Skip to content
Home » ಕನ್ನಡ » ಜೈನ ಹಬ್ಬಗಳು » ದಶಲಕ್ಷಣ ಪರ್ವ » ಉತ್ತಮ ಶೌಚ ಧರ್ಮ

ಉತ್ತಮ ಶೌಚ ಧರ್ಮ

  ಉತ್ತಮ ಶೌಚ ಧರ್ಮ – ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ನಾಲ್ಕನೇ ಧರ್ಮ.

  ಸಾಮಾನ್ಯವಾಗಿ ಶುಚಿಯೆಂಬ ಶಬ್ದಕ್ಕೆ ಮೈಬಟ್ಟೆ ಮೊದಲಾದುವುಗಳನ್ನು ನಿರ್ಮಲವಾಗಿಟ್ಟುಕೊಂಡಿರುವುದೆಂದು ರೂಢಿಯಲ್ಲಿರುವ ಅರ್ಥವಾಗಿದೆ. “ಶುಚೇರ್ಭಾವಃ ಶೌಚಂ” ಎಂಬ ನಿಷ್ಪತ್ತಿಯಿಂದ ಶುಚಿತ್ವಕ್ಕೇ ಶೌಚವೆಂದು ಹೆಸರು. ದಶಲಕ್ಷಣಧರ್ಮ ಪ್ರಕರಣದಲ್ಲಿ ಶೌಚಧರ್ಮವೆಂದರೆ ಶರೀರ ವಸ್ತ ಮೊದಲಾದವುಗಳ ಶುಚಿತ್ವವೆಂದರ್ಥವಲ್ಲ-ಶೌಚಧರ್ಮವೆಂದರೆ ಮನಶ್ಯುದ್ಧಿ ಅಥವಾ ನಿರ್ಲೋಭತ್ವವೆಂದರ್ಥವು. ಈ ಅಭಿಪ್ರಾಯವನ್ನು ಶ್ರೀಮದ ಅಕಲಂಕಾಚಾರ್ಯರು ತತ್ವಾರ್ಥರಾಜವಾರ್ತಿಕ ಗ್ರಂಥದಲ್ಲಿ “ಪ್ರಕರ್ಷಪ್ರಾಪ್ತಾ ಲೋಭನಿವೃತ್ತಿ ಶೌಚಂ” ಎಂದು ವಿಶದಪಡಿಸಿರುತ್ತಾರೆ. ಉತ್ಕೃಷ್ಟವಾದ ಲೋಭದ ನಿವೃತ್ತಿಯು ಶೌಚವೆಂದು ಈ ವಾರ್ತ್ತಿಕದ ಅಭಿಪ್ರಾಯ.

  ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ನಾಲ್ಕನೇ ಧರ್ಮ - ಉತ್ತಮ ಶೌಚ ಧರ್ಮ
  ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ನಾಲ್ಕನೇ ಧರ್ಮ – ಉತ್ತಮ ಶೌಚ ಧರ್ಮ

  ಲೋಭವೆಂದರೂ ಆಶೆಯೆಂದರೂ ಒಂದೇ ಅರ್ಥ, ರಾಜ್ಯ ಕೋಶ ಧನ ಧಾನ್ಯ ವಸ್ತ್ರ ವಾಹನ ಮೊದಲಾದ ಭೋಗೋಪಭೋಗ ವಸ್ತುಗಳಲ್ಲಿ ಅತ್ಯಾಸಕ್ತಿಯೇ ಲೋಭ ಅಥವಾ ಆಶೆಯಾಗಿರುವುದು. ಈ ಆಶಾಮೂಲಕವಾಗಿ ಮನುಷ್ಯನು ಆ ವಸ್ತುಗಳನ್ನು ಹೆಚ್ಚು ಹೆಚ್ಚಾಗಿ ಸಂಗ್ರಹಿಸುವುದಕ್ಕೆ ಪ್ರಯತ್ನಿಸುವನು.
  ಹಿಂದೆ ಹೇಳಿದ ಕ್ರೋಧಾದಿಕಷಾಯಗಳಂತೆ ಈ ಲೋಭಕಷಾಯವೂ ಅನಂತಾನುಬ೦ಧಿಲೋಭ ಅಪ್ರತ್ಯಾಖ್ಯಾನಲೋಭ ಪ್ರತ್ಯಾಖ್ಯಾನಲೋಭ ಸಂಜ್ವಲನಲೋಭಗಳೆಂದು ನಾಲ್ಕು ಪ್ರಕಾರವಾಗಿರುತ್ತದೆ. ಅನಂತಾನುಬಂಧಿ ಲೋಭವು ಒಂದು ಜಾತಿಯ ಕ್ರಿಮಿಯ ಕೆಂಪು ಮೈವಣ್ಣದಂತೆ ಘನಿಷ್ಠವಾಗಿರುವುದು, ಅಪ್ರತ್ಯಾಖ್ಯಾನಲೋಭವು ಗಾಡಿಯ ಚಕ್ರದ ಕಪ್ಪುಮಡ್ಡಿಯಂತೆ ಘನಿಷ್ಠವಾಗಿರುವುದು. ಪ್ರತ್ಯಾಖ್ಯಾನಲೋಭವು ಶರೀರಮಲದಂತೆ ಜಿಗುಟಾಗಿರುವುದು, ಸಂಜ್ವಲನಲೋಭವು ಅರಿಸಿನದ ಬಣ್ಣದಂತೆ ಜಿಗುಟಾಗಿರುವುದು, ಲೋಭಕಷಾಯದ ಶಕ್ತಿಯನ್ನು ಕುರಿತು ಇವು ನಾಲ್ಕು ನಿದರ್ಶನಗಳಾಗಿರುತ್ತವೆ. ಈ ನಾಲ್ಕು ಲೋಭಕಷಾಯಗಳು ಯಥಾಕ್ರಮವಾಗಿ ನರಕ ತಿರ್ಯಙ್ಮನುಷ್ಯ ದೇವಗತಿಗಳಲ್ಲಿ, ಹುಟ್ಟುವುದಕ್ಕೆ ಕಾರಣಗಳಾಗಿರುತ್ತವೆ. ಈ ಅಭಿಪ್ರಾಯವು ಗೋಮಟಸಾರದ ಈ ಕೆಳಗಿನ ಗಾಥೆಯಿಂದ ಗೊತ್ತಾಗುವುದು.

