ನೂರಾರು ಭಕ್ತರು ಜಲಕುಂಭ ಹಿಡಿದು ಬಾಹುಬಲಿ ಮೂರ್ತಿಯ ಮಸ್ತಕದ ಮೇಲಿಂದ ಸುರಿಯುತ್ತಿದ್ದ ವಿವಿಧ ದ್ರವ್ಯಗಳು ಒಂದೊಂದಾಗಿ ಬಾಹುಬಲಿಯ ಪಾದಸ್ಪರ್ಶಿಸುವ ದೃಶ್ಯ ನೋಡಿ ಜನರು ಪುಳಕಿತರಾದರು…
ಚಾಮರಾಜನಗರ: ತಾಲ್ಲೂಕಿನ ಶ್ರೀಕ್ಷೇತ್ರ ಕನಕಗಿರಿಯ ಒಡಲು ಗುರುವಾರ ಮುಂಜಾನೆಯಿಂದಲೇ ಜಿನಭಕ್ತರಿಂದ ತುಂಬಿ ತುಳುಕುತ್ತಿತ್ತು. ಎಲ್ಲರ ಮನದಲ್ಲಿ ಭಕ್ತಿಯ ರಸ ಸಿಂಚನಗೊಂಡಿತ್ತು. ಎಲ್ಲರೂ ಭಗವಾನ್ ಬಾಹುಬಲಿ ಸ್ವಾಮಿಯ ಜಪದಲ್ಲಿ ತಲ್ಲೀನರಾಗಿದ್ದರು.
ಸೂರ್ಯ ನೆತ್ತಿ ಸುಡುತ್ತಿದ್ದ. ದೇಶದ ವಿವಿಧ ರಾಜ್ಯಗಳು ಸೇರಿದಂತೆ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ವರ್ಣವೈಭವದಿಂದ ಕಂಗೊಳಿಸುವ ಗೊಮ್ಮಟನ ವೀಕ್ಷಣೆಗೆ ಸಜ್ಜಾಗಿದ್ದರು. ಪುಷ್ಪದಂತ ಸಾಗರ ಮಹಾರಾಜರ ಶಿಷ್ಯರಾದ ಪ್ರಸನ್ನ ಸಾಗರ ಮಹಾರಾಜರು, ಪಿಯೂಷ ಸಾಗರ ಮಹಾರಾಜರು ಮತ್ತು ಭಟ್ಟಾರಕ ಸ್ವಾಮೀಜಿಗಳು ಬಾಹುಬಲಿಯ ಪ್ರಥಮ ಮಸ್ತಕಾಭಿಷೇಕಕ್ಕೂ ಮೊದಲು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ಬಳಿಕ ಭಕ್ತರ ಜಯಘೋಷದೊಂದಿಗೆ ಶ್ರೀಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಮಾಡಿರುವ 18 ಅಡಿ ಎತ್ತರದ ಬಾಹುಬಲಿಗೆ ಜಲಾಭಿಷೇಕ ನಡೆಯಿತು. ನಂತರ ಎಳನೀರು, ಕಬ್ಬಿನ ಹಾಲು, ಕ್ಷೀರಾಭಿಷೇಕ, ಕಲ್ಕಚೂರ್ಣ, ಶ್ವೇತಗಂಧ, ಕಷಾಯ, ಅಷ್ಟಗಂಧದ ಅಭಿಷೇಕ ನೆರವೇರಿಸಲಾಯಿತು. ಒಮ್ಮೆಲೆ ಆಗಸದಲ್ಲಿ ಹೆಲಿಕಾಪ್ಟರ್ನ ಸದ್ದು ಕೇಳಿಸಿತು. ರಣಬಿಸಿಲು ಲೆಕ್ಕಿಸದೆ ನೆರೆದಿದ್ದ ಜನರ ಚಿತ್ತ ಬಾನಿನತ್ತ ನೆಟ್ಟಿತು. ವೈರಾಗ್ಯಮೂರ್ತಿಯ ಮಸ್ತಕದ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು.
ಒಂದರ ಮೇಲೊಂದರಂತೆ ಬಾಹುಬಲಿ ಮೇಲೆ ಸುರಿಯುತ್ತಿದ್ದ ಜಲಧಾರೆಯ ದೃಶ್ಯ ನೋಡುಗರ ಮನ ಸೆಳೆಯಿತು. ನೂರಾರು ಭಕ್ತರು ಜಲಕುಂಭ ಹಿಡಿದು ಮಸ್ತಕದ ಮೇಲಿಂದ ಸುರಿಯುತ್ತಿದ್ದ ವಿವಿಧ ದ್ರವ್ಯಗಳು ಒಂದೊಂದಾಗಿ ಬಾಹುಬಲಿಯ ಪಾದಸ್ಪರ್ಶಿಸುವ ದೃಶ್ಯ ನೋಡಿ ಜನರು ಪುಳಕಿತರಾದರು.
ಕನಕಗಿರಿಯು ಕರ್ನಾಟಕದ ಪ್ರಾಚೀನ ಸಿದ್ಧ ಕ್ಷೇತ್ರ. ಜಿನಸಿದ್ಧರು ನೆಲೆಸಿದ್ದ ತಪೋಭೂಮಿಯಾಗಿದೆ. ಬಿಡದಿಯ ಶಿಲ್ಪಿ ಅಶೋಕ್ ಬಡಿಗಾರ್ ಅವರು ಈ ಬಾಹುಬಲಿ ಮೂರ್ತಿಯನ್ನು ಕೆತ್ತನೆ ಮಾಡಿದ್ದಾರೆ. ಮೈಸೂರಿನ ವಿಶಾಲೇಂದ್ರಯ್ಯ ಮತ್ತು ಕುಟುಂಬದವರು ಈ ಮೂರ್ತಿಯ ದಾನಿಗಳಾಗಿದ್ದಾರೆ.
ಇದೇ ವೇಳೆ ಶ್ರೀಕ್ಷೇತ್ರ ಕನಕಗಿರಿ ಮತ್ತು ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಮಾಹಿತಿ ಒಳಗೊಂಡ ಅಂಚೆಚೀಟಿಯನ್ನು ಬಿಡುಗಡೆಗೊಳಿಸಲಾಯಿತು.
ಪರ್ವ ಸಾಗರ ಮಹಾರಾಜರು, ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಧರ್ಮಸೇನ ಭಟ್ಟಾರಕ ಸ್ವಾಮೀಜಿ, ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ, ಧವಲಕೀರ್ತಿ ಭಟ್ಟಾರಕ ಸ್ವಾಮೀಜಿ, ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಕ್ಷುಲ್ಲಕಶ್ರೀ ವೃಷಭಸೇನ ಸ್ವಾಮೀಜಿ ಹಾಜರಿದ್ದರು.
– ಸುದ್ದಿ ಹಾಗೂ ಚಿತ್ರಕೃಪೆ: ಪ್ರಜಾವಾಣಿ