದ ಎಲ್ಲೆಯುಳ್ಳುದೂ ಆದ ಕರ್ಮವೆಂಬ ಕ್ಷೇತ್ರವನ್ನು ಉಳುವುದರಿಂದ ಕಷಾಯವೆಂದು ಹೇಳುತ್ತಾರೆ” ಎಂದು ಗೋಮಟಸಾರ ಗ್ರಂಥದ ಜೀವಕಾಂಡದ ಈ ಕೆಳಗಿನ ಗಾಥೆಯಿಂದ ಗೊತ್ತಾಗುವುದು.

    ಸುಹದುಕ್ಖಸುಬಹುಸಸ್ಸಂ ಕಮ್ಮತ್ತಂ ಕಸೇದಿ ಜೀವಪ್ಪ |
    ಸಂಸಾರದೂರಮೇರಂ ತೇಣ ಕಸಾಒತ್ತಿ ಣಂ ಬೆಂತಿ ॥

    ಈ ಕಷಾಯ ಶಬ್ದವು “ಕೃಷ-ಹಿಂಸಾಯಾಂ” ಎಂಬ ಧಾತುವಿನಿಂದ ನಿಷ್ಪನವಾದಾಗ ಜೀವದ ಸಮ್ಯಕ್ಕೆ, ದೇಶಚಾರಿತ್ರ (ಅಣುವ್ರತ), ಸಕಲಚಾರಿತ್ರ (ಮಹಾವ್ರತ), ಯಥಾಖ್ಯಾತಚಾರಿತ್ರರೂಪಗಳಾದ ಪರಿಣಾಮಗಳನ್ನು ನಾಶ ಮಾಡುವುದರಿಂದ ಕಷಾಯವೆಂದು ಹೇಳುತ್ತಾರೆ. ಆ ಕಷಾಯಗಳ ಮೂಲ ಭೇದಗಳು, ಕ್ರೋಧ, ಮಾನ, ಮಾಯಾ, ಲೋಭಗಳೆಂದು ನಾಲ್ಕು ಪ್ರಕಾರ ವಾಗಿರುತ್ತವೆ. ಉತ್ತರ ಭೇದಗಳು ಅನಂತಾನುಬಂಧಿ ಕ್ರೋಧ ಮಾನ ಮಾಯಾ ಲೋಭ, ಅಪ್ರತ್ಯಾಖ್ಯಾನ ಕ್ರೋಧ ಮಾನ ಮಾಯಾ ಲೋಭ, ಪ್ರತ್ಯಾಖ್ಯಾನ ಕ್ರೋಧ ಮಾನ ಮಾಯಾ ಲೋಭ, ಸಂಜ್ವಲನ ಕ್ರೋಧ ಮಾನ ಮಾಯಾ ಲೋಭಗಳೆಂದು ಹದಿನಾರು ಪ್ರಕಾರವಾಗಿರುತ್ತವೆ. ಉತ್ತರೋತ್ತರ ಭೇದಗಳು ಅಸಂಖ್ಯಾತ ಲೋಕಪರಿಮಿತವಾಗಿರುತ್ತವೆ’ ಎಂದು ಗ್ರಂಥದ ಈ ಕೆಳಗಿನ ಗಾಥೆಯಿಂದ ಗೊತ್ತಾಗುವುದು,