  ಕಿಮಿರಾಯ ಚಕ್ಕ ತಣುಮಲ ಹರಿದ್ದರಾವಿಣ ಸರಿಸಓ ಲೋಹೋ |
  ಕಾರಯ ತಿರಿಕ್ಚ ಮಾಣು ದೇವೇಸುಪ್ಪಾಯಓ ಕಮಸೋ ||

  ಬೆಂಕಿಗೆ ಸೌದೆಯನ್ನು ಹಾಕಿದಷ್ಟೂ ಅದು ಹೆಚ್ಚು ಹೆಚ್ಚಾಗಿ ಉರಿಯುವಂತೆ ಭೋಗೋಪಭೋಗವಸ್ತುಗಳು ಹೆಚ್ಚಾದ ಹಾಗೆಲ್ಲ ಆಶೆಯೂ ಹೆಚ್ಚುತ್ತ ಹೋಗುವುದು. ಆ ವಸ್ತುಗಳು ಹೆಚ್ಚಿದಷ್ಟೂ ಅವುಗಳನ್ನು ಕಾಪಾಡುವ ಶ್ರಮವೂ ಹೆಚ್ಚುವುದು. ಆ ವಸ್ತುಗಳನ್ನು ದೊರಕಿಸುವಾಗ ಅನೇಕ ಪ್ರಾಣಿಗಳಿಗೆ ಹಿಂಸಾಬಾಧಗಳೂ ಉಂಟಾಗುತ್ತವೆ. ಆದುದರಿಂದಲೇ ಮುನಿಗಳು “ಬಹ್ವಾರಂಭಪರಿಗ್ರಹತ್ವಂ ಸಾರಕಾಯುಷಃ” ಎಂದು ಹೇಳಿರುವುದಾಗಿದೆ. ಅಧಿಕವಾದ ಆರಂಭಪರಿಗ್ರಹಗಳು ನರಕಾಯುಷ್ಯ ಕರ್ಮದ ಆಸ್ರವಕ್ಕೆ ಕಾರಣ ವಾಗುತ್ತವೆಂದು ಈ ಸೂತ್ರದ ಅರ್ಥ, ಭೋಗೋಪಭೋಗ ವಸ್ತುಗಳಲ್ಲಿಅತ್ಯಾಸಕ್ತಿಯು ದೋಷವಲ್ಲದೆ ಪೂರ್ವ ಸುಕೃತದಿಂದ ಮತ್ತು ನ್ಯಾಯಮಾರ್ಗದಿಂದ ಅವುಗಳು ಪ್ರಾಪ್ತವಾದರೆ ದೋಷವಲ್ಲ, ಲೋಕದಲ್ಲಿ ಎಲ್ಲಾ ಪಾಪ ಭಾವನೆಗಳಿಗಿಂತಲೂ ಆಶೆಯು ಹೆಚ್ಚು ಪಾಪಹೇತುವೂ ಅನರ್ಥಕಾರಿಯೂ ಆಗಿರುತ್ತದೆ. ಆದುದರಿಂದಲೇ “ಆಶಾಹಿ ಪರಮಂ ದುಃಖಂ ನಿರಾಶಾಪರಮಂ ಸುಖಂ” ಎಂದು ಹೇಳಲ್ಪಟ್ಟಿರುವುದಾಗಿದೆ. ಚಾರಿತ್ರಮೋಹನೀಯ ಕರ್ಮದಲ್ಲಿ ಇಪ್ಪತ್ತೈದು ಭೇದಗಳಿರುತ್ತವೆ. ಅವುಗಳಲ್ಲೆಲ್ಲ ಈ ಆಶೆಯು ಅಂದರೆ ಲೋಭ ಕಷಾಯವು ಬಲು ಕೆಟ್ಟದು-ಇತರಕಷಾಯ-ಭಾವಗಳು ಒಂಭತ್ತನೆಯ ಗುಣ ಸ್ಥಾನದವರೆಗೆ ಜೀವಾತ್ಮವನ್ನು ಹಿಂಬಾಲಿಸಿರುವುವು. ಈ ಲೋಭಕಷಾಯ ವಾದರೋ ಸೂಕ್ಷ್ಮ ಸಾಂಪರಾಯವೆಂಬ ಹತ್ತನೆಯ ಗುಣಸ್ಥಾನದವರೆಗೆ ಹಿಂಬಾಲಿಸುವುದು. ಕೆರೆಯಲ್ಲಿ ಎಷ್ಟು ದೂರದವರೆಗೆ ನೀರಿರುವುದೋ ಅಷ್ಟು ದೂರದವರೆಗೆ ಜಲಚರಪ್ರಾಣಿಗಳ ಸಂಚಾರವಿರುವುದು. ಆದರೆ ಆಚೆಗಿರುವುದಿಲ್ಲ. ಅದರಂತೆ ಸರ್ವಾನರ್ಥಗಳಿಗೆ ಮೂಲಕಾರಣವಾದ ಈ ಲೋಭವನ್ನು ಕಡಮೆಮಾಡುವುದಕ್ಕಾಗಿಯೇ ಶ್ರಾವಕರಿಗೆ ಪರಿಮಿತ ಪರಿಗ್ರಹವ್ರತ, ದಿಗ್ನತೆ, ಭೋಗೋಪಭೋಗ ಪರಿಮಾಣುವ್ರತ ಮೊದಲಾದುವುಗಳನ್ನು ವಿಧಿಸಿರುವುದಾಗಿದೆ.

  ಯಾವಜೀವವೂ ಕ್ಷೇತ್ರವಾಸ್ತು ಧನಾದಿಪರಿಗ್ರಹ-ವಸ್ತುಗಳು ತನಗಿಷ್ಟೇ ಸಾಕೆಂದು ಮಾಡಿಕೊಳ್ಳುವ ಸಂಕಲ್ಪಕ್ಕೆ ಪರಿಮಿತ ಪರಿಗ್ರಹವ್ರತವೆಂದೂ, ಸಂಚಾರದ ಎಲ್ಲೆಯನ್ನು ಗೊತ್ತುಮಾಡಿಕೊಂಡು ಯಾವಜೀವವೂ ಆ ಎಲ್ಲೆಯನ್ನು ದಾಟಿ ಹೋಗುವುದಿಲ್ಲವೆಂದು ಮಾಡಿಕೊಳ್ಳುವ ಸಂಕಲ್ಪಕ್ಕೆ ದಿಗ್ರ್ವತ ವೆಂದೂ, ದಿನ ಪಕ್ಷ ಮಾಸ ಮೊದಲಾದ ಕಾಲಪರಿಮಿತಿಯಿಂದ ಧನ ಧಾನ್ಯ ವಸ್ತ ವಾಹನಾದಿ ಭೋಗೋಪಭೋಗವಸ್ತುಗಳು ಇಷ್ಟೇ ಸಾಕೆಂದು ಮಾಡಿ ಕೊಳ್ಳುವ ಸಂಕಲ್ಪಕ್ಕೆ ಭೋಗೋಪಭೋಗ ಪರಿಮಾಣವ್ರತವೆಂದೂ ಹೆಸರು.
  ಈ ವ್ರತನಿಯಗಳಿಂದ ಪ್ರತಿಜ್ಞಾಬದ್ಧರಾಗಿರುವವರು ತಮಗೆ ಪ್ರಾಪ್ತವಾಗಿ ಆ ವಸ್ತುಗಳಲ್ಲೇ ತೃಪ್ತರಾಗಿ-ಸಂತುಷ್ಟರಾಗಿರುತ್ತಾರೆ. ಅಂತಹವರಿಗೆ ಹೆಚ್ಚಾಗಿ ಪಾಪಬಂಧವಿಲ್ಲ. ಮುನಿಗಳಾದರೋ ಸಂಪೂರ್ಣವಾದ ಆರಂಭ ಪರಿಗ್ರಹಗಳನ್ನು ತೊರೆದು, ಕಾರ್ಯರೂಪವಾದ ಸಂಪೂರ್ಣವಾಗಿ ಬಿಟ್ಟು ಚಿತ್ತಶುದ್ಧಿಯನ್ನು ಹೊಂದುವರು. ಆ ಭಾವಕ್ಕೆ ಉತ್ತಮ ಶೌಚ ಧರ್ಮ ವೆಂದು ಹೆಸರು. ಅಂತಹ ಪವಿತ್ರಧರ್ಮವು ತಮಗೂ ಪ್ರಾಪ್ತವಾಗಬೇಕೆಂಬ ಉದ್ದೇಶದಿಂದ ಗೃಹಸ್ಥರೂ ಆ ಧರ್ಮವನ್ನು ಆರಾಧಿಸುವುದಾಗಿದೆ.

  error: Jain Heritage Centres - Celebrating Jain Heritage.....Globally!