    ಸಮ್ಮತ್ತ ದೇಸ ಸಯಲಚರಿತ್ತ ಜಹಾದಚರಣದರಿಣಾಮ |
    ಘಾದಂತಿ ವಾ ಕಸಾಯಾ ಚ ಸೋಲಯಸಂಖಲೋಗಮಿದಾ |

    ಅನಂತಾನುಬಂಧಿಯೆಂಬಲ್ಲಿ ಅನಂತಶಬ್ದಕ್ಕೆ ಸಂಸಾರವೆಂದೂ ಅನುಬಂಧಿ ಶಬ್ದಕ್ಕೆ ಬಂಧಿಸುವುದೆಂದೂ ಅರ್ಥವಾಗುವುದು. “ಅನಂತಂ – ಸಂಸಾರಂ + ಅನುಬದ್ಧಂತೀತಿ= ಅನಂತಾನುಬಂಧಿವಃ” ಎಂಬ ನಿಷ್ಪತ್ತಿಯಿಂದ ಅನಂತಾನುಬಂಧಿಕಷಾಯಪರಿಣಾಮಗಳು, ಸಂಸಾರಬಂಧನವನ್ನುಂಟುಮಾಡ ತಕ್ಕುವೆಂದು ಮುಖ್ಯಾಭಿಪ್ರಾಯವು, ಜೀವಾತ್ಮನಲ್ಲಿ ಅನಂತಾನುಬಂಧಿಕಷಾಯ ಪರಿಣಾಮಗಳಿದ್ದರೆ ಸಮ್ಯಕ್ತ್ಚವೂ ಅಪ್ರತ್ಯಾಖ್ಯಾನಕಷಾಯಪರಿಣಾಮಗಳಿದ್ದರೆ ಅಣುವ್ರತವೂ ಪ್ರತ್ಯಾಖ್ಯಾನಕಷಾಯಪರಿಣಾಮಗಳಿದ್ದರೆ ಮಹಾವ್ರತವೂ ಸಂಜ್ವಲನ ಕಷಾಯಪರಿಣಾಮಗಳಿದ್ದರೆ ಯಥಾಖ್ಯಾತವೆಂಬ ಪರಮೋತ್ಕೃಷ್ಟ ಚಾರಿತ್ರವೂ ಉಂಟಾಗಲಾರವೆಂಬುದು ಮೇಲಿನ ಗಾಥೆಯ ಮುಖ್ಯಾಭಿಪ್ರಾಯ ವಾಗಿರುತ್ತದೆ.

    ಮೇಲೆ ಹೇಳಲ್ಪಟ್ಟ ಹದಿನಾರು ಕಷಾಯ ಪರಿಣಾಮಗಳೂ ಹಾಸ್ಯ ರತಿ ಅರತಿ ಶೋಕ ಭಯ ಜುಗುಪ್ಪಾ ಸ್ತ್ರೀವೇದ ಪುಂವೇದ ನಪುಂಸಕವೇದಗಳೆಂಬ ಹಾಸ್ಯ ರತಿ ಒಂಬತ್ತು ನೋಕಷಾಯಪರಿಣಾಮಗಳೂ ಸೇರಿ ಇಪ್ಪತ್ತೈದು ಕಷಾಯಪರಿಣಾಮಗಳಿರುತ್ತವೆ. ಇವುಗಳಲ್ಲಿ ಮೊದಲನೆಯದಾದ ಕ್ರೋಧಪರಿಣಾಮವು ಜೀವಾತ್ಮರುಗಳಿಗೆ ಮಹಾನರ್ಥಕಾರಿಯೂ ದುರ್ಗತಿಯ ದುರಂತ ದುಃಖ ಕ್ರೀಡುಮಾಡುವುದೂ ಆಗಿರುತ್ತದೆ. ಕ್ರೋಧಪರವಶನಾದ ಮನುಷ್ಯನು ಎಂತಹ ಘೋರಪಾಪವನ್ನಾದರೂ ಮಾಡಲು ಹೇಸುವುದಿಲ್ಲ. ಅದರಿಂದ ತನಗೆ ಅನರ್ಥವಾಗುವುದೆಂಬುದನ್ನೂ ಯೋಚಿಸುವುದಿಲ್ಲ. ಒಂದು ದೊಡ್ಡದಾದ ಹುಲ್ಲುಮೆದೆಯನ್ನು ಬೆಂಕಿಯ ಕಿಡಿಯು ಕ್ಷಣಕಾಲದಲ್ಲಿ ಸುಟ್ಟು ಭಸ್ಮ ಮಾಡಿ ಬಿಡುವಂತೆ ಕ್ರೋಧಿ-ಮನುಷ್ಯನು ಬಹುಕಾಲದಿಂದ ದೈವಭಕ್ತಿ ಸ್ತೋತ್ರ ಪೂಜಾವ್ರತನಿಯಮಾನುಷ್ಠಾನಾದಿಗಳಿಂದ ಸಂಗ್ರಹಿಸಿದ ಪುಣ್ಯದ ರಾಶಿಯನ್ನು ಕ್ಷಣಕಾಲದಲ್ಲಿ ನಾಶಪಡಿಸಿಕೊಳ್ಳುವನು.

    ಮನುಷ್ಯನು ಕ್ರೋಧಪರವಶನಾದ ಕಾಲದಲ್ಲಿ ಅವನ ಸ್ವರೂಪ ಆಕೃತಿಯೇ ಬೇರೆಯಾಗುವುದು ವಿಕಾರವಾಗುವುದು. ಈ ವಿಕಾರವನ್ನು ನಾವು ಮನುಷ್ಯರಲ್ಲೇ ಅಲ್ಲದೆ ತಿರ್ಯಕ್ಪ್ರಾಣಿಗಳಲ್ಲಿ ಶಿಶುಗಳಲ್ಲಿ ಸಹ ನೋಡಬಹುದಾಗಿದೆ. ಕ್ರೋಧಪರವಶನಾದ ಮನುಷ್ಯನು ಪರಘಾತವನ್ನೇ ಅಲ್ಲದೆ ಸ್ವಘಾತವನ್ನೂ ಮಾಡಿಕೊಳ್ಳುವನು. ಕ್ರೋಧಪರಿಣಾಮದಿಂದ ಪಾಪಸಂಘಟನೆ ಯಾಗುವ ದೃಷ್ಟಿಯಿಂದ ವಿಚಾರ ಮಾಡಿದರೆ ಪರಘಾತಕ್ಕಿಂತಲೂ ಸ್ವಘಾತವೇ ಹೆಚ್ಚಾಗಿರುವುದೆಂದು ಹೇಳಬೇಕು. ಕ್ರೋಧಿಯು ಮಾಡದಿರುವ ಪಾಪಕಾರ್ಯವಿಲ್ಲ. ಒಂದು ಮಾತಿನಿಂದ ಹೇಳುವುದಾದರೆ ಕ್ರೋಧಪರಿಣಾಮದಿಂದಾಗುವಷ್ಟು ಅನರ್ಥವೂ ಪಾಪಸಂಘಟನೆಯೂ ಮತ್ತೊಂದು ಪರಿಣಾಮದಿಂದ ಅಷ್ಟು ಶೀಘ್ರವಾಗಿ ಆಗದು. ಆದುದರಿಂದಲೇ ಮೊತ್ತಮೊದಲು ಕ್ರೋಧವನ್ನು ಜಯಿಸಬೇಕೆಂದು ನಮ್ಮ ಆಚಾರ್ಯರು ಹೇಳಿರುವುದು.

    ಅನಂತಾನುಬಂಧಿಕ್ರೋಧಕರ್ಮದ ಶಕ್ತಿಯು ಶಿಲಾರೇಖೆಯಂತೆಯೂ, ಅಪ್ರತ್ಯಾಖ್ಯಾನಕ್ರೋಧಕರ್ಮದ ಶಕ್ತಿಯುಭೂರೇಖೆಯಂತೆಯೂ, ಪ್ರತ್ಯಾಖ್ಯಾನ ಕ್ರೋಧಕರ್ಮದ ಶಕ್ತಿಯು ಧೂರೇಖೆಯಂತೆಯೂ, ಸಂಜ್ವಲಿನ ಕ್ರೋಧ ಕರ್ಮದ ಶಕ್ತಿಯು ಜಲರೇಖೆಯಂತೆಯೂ ಇರುವುದೆಂದೂ ಅನಂತಾನು ಬಂಧಿ ಕ್ರೋಧವು ನರಕಗತಿಗೂ, ಅಪ್ರತ್ಯಾಖ್ಯಾನಕ್ರೋಧವು ತಿರ್ಯಗ್ಧತಿಗೂ ಪ್ರತ್ಯಾಖ್ಯಾನಕ್ರೋಧವು ಮನುಷ್ಯಗತಿಗೂ ಸಂಜ್ವಲನ ಕ್ರೋಧವು ದೇವಗತಿಗೂ ಕಾರಣಗಳಾಗುತ್ತವೆಂದೂ ಗೋಮಟಸಾರದ ಈ ಕಳಗಿನ ಗಾಥೆಯಿಂದ ಗೊತ್ತಾಗುವುದು,

    ಸಿಲ ಪುಢವಿಭೇದಭೂಲೀ ಜಲರಾಣಸಮಾಣಓ ಹವೇ ಕೋಹ |
    ಕಾರಯ ಹಿರಿಯ ಣರಾಮರಗ ಈಸು ಉಪ್ಪಾಯಓ ಕಮಸೋ ||

    ಕ್ರೋಧಪರಿಣಾಮಕ್ಕೆ ಪ್ರತಿಕೂಲವಾದುದು ಕ್ಷಮಾಪರಿಣಾಮ, ಕ್ರೋಧ ಜಯಿಸಬೇಕಾದರೆ ಕ್ಷಮೆಯನ್ನವಲಂಬಿಸಲೇಬೇಕು. ಬೆಂಕಿಯನ್ನು ಆರಿಸುವುದಕ್ಕೆ ನೀರಲ್ಲದೆ ಮತ್ತಾವುದು ಸಮರ್ಪಕವಾದ ಸಾಧನ? ಕ್ರೋಧಸಾಮಗ್ರಿಯು ಸಮೀಪಿಸಿದಾಗ ವಿಕಾರಭಾವವನ್ನು ಹೊಂದದಿರುವುದೇ ನಿಜವಾದ ಕ್ಷಮೆಯಾಗಿರುವುದು. ಹಾಗಲ್ಲದೆ ಕ್ರೋಧಸಾಮಗ್ರಿಯಿಲ್ಲದಿರುವಾಗ ಶಾಂತಭಾವದಿಂದಿರುವಿಕೆಯು ನಿಜವಾದ ಕ್ಷಮೆಯಲ್ಲ. ಅಂತಹ ಕ್ಷಮೆಯಾದರೋ ಕ್ರೂರ ಪಶುಗಳಲ್ಲಿಯೂ ಇರಬಹುದು. ಹುಲಿಯು ತನ್ನ ಮರಿಗಳು ಸುತ್ತಾಡುತ್ತಿರುವಾಗ ಕ್ಷಮಾಭಾವದಿಂದಿರುವುದಿಲ್ಲವೇ? ವಿದ್ಯಾರ್ಥಿಯು ಇತರ ಕಾಲದಲ್ಲಿ ಚದುರನೆನ್ನಿಸಿರುವುದು ಗಣನೀಯವಲ್ಲ. ಪರೀಕ್ಷೆಯಲ್ಲಿ ಉತ್ತೀರ್ಣನಾದರೆ ಆಗ ಅವನ ಚತುರತೆಯು ಗಣನೆಗೆ ಬರುವುದು.

    ಮೇಲೆ ಹೇಳಿದಂತೆ ಪ್ರಬಲವಾದ ಕ್ರೋಧಸಾಮಗ್ರಿಯೊದಗಿದಾಗಲೂ ವಿಕಾರಭಾವವನ್ನು ಹೊಂದದಿರುವುದೇ ಉತ್ತಮಕ್ಷಮಾ’ ಎಂಬ ಧರ್ಮವಾಗುವುದೆಂದು ಜೈನಆಚಾರ್ಯರುಗಳು ಅಪ್ಪಣೆ ಕೊಡಿಸಿದ್ದಾರೆ ಎಂದರೆ ಸಾಮಾನ್ಯ ಕ್ಷಮೆಯಲ್ಲವೆನ್ನುವುದನ್ನು “ಉತ್ತಮ” ವಿಶೇಷಣವು ಸೂಚಿಸುವುದು. ಮುನಿಗಳ ದಶಧರ್ಮಗಳಲ್ಲಿ ಈ ಉತ್ತಮಾಕ್ಷಮಾಧರ್ಮವು ಮೊದಲನೆಯದಾಗಿದೆ. ಈ ಧರ್ಮದ ಸಾಕ್ಷಾತ್ ಆರಾಧಕರು ಮುನಿಗಳು, ಗೃಹಸ್ಥ ಶ್ರಾವಕರು ಸಾಧಕರು. ಗ್ರೀಷ್ಮಸಂತಾಪದಿಂದ ಸಂತಪ್ತನಾದ ಮನುಷ್ಯನಿಗೆ ಶೀತಲಜಲದಿಂದ ಶಾಂತಿಯುಂಟಾಗುವಂತೆ ಸಂಸಾರದಲ್ಲಿ ಕ್ರೋಧಾಗ್ನಿ ಸಂತಪ್ತನಾದ ಮನುಷ್ಯನಿಗೆ ಈ ಕ್ಷಮೆಯೆಂಬ ಶೀತಲಜಲದಿಂದಲೇ ಶಾಂತಿ ಯುಂಟಾಗುವುದು, ಈ ಕ್ಷಮೆಗೆ ಮುನಿಗಳು “ಶಮಾಮೃತ” ಎಂದು ಅಮೃತದ ಉಪಮೆಯನ್ನು ಕೊಟ್ಟಿರುವರು. ಅಮೃತ ಪಾನಮಾಡಿದವನಿಗೆ ಮರಣವಿಲ್ಲವೆಂಬ ಮಾತು ಜೈನಾಗಮ ರೀತಿಯಿಂದ ಸಟೆಯಾದರೂ ಈ ಶಮಾಮೃತಪಾನಮಾಡಿದವನು ಮರಣವಿಲ್ಲದವನಾಗುವನೆಂಬ ಮಾತು ದಿಟ. ಈ ಕ್ಷಮಾಗುಣವನ್ನು ಮುನಿಗಳು ಬಹಳವಾಗಿ ಪ್ರಶಂಸಿಸಿರುವರು. ಲೇಖ ವಿಸ್ತಾರವಾಗುವುದೆಂದು ಒಂದೆರಡು ಆ ಪ್ರಶಂಸಾವಚನಗಳನ್ನು ಈ ಕೆಳಗೆ ಕೊಡುವೆವು.

    ಪುಷ್ಪಕೋಟಿಸಮಂ ಸ್ತೋತ್ರಂ ಸ್ತೋತ್ರಕೋಟಿಸಮಂ ಜಪಃ |
    ಜಪಕೋಟಿಸಮಂ ಧ್ಯಾನಂ ಧ್ಯಾನಕೋಟಿಸಮಂ ಕ್ಷಮಾ |

    ಭಾವಾರ್ಥ – ಒಂದು ಕೋಟಿ ಪುಷ್ಪಗಳನ್ನರ್ಚಿಸುವುದರಿಂದುಂಟಾಗುವಷ್ಟು ಪುಣ್ಯ-ಫಲವು ದೇವರ ಒಂದು ಸ್ತೋತ್ರದಿಂದುಂಟಾಗುವುದು. ಒಂದು ಕೋಟಿ ಸ್ತೋತ್ರಗಳಿಂದುಂಟಾಗುವಷ್ಟು ಫಲವು ಸ್ಪುಟವಾಗಿಭಗವನ್ನಾಮೋಚ್ಛಾರವನ್ನು – ಜಪವನ್ನು ಮಾಡುವುದರಿಂದುಂಟಾಗುವುದು. ಒಂದು ಕೋಟಿ ಜಪ ಗಳಿಂದುಂಟಾಗುವಷ್ಟು ಫಲವು ಒಂದು ಧ್ಯಾನದಿಂದುಂಟಾಗುವುದು. ಒಂದು ಕೋಟಿ ಧ್ಯಾನಗಳಿಂದಾಗುವಷ್ಟು ಫಲವು ಒಂದು ಕ್ಷಮೆಯಿಂದುಂಟಾಗುವುದು. ಕ್ಷಮೆಯು ಇಲ್ಲದಿದ್ದರೆ ಕೋಟಿಪುಷ್ಪಾರ್ಚನೆ ಮೊದಲಾದುವುಗಳಿಂದ ಉಪಾರ್ಜಿಸಿದ ಪುಣ್ಯದ ರಾಶಿಯನ್ನು ಕ್ರೋಧವು ನಾಶಮಾಡುವುದೆಂದೂ ಅದಕ್ಕೆ ವಿರೋಧಿಯಾದ ಕ್ಷಮೆಯಿದ್ದರೆ ಆ ಪುಣ್ಯರಾಶಿಯು ನಿರಪಾಯವಾಗಿರುವುದೆಂದೂ ಆದುದರಿಂದ ಅವೆಲ್ಲಕ್ಕಿಂತಲೂ ಕ್ಷಮೆಯು ಶ್ರೇಷ್ಠವೆ೦ದೂ ಮುಖ್ಯಾ ಭಿಪ್ರಾಯವಾಗಿರುವುದು.

    ನರಸ್ಕಾಭರಣಂ ರೂಪಂ ರೂಪಸ್ವಾಭರಣಂ ಗುಣಃ |
    ಗುಣಸ್ಯಾಭರಣಂ ಜ್ಞಾನಂ ಜ್ಞಾನಸ್ಯಾಭರಣಂ ಕ್ಷಮಾ ||

    ಭಾವಾರ್ಥ ಮನುಷ್ಯನಿಗೆ ರೂಪ-ಸೌಂದರ್ಯವು ಆಭರಣ ಭೂಷಣ, ರೂಪಕ್ಕೆ ಗುಣವು ಭೂಷಣ, ಗುಣಕ್ಕೆ ಜ್ಞಾನವು ಭೂಷಣ, ಜ್ಞಾನಕ್ಕೆ ಕ್ಷಮೆಯು ಭೂಷಣ.

    ಅನರ್ಥಕಾರಿಗಳಾದ ದುರ್ಭಾವನೆಗಳಲ್ಲಿ ದುಷ್ಪರಿಣಾಮಗಳಲ್ಲೆಲ್ಲ ಕ್ರೋಧವು ಹೇಗೆ ಮೊದಲನೆಯದಾಗಿರುವುದೋ ಹಾಗೆಯೇ ತದ್ವಿಪರೀತವಾದ, ಕ್ಷಮೆಯು ಪ್ರಾಣಿಗಳಿಗೆ ಹಿತಕಾರಿಗಳಾದ ಸದ್ಭಾವನೆಗಳಲ್ಲಿ-ಸತ್ಪರಿಣಾಮಗಳಲ್ಲೆಲ್ಲ ಮೊದಲನೆಯದಾಗಿರುವುದು. ಇಂತಹ ಪರಮೋತ್ಕೃಷ್ಟವಾದ ಕ್ಷಮಾಗುಣವಿಲ್ಲದಿದ್ದರೆ, ಒಂದನೆಯ ಅಂಕೆಯಿಲ್ಲದ ಸೊನ್ನೆಗಳಂತೆ, ಇತರ ಗುಣಗಳು ನಿಷ್ಟ್ರಯೋಜನಗಳಾಗಿರುತ್ತವೆ. ಆದುದರಿಂದಲೇ, ಮುನಿಗಳು ದಶಧರ್ಮಗಳಲ್ಲಿ ಇದಕ್ಕೆ ಪ್ರಥಮಸ್ಥಾನವನ್ನು ಕೊಟ್ಟಿರುವರು.

    ಸಕಲಗುಣಗಳಿಗೂ ಧರ್ಮಗಳಿಗೂ ತಳಹದಿಯಾದ ಈ “ಉತ್ತಮ ಕ್ಷಮಾ ಧರ್ಮ”ದ ಸಂಸ್ಕಾರವು ನಮ್ಮ ಆತ್ಮಗಳಲ್ಲಿ ದಿನೇದಿನೇ ಬೆಳೆಯುತ್ತ ಹೋಗಬೇಕೆಂಬುದೇ ಈ ಧರ್ಮಾಚರಣೆಯ ಉದ್ದೇಶವಾಗಿರುತ್ತದೆ.

    error: Jain Heritage Centres - Celebrating Jain Heritage.....Globally